ಅರ್ಹ ರೈತರ ಖಾತೆಗೆ 628 ಕೋಟಿ ಹಣ : ಸಚಿವ ಕೃಷ್ಣ ಭೈರೇಗೌಡ

33 ಲಕ್ಷ ರೈತರಿಗೆ 628 ಕೋಟಿ ಹಣ ಈಗಾಗಲೇ ಬಿಡುಗಡೆಯಾಗಿದೆ ಎಂದು ಸಚಿವ ಕೃಷ್ಣ ಭೈರೆಗೌಡ ಸ್ಪಷ್ಟಪಡಿಸಿದ್ದಾರೆ. ಬರದ ತೊಂದರೆಯಲ್ಲಿರುವ ರೈತರ ನೆರವಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಈತನಕ 33 ಲಕ್ಷ ರೈತರಿಗೆ 628 ಕೋಟಿ ಹಣ ನೀಡಿದ್ದೇವೆ. 66 ಸಾವಿರ ರೈತರಿಗೆ ಹಣ ಸಂದಾಯ ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೆಗೌಡ ತಿಳಿಸಿದರು.

ಹಿಂದಿನ ಸರ್ಕಾರದಲ್ಲಿ ಬೆಳೆ ಪರಿಹಾರದಲ್ಲಿ ಪಾರದರ್ಶಕತೆಯ ಕೊರತೆಯಿಂದ, ಫಲಾನುಭವಿಗಳ ಹೊರತು ಹಲವಾರು ಜನ ಹಣವನ್ನು ಸರ್ಕಾರದಿಂದ ಪರಿಹಾರದ ಹೆಸರಿನಲ್ಲಿ ಪಡೆದುಕೊಂಡಿದ್ದಾರೆ. ಈ ಬಾರಿ ಆ ರೀತಿಯ ಅಚಾತುರ್ಯಗಳು ನಡೆಯುವುದಿಲ್ಲ. ತಂತ್ರಜ್ಞಾನಗಳ ಸದ್ಭಳಕೆಯಿಂದ ಕೇವಲ ಅರ್ಹ ಫಲಾನುಭವಿಗಳಿಗೆ ಮಾತ್ರ ಪರಿಹಾರ ನೀಡುತ್ತೇವೆ ಎಂದು ಕೃಷ್ಣ ಭೈರೆಗೌಡ ಸ್ಪಷ್ಟಪಡಿಸಿದ್ದಾರೆ. ನೇರವಾಗಿ ಬೆಳೆ ಸಮೀಕ್ಷೆ ಮಾಹಿತಿ ಪಡೆದು ರೈತರ ಖಾತೆಗೆ ಪರಿಹಾರದ ಹಣ ಜಮೆ ಮಾಡಲಾಗುತ್ತಿದೆ. ರಾಜ್ಯದ 223 ತಾಲೂಕುಗಳಲ್ಲಿ ಬರ ಘೋಷಣೆ ಆಗಿದೆ. 870 ಕೋಟಿ ರೂ.ಗಳನ್ನು ಜಿಲ್ಲಾಕಾರಿ, ತಹಶೀಲ್ದಾರ್‍ಗೆ ಒದಗಿಸಿದ್ದೇವೆ. ಕುಡಿಯುವ ನೀರು, ಜಾನುವಾರುಗಳ ಮೇವಿಗೆ ಅಗತ್ಯ ಇವರೆಡೆ ಬಳಸಿಕೊಳ್ಳಲು ಹೇಳಿದ್ದೇವೆ ಎಂದು ಮಾಹಿತಿ ನೀಡಿದರು.

ಸೆ.23ರಂದು ರಾಜ್ಯದ ಬರ ಪೀಡಿತ ಪ್ರದೇಶಗಳಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿತ್ತು. 18172 ಸಾವಿರ ಕೋಟಿ ರೂ. ಎನ್‍ಡಿಆರ್‍ಎಫ್‍ನಡಿ ಪರಿಹಾರ ಕೋರಿದ್ದು, ಅದರಲ್ಲಿ 4663 ಕೋಟಿ ರೂ. ರೈತರಿಗೆ ಕೊಡಬೇಕಾಗುತ್ತದೆ. ನಾಲ್ಕೂವರೆ ತಿಂಗಳು ಕಳೆದರೂ ಕೇಂದ್ರ ಸರ್ಕಾರ ಸಭೆ ನಡೆಸಿ ಪರಿಹಾರ ನೀಡುವ ಬಗ್ಗೆ ತೀರ್ಮಾನ ಮಾಡಿಲ್ಲ. ಇಡೀ ರಾಷ್ಟ್ರದಲ್ಲಿ ಪ್ರಥಮವಾಗಿ ರೈತರ ಪರವಾಗಿ ರಾಜ್ಯದ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದ್ದು, ಈ ಕುರಿತು ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಬರ ಪರಿಸ್ಥಿತಿಯ ಕುರಿತು ಎಲ್ಲ ರೀತಿಯ ಸರ್ವೆ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಪರಿಹಾರ ಕೊಡಲಿಕ್ಕೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಆದಷ್ಟು ಬೇಗನೆ ಕೇಂದ್ರ ಸರ್ಕಾರದ ಮಂಜೂರಾತಿ ದೊರೆತ ನಂತರ ಪರಿಹಾರವನ್ನು ವಿತರಣೆ ಮಾಡಲಾಗುವುದು

ಕಳೆದ ಬಾರಿ ರೈತರಿಗೆ ಕೊಡುವ ಬರಪರಿಹಾರದಲ್ಲಿ ದೊಡ್ಡ ಮಟ್ಟದ ಲೂಟಿಯಾಗಿದೆ. ಲೂಟಿ ಮಾಡುತ್ತಿರುವುದು ಕಂಡುಬಂದರೂ ಆಗಿನ ಸರ್ಕಾರ ತಡೆಗಟ್ಟುವ ಕೆಲಸ ಮಾಡಿಲ್ಲ. ತನಿಖಾ ವರದಿ ಬಂದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಹಣ ದುರುಪಯೋಗ ಆಗದಂತೆ ನೇರವಾಗಿ ರೈತರಿಗೆ ತಲುಪಲು ನಾವು ಕ್ರಮ ಕೈಗೊಂಡಿದ್ದೇವೆ. ಆದರೆ ಹಿಂದೆ ಗ್ರಾಮ ಲೆಕ್ಕಿಗರು ಯಾರದ್ದೋ ಜಮೀನಿಗೆ ಇನ್ನಾರಿಗೋ ಪರಿಹಾರ ಕೊಡುವಂತೆ ಮಾಡಿದ್ದಾರೆ. ವ್ಯಾಪಕವಾಗಿ ಬರ ಪರಿಹಾರ ಹಣ ದುರುಪಯೋಗ ಆಗಿದೆ. ಬೆಳೆ ಬೆಳೆಯದವರಿಗೇ ಪರಿಹಾರ ಸಿಕ್ಕಿದೆ. ಬೆಳೆ ಬೆಳದವರಿಗೆ ಪರಿಹಾರ ಸಿಕ್ಕಿಲ್ಲ. ಆದರೆ ನಮ್ಮ ಸರ್ಕಾರದಲ್ಲಿ ನಮಗೆ ಪರಿಹಾರ ಸಿಕ್ಕಿಲ್ಲ ಎಂಬ ಮಾತು ಕೇಳದಂತೆ ನಿಗಾ ವಹಿಸಿದ್ದೇವೆ ಎಂದು ಹೇಳಿದರು.

Spread positive news

Leave a Reply

Your email address will not be published. Required fields are marked *