ರೈತರೇ ಸ್ವತಃ ಆಧಾರ್- ಪಹಣಿ ಜೋಡಣೆ ಮಾಡಿಕೊಳ್ಳುವ ವಿಧಾನ ಇಲ್ಲಿದೆ!

ಈಗಾಗಲೇ ಹಲವು ಯೋಜನೆಗಳಿಗೆ ಆಧಾರ್‌ ಕಾರ್ಡ್‌ ಲಿಂಕ್‌ (Aadhaar card linkage) ಮಾಡಿ ಸುಸ್ತಾಗಿರುವ ರೈತರು ಈಗ ಪಹಣಿಗೆ ಆಧಾರ್ ಸೀಡಿಂಗ್ (Aadhaar seeding) ಮಾಡಬೇಕಿದೆ. ಇದು ಕಡ್ಡಾಯವೂ ಆಗಿದೆ. ಆಧಾರ್‌ ಲಿಂಕ್ ಬಗ್ಗೆ ರೈತರಿಗೆ ಆಗುತ್ತಿರುವ ತೊಂದರೆಗಳೇನು? ಇಂದು ಆಧಾರ್‌ ಸಂಖ್ಯೆ ಎಂಬುದು ಅತಿ ಮುಖ್ಯವಾಗಿದೆ. ಇದು ಒಂದು ರೀತಿಯ “ಡಿಜಿಟಲ್ ಬೇಸಾಯ” ಎಂದು ಹೇಳಬಹುದಾಗಿದೆ. ಹೇಗೆ ಬೇಸಾಯದಲ್ಲಿ ಪ್ರತಿ ತಿಂಗಳು ಏನಾದರೂ ಒಂದು ಕೆಲಸವನ್ನು ಮಾಡುತ್ತಾ ಇರಬೇಕೋ ಹಾಗೇ ಇಲ್ಲಿ ಆಧಾರ್‌ ಸಂಖ್ಯೆಯನ್ನು ಒಂದಲ್ಲಾ ಒಂದು ಕಡೆ ಲಿಂಕ್‌ ಮಾಡುತ್ತಾ ಇರಬೇಕು. ಆಧಾರ್‌ ಸೀಡಿಂಗ್‌ ಬಗ್ಗೆ ರೈತರಿಗೆ ಮತ್ತು ಜನಸಾಮಾನ್ಯರಿಗೆ ಆಗುತ್ತಿರುವ ಕಿರಿಕಿರಿ ಬಗ್ಗೆ ಸರ್ಕಾರದ ಬಗ್ಗೆ ರೈತರು ಹತಾಶರಾಗಿದ್ದಾರೆ. ಪಹಣಿಗೆ ಆಧಾರ್ ಸೀಡಿಂಗ್ ಕಡ್ಡಾಯವಾಗಿದ್ದು, ಎಲ್ಲರೂ ಆದಷ್ಟು ಬೇಗ ಮಾಡಿಸಿಕೊಳ್ಳಿ ಎಂದು ಹೇಳುತ್ತಲೇ ಈಗಿರುವ ವ್ಯವಸ್ಥೆಯಲ್ಲಿನ ನ್ಯೂನತೆಯನ್ನು ಎತ್ತಿ ತೋರಿಸಿದ್ದಾರೆ. ಒಬ್ಬ ರೈತ ಆಧಾರ್‌ ಲಿಂಕ್‌ ಮಾಡಲು ಹೋದರೆ ಎಷ್ಟು ಸಮಯ ಬೇಕು? ಎಷ್ಟು ಖರ್ಚಾಗುತ್ತದೆ ಎಂಬುದನ್ನೂ ವಿವರ ನೀಡಿದ್ದೇವೆ.

ನಕಲಿ ಭೂ ದಾಖಲೆ ಹಾವಳಿ ತಡೆಯುವ ಉದ್ದೇಶದಿಂದ ಪಹಣಿಗಳಿಗೆ ಆಧಾರ್ ಜೋಡಣೆ ಅಭಿಯಾನ ಆರಂಭಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಚಿವರು, ಅಭಿಯಾನದಲ್ಲಿ 15 ಲಕ್ಷ ಪಹಣಿ ಮಾಲೀಕರು ಆಧಾರ್ ಸಂಖ್ಯೆ ಜೋಡಣೆಗೆ ಒಪ್ಪಿಗೆ ಸೂಚಿಸಿದ್ದಾರೆ.ಅಭಿಯಾನದಲ್ಲಿ ಇದುವರೆಗೆ 8.80 ಲಕ್ಷ ಕೃಷಿ ಭೂಮಿ ಪಹಣಿಗಳಿಗೆ ಆಧಾರ್ ಜೋಡಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ರಾಜ್ಯದ ಎಲ್ಲಾ ಪಹಣಿಗಳಿಗೆ ಅದರ ಮಾಲೀಕರ ಆಧಾರ್ ಜೋಡಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ರಾಜ್ಯದಲ್ಲಿ 2.30 ಕೋಟಿ ಪಹಣಿ, 3.9 ಕೋಟಿ ಪಹಣಿ ಮಾಲೀಕರು ಇದ್ದು, ಅವರೆಲ್ಲರ ಪಹಣಿಯೊಂದಿಗೆ ಆಧಾರ್ ಜೋಡಣೆ ಮಾಡಲಾಗುತ್ತದೆ. ಸದ್ಯ 15 ಲಕ್ಷ ಪಹಣಿ ಮಾಲೀಕರು ಆಧಾರ್ ಸಂಖ್ಯೆ ಜೋಡಣೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಕ್ರಮದಿಂದ ನಕಲಿ ಭೂ ದಾಖಲೆ ಸೃಷ್ಟಿ ತಡೆಗೋಬಹುದು. ಬೆಳೆ ಪರಿಹಾರ ಸೇರಿದಂತೆ ಇತರ ಸೌಲಭ್ಯ ವಿತರಣೆ ಸುಲಭವಾಗಿದೆ ಎಂದು ಹೇಳಿದ ಸಚಿವರು, ಮುಖ್ಯಮಂತ್ರಿಗಳ ಸೂಚನೆಯಂತೆ ರಾಜ್ಯದಲ್ಲಿ ಬಾಕಿ ಇರುವ ಪೋಡಿ ಪ್ರಕರಣಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗಿದೆ. ಆಕಾರ್ ಬಂದ್ ಡಿಜಿಟಲೈಸ್ ಮಾಡಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಬೇಸಾಯ ಮತ್ತು ಹಾರ್ವೆಸ್ಟಿಂಗ್ ಭಾಗವಾಗಿ ಭತ್ತ, ಅಡಿಕೆ, ಕಾಫಿ, ಮೆಣಸಿಗೆ ಪ್ರತಿ ತಿಂಗಳು ಕೆಲಸ ಇದ್ದೇ ಇರುತ್ತದೆ. ಇದನ್ನು “ಲಿಂಕ್‌” ಮಾದರಿಯಲ್ಲಿ ಹೇಳುವುದಾದರೆ, ತೋಟ – ಗದ್ದೆಗಳಿಗೆ ಗೊಬ್ಬರ ಲಿಂಕ್ ಮಾಡಬೇಕು, ಸುಣ್ಣ ಲಿಂಕ್ ಮಾಡಬೇಕು, ಕಳೆ ತೆಗೆಯುವ ಯಂತ್ರ ಲಿಂಕ್ ಮಾಡಬೇಕು, ಕಪ್ಪು ಹೆರೆಯುವ- ಅಂಚು ಕಡಿಯುವ ಕೆಲಸಗಳನ್ನು ಲಿಂಕ್ ಮಾಡಬೇಕು, ಕಾಪರ್ ಸಲ್ಫೇಟ್ ಲಿಂಕ್ ಮಾಡಬೇಕು, ಮೇಲುಗೊಬ್ಬರ ಲಿಂಕ್ ಮಾಡಬೇಕ ಹೀಗೆ ಎಲ್ಲ ಪ್ರಕ್ರಿಯೆಗಳನ್ನು ಸತತವಾಗಿ ಮಾಡುತ್ತಲೇ ಇರಬೇಕು.

ಅದೇ ರೀತಿ ರೈತರು:
ಫ್ರೂಟ್ ಐಡಿಗೆ ಆಧಾರ್ ಲಿಂಕ್,
ಬೆಳೆ ಸರ್ವೆ ಆಯಪ್‌ಗೆ ಆಧಾರ್ ಲಿಂಕ್,
ತೋಟದಲ್ಲಿ ಬಳಸುವ RTI ನೋಂದಾಯಿತ ಗಾಡಿಗಳಿಗೆ ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಲಿಂಕ್,
ಬ್ಯಾಂಕಿಗೆ ಆಧಾರ್ ಲಿಂಕ್,
ಉಳಿತಾಯ ಖಾತೆಗೆ ಎನ್‌ಪಿಸಿಐ ಲಿಂಕ್,
ಬೆಳೆ ಸರ್ವೆಗೆ ಪಹಣಿ ಲಿಂಕ್,
ರೇಷನ್ ಕಾರ್ಡ್‌ಗೆ ಆಧಾರ್ ಲಿಂಕ್,
ಪಾನ್ ಕಾರ್ಡ್‌ಗೆ ಆಧಾರ್ ಲಿಂಕ್,
ಮೇಲುಗೊಬ್ಬರ ಕೊಟ್ಟಂತೆ ಎಲ್ಲ ಕಡೆಗೂ ವರ್ಷಕ್ಕೊಮ್ಮೆ ಕೆವೈಸಿ (KYC) ಲಿಂಕ್ ಅನ್ನು ಮಾಡಿಸುತ್ತಿರಬೇಕು.

ಈಗ ಪಹಣಿಗೆ ಆಧಾರ್ ಸೀಡಿಂಗ್

ಅದೃಷ್ಟ ಚೆನ್ನಾಗಿದ್ದಾರೆ, ಮನೆಯಲ್ಲಿ ನೆಟ್ವರ್ಕ್ ಸಿಕ್ಕಿದರೆ ಅಂಗಳದ ತುದಿ ನಿಂತು ಪಹಣಿಗೆ ಆಧಾರ್ ಸೀಡಿಂಗ್ ಮಾಡಿಕೊಳ್ಳಬಹುದು. ಇಲ್ಲವಾದರೆ, ಗ್ರಾಮ ಲೆಕ್ಕಿಗ, ಪಿಡಿಒಗಳನ್ನು ಭೇಟಿ ಮಾಡಿ, ಅಲ್ಲಿ ಸರ್ವರ್ ಸರಿ ಇದ್ದರೆ (ಹೆಚ್ಚಿನ ಸಂದರ್ಭದಲ್ಲಿ ಸರ್ವರ್ ಸರಿ ಇರೊಲ್ಲ) ಅಧಿಕಾರಿಗಳು ಫೀಲ್ಡ್ ವರ್ಕಿಗೆ ಹೋಗಿಲ್ಲ ಅಂದರೆ ಅಲ್ಲಿ ಹೋಗಿ ಮಾಡಿಸಿಕೊಳ್ಳಬಹುದು.

ಉದಾಹರಣೆಗೆ: ಮೇಲುಕೊಪ್ಪದಿಂದ (ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ) ರೈತರು ತಮ್ಮ ಭಂಡಿಗಡಿ ಗ್ರಾಮ ಪಂಚಾಯಿತಿ ಅಥವಾ ಗ್ರಾಮ ಲೆಕ್ಕಿಗ ಕಚೇರಿಗೆ ಹೋಗಲು 32 ಕಿಲೋಮೀಟರ್ ದೂರವನ್ನು ಎರಡು ಬಸ್‌ಗಳಲ್ಲಿ ಪ್ರಯಾಣಿಸಿ ತಲುಪಬೇಕು. ಬೆಳಗ್ಗೆ ಎಂಟು ಗಂಟೆ ಬಸ್‌ನಲ್ಲೇ ಹೊರಟರೆ ಕೊಪ್ಪ-ಹರಿಹರಪುರ-ಭಂಡಿಗಡಿಯನ್ನು ಎರಡು ಬಸ್‌ನಲ್ಲಿ ತಲುಪಿ, ಫೀಲ್ಡ್ ವರ್ಕ್‌ಗೆ ಹೋದವರನ್ನು ಕಾದು, ಸರ್ವರ್ ಸರಿ ಹೋಗುವವರೆಗೆ ವಿಶ್ರಮಿಸಿ, ಅದೃಷ್ಟ-ಹಣೇಬರಹಗಳನ್ನು ಪರೀಕ್ಷಿಸಿ, ಇಡೀ ದಿನವನ್ನು ವ್ಯಯಿಸಿ, ಬಸ್‌ ಚಾರ್ಜ್ 120 ರೂಪಾಯಿಯನ್ನು ಖರ್ಚು ಮಾಡಿ, ಲಿಂಕೇಜ್ ವ್ಯವಹಾರ ಮುಗಿದರೆ ಮುಗಿಸಿಕೊಂಡು, ಅದೇ ಮಾರ್ಗದಲ್ಲಿ ಮತ್ತೆ ಎರಡು ಬಸ್ ಹಿಡಿದು ಸಂಜೆ ಆರೂವರೆಗೆ ಮನೆಗೆ ಬಂದು ಲಿಂಕ್ ಆಗಬಹುದು!!! ಇದು ರೈತನ ಗೋಳು ಆದರೂ ಪಹಣಿಗೆ ಆಧಾರ್ ಸೀಡಿಂಗ್ ಕಡ್ಡಾಯವಾಗಿದ್ದು ಎಲ್ಲರೂ ಆದಷ್ಟು ಬೇಗ ಮಾಡಿಸಿಕೊಳ್ಳಿ.

ಪಹಣಿ ಆಧಾರ್ ಜೋಡಣೆ ಮಾಡುವ ವಿಧಾನ:
ಆರ್‌ಟಿಸಿ ಎಂದರೆ Records Of Rights, Tenency And Crops. ಇದನ್ನೇ ಪಹಣಿ ಎಂದೂ ಕರೆಯುತ್ತಾರೆ. ಇದರಲ್ಲಿ ಜಮೀನು ಮಾಲೀಕರ ವಿವರ, ಪ್ರದೇಶ, ಮಣ್ಣಿನ ಪ್ರಕಾರ, ಭೂಮಿಯ ಸ್ವಾಧೀನದ ಸ್ವರೂಪ, ಹೊರೆ, ಬೆಳೆದ ಬೆಳೆಗಳು ಮತ್ತು ಮುಂತಾದ ಮಾಹಿತಿಗಳಿರುತ್ತವೆ. ಜಮೀನು ಮಾಲೀಕತ್ವದ ವಿಚಾರದಲ್ಲಿ ಮಾಲೀಕತ್ವವನ್ನು ಖಾತ್ರಿಪಡಿಸುವುದು ಸಾಧ್ಯವಿದೆ.

ರೈತರು ತಮ್ಮ ಜಮೀನಿನ ಪಹಣಿ ಹಾಗೂ ಆಧಾರ್ (RTC- Aadhaar) ವಿವರದೊಂದಿಗೆ //landrecords.karnataka.gov.in/ service4 ಇಲ್ಲಿ ಲಾಗಿನ್ ಮಾಡಿಕೊಂಡು ಆಧಾರ್‌ನೊಂದಿಗೆ ಲಿಂಕ್ ಮಾಡಿಸ ಬಹುದಾಗಿದೆ.ಹಲವಾರು ಅಗತ್ಯ ದಾಖಲೆಗಳಿಗೆ ಆಧಾರ್ ಕಾರ್ಡ್ (Aadhaar Card) ಅನ್ನು ಲಿಂಕ್ ಮಾಡಲಾಗುತ್ತಿದೆ.

ಪಹಣಿ ಹಾಗೂ ಆಧಾರ್ ದಾಖಲೆಯೊಂದಿಗೆ ಸಂಬಂಧಪಟ್ಟ ಗ್ರಾಮ ಆಡಳಿತಾಧಿಕಾರಿಯನ್ನು ಸಂಪರ್ಕಿಸುವ ಮೂಲಕವೂ ಲಿಂಕ್ ಮಾಡಬಹುದು.

ಸರ್ಕಾರವು ಜಮೀನಿನ ಪಹಣಿ ಯಾರ ಹೆಸರಲ್ಲಿ ಇರುತ್ತದೆಯೋ ಅಂದರೆ ಜಮೀನಿನ ಒಡೆಯನ ಆಧಾರ್ ಕಾರ್ಡನ್ನು ಲಿಂಕ್ ಮಾಡುವುದು ಕಡ್ಡಾಯ.

ಅದೇ ರೀತಿ ರೈತರು ತಮ್ಮ ಪಹಣಿ ಹಾಗೂ ಆಧಾರ್ ದಾಖಲೆಯನ್ನು ಸಂಬಂಧಪಟ್ಟ ಗ್ರಾಮ ಆಡಳಿತಾಧಿಕಾರಿಯನ್ನು ಸಂಪರ್ಕ ಮಾಡುವ ಮೂಲಕ ಲಿಂಕ್ ಮಾಡಬಹುದಾಗಿದೆ.

ನಿಮ್ಮ ಆಧಾರ್ ಸಂಖ್ಯೆಯನ್ನು ಪಹಣಿ ಜೊತೆ ಲಿಂಕ್ ಮಾಡುವುದರಿಂದ ನಿಮ್ಮ ಜಮೀನಿನ ತಿದ್ದುಪಡಿ, ನಿಮಗೆ ಕೃಷಿ ಇಲಾಖೆಯಿಂದ ಸಿಕ್ಕಂತಹ ಸೌಲಭ್ಯ, ಪರಿಹಾರ ಮೊತ್ತ, ಅಥವಾ ಪಹಣಿಯಲ್ಲಿ ಯಾವುದೇ ರೀತಿಯ ಬದಲಾವಣೆ ಆದಲ್ಲಿ ನಿಮ್ಮ ಮೊಬೈಲ್ ಗೆ ಮೆಸೇಜ್ ಬರಲಿದೆ.

ನಿಮ್ಮ ಪಹಣಿ ಆಧಾರ್ ಗೆ ಲಿಂಕ್ ಆಗಿದ್ದರೆ ನಿಮ್ಮ ಪಹಣಿ ಈಗಾಗಲೇ ಆಧಾರ್ ಕಾರ್ಡ್ ಗೆ ಲಿಂಕ್ ಆಗಿದೆ ಎಂಬ ಸಂದೇಶ ನಿಮಗೆ ಬರಲಿದೆ.

ಇಲ್ಲಿ ನೋಡಿ:
1.ಕೇಂದ್ರ ಸರ್ಕಾರದಿಂದ ಬೆಳೆವಿಮೆ ಹಣ ಬಿಡುಗಡೆ. ಕೂಡಲೇ ನೀವು ನೋಡಿ.

2.ಪಿಎಂ ಕಿಸಾನ್ 16ನೇಕಂತು ಜಮಾ ಆಗಿಲ್ಲವೇ? ಈಗಲೇ ಈ ಸಂಖ್ಯೆಗೆ ಕರೆ ಮಾಡಿ!

3.ನಿರಂತರ ಉಚಿತ ವಿದ್ಯುತ್ ಪಡೆಯುವುದು ಹೇಗೆ? ಇಲ್ಲಿದೆ ನೋಡಿ.

4.ಗುಡ್ ನ್ಯೂಸ್! ನನ್ನ ಖಾತೆಗೆ ಪಿಎಂ ಕಿಸಾನ್ 16 ನೇ ಕಂತು ಬಂತು ಕೂಡಲೇ ಚೆಕ್ ಮಾಡಿ.

Spread positive news

Leave a Reply

Your email address will not be published. Required fields are marked *