ಜಾತಿ, ಆದಾಯ ಪ್ರಮಾಣ ಪತ್ರ ಬರೀ 40 ರೂ.ಗಳಿಗೆ ನಿಮ್ಮ ಪಂಚಾಯ್ತಿಯಲ್ಲೇ ಪಡೆಯಿರಿ!

ಹಳ್ಳಿಗಾಡಿನ ಜನರಿಗೂ ಸರ್ಕಾರದ ಸೌಲಭ್ಯಗಳು ಸುಲಭವಾಗಿ ತಲುಪುವಂತಾಗಬೇಕು ಎಂಬ ಗುರಿಯೊಂದಿಗೆ ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR) ಕ್ರಾಂತಿಕಾರಿ ಕ್ರಮ ಕೈಗೊಂಡಿದೆ. ಇದರ ಭಾಗವಾಗಿ, ಜನರು ಇನ್ಮುಂದೆ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು (Government Schemes Benefits) ಪಡೆಯಲು ಅತ್ಯಗತ್ಯವಾದ ಜಾತಿ ಪ್ರಮಾಣ ಪತ್ರ (Caste certificate), ಆದಾಯ ಪ್ರಮಾಣ ಪತ್ರ (Income certificate)ದಂತಹ ದಾಖಲೆಗಳನ್ನು ಪಡೆಯಲು ತಮ್ಮ ಕೆಲಸಬಿಟ್ಟು ದಿನವಿಡೀ ತಾಲ್ಲೂಕು ಕಚೇರಿಗಳನ್ನು ಅಲೆದಾಡುವ ಅಗತ್ಯವಿಲ್ಲ.

ಬದಲಿಗೆ ʼಬಾಪೂಜಿ ಸೇವಾ ಕೇಂದ್ರʼಗಳ (Bapuji Service Center) ಮೂಲಕ ಎಲ್ಲವನ್ನೂ ಪಡೆಯಬಹುದಾಗಿದೆ. ಇದರ ವಿಶೇಷತೆ ಎಂದರೆ, ಸಾರ್ವಜನಿಕರು ಕೇವಲ 40 ರೂ.ಗಳ ಶುಲ್ಕವನ್ನು ಪಾವತಿಸಿ ಈ ಸರ್ಟಿಫಿಕೇಟ್‌ಗಳನ್ನು ಪಡೆಯಬಹುದಾಗಿದೆ.

ಏನಿದು ʼಬಾಪೂಜಿ ಸೇವಾ ಕೇಂದ್ರʼ (What Is Bapuji Service Center):
ಕರ್ನಾಟಕ ಸರ್ಕಾರವು ಗ್ರಾಮೀಣ ಪ್ರದೇಶ ಜನರಿಗೆ ಸರ್ಕಾರದ ವಿವಿಧ ಸೇವೆಗಳು ಒಂದೇ ಸೂರಿನ ಕೆಳಗೆ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ಕೈಗೊಂಡಿರುವ ಜನಸ್ನೇಹಿ ಉಪಕ್ರಮವೇ ʼಬಾಪೂಜಿ ಸೇವಾ ಕೇಂದ್ರʼ (Bapuji Seva Kendra). ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇದನ್ನು 2016ರಲ್ಲಿ ಪರಿಚಯಿಸಿತು.

ಹೌದು, ಇನ್ನು ಮುಂದೆ ನಿಮ್ಮ ಎಲ್ಲಾ ಪ್ರಮುಖ ಪ್ರಮಾಣ ಪತ್ರಗಳು ನಿಮ್ಮ ಹಳ್ಳಿಯ ಗ್ರಾಮ ಪಂಚಾಯತಿ ಮಟ್ಟದ ‘ಬಾಪೂಜಿ ಸೇವಾ ಕೇಂದ್ರ’ಗಳಲ್ಲೇ (Bapuji Seva Kendra) ದೊರೆಯಲಿವೆ.ಗ್ರಾಮೀಣ ಭಾಗದ ಜನರಿಗೆ ಬಾಪೂಜಿ ಸೇವಾ ಕೇಂದ್ರಗಳು ಹೇಗೆ ಪ್ರಯೋಜನವನ್ನು ನೀಡುತ್ತವೆ? ಇಲ್ಲಿ ಯಾವೆಲ್ಲಾ ದಾಖಲೆಗಳನ್ನು ಪಡೆಯಬಹುದು? ಇವುಗಳನ್ನು ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಬಾಪೂಜಿ ಸೇವಾ ಕೇಂದ್ರದಲ್ಲಿ ಯಾವೆಲ್ಲಾ ಸೇವೆಗಳು ಸಿಗಲಿವೆ?
ಆಡಳಿತದಲ್ಲಿ ವಿಕೇಂದ್ರೀಕರಣ ಮತ್ತು ಪಾರದರ್ಶಕತೆ ತರುವ ಮಹತ್ವದ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ಬಾಪೂಜಿ ಸೇವಾ ಕೇಂದ್ರ’ಗಳನ್ನು ಇದೀಗ ಡಿಜಿಟಲ್‌ ಯುಗಕ್ಕೆ ತಕ್ಕಂತೆ ಅಪ್‌ಗ್ರೇಡ್‌ ಮಾಡಲಾಗಿದ್ದು, ಈ ಮೊದಲು ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಎಂದರೆ ನಾಡಕಚೇರಿಗಳಲ್ಲಿ ಮಾತ್ರ ಲಭ್ಯವಿದ್ದ ಮಹತ್ವದ ಸೇವೆಗಳನ್ನು ಈಗ ಗ್ರಾಮ ಪಂಚಾಯತಿ ವ್ಯಾಪ್ತಿಗೆ ತರಲಾಗಿದೆ. ಬಾಪೂಜಿ ಸೇವಾ ಕೇಂದ್ರಗಳಲ್ಲಿ ಜನನ, ಮರಣ, ಆದಾಯ, ಜಾತಿ ಪ್ರಮಾಣ ಪತ್ರಗಳ ಜೊತೆಗೆ ಆಸ್ತಿ ತೆರಿಗೆ ಪಾವತಿ, ಇ-ಸ್ವತ್ತು, ಆಸ್ತಿ ಮಾಲಿಕತ್ವ, ಭೂಮಾಪನ, ಕಂದಾಯ ಸೇರಿದಂತೆ ಹಲವು ಸೇವೆಗಳು ಲಭ್ಯವಿವೆ.

ಕೇವಲ 40 ರೂ.ಗಳಿಗೆ ಸಿಗುತ್ತೆ ಈ ʼಆರುʼ ಪ್ರಮುಖ ಸೇವೆಗಳು:
ಬಾಪೂಜಿ ಸೇವಾ ಕೇಂದ್ರಗಳ ಪ್ರಮುಖ ಪ್ರಯೋಜನವೆಂದರೆ ಹಿಂದೆ ದಿನವಿಡೀ ಕಾದು ನಿಂತು ಪಡೆಯಬೇಕಿದ್ದ ಪ್ರಮುಖ ಪ್ರಮಾಣ ಪತ್ರಗಳು ಮತ್ತು ದೃಢೀಕರಣ ಪತ್ರಗಳಿಗೆ ಇಲ್ಲಿಯೇ ಅರ್ಜಿ ಸಲ್ಲಿಸಬಹುದು. ಬರೀ 40 ರೂ. ಶುಲ್ಕ ಪಾವತಿಸಿ ನಿಮ್ಮ ಜಾತಿ ಪ್ರಮಾಣ ಪತ್ರ (Caste Certificate), ಆದಾಯ ಪ್ರಮಾಣ ಪತ್ರ (Income Certificate), ನಿರುದ್ಯೋಗ ದೃಢೀಕರಣ ಪತ್ರ (Unemployment Certificate),
ಜಮೀನು ಇಲ್ಲದಿರುವ ದೃಢೀಕರಣ ಪತ್ರ (No Land Certificate), ಮರು ವಿವಾಹವಾಗದಿರುವ ಬಗ್ಗೆ ದೃಢೀಕರಣ ಪತ್ರ (Non-Remarriage Certificate) ಹಾಗೂ ವ್ಯವಸಾಯಗಾರರ ಕುಟುಂಬದ ಸದಸ್ಯ ದೃಢೀಕರಣ ಪತ್ರ (Agriculturist Family Member Certificate) ಸುಲಭವಾಗಿ ಕೈ ಸೇರುತ್ತದೆ.

ಆದಾಗ್ಯೂ, ಈ ಆರು ಬಗೆಯ ಪ್ರಮಾಣ ಪತ್ರವನ್ನು ನೀಡಲು ಪಾರದರ್ಶಕತೆಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು ಪ್ರತಿಯೊಂದಕ್ಕೂ ವಿಶಿಷ್ಟ ಕಾರ್ಯವಿಧಾನವನ್ನು ಅನುಸರಿಸಲಾಗುತ್ತದೆ. ಸಾರ್ವಜನಿಕರು ತಮಗೆ ಅಗತ್ಯವಿರುವ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ಬಳಿಕ ಸಂಬಂಧಪಟ್ಟ ಗ್ರಾಮ ಲೆಕ್ಕಿಗರು (Village Accountant) ಸ್ಥಳ ಪರಿಶೀಲನೆ ನಡೆಸಿ ಇದರ ವರದಿ ನೀಡುತ್ತಾರೆ. ವಿಎ (ಗ್ರಾಮ ಲೆಕ್ಕಿಗ) ನೀಡಿದ ವರದಿ ಆಧಾರದ ಮೇಲೆಯೇ ಜಿಲ್ಲಾಡಳಿತ ನಿಗದಿತ ಕಾಲಮಿತಿಯೊಳಗೆ ಅರ್ಜಿದಾರರಿಗೆ ಪ್ರಮಾಣ ಪತ್ರವನ್ನು ವಿತರಿಸುವ ವ್ಯವಸ್ಥೆ ಮಾಡುತ್ತದೆ.

ಯಾವ ಪ್ರಮಾಣ ಪತ್ರಕ್ಕೆ ಯಾವ್ಯಾವ ದಾಖಲೆಗಳು ಅಗತ್ಯ?
* ಜಾತಿ ಪ್ರಮಾಣ ಪತ್ರ ಪಡೆಯಲು ಆಧಾರ್ ಕಾರ್ಡ್/ರೇಷನ್ ಕಾರ್ಡ್/ವೋಟರ್ ಐಡಿ ಅಗತ್ಯ ದಾಖಲೆಗಳಾಗಿವೆ.
* ಆದಾಯ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳೆಂದರೆ ಆಧಾರ್ ಕಾರ್ಡ್/ರೇಷನ್ ಕಾರ್ಡ್/ವೋಟರ್ ಐಡಿ.
* ನಿರುದ್ಯೋಗ ದೃಢೀಕರಣ ಪತ್ರವನ್ನು ಪಡೆಯಲು ಪಡಿತರ ಚೀಟಿ/ವೋಟರ್ ಐಡಿ/ಆಧಾರ್ ಕಾರ್ಡ್/ಸ್ವಯಂ ಘೋಷಿತ ಪತ್ರ/ ಉದ್ಯೋಗ ವಿನಿಮಯ ಕಚೇರಿಯ ಪ್ರಮಾಣ ಪತ್ರ (ಇದ್ದರೆ)/ಶಾಲಾ ವರ್ಗಾವಣೆ ಪ್ರಮಾಣ ಪತ್ರ (TC) ಗಳನ್ನು ದಾಖಲೆಯಾಗಿ ನೀಡಬಹುದು.
* ಜಮೀನು ಇಲ್ಲದಿರುವ ದೃಢೀಕರಣ ಪತ್ರ ಪಡೆಯಲು ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್/ರೇಷನ್ ಕಾರ್ಡ್/ವೋಟರ್ ಐಡಿ ಹಾಗೂ ನಿಗದಿತ ನಮೂನೆಯಲ್ಲಿ ಸ್ವಯಂ ಘೋಷಿತ ಪತ್ರವನ್ನು ನೀಡಬಹುದಾಗಿದೆ.
* ಮರು ವಿವಾಹವಾಗದಿರುವ ದೃಢೀಕರಣ ಪತ್ರ ಪಡೆಯಲು ಅರ್ಜಿದಾರರು ಆಧಾರ್ ಕಾರ್ಡ್/ರೇಷನ್ ಕಾರ್ಡ್/ವೋಟರ್ ಐಡಿ ಹಾಗೂ ಆದಾಯದ ಬಗ್ಗೆ ಸ್ವಯಂ ಘೋಷಿತ ಪತ್ರವನ್ನು ಒದಗಿಸಬೇಕು.
* ವ್ಯವಸಾಯಗಾರರ ಕುಟುಂಬದ ಸದಸ್ಯ ದೃಢೀಕರಣ ಪತ್ರವನ್ನು ಪಡೆಯಲು ಬಯಸುವವರು ಇದಕ್ಕಾಗಿ ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್/ಪಡಿತರ ಚೀಟಿ/ವೋಟರ್ ಐಡಿ ಹಾಗೂ ಪಹಣಿ ಪತ್ರ ಎಂದರೆ RTC ಪ್ರತಿಯನ್ನು ನೀಡಬೇಕು.

ಈ ಪ್ರಮಾಣ ಪತ್ರಗಳಿಗೆ ಎಲ್ಲಿ ಅರ್ಜಿ ಸಲ್ಲಿಸಬೇಕು?
ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ನಿರುದ್ಯೋಗ ದೃಢೀಕರಣ ಪತ್ರ, ಜಮೀನು ಇಲ್ಲದಿರುವ ದೃಢೀಕರಣ ಪತ್ರ, ಮರು ವಿವಾಹವಾಗದಿರುವ ದೃಢೀಕರಣ ಪತ್ರ, ವ್ಯವಸಾಯಗಾರರ ಕುಟುಂಬದ ಸದಸ್ಯ ದೃಢೀಕರಣ ಪತ್ರಗಳನ್ನು ಪಡೆಯಲು ನೀವು ಯಾವ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸುತ್ತೀರೋ ಅದಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳೊಂದಿಗೆ ನಿಮ್ಮ ಹಳ್ಳಿಯ ಗ್ರಾಮ ಪಂಚಾಯ್ತಿಯ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಅಲ್ಲಿರುವ ಕಂಪ್ಯೂಟರ್‌ ಆಪರೇಟರ್‌ಗಳು ನಿಮಗೆ ಅರ್ಜಿ ಸಲ್ಲಿಸಲು ಅಗತ್ಯ ನೆರವು ನೀಡುತ್ತಾರೆ.

Spread positive news

Leave a Reply

Your email address will not be published. Required fields are marked *