ರೈತರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಫೆಬ್ರವರಿ ಕೊನೆಯ ವಾರದಲ್ಲಿ ಪಿಎಂ ಕಿಸಾನ್ ಹಣವನ್ನು ಜಮಾ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ 22ನೇ ಕಂತಿನ ಹಣವಾಗಿ ರೈತರ ಖಾತೆಗೆ 2,000 ರೂ. ಜಮೆಯಾಗಲಿದೆ. ಈ ಹಣ ನಿಮ್ಮ ಖಾತೆಗೆ ಬರುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.
ಅದು ಹೇಗೆ ಎಂದು ಇಲ್ಲಿ ನೋಡೋಣ.
ಕೇಂದ್ರ ಸರ್ಕಾರ ರೈತರಿಗೆ ನೀಡುತ್ತಿರುವ ಪಿಎಂ ಕಿಸಾನ್ ಯೋಜನೆಯ ಹಣವನ್ನು ಜಮಾ ಮಾಡಲು ಸಮಯ ನಿಗದಿಪಡಿಸಲಾಗಿದೆ ಎಂದು ತಿಳಿದುಬಂದಿದೆ. ಇದುವರೆಗೆ 21 ಕಂತುಗಳ ಹಣ ಬಿಡುಗಡೆಯಾಗಿದ್ದು, 22ನೇ ಕಂತಿಗಾಗಿ ದೇಶದ ಎಲ್ಲ ಫಲಾನುಭವಿಗಳು ಕಾಯುತ್ತಿದ್ದಾರೆ. 2,000 ರೂ. ಯಾವಾಗ ಅಕೌಂಟ್‌ಗೆ ಬರುತ್ತದೆ ಎಂದು ನಿರೀಕ್ಷಿಸುತ್ತಿರುವ ರೈತರ ಕಾಯುವಿಕೆಗೆ ಕೊನೆಗೂ ತೆರೆ ಬಿದ್ದಿದೆ. ಈ ತಿಂಗಳ ಅಂತ್ಯದೊಳಗೆ ಹಣ ನೀಡಲು ಕೇಂದ್ರ ಸಿದ್ಧವಾಗಿದೆ. ನೇರ ನಗದು ವರ್ಗಾವಣೆ (DBT) ಮೂಲಕ ಹಣ ಪಾವತಿಯಾಗಲಿದ್ದು, ಇದಕ್ಕೆ ರೈತರು ಕಡ್ಡಾಯವಾಗಿ ಇ–ಕೆವೈಸಿ (e-KYC) ಮಾಡಿಸಿಕೊಳ್ಳಬೇಕು ಎಂದು ಕೇಂದ್ರ ಆದೇಶಿಸಿದೆ. ಇ-ಕೆವೈಸಿ ಬಾಕಿ ಇದ್ದರೆ ಹಣ ಜಮೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಫೆಬ್ರವರಿಕೊನೆಯವಾರದಲ್ಲಿಬರುವಸಾಧ್ಯತೆ! ಹಿಂದಿನ ಕಂತುಗಳ ಸಮಯವನ್ನು ಗಮನಿಸಿದರೆ, ಈ ಬಾರಿಯೂ ಫೆಬ್ರವರಿ ಕೊನೆಯ ವಾರದಲ್ಲಿ ಹಣ ಜಮೆಯಾಗುವುದು ಖಚಿತ ಎನ್ನಲಾಗುತ್ತಿದೆ. 19ನೇ ಕಂತಿನ ಹಣ ಫೆಬ್ರವರಿ 24ರಂದು ಬಿಡುಗಡೆಯಾಗಿತ್ತು, 16ನೇ ಕಂತನ್ನು 2024ರ ಫೆಬ್ರವರಿ 28ರಂದು ಜಮೆ ಮಾಡಲಾಗಿತ್ತು. 2023ರಲ್ಲಿ 13ನೇ ಕಂತನ್ನು ಫೆಬ್ರವರಿ 27ರಂದು ಬಿಡುಗಡೆ ಮಾಡಲಾಗಿತ್ತು. ಈ ಇತಿಹಾಸವನ್ನು ನೋಡಿದರೆ, 22ನೇ ಕಂತು ಖಂಡಿತವಾಗಿಯೂ ಈ ತಿಂಗಳ ಅಂತ್ಯದಲ್ಲಿ ರೈತರ ಖಾತೆ ಸೇರಲಿದೆ.
ನಿಮಗೆ ಹಣ ಬರುತ್ತದೋ ಇಲ್ಲವೋ ?
ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್ https://pmkisan.gov.in ಓಪನ್ ಮಾಡಿ.
‘Beneficiary List’ (ಫಲಾನುಭವಿಗಳ ಪಟ್ಟಿ) ಮೇಲೆ ಕ್ಲಿಕ್ ಮಾಡಿ.
ನಿಮ್ಮ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಿ.
ನಂತರ ‘Get Report’ ಅಥವಾ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
ಅರ್ಹ ರೈತರ ಹೆಸರುಗಳು ಪರದೆಯ ಮೇಲೆ ಕಾಣಿಸುತ್ತವೆ. ಇದರಲ್ಲಿ ನಿಮ್ಮ ಹೆಸರಿದ್ದು, ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿದ್ದರೆ ಹಣ ನಿಮ್ಮ ಖಾತೆಗೆ ಬರುತ್ತದೆ.
ಸ್ಟೇಟಸ್ ಚೆಕ್ ಮಾಡಿಕೊಳ್ಳಿ:
ಪಿಎಂ ಕಿಸಾನ್ ವೆಬ್‌ಸೈಟ್ ಅಥವಾ ಮೊಬೈಲ್ ಆಪ್‌ನಲ್ಲಿ ‘Know Your Status’ ಮೇಲೆ ಕ್ಲಿಕ್ ಮಾಡಿ.
ನಿಮ್ಮ ರಿಜಿಸ್ಟ್ರೇಶನ್ ನಂಬರ್ ದಾಖಲಿಸಿ.
ಇಲ್ಲಿ 22ನೇ ಕಂತಿನ ಸ್ಟೇಟಸ್ ಅಡಿಯಲ್ಲಿ ನಿಮಗೆ ಹಣ ಬರುತ್ತದೆಯೇ ಅಥವಾ ಇಲ್ಲವೇ ಎಂಬ ಸಂಪೂರ್ಣ ಮಾಹಿತಿ ಸಿಗುತ್ತದೆ.
ಗಮನಿಸಿ: ಅನರ್ಹರನ್ನು ಪಟ್ಟಿಯಿಂದ ತೆಗೆದುಹಾಕಲು ಕೇಂದ್ರ ಸರ್ಕಾರ ಪ್ರತಿ ಕಂತಿನ ಮೊದಲು ಪಟ್ಟಿಯನ್ನು ಅಪ್‌ಡೇಟ್ ಮಾಡುತ್ತದೆ. ಆದ್ದರಿಂದ ನಿಮ್ಮ ಸ್ಟೇಟಸ್ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.

