ಮೇವಿನ ರಾಣಿಯೆಂದೇ ಪ್ರಖ್ಯಾತವಾಗಿರುವ ಕುದುರೆಮೆಂತೆಯು ನೀರಾವರಿ ಕ್ಷೇತ್ರದಲ್ಲಿ ಬೆಳೆಯುವಂತ ಮೇವಿನ ಬೆಳೆ ಇದು. ದ್ವಿದಳ ಜಾತಿಯ ಬಹುವಾರ್ಷಿಕ ಹಾಗೂ ಬಹುಪೌಷ್ಟಿಕ ಬೆಳೆಯಾಗಿದೆ. ಸಾರಜನಕ ಮತ್ತು ರಂಜಕ ಅಂಶ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ.

 

ಬಿತ್ತನೆಯ ಕಾಲ: ಮೂಲತಃ ಹಿಂಗಾರಿ ಹಂಗಾಮಿನಲ್ಲಿ ಬೆಳೆಯುವ ಕುದುರೆಮೆಂತೆಗೆ ತಂಪಾದ ವಾತಾವರಣ ಬೇಕಾಗುವುದು. ಅಕ್ಟೋಬರ್ ತಿಂಗಳ ಮೊದಲ ವಾರದಿಂದ ನವೆಂಬರ್ ಕೊನೆಯ ವಾರದವರೆಗೆ ಸುಮಾರು 15-20 ಡಿಗ್ರಿ ಸರಾಸರಿ ತಾಪಮಾನ ಇದನ್ನು ಬಿತ್ತಲು ಸೂಕ್ತ ಸಮಯ. ಕರ್ನಾಟಕದಲ್ಲಿ ನೀರಾವರಿ ಕ್ಷೇತ್ರದಲ್ಲಿ ಬೇಸಿಗೆಯನ್ನು ಬಿಟ್ಟರೆ ಎಲ್ಲಾ ಸಂದರ್ಭಗಳಲ್ಲಿ ಇದನ್ನು ಯಶಸ್ವಿಯಾಗಿ ಬೆಳೆದ ಉದಾಹರಣೆಗಳಿವೆ.

 

ತಳಿಗಳು ಕರ್ನಾಟಕದಲ್ಲಿ ಬೆಳೆಯುವ ತಳಿಗಳು: ಆರ್ ಎಲ್-88, ಆನಂದ-2, ಆನಂದ-3

ಭೂಮಿ ತಯಾರು ಮಾಡುವುದು: ಇದರ ಬೀಜಗಳು ಸಣ್ಣ ಆಕಾರದಲ್ಲಿ ಇರುವುದರಿಂದ ಭೂಮಿಯನ್ನು ಸಮತಟ್ಟಾಗಿ ಇಡುವುದರಿಂದ ಹಾಗೂ ಮಣ್ಣು ಹುಡಿಯಾಗಿರುವಂತೆ ತಯಾರು ಮಾಡುವುದು ಉತ್ತಮ. ಸಮತಟ್ಟಾದ ನೆಲ ಇರುವುದರಿಂದ ನೀರು ನಿಲ್ಲುವುದು ದೂರವಾಗಿ ಬೆಳೆ ಉತ್ತಮವಾಗಿ ಬೆಳೆಯಲು ಸಹಾಯಕವಾಗುತ್ತದೆ.

 

ಗೊಬ್ಬರ ನಿರ್ವಹಣೆ: ಇದು ಬಹುವಾರ್ಷಿಕ ಬೆಳೆಯಾಗಿರುವದರಿಂದ ಒಮ್ಮೆ ಬಿತ್ತನೆ ಮಾಡಿದರೆ ಸುಮಾರು 2-3 ವರ್ಷಗಳವರೆಗೆ ಸತತವಾಗಿ ಮೇವು ಹಾಗೂ ಬೀಜ ಉತ್ಪಾದನೆ ಮಾಡಬಹುದು.

ಬಿತ್ತುವ ಮೊದಲು 10 ಟನ್ ಕೊಟ್ಟಿಗೆ ಗೊಬ್ಬರ, 10 ಕೆ.ಜಿ ಸಸಾರಜನಕ, 30 ಕೆ.ಜಿ ರಂಜಕ, 15 ಕೆ.ಜಿ ಪೊಟ್ಯಾಷ್ ಕೊಡುವುದರಿಂದ ಈ ಬೆಳೆಯು ಸೊಗಸಾಗಿ ಬೆಳೆದು ಉತ್ತಮ ಲಾಭವನ್ನು ಕೊಡುತ್ತದೆ. ನಂತರ ಪ್ರತಿ ವರ್ಷ ಸುಮಾರು 40-80 ಕೆ.ಜಿ ರಂಜಕ ಕೊಡಬೇಕು. ಮಾಲಿಬಿನಮ್ ಮತ್ತು ಬೋರಾನ್ ಹೆಚ್ಚು ಕಾಳು ಕಟ್ಟಲು ಸಹಾಯಕ.

 

ಬೀಜ ಪ್ರಮಾಣ ಮತ್ತು ಉಪಚಾರ: ಪ್ರತಿ ಎಕರೆಗೆ ಸುಮಾರು 4-5 ಕೆ.ಜಿ ಉತ್ತಮ ಗುಣಮಟ್ಟದ ಬೀಜ ಬೇಕಾಗುತ್ತದೆ ಹಾಗೂ ಬಿತ್ತುವ ಮುನ್ನ ರೈಜೋಬಿಯಂ ಮತ್ತು ಪಿ.ಎಸ್.ಬಿ ಜೀವಾಣುಗಳಿಂದ ಉಪಚರಿಸಬೇಕು. ಇದರಿಂದ ನೈಸರ್ಗಿಕವಾಗಿ

 

ಬಿತ್ತನೆ ಕ್ರಮ: ಕಟಾವು ಮಾಡಲು ಅನುಕೂಲವಾಗುವಂತೆ ಬೀಜಗಳನ್ನು 30-45 ಸೆಂ.ಮೀ. ಸಾಲುಗಳಲ್ಲಿ 2-3 ಸೇಂ.ಮೀ. ಆಳದಲ್ಲಿ ಬಿತ್ತನೆ ಮಾಡಬೇಕು.

 

ನೀರು ನಿರ್ವಹಣೆ: ಭೂಮಿಯಲ್ಲಿ ತೇವಾಂಶ ಕಡಿಮೆಯಾದರೆ ಈ ಬೆಳೆಯು ಬೇಗನೆ ಒಣಗಿ ಹೋಗುವದು. ಆದ್ದರಿಂದ ಪ್ರತಿ 10- 15 ದಿನಕ್ಕೆ ಬಂದು ಸಾರಿ ನೀರು ಹಾಯಿಸುವುದು ಸೂಕ್ತ.

 

ಕಳೆ ನಿರ್ವಹಣೆ: ಕಮ್ಯೂಟ್(ಮಂಗನ ಬಾಲ) (ಪರಾವಲಂಬಿ ಕಳೆ) ಕಳೆ ಕುದುರೆಮೆಂತೆಯಲ್ಲಿ ಹೆಚ್ಚು ಕಂಡುಬರುವದರಿಂದ ಅವುಗಳನ್ನು ಬೇರು ಸಹಿತ ತೆಗೆದು ನಾಶಪಡಿಸಬೇಕು.

 

ಕೀಟ ನಿರ್ವಹಣೆ: ಇದು ಹೆಚ್ಚು ಮೃದುವಾಗಿರುವುದರಿಂದ ಇದರಲ್ಲಿ ಅನೇಕ ಕೀಟಗಳು ಕಂಡುಬರುತ್ತದೆ. ಮುಖ್ಯವಾಗಿ ಎಫಿಸ್ ಕ್ರಾಕಿವೋರಾ ಅನ್ನುವ ಹೇನುಗಳು ಮುಖ್ಯವಾದವು. ಇವುಗಳ ನಿಯಂತ್ರಣಕ್ಕೆ ಅಜಡಿರಾಕ್ಷಿನ್ 2 ಎಮ್ ಎಲ್/ಲೀಟರ್ ಅಥವಾ ಡೈಮೀಥೋಎಟ್ 1 ಎಮ್ ಎಲ್/ಲೀಟರ್ ಸಿಂಪಡಿಸಬೇಕು. ಕಟಾವು ಮತ್ತು ಇಳುವರಿ: ಉತ್ತಮವಾಗಿ ಬೆಳೆ ಬೆಳೆದಲ್ಲಿ ಮೊದಲ ಕಟಾವನ್ನು ಬಿತ್ತಿದ 60-70 ದಿನಗಳ ನಂತರ ಮಾಡಬಹುದು. ಹೂವಾಡುವ ಸಮಯ ಕಟಾವಿಗೆ ಅತಿ ಸೂಕ್ತ. ಉತ್ತಮ ಬೆಳೆಯಿಂದ ವರ್ಷದಲ್ಲಿ ಪ್ರತೀ ತಿಂಗಳಿಗೊಮ್ಮೆಯಂತೆ 10 ಕಟಾವುಗಳನ್ನು ಪಡೆದು ಹೆಕ್ಟೇರಿಗೆ ಸರಾಸರಿ 80-100 ಟನ್ ಹಸಿರು ಮೇವನ್ನು ನಿರೀಕ್ಷಣೆ ಮಾಡಬಹುದು.

 

ಬೀಜೋತ್ಪಾದನೆ ವಿಧಾನಗಳು: ಕುದುರೆಮೆಂತೆ ಬೀಜಕ್ಕೆ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಬೇಡಿಕೆಯಿದೆ. ಇದು ಔಷದಿಯ ಗುಣವನ್ನು ಹೊಂದಿದೆ. ಬೀಜೋತ್ಪಾದನೆಗೆ ಮಾರ್ಚ್-ಏಪ್ರಿಲ್ ಸೂಕ್ತವಾದ ಕಾಲ. ಇದರ ಕಾಯಿಯು ಪಕ್ಷವಾಗಿ ಒಣಗಿದ ಕೂಡಲೆ ಬಿಡಿಸಬೇಕು ಅಥವಾ ಶೇ. 75-80 ರಷ್ಟು ಕಾಯಿಗಳು ಒಣಗಿದಾಗ ಈ ಬೆಳೆಯನ್ನು ಕಟಾವುಮಾಡಿ ಬಿಸಿಲಿನಲ್ಲಿ ಒಣಗಿಸಬೇಕು. ಈ ಬೆಳೆಯ ಬೀಜೋತ್ಪಾದನೆಯಲ್ಲಿ ಜೇನು ನೊಣಗಳು ಪ್ರಮುಖ ಪಾತ್ರವಹಿಸುತ್ತವೆ ಒಂದು ಎಕರೆಗೆ ಸರಾಸರಿ 1 ಕ್ವಿಂಟಾಲ್ ಬೀಜದ ಇಳುವರಿಯನ್ನು ಪಡೆಯಬಹುದು. ಈ ಬೀಜವನ್ನು ಪ್ರತಿ ಕಿ.ಗ್ರಾಂಗೆ 400 ರಿಂದ 500 ರೂಗೆ ಮಾರಾಟ ಮಾಡಬಹುದು, ಅಂದರೆ ಎಕರೆಗೆ 40,000-50,000 ರೂಪಾಯಿ ಲಾಭ ಪಡೆಯಬಹುದು.

ಮೇವಿನ ಮರಗಳಲ್ಲಿ ಕೇವಲ ಎಲೆಯ ಭಾಗವನ್ನು ಉಪಯೋಗಿಬೇಕು. ಎಲೆಭರಿತ ಟೊಂಗೆಗಳನ್ನು ಕಟಾವು ಮಡಿ ಒಣಗಿಸಬೇಕು, ನಂತರ ಇವುಗಳನ್ನು ಬಡಿದು ಎಲೆ ಬೇರ್ಪಡಿಸಿದ ಎಲೆಗಳನ್ನು ಚೀಲಗಳಲ್ಲಿ ಶೇಖರಿಸಬೇಕು. ಶೇಖರಿಸಿಟ್ಟ ಚೀಲಗಳು ಆದಷ್ಟು ನೆರಳಲ್ಲಿಡುವುದು ಸೂಕ್ತ ಮೇವಿನ ಮರಗಳ ಎಲೆಹಿಂಡಿಗೆ ಒಕ್ಕುವ ಯಂತ್ರ ಇಲ್ಲವೇ ರೋಲರ್ ಕಲ್ಲಿನ ಅವಶ್ಯಕತೆ ಇಲ್ಲ.

ಹೀಗೆ ತಯಾರಿಸಿದ ಎಲೆಹಿಂಡಿಯಲ್ಲಿ, ಉಪಯೋಗಿಸಿದ ಬೆಳೆಗೆ ಆಧಾರವಾಗಿ ಪ್ರೋಟೀನ್ ಅಂಶ ಇರುತ್ತದೆ. ಸ್ಟೈಲೊ ಹೆಮಾಟ ಎಲೆಹಿಂಡಿಯಲ್ಲಿ ಪ್ರತಿಶತ 14 ರಿಂದ 16 ರಷ್ಟು ಪ್ರೋಟಿನ್ ಅಂಶ, ಸುಬಾಬೂಲ್ ಹಿಂಡಿಯಲ್ಲಿ ಪ್ರತಿಶತ 20 ರಷ್ಟು ಹಾಗೂ ಕುದುರೆಮೆಂತೆ ಎಲೆಹಿಂಡಿಯಲ್ಲಿ ಪ್ರತಶತ 22-24 ರಷ್ಟು ಪ್ರೋಟಿನ್ ಅಂಶ ಇರುತ್ತದೆ.

 

ಉದಾಹರಣೆಗೆ ನಾಲ್ಕು ಪಶುಗಳನ್ನು ಹೊಂದಿರುವ ಒಬ್ಬ ರೈತ ಕುಟುಂಬವನ್ನು ಉದಾಹರಣೆಯಾಗಿ ತೆಗೆದುಕೊಂಡು ಈ ಕುಟುಂಬಕ್ಕೆ ಅವಶ್ಯವಾದ ಪಶು ಆಹಾರದ ವಿವರಣೆ ಈ ಕೆಳಗೆ ಕೊಡಲಾಗಿದೆ.

ಈ ಕುಟುಂಬಕ್ಕೆ ಪ್ರತಿದಿನ ಒಟ್ಟು ಬೇಕಾಗುವ ಎಲೆಹಿಂಡಿ 4 ಪಶುಗಳು •4 ಕಿಲೋಹಿಂಡಿ/ಪಶು •2ಸಲ/ ಪ್ರತಿದಿನ =32 ಕಿಲೋ ತಿಂಗಳಿಗೆ ಬೇಕಾಗುವ ಒಟ್ಟುಎಲೆಹಿಂಡಿ= 32×30=960ಕಿಲೋ ಒಂದು ವರ್ಷಕ್ಕೆ ಒಂದು ಕುಟುಂಬಕ್ಕೆ =12 ಟನ್‌ ಎಲೆಹಿಂಡಿ ಸ್ಟೈಲೋ ಹೆಮಾಟ ಮೇವಿನ ಇಳುವರಿ =300ಕ್ವಿ./ಹೆ. ಅಥವಾ 120 ಕ್ವಿ./ ಎಕೆರೆಗೆ ಅಂದಾಜು ಎಲೆಹಿಂಡಿಯ ಅಂಶ ಶೇ. 25-30 ಕ್ವಿಂಟಾಲ್

ಸರಾಸರಿ ಬೇಕಾದ ಕೃಷಿಕ್ಷೇತ್ರ=ಅರ್ಧಎಕರೆ

ಈ ಕುಟುಂಬಕ್ಕೆ ಖರೀದಿಸಿದ ಸಾಂದ್ರೀಕರಿಸಿದ ಪಶು ಆಹಾರದ ಅವಶ್ಯಕತೆ=

4 ಪಶುಗಳು •2 ಕಿಲೋ ಪ್ರತಿ ಹಸು/ ದಿನ 15 ರೂ/ಕಿಲೋ=120 ರೂ ತಿಂಗಳಿಗೆ =120×30=3600 ರೂ.

ವರ್ಷಕ್ಕೆ =43,200 ರೂ. ಎಲೆ ಹಿಂಡಿಯಿಂದ ಉಳಿತಾಯ ಶೇ.50 ರಷ್ಟು ಅಂದರೆರೂ 21,600/ವರ್ಷಕ್ಕೆ ಉಳಿತಾಯ.

 

ರಾಸುಗಳಿಗೆ ಅವುಗಳ ಪ್ರತಿದಿನ ಆಹಾರದ ಒಂದು ಮೂರಾಂಶ ಭಾಗದಷ್ಟು ಎಲೆಹಿಂಡಿಯನ್ನು ತಿನ್ನಿಸಬೇಕು. ಕುರಿ ಆಡುಗಳಿಗೆ 250-300 ಗ್ರಾಂ ಎಲೆಹಿಂಡಿ ಸಾಕು. ಎಲೆಹಿಂಡಿಯನ್ನು ಹೊಟ್ಟಿನ ಜೊತೆಗೆ ಚೆನ್ನಾಗಿ ಮಿಶ್ರಣ ಮಾಡುವುದು ಸೂಕ್ತ. ಎಲೆಹಿಂಡಿಯನ್ನು ಪಶುಗಳ ಆಹಾರದಲ್ಲಿ ಅಳವಡಿಸುವುದರಿಂದ

ಸಾಂದ್ರೀಕೃತ ಪಶು ಆಹಾರದ ಖರ್ಚನ್ನು ಅರ್ಧದಷ್ಟು ಕಡಿಮೆ ಮಾಡಬಹುದು. ಎಲೆಹಿಂಡಿಯನ್ನು ಕೋಳಿ ಮತ್ತು ಹಂದಿ ಸಾಕಾಣಿಕೆಯ ಘಟಕಕ್ಕೆ ಮಾರಾಟ ಮಾಡಿ ಆದಾಯ

ಗಳಿಸಬಹುದು. ಪಶುಗಳಿಗೆ ವರ್ಷಪೂರ್ತಿ ಉತ್ತಮ ಆಹಾರಕೊಡುವ ಪ್ರಯತ್ನಕ್ಕೆ ಎಲೆಹಿಂಡಿ ಒಂದು ಅತ್ಯುತ್ತಮ ಸಾಧನ.

 

ಹಸುಗಳು ಹೆಚ್ಚಿಗೆ ಹಾಲು ಕೊಡಲು ಯಾವ ಕೆಲಸ ಮಾಡಬೇಕು?

1. ಕರು ಹಾಗೂ ಗರ್ಭಿಣಿ ಹಸು ಎಮ್ಮೆಗಳಿಗೆ ಜಂತುನಾಶಕ ಔಷಧಿಯನ್ನು ಪಶುವೈದ್ಯರ ಮಾರ್ಗದರ್ಶನದಲ್ಲಿ ಕುಡಿಸಬೇಕು.

2. ಹಾಲು ಕೊಡುವ ಪ್ರಾಣಿಗಳಿಗೆ ಅವು ಕೊಡುವ ಹಾಲಿನ ಆದಾರದ ಮೇಲೆ ಆಹಾರವನ್ನು ಕೊಡಬೇಕು.

3. ಆಕಳು ಮತ್ತು ದನಗಳಿಗೆ ಕಾಲುಬಾಯಿ ಮತ್ತು ಬಾಯಿ ಬೇನೆ ಲಸಿಕೆಯ ಈ ಮೊದಲು ಹಾಕಿಸದೇ ಇದ್ದಲ್ಲಿ ಪಶು ವೈದ್ಯರ ಸಲಹೆ ಮೇರೆಗೆ ಹಾಕಿಸಿ.

4. ಹೈನುಗಾರಿಕೆಯೊಂದಿಗೆ ಎರೆಹುಳು ಕೃಷಿ ಮಾಡುವವರು ಎರೆಕುಣಿಗಳಲ್ಲಿ ಎರೆಗೊಬ್ಬರ ಉತ್ಪಾದನೆಯಾಗುವವರೆಗೆ ತೇವಾಂಶವು ಶೇ. 60-70 ರಷ್ಟು ಇರುವ ಹಾಗೆ ನೋಡಿಕೊಳ್ಳಬೇಕು.

5. ನೆರಳಿಗಾಗಿ ಎರೆಹುಳು ಕೃಷಿಯೊಂದಿಗೆ ತರಕಾರಿ ಬೆಳೆದರೆ, ತರಕಾರಿಗಳ ಕೀಟ/ರೋಗ ಹತೋಟಿಗೆ ರಾಸಾಯನಿಕಗಳನ್ನು ಸಿಂಪರಣೆ ಮಾಡಬಾರದು.

6. ಸುಮಾರು 3 ರಿಂದ 5 ಟನ್ ತ್ಯಾಜ್ಯ ಉಪಯೋಗಿಸಿ 2-3 ಟನ್ ಎರೆಗೊಬ್ಬರ ಉತ್ಪಾದಿಸಬಹುದಾಗಿದೆ

Spread positive news

Leave a Reply

Your email address will not be published. Required fields are marked *