ಬೇಸಿಗೆ ಶೇಂಗಾ ತಳಿಗಳು ಹಾಗೂ ನಿರ್ವಹಣಾ ಕ್ರಮಗಳು.

2024 ರ ಮುಂಗಾರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಗಿದ್ದಕಿಂತ ಹೆಚ್ಚಿನ ಮಳೆ ದಾಖಲಾಯಿತು. ಜೊತೆಗೆ ಮಳೆಯ ಅಸಮರ್ಪಕ ಹಂಚಿಕೆ ಅತಿವೃಷ್ಠಿಯ ಛಾಯೆ ಹಿಂಗಾರು ಹಂಗಾಮಿಗೂ ಮುಂದುವರೆಯಿತು. ಇದರಿಂದ ಬಹುತೇಕ ಹಿಂಗಾರಿಯಲ್ಲಿ ಬಿತ್ತಿದ ಕಡಲೆ ಬೆಳೆಯ ಮೊಳಕೆ ವಿಫಲತೆ, ಮರು ಬಿತ್ತನೆಗೆ ಬೀಜದ ಕೊರತೆ ಅಲ್ಲದೇ ಕಡಲೆ ಬೆಳೆ ಒಂದು ತಿಂಗಳು ಬೆಳೆಯಾದಾಗ ಅಲ್ಲಲ್ಲಿ ಸಿಡಿ ರೋಗದ ಬಾಧೆಯಿಂದ ತತ್ತರಿಸಿದ್ದು. ಈ ಹಂತದಲ್ಲಿ ನಮ್ಮ ಮುಂದೆ ಕಂಡು ಬರುವ ಬೇಸಿಗೆಯ ಪರ್ಯಾಯ ಬೆಳೆಗಳಲ್ಲಿ ಒಂದು ಅಂದರೆ ಶೇಂಗಾ. ಬಿತ್ತನೆಯ ಸಮಯ ಪ್ರಾರಂಭವಾಗಿದೆ. ಆದರೂ ಸಹ ಪರಿಸ್ಥಿತಿ ಅವಲೋಕನ ಮಾಡಕೊಂಡು ಫೆಬ್ರವರಿ 15 ರ ತನಕ ಬಿತ್ತನೆಯನ್ನು ಅಚ್ಚುಕಟ್ಟು ಪ್ರದೇಶ ಮತ್ತು ಕೊಳವೆ ಬಾವಿ ಸೌಲಭ್ಯವಿದ್ದಲ್ಲಿ ಸೂರ್ಯಕಾಂತಿ ಬೀಜದ ಅಭಾವದ ಹಿನ್ನೆಲೆಯಲ್ಲಿ ಶೇಂಗಾ ಬೆಳೆ ಒಂದು ಉತ್ತಮ ಆಯ್ಕೆ.

ಬೇಸಿಗೆ ಹಂಗಾಮಿನಲ್ಲಿ ಬೆಳೆಯುವ ಕೃಷಿ ಬೆಳೆಗಳಲ್ಲಿ ಶೇಂಗಾ ಬೆಳೆಯು ಸಹ ಒಂದು. ಇದು ಎಣ್ಣೆಕಾಳು ಹಾಗೂ ದ್ವಿದಳ ಬೆಳೆಯಾಗಿದ್ದು ಮಣ್ಣಿನ ಫಲವತ್ತತೆ ನಿರ್ವಹಣೆಯಲ್ಲಿ ಮತ್ತು ದನಕರುಗಳಿಗೆ ಉತ್ತಮ ಮಾತ್ರವಲ್ಲದೇ ಉತ್ಕೃಷ್ಠ ಮೇವನ್ನು ಒದಗಿಸುತ್ತದೆ. ಜೊತೆಗೆ ಇದರಿಂದ ಆರೋಗ್ಯಕ್ಕೆ ಉಪಯುಕ್ತವಾದ ಎಣ್ಣೆಯನ್ನು ಸಂಸ್ಕರಿಸಬಹುದು ಬೇಸಿಗೆ ಹಂಗಾಮಿನಲ್ಲಿ ನೀರಾವರಿ ಆಶ್ರಯದಲ್ಲಿ ರಾಜ್ಯದ ಉತ್ತರ ಭಾಗದ ಬಾಗಲಕೋಟ, ವಿಜಯಪುರ, ಕೊಪ್ಪಳ, ಬಳ್ಳಾರಿ, ಬೆಳಗಾವಿ, ರಾಯಚೂರು, ಕಲಬುರ್ಗಿ, ಹಾವೇರಿ, ಗದಗ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ನೀರಾವರಿಯ ಸಹಾಯದಿಂದ ಈ ಬೆಳೆಯನ್ನು ಲಾಭದಾಯಕವಾಗಿ ಬೆಳೆಯಬಹುದು.

ಇತ್ತೀಚಿನ ದಿನಗಳಲ್ಲಿ ಈ ಬೆಳೆಯ ಕ್ಷೇತ್ರದಲ್ಲಿ ಗಣನೀಯವಾದ ಕುಸಿತ ಕಂಡು ಬಂದಿದೆ. ಈ ದಿಸೆಯಲ್ಲಿ ಈ ವರ್ಷದ ಸನ್ನಿವೇಶವನ್ನು ನೋಡಿಕೊಂಡು ಕ್ಷೇತ್ರವನ್ನು ಹೆಚ್ಚಿಸಲು ಸಕಾರಣವಾಗಿದೆ. ಈ ಬೆಳೆಯ ಇಳುವರಿಯನ್ನು ಗಮನಿಸಿದಾಗ ಕಡಿಮೆ ಇಳುವರಿಗೆ ಈ ಬೆಳೆಯಲ್ಲಿ ಸೂಕ್ತವಾದ ತಳಿಗಳ ಬಿತ್ತನೆ ಮಾಡದೇ ಇರುವುದು, ಬಿತ್ತನೆ ಪದ್ಧತಿ ಮತ್ತು ನಿರ್ವಹಣೆ ಅತೀ ಅವಶ್ಯವೆನಿಸುತ್ತದೆ. ಸಕಾಲದಲ್ಲಿ ಸರಿಯಾದ ರೀತಿಯಲ್ಲಿ ಜಮೀನು ತಯಾರಿಕೆ ಮಾಡಿ ಶಿಫಾರಿತ ತಳಿಯೊಂದಿಗೆ ಶಿಫಾರಿತ ಪ್ರಮಾಣದಲ್ಲಿ ಬಿತ್ತನೆ ಬೀಜ ಬಳಸಿ ಬೀಜೋಪಚಾರ ಮಾಡಿ ನಿಗದಿತ ಪ್ರಮಾಣದಲ್ಲಿ ಪೋಷಕಾಂಶ ಒದಗಿಸಿ ಅವಶ್ಯಕತೆಗಿಂತ ಹೆಚ್ಚು ಇಲ್ಲವೇ ಕಡಿಮೆ ಆಗದಂತೆ ಬೆಳೆಗೆ ಅವಶ್ಯಕ ಹಂತದಲ್ಲಿ ನೀರು ಒದಗಿಸಿ ಏರು ಮತ್ತು ಮಡಿ ಪದ್ಧತಿಯಲ್ಲಿ ಬೇಸಾಯ ಮಾಡಿದರೆ ಹೆಚ್ಚು ಇಳುವರಿ ಮತ್ತು ಗುಣಮಟ್ಟದ ಕಾಯಿ ಮತ್ತು ಬೀಜವನ್ನು ಪಡೆಯಬಹುದು.

ತಳಿಗಳ ಆಯ್ಕೆ:
ಈ ಬೆಳೆಯಲ್ಲಿ ಯಾವಾಗಲೂ ಬೀಜದ ಕೊರತೆ ಕಂಡು ಬರುವುದು ಸಾಮಾನ್ಯ ಸಂಗತಿ. ಆದರೂ ಆಸಕ್ತ ರೈತರು ಬೇರೆ ರೈತರನ್ನು ಇಲ್ಲವೇ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ವವ್ಯಸ್ಥೆ ಮಾಡಿಕೊಳ್ಳುವುದು ಹೊಸದೇನಲ್ಲ.

ಬೇಸಿಗೆಯ ಪ್ರಮುಖ ನೂತನ ತಳಿಗಳೆಂದರೆ ಡಿ.ಎಚ್.256, ಡಿ.ಎಚ್.257 ಮತ್ತು ಕದ್ರಿ ಲೆಪಾಕ್ಷಿ. ಈ ಹಿಂದಿನ ಹಳೆಯ ತಳಿಗಳಾದ ಡಿಎಚ್-101, ಟಿಎಜಿ-24 ಮತ್ತು ಡಿ.ಎಚ್. 86 ತಳಿಗಳಿಗಿಂತ ಶೇ. 10 ರಿಂದ 15 ರಷ್ಟು ಅಧಿಕ ಇಳುವರಿ ಕೊಡುವುದಲ್ಲದೇ, ಈ ತಳಿಗಳು ಬೇಸಿಗೆ ಹಂಗಾಮಿನಲ್ಲಿ 105 ರಿಂದ 115 ದಿನಗಳಿಗೆ ಮಾಗುತ್ತವೆ. ಈ ತಳಿಗಳ ಬೀಜಗಳು ಲಭ್ಯವಿಲ್ಲದೇ ಇದ್ದಲ್ಲಿ ಅತಿ ಜಾಗರುಕತೆಯಿಂದ ಕೃಷಿ ಇಲಾಖೆ ಪೂರೈಸುವ ಟಿ.ಎಮ್.ವಿ.-2 (ಬೀಜೋಪಚಾರ ಸಂಯುಕ್ತ ರಾಸಾಯನಿಕ ಶಿಲೀಂಧ್ರನಾಶಕ ಕಾರ್ಬಾಕ್ಸಿನ 37.5% + ಥೈರಾಮ 37.5% ದಿಂದ ಪ್ರತಿ ಕೆ.ಜಿ. ಬೀಜಕ್ಕೆ 4 ಗ್ರಾಂ ನಂತೆ ಮಾಡಬೇಕು) ಅಥವಾ ಜಿಪಿಬಿಡಿ-4 ಇಲ್ಲವೇ ಜಿ2-52 ತಳಿಗಳನ್ನು ಆಯ್ಕೆ ಮಾಡಬಹುದು.

ಸಾಮಾನ್ಯವಾಗಿ ಬೇಸಿಗೆಯ ತಳಿಗಳು ಕಾಂಡ ಕೊಳೆ ರೋಗ ಮತ್ತು ನಂಜಾಣು ಕುಡಿ ಸಾಯುವ ರೋಗಗಳಿಗೆ ಮತ್ತು ರಸ ಹೀರುವ ಕೀಟಗಳಾದ ನುಸಿ ಮತ್ತು ಎಲೆ ತಿನ್ನುವ ಕೀಟವಾದ ಸ್ಪೋಡಾಪ್ಟರಾಗೆ ಸಹಿಷ್ಣುತೆ ಹೊಂದಿದೆ. ಶೇ. 48 ರಿಂದ 49 ರಷ್ಟು ಎಣ್ಣೆ ಅಂಶವನ್ನು ಹೊಂದಿದೆ.

ಡಿ.ಎಚ್.-256: ಈ ತಳಿಯು ಬರ ಸಹಿಷ್ಣುತೆ ಹೊಂದಿದ್ದು 115 ದಿನಗಳಿಗೆ ಮಾಗುತ್ತದೆ. ಎಲೆಗಳು ಕಪ್ಪು ಹಸಿರು ಬಣ್ಣದಿದ್ದು ಕಾಳುಗಳು ಗುಲಾಬಿ ವರ್ಣದ್ದಾಗಿವೆ. ಶೇ. 47 ರಿಂದ 48 ರಷ್ಟು ಎಣ್ಣೆ ಅಂಶವನ್ನು ಹೊಂದಿದೆ. ಭಾರತ ಸರ್ಕಾರದ ಗುಜರಾತನ ಜುನಾಗಡ್‌ದಲ್ಲಿರುವ ಕೇಂದ್ರಿಯ ಶೇಂಗಾ ಸಂಶೋಧನಾ ನಿರ್ದೇಶನಾಲಯವು ಸದರಿ ತಳಿಯನ್ನು ದಕ್ಷಿಣ ಕರ್ನಾಟಕವಲ್ಲದೆ, ಭಾರತದ ಇತರ ಶೇಂಗಾ ಬೆಳೆಯುವ ರಾಜ್ಯಗಳಾದ ತಮಿಳುನಾಡು ಮತ್ತು ಆಂಧ್ರಪ್ರದೇಶಗಳಿಗೂ ಮುಂಗಾರು ಹಂಗಾಮಿನಲ್ಲಿ ಬೆಳೆಯಲು ಸೂಕ್ತವೆಂದು ಹಸಿರು ನಿಶಾನೆ ನೀಡಿದೆ. ಈ ತಳಿಯನ್ನು ಬೆಳೆಯಲು ಕೃಷಿ ವಿಶ್ವವಿದ್ಯಾಲಯ, ಧಾರವಾಡ ವ್ಯಾಪ್ತಿಯ ವಲಯ 3, 8, 9 ಮತ್ತು 10ರಲ್ಲಿ ಮುಂಗಾರು ಮತ್ತು ಬೇಸಿಗೆ ಹಂಗಾಮಿಗೆ ಶಿಫಾರಸು ಮಾಡಲಾಗಿದೆ.

ಡಿ.ಎಚ್.-257: ಈ ತಳಿಯು ಸಹ ಬರ ಸಹಿಷ್ಣುತೆ ಹೊಂದಿದ್ದು 115 ದಿನಗಳಿಗೆ ಮಾಗುತ್ತದೆ. ಶೇ. 47 ರಿಂದ 48 ರಷ್ಟು ಎಣ್ಣೆ ಅಂಶವನ್ನು ಹೊಂದಿದೆ. ಈ ತಳಿಯನ್ನು ನೀರಾವರಿ ಹಿಂಗಾರು- ಬೇಸಿಗೆ ಹಂಗಾಮಿಗೆ ದಕ್ಷಿಣ ಭಾರತದ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಬೆಳೆಯಲು ಇತ್ತೀಚಿಗೆ ಶಿಫಾರಸು ಮಾಡಲಾಗಿದೆ.

ಕದ್ರಿ ಲೆಪಾಕ್ಷಿ (ಕೆ-1812): ಈ ತಳಿಗೆ ರಾಜ್ಯದ ಬಹುತೇಕ ಭಾಗದಲ್ಲಿ ಬೇಡಿಕೆಯಿಂದ್ದು ಬೀಜದ ಕೊರತೆ ಇರುವುದು. ಆದರೂ ನಮ್ಮ ರೈತರು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿರುವ ಕದ್ರಿ ಕೃಷಿ ಸಂಶೋಧನಾ ಕೇಂದ್ರವನ್ನು ಸಂಪರ್ಕಿಸಿ ಬೀಜದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಈ ತಳಿಯು ಸಹ ಬರ ಸಹಿಷ್ಣುತೆ ಹೊಂದಿದ್ದು 115 ದಿನಗಳಿಗೆ ಮಾಗುತ್ತದೆ. ಶೇ. 50 ರಿಂದ 52 ರಷ್ಟು ಎಣ್ಣೆ ಅಂಶವನ್ನು ಹೊಂದಿದೆ. ಈ ತಳಿಯನ್ನು ನೀರಾವರಿ ಹಿಂಗಾರು-ಬೇಸಿಗೆ ಹಂಗಾಮಿಗೆ ದಕ್ಷಿಣ ಭಾರತದ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಬೆಳೆಯಲು ಇತ್ತೀಚಿಗೆ ಶಿಫಾರಸು ಮಾಡಲಾಗಿದೆ.

ಬಿತ್ತನೆ ಸಮಯ: ಶೇಂಗಾ ಬೆಳೆಯನ್ನು ಪ್ರಸ್ತುತ ಬೇಸಿಗೆಯ – ಹಂಗಾಮಿನಲ್ಲಿ ವಾತಾವರಣದಲ್ಲಿ ಆದ ಆಕಸ್ಮಿಕ ಏರು ಪೇರಿನಿಂದ ಫೆಬ್ರವರಿ 15 ವರೆಗೆ ವಿಸ್ತರಿಸಬಹುದು. ಆದಷ್ಟು ರಾತ್ರಿಯ ಸಮಯದ ಉಷ್ಣಾಂಶ ಹೆಚ್ಚಳ ಕಂಡು ಬಂದ ನಂತರ ಬಿತ್ತುವುದು ಉತ್ತಮ. ಇದರಿಂದ ಮೊಳಕೆ ಪ್ರಮಾಣದಲ್ಲಿ ಏರಿಕೆಯಾಗುವುದು. ಈ ತರಹದ ಸನ್ನಿವೇಶ ಈ ವರ್ಷ ಈಗ ಕಂಡು ಬಂದಿದೆ.

ಏರು ಮಡಿ ಮತ್ತು ಬೋದು ಪದ್ಧತಿಗೆ ಭೂಮಿ ತಯಾರಿಕೆ ಮತ್ತು ಪೋಷಕಾಂಶ ಒದಗಿಸುವಿಕೆ:

ಶೇಂಗಾ ಬೆಳೆಯಲ್ಲಿ ಆರ್ಥಿಕ ಪದಾರ್ಥ ಭೂಮಿಯ ಒಳಗಡೆ ಬೆಳವಣಿಗೆಯನ್ನು ಹೊಂದುವುರಿಂದ ಶೇಂಗಾ ಬೇಸಾಯದಲ್ಲಿ ಭೂಮಿ ತಯಾರಿಕೆಗೆ ಅತಿ ಹೆಚ್ಚಿನ ಮಹತ್ವ ಕೊಡಬೇಕಾಗುತ್ತದೆ. ಕಾರಣ ಶೇಂಗಾ ಬಿತ್ತನೆ ಭೂಮಿಯನ್ನು ಮಧ್ಯಮದಿಂದ ಆಳವಾಗಿ (ಕನಿಷ್ಠ 30 ಸೆಂ. ಮೀ.) ಉಳುಮೆ ಮಾಡಿ 2 ರಿಂದ 3 ಸಲ ಚೆನ್ನಾಗಿ ಹರಗಿ ಲಘು ಪೋಷಕಾಂಶಗಳ ಕೊರತೆಯಿದ್ದಲ್ಲಿ ಕೊನೆಯ ಬಾರಿ ಹರಗುವಾಗ ಪ್ರತಿ ಎಕರೆಗೆ ತಲಾ 10 ಕೆ.ಜಿ. ಜಿಂಕ್ ಸಲ್ವೇಟ್ ಮತ್ತು ಕಬ್ಬಿಣದ ಸಲ್ವೇಟನ್ನು 3 ಟನ್‌ಕೊಟ್ಟಿಗೆ/ಕಾಂಪೋಷ್ಟ ಗೊಬ್ಬರ ಇಲ್ಲವೇ 400 ಕೆ.ಜಿ. ಎರೆಹುಳು ಗೊಬ್ಬರದ ಜೊತೆ ಮಿಶ್ರಣ ಮಾಡಿ ಭೂಮಿಗೆ ಸೇರಿಸಬೇಕು.

ಏರು ಮಡಿಯ ಉಪಯುಕ್ತತೆ ಮತ್ತು ಬೀಜೋಪಚಾರ:

ಈ ಪದ್ಧತಿಯಲ್ಲಿ ನೀರು ನಿರ್ವಹಣೆಯು ಸುಲಭ. ಎರಡು ಏರುಮಡಿಯ ನಡುವಿನ ಬೋದನ್ನು ನೀರುಗಾಲುವೆಯಾಗಿ ಬಳಕೆಮಾಡಬಹುದು. ಬೀಜದ ಗಾತ್ರಕ್ಕೆ ಅನುಗುಣವಾಗಿ 50 ರಿಂದ 60 ಕೆ.ಜಿ ಬೀಜವನ್ನು ಪ್ರತಿ ಎಕರೆಗೆ ಬಳಸಬೇಕು. ಪ್ರತಿ ಕೆ.ಜಿ. ಬಿತ್ತನೆ ಬೀಜವನ್ನು 3 ಗ್ರಾಂ. ಕ್ಯಾಪ್ಟಾನ್ 80 ಡಬ್ಲೂ.ಪಿ. ಅಥವಾ ಥೈರಾಮ್ 75 ಡಬ್ಲೂ.ಪಿ. ಅಥವಾ ಕಾರ್ಬಾಕ್ಸಿನ್ 75 ಡಬ್ಲೂ.ಪಿ. ಅಥವಾ 4 ಗ್ರಾಂ. ಟ್ರೈಕೋಡರ್ಮಾದಿಂದ ಬೀಜೋಪಚಾರ ಮಾಡಬೇಕು. ಶೇಂಗಾ ಬೆಳೆಯು ದ್ವಿದಳ ಧಾನ್ಯ ಬೆಳೆಗಳ ಗುಂಪಿಗೆ ಸೇರಿದ್ದು ರೈಜೋಬಿಯಂ ಅಣುಜೀವಿಗೊಬ್ಬರವನ್ನು ಹಾಗೂ ರಂಜಕ ಕರಗಿಸುವ ಸೂಕ್ಷ್ಮಜೀವಿಗೊಬ್ಬರವನ್ನು ಪ್ರತಿ ಎಕರೆ ಬೀಜಕ್ಕೆ 1.0 ಕೆ.ಜಿ. ಉಪಯೋಗಿಸುವುದು ಉತ್ತಮ. ಜಿಪ್ಸಂನ್ನು (200 ಕೆ.ಜಿ. ಪ್ರತಿಎಕರೆಗೆ) ಸಹ ಇದೇ ಸಮಯದಲ್ಲಿ ಮಣ್ಣಿನಲ್ಲಿ ಮಿಶ್ರಣ ಮಾಡುವುದು ಉತ್ತಮ. ಇದಲ್ಲದೇ ಮಣ್ಣಿನಲ್ಲಿನ ತೇವಾಂಶವನ್ನು ನೋಡಿಕೊಂಡು ಉಳುಮೆ ಮಾಡಬೇಕಾಗುತ್ತದೆ. ಈ ಒಂದು ರೂಪಾಯಿ ನಾಣ್ಯಕ್ಕೆ ಹೋಲಿಸಲಾಗಿ ಶೇ. 45 ಭಾಗ 5 ಮಣ್ಣಿನ ಕಣಗಳು, ಶೇ. 5 ಭಾಗ ಸಾವಯವ ಪದಾರ್ಥ, – ಶೇ. 25 ಭಾಗ ವಾಯ ಹೊರ-ಒಳ ಹೋಗಲು ರಂಧ್ರದ ಸಾಂದ್ರತೆ 5 ಹಾಗೂ ಶೇ. 25 ಭಾಗ ನೀರಿನಿಂದ ಕೂಡಿದ್ದರೆ ಅದು ಉತ್ತಮವಾದ 2 ಭೂಮಿ ತಯಾರಿಕೆ.

ರಾಸಾಯನಿಕ ಗೊಬ್ಬರದ ಬಳಕೆ:

ಪ್ರತಿ ಎಕರೆಗೆ 7.0 ಕೆ.ಜಿ. ಸಾರಜನಕ, 30.0 ಕೆ.ಜಿ. ರಂಜಕ ಹಾಗೂ 10 ಕೆ.ಜಿ. ಪೋಟ್ಯಾಷ್ ಒದಗಿಸುವ ರಸಗೊಬ್ಬರಗಳನ್ನು ಬಿತ್ತನೆ ಸಮಯದಲ್ಲಿ ಭೂಮಿಗೆ ಸೇರಿಸಬೇಕು. ರಂಜಕ ಒದಗಿಸುವ ಗೊಬ್ಬರವನ್ನು ಸಿಂಗಲ್ ಸುಪರ್ ಫಾಸ್ಪೇಟ್ ರೂಪದಲ್ಲಿ ಪೂರೈಸುವುದು ಉತ್ತಮ. ಈ ರಸಗೊಬ್ಬರದಲ್ಲಿ ಶೇ.16 ರಷ್ಟು ರಂಜಕ ಅಲ್ಲದೇ ಶೇ.11 ಗಂಧಕದ ಅಂಶ ಇರುವದರಿಂದ ಶೇಂಗಾ ಕಾಳಿನಲ್ಲಿ ಎಣ್ಣೆ ಪ್ರಮಾಣ ಹೆಚ್ಚಿಸುತ್ತದೆ ಮತ್ತು ಅಲ್ಪ ಪ್ರಮಾಣದಲ್ಲಿ ಕ್ಯಾಲ್ಸಿಯಂ ಇರುವದರಿಂದ ಶೇಂಗಾ ಕಾಯಿಯ ಹೊರಕವಚ ಗಟ್ಟಿಯಾಗಿ ರೋಗಾಣುಗಳಿಂದ ಕಾಪಾಡುತ್ತದೆ. ವಿಶೇಷವಾಗಿ ಕೆಂಪು ಭೂಮಿಗೆ ಪೊಟ್ಯಾಷ್ 12.5 ಕೆ.ಜಿ.ಯಷ್ಟು ಹೆಚ್ಚು ಕೊಡಬೇಕು. ಹೂ ಬಿಡುವ ಹಂತದಲ್ಲಿ ಪ್ರತಿ ಎಕರೆಗೆ 5 ಕಿ. ಗ್ರಾಂ ಸಾರಜನಕವನ್ನು ಮೇಲುಗೊಬ್ಬರವಾಗಿ ಕೊಡುವುದು ಸೂಕ್ತ. ಹೂ ಬಿಡುವ ಹಂತದಲ್ಲಿ ಶೇ. 1 ರ ಪೋಟ್ಯಾಷ್ ಸಿಂಪರಣೆ ಮಾಡುವುದರಿಂದ ಎಲೆಯ ಅಂಚಿನ ಭಾಗ ಕೆಂಪಾಗುವಿಕೆಯನ್ನು ನಿವಾರಿಸಬಹುದು.

12 : 32 : 16 ಸಂಯುಕ್ತ ರಸ ಗೊಬ್ಬರ:

ಈ ಸಂಯುಕ್ತ ರಸ ಗೊಬ್ಬರವನ್ನು ರಾಷ್ಟ್ರಮಟ್ಟದಲ್ಲಿ ವಿಶೇಷವಾಗಿ ಎಣ್ಣೆಕಾಳು ಬೆಳೆಗಳ ಅವಶ್ಯಕತೆಯನ್ನು ನೋಡಿಕೊಂಡು ಸಂಯುಕ್ತಗೊಳಿಸಿದ್ದು ಮಣ್ಣು ಪರೀಕ್ಷೆ ರಹಿತ ಸಂದರ್ಭದಲ್ಲಿ ಪ್ರತಿ ಎಕರೆಗೆ 40 ಕೆ.ಜಿ. ಯಷ್ಟು ಬಳಸಬಹುದು. ಜೊತೆಗೆ ಮೇಲೆ ತಿಳಿಸಿದಂತೆ ಲಘು ಮತ್ತು ಜಿಪ್ಸಂ ಬಳಕೆಯನ್ನು ಸಹ ಬಳಕೆ ಮಾಡಬೇಕು.

ಕಳೆಗಳ ನಿರ್ವಹಣೆ: ಶೇಂಗಾ ಬೆಳೆಯಲ್ಲಿ ಕಳೆಗಳ ನಿರ್ವಹಣೆಗಾಗಿ‌ ಪ್ರತಿ ಎಕರೆ ಪ್ರದೇಶಕ್ಕೆ ಸುಮಾರು 0.4 ಲೀ. ಪೆಂಡಿಮಿಥಲಿನ್ 30 ಇಸಿ ಕಳೆನಾಶಕವನ್ನು 300 ಲೀ. ನೀರಿನಲ್ಲಿ ಕರಗಿಸಿ ಬಿತ್ತಿದ ದಿನ ಅಥವಾ ಬಿತ್ತಿದ ಮಾರನೇ ದಿನ ಮಣ್ಣಿನ ಮೇಲೆ ಸಿಂಪರಣೆ ಮಾಡಬೇಕು. ಈ ಕಳೆನಾಶಕವನ್ನು ಸಿಂಪರಣೆ ಮಾಡುವಾಗ ಮಣ್ಣು ಹುಡಿಯಾಗಿರಬೇಕು ಮತ್ತು ಸಾಕಷ್ಟು ತೇವಾಂಶ ಇರಬೇಕು. ನಂತರ ಬಿತ್ತಿದ 30 ದಿವಸಗಳ ನಂತರ ಒಂದು ಸಲ ಕೈಗಸ ತೆಗೆಯುವುದು ಸೂಕ್ತ. ಬಿತ್ತನೆಯ ನಂತರ ಸಿಂಪರಣೆ ಮಾಡುವ ಕಳೆನಾಶಕಗಳೆಂದರೆ ಬೆಳೆ 18 ರಿಂದ 20 ದಿನಗಳ ನಂತರ ಏಕವಾರ್ಷಿಕ ಹಾಗೂ ಬೀಜದಿಂದ ವೃದ್ಧಿಯಾಗುವ ಹುಲ್ಲಿನ ಜಾತಿಗೆ ಸೇರಿದ ಕಳೆಗಳ ಹತೋಟಿಗೆ ಪ್ರತಿ ಎಕರೆಗೆ 400 ಮಿ.ಲೀ. ಕ್ವಿಝಾಲೋಫಾಪ್ ಇಥೈಲ್ 50 ಇ.ಸಿ. ಅಥವಾ 400 ಗ್ರಾಂ ಪ್ರೊಪಾಶ್ವಝಾಪಾಪ್ 10 ಇ.ಸಿ. ಸಿಂಪರಣೆ ಮಾಡಬಹುದು. ಅಥವಾ 400 ಮಿ.ಲೀ. ಇಮಾಜೆತಾಪಿರ್ ಎಸ್. ಎಲ್. (ಅಂದರೆ ಪ್ರತಿ ಲೀಟರ್ ನೀರಿಗೆ 2.0 ಮಿ.ಲೀ)ನ್ನು ಸಹ ಎಕರೆಗೆ 200 ಲೀಟರ ಸಿಂಪರಣಾ ದ್ರಾವಣದ ಪ್ರಮಾಣದಲ್ಲಿ ಬಳಕೆ ಮಾಡಬಹುದು.

ನೀರಿನ ನಿರ್ವಹಣೆ: ಈ ಬೆಳೆಯನ್ನು ಬಿತ್ತುವ ಮೊದಲು ಸರಿಯಾಗಿ ಹಸಿ ಮಾಡಿ ಬಿತ್ತನೆ ಮಾಡಬೇಕು. ಅವಶ್ಯಕತೆಗೆ ಅನುಗುಣವಾಗಿ ಬಿತ್ತಿದ ಒಂದು ವಾರದ ನಂತರ ಸರಿಯಾದ ಮೊಳಕೆ ಹೊರ ಬರಲು ಹುಳಿ ನೀರು ಹಾಯಿಸಿ ತದನಂತರ ಕೆಂಪು (ಮಸಾರಿ)/ ಮರಳು ಮಿಶ್ರಿತ ಮಣ್ಣು ಆದಲ್ಲಿ 20 ದಿವಸದವರೆಗೆ ಹಾಗೂ ಎರೆ ಭೂಮಿಯಲ್ಲಿ 30 ದಿವಸದವರೆಗೆ ಅಂದರೆ ಹೂವಾಡುವ ಹಂತದವರೆಗೆ ನೀರನ್ನು ಹಾಯಿಸಬಾರದು. ಹೀಗೆ ಮಾಡುವುದರಿಂದ ಪ್ರಾರಂಭದಲ್ಲಿ ಬೆಳೆಯು ನಿಧಾನಗತಿಯಿಂದ ಬೆಳೆದು ಉತ್ತಮ ಬೇರಿನ ಬೆಳವಣಿಗೆಯ ಜೊತೆಗೆ ಗಿಡದ ಕೆಳಮಟ್ಟದಲ್ಲಿ ಹೆಚ್ಚಿನ ಹೂಗಳ ಸಂಖ್ಯೆಯೊಂದಿಗೆ ಪರಾಗಸ್ಪರ್ಷಕ್ರಿಯೆ ನಂತರ ಅಧಿಕ ಸಂಖ್ಯೆಯ ಬಾರಂಗಿಗಳು ಭೂಮಿಯಲ್ಲಿ ಸೇರಿಕೊಂಡು ಇಳುವರಿ ವೃದ್ಧಿಯಾಗುವುದು. ವ್ಯತಿರಿಕ್ತವಾಗಿ ಬಿತ್ತಿದ ನಂತರ ಒಂದು ವಾರದಲ್ಲಿ ನೀರು ಹಾಯಿಸಿದರೆ ಬೆಳೆ ಹುಲುಸಾಗಿ ಬೆಳೆದು ಬಾರಂಗಿ ಕೊಂಡಿ ಸರಿಯಾಗಿ ಮಣ್ಣಿನಲ್ಲಿ ಸೇರದೆ ಕಾಯಿ ಕಟ್ಟುವ ಪ್ರಮಾಣ ಕಡಿಮೆ ಆಗುತ್ತದೆ. ಆದ್ದರಿಂದ ಹಸಿ ಮಾಡಿ ಬಿತ್ತಿದ ಬೆಳೆಗೆ ಮೊದಲನೆಯ ನೀರು ಕೊಡುವ ಬಗ್ಗೆ ನಿರ್ಧಾರ ಅಗತ್ಯವಾಗಿದೆ. ನಂತರದ ನೀರನ್ನು ಹವಾಮಾನಕ್ಕೆ ಅನುಗುಣವಾಗಿ 8 ರಿಂದ 10 ದಿನಕ್ಕೊಮ್ಮೆ ಕೊಡಬೇಕು. ಹಾಯು ನೀರು ಪದ್ಧತಿಯಲ್ಲಿ ನೀರನ್ನು ಹರಿಸದೆ ಉಣಿಸುವಂತೆ ಮಾಡಲು ಗಮನ ಹರಿಸಬೇಕು.

ಸಿಂಚನ ನೀರಾವರಿ ಮತ್ತು ಹನಿ ನೀರಾವರಿ:

ಶೇಂಗಾ ಬೆಳೆಯು ಹಾಯು ನೀರು ಪದ್ಧತಿಗಿಂತ ಸಿಂಚನ ನೀರಾವರಿಗೆ ಸ್ಪಂದಿಸುವುದರಿಂದ ಸಿಂಚನ ನೀರಾವರಿ ಅಳವಡಿಸಿಕೊಳ್ಳುವುದು ಉತ್ತಮ. ಈ ಪದ್ಧತಿಯಿಂದ ನೀರಿನ ಉಳಿತಾಯದ ಜೊತೆಗೆ ಶೇಂಗಾ ಕಾಯಿಯ ಕಾಳಿನ ಉತಾರದ ಪ್ರಮಾಣವನ್ನು ಹೆಚ್ಚಿಸಬಹುದು. ಇತ್ತೀಚಿನ ದಿಗಳಲ್ಲಿ ಬಹು ಬೆಳೆ ಪದ್ಧತಿಯಲ್ಲಿ ಶೇಂಗಾ ಬೆಳೆಯನ್ನು ಹನಿ ನೀರಾವರಿಯಲ್ಲು ಸಹ ಬೆಳೆಯುವುದು ಕಂಡು ಬಂದಿದೆ.

ನ್ಯಾನೋ ಯೂರಿಯಾ: ಇಪ್ಕೋ ಸಂಸ್ಥೆಯ ಮಾಹಿತಿಯ‌ ಆಧಾರದ ಮೇಲೆ ಬೆಳೆ 30 ಮತ್ತು 60 ದಿನವಿದ್ದಾಗ ಪ್ರತಿ ಎಕರೆಗೆ 500 ಎಮ್. ಎಲ್. ನ್ಯಾನೋ ಯೂರಿಯಾವನ್ನು ಪ್ರತಿ 200 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬಹುದು. ಇದು ನಮ್ಮ ಕೃಷಿ ವಿಶ್ವವಿದ್ಯಾಲಯ, ಧಾರವಾಡದ ಶೇಂಗಾ ಬೆಳೆ 30 ಮತ್ತು 60 ದಿನವಿದ್ದಾಗ ಶೇ. 2 ಯೂರಿಯಾ ಸಿಂಪರಣೆ ತಾಂತ್ರಿಕತೆಯನ್ನು ಹೋಲುತ್ತದೆ.

ಇಳುವರಿ: ಶೇಂಗಾ ಬೆಳೆಯಲ್ಲಿ ಮೇಲಿನ ಉತ್ಪಾದನಾ ಕ್ರಮಗಳ ಜೊತೆಗೆ ತಜ್ಞರ ಸಲಹೆ ಮೇರೆಗೆ ಸಮಯೋಚಿತ ಸಸ್ಯ ಸಂರಕ್ಷಣೆ ಕೈಗೊಂಡಲ್ಲಿ ಶೇಂಗಾ ಬೆಳೆಯಲ್ಲಿ ಎಕರೆಗೆ 8 ರಿಂದ 14 ಕ್ವಿಂಟಾಲ್ ಶೇಂಗಾ ಕಾಯಿ ಇಳುವರಿಯನ್ನು ಜೊತೆಗೆ ಅಷ್ಟೇ ಪ್ರಮಾಣದ ದನಕರುಗಳಿಗೆ ಯೋಗ್ಯವಾದ ಪೌಷ್ಟಿಕವಾದ ಶೇಂಗಾ ಬಳ್ಳಿ ಅಥವಾ ಹೊಟ್ಟನ್ನು ಪಡೆಯಬಹುದು.

ಬೇಸಿಗೆ ಶೇಂಗಾವನ್ನು ಮುಂಗಾರಿ ಹಂಗಾಮಿಗೆ ಬೀಜಕ್ಕೆ ಬಳಸುವುದಾದ್ದಲ್ಲಿ ಬೇಸಿಗೆ ಹಂಗಾಮಿನಲ್ಲಿ ಬೆಳೆದ ಶೇಂಗಾ ಬಳ್ಳಿಗಳನ್ನು ಕಿತ್ತು ಮರು ದಿನದಿಂದ ನೆರಳಿನಲ್ಲಿ ಅಥವಾ ಹೊಲದಲ್ಲಿ ಒಂದು ಬಳ್ಳಿಯ ಕಾಯಿಗಳ ಮೇಲೆ ಇನ್ನೊಂದು ಬಳ್ಳಿಯನ್ನು ಒಂದೇ ಪದರದಲ್ಲಿ ಜೋಡಿಸಿ ಒಂದು ವಾರದವರೆಗೆ ಒಣಗಿಸಿ ಶೇಂಗಾ ಕಾಯಿಗಳನ್ನು ಅಲುಗಾಡಿಸಿದಾಗ ಗಲ್‌ಗಲ್ ಶಬ್ದ ಬರುವಂತಿದ್ದಾಗ (ಶೇ. 7ರ ತೇವಾಂಶ) ಗೋಣಿ ಚೀಲದೊಳಗೆ 300 ಗೇಜಿನ ಪ್ಲಾಸ್ಟಿಕ್ ಚೀಲವನ್ನು ಸೇರಿಸಿ ಚೀಲವನ್ನು ಗಾಳಿಯಾಡದಂತೆ ಹೊಲಿದು ಶೇಖರಣೆ ಮಾಡುವುದರಿಂದ ಬೀಜದ ಮೊಳಕೆ ಪ್ರಮಾಣವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು.

Spread positive news

Leave a Reply

Your email address will not be published. Required fields are marked *