ಕರ್ನಾಟಕ ರಾಜ್ಯ ಸರ್ಕಾರವು ಚುನಾವಣೆಗೂ ಮುನ್ನವೇ ಭರವಸೆ ನೀಡಿದಂತೆ ಅಧಿಕಾರಕ್ಕೆ ಬಂದ ಬಳಿಕ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಐದು ಗ್ಯಾರಂಟಿ ಯೋಜನೆಗಳ ಪೈಕಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಜುಲೈ 19 ರಿಂದ ಆರಂಭವಾಗಿದೆ.
ಈ ಯೋಜನೆಗೆ ನೀವು ಈಗಾಗಲೇ ಅರ್ಜಿ ಸಲ್ಲಿಸಿದ್ದರೆ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಎಂಬುವುದನ್ನು ನೀವು ಇಲ್ಲಿ ತಿಳಿಯಬಹುದಾಗಿದೆ.
ಗೃಹಲಕ್ಷ್ಮೀ ಯೋಜನೆಯು ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರವು ಜಾರಿ ಮಾಡಿರುವ ಯೋಜನೆಯಾಗಿದ್ದು, ಇದರಡಿಯಲ್ಲಿ ಪ್ರತಿ ತಿಂಗಳು ಕೂಡಾ ಮನೆಯ ಒಡತಿಗೆ ಎರಡು ಸಾವಿರ ರೂಪಾಯಿ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ. ಒಂದು ಕುಟುಂಬದಲ್ಲಿ ಮನೆಯ ಯಜಮಾನತ್ವವನ್ನು ಮಹಿಳೆ ವಹಿಸಿದ್ದರೆ ಮಾತ್ರ ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.
ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಹಂತ 1: ಸೇವಾ ಸಿಂಧು ಪೋರ್ಟರ್ ಅಥವಾ ಆಪ್‌ಗೆ ಲಾಗಿನ್ ಆಗಿ
ಹಂತ 2: ಗೃಹಲಕ್ಷ್ಮೀ ಎಂದು ನಮೂದಿಸಲಾಗಿರುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ
ಹಂತ 3: ಗೃಹ ಲಕ್ಷ್ಮೀ ಯೋಜನೆಗೆ ಆನ್‌ಲೈನ್ ಅರ್ಜಿ ಲಭ್ಯವಾಗುತ್ತದೆ.
ಹಂತ 4: ಅರ್ಜಿಯನ್ನು ಭರ್ತಿ ಮಾಡಿ.
ಹಂತ 5: I agree ಎಂಬುವುದನ್ನು ಕ್ಲಿಕ್ ಮಾಡಿ
ಹಂತ 6: word verification ಎಂದು ಇರುವಲ್ಲಿ ಕಾಣುವ ಸಂಖ್ಯೆಗಳನ್ನು ಬಾಕ್ಸ್‌ನಲ್ಲಿ ನಮೂದಿಸಿ submit ಕ್ಲಿಕ್ ಮಾಡಿ.
ಯೋಜನೆಗೆ ಅರ್ಜಿ ಸಲ್ಲಿಸಿದ ಬಳಿಕ ಸ್ಟೇಟಸ್ ಚೆಕ್ ಮಾಡಿ
ಹಂತ 1: ಅಧಿಕೃತ ಸೇವಾ ಸಿಂಧು ವೆಬ್‌ಸೈಟ್‌ಗೆ ಭೇಟಿ ನೀಡಿ: sevasindhuservices.karnataka.gov.in.
ಹಂತ 2: Check Application/Beneficiary Status ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ 3: ನಿಮ್ಮ ಅಪ್ಲಿಕೇಶನ್‌ನ ರೆಫೆರೆನ್ಸ್ ನಂಬರ್ ಅಥವಾ ಇತರ ಸಂಬಂಧಿತ ಮಾಹಿತಿಯಂತಹ ಅಗತ್ಯವಿರುವ ವಿವರಗಳನ್ನು ನಮೂದಿಸಿ.
ಹಂತ 4: ನಿಮ್ಮ ಅರ್ಜಿಯ ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸಲು ವಿವರಗಳನ್ನು ಸಬ್‌ಮಿಟ್ ಮಾಡಿ, ನೀವು ಯೋಜನೆಯ ಫಲಾನುಭವಿಗಳ ಲೀಸ್ಟ್‌ನಲ್ಲಿ ಇದ್ದೀರಾ ಎಂದು ಚೆಕ್ ಮಾಡಿಕೊಳ್ಳಿ.
ವಾಟ್ಸಾಪ್ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಿ
ಚಾಟ್‌ಬಾಟ್ ಲಿಂಕ್ ಆಗಿರುವ ವಾಟ್ಸಾಪ್ ಸಂಖ್ಯೆ 8147500500 ಅನ್ನು ಸರ್ಕಾರ ಒದಗಿಸಿದೆ. ವಾಟ್ಸಾಪ್ ಬಳಕೆದಾರರು ತಮ್ಮ ವಿವರಗಳನ್ನು ಈ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಚಾಟ್‌ಬಾಟ್ ಅರ್ಜಿ ಸಲ್ಲಿಸಲು ಬಳಕೆದಾರರಿಗೆ ಸಹಾಯ ಮಾಡಲಿದೆ ಮತ್ತು ಮಾರ್ಗದರ್ಶನ ನೀಡಲಿದೆ.
ಚಾಟ್‌ಬಾಟ್ ಈ ಅರ್ಜಿಯನ್ನು ಬೆಂಗಳೂರುಒನ್, ಕರ್ನಾಟಕ ಒನ್ ಮತ್ತು ಗ್ರಾಮಒನ್ ಕಚೇರಿಗಳಿಗೆ ವರ್ಗಾಯಿಸುತ್ತದೆ. ಅಲ್ಲಿ ಎಲ್ಲ ಪರಿಶೀಲನೆ ನಡೆಯಲಿದೆ. ಮಾಧ್ಯಮ ವರದಿಗಳ ಪ್ರಕಾರ, ವಾಟ್ಸಾಪ್ ಚಾಟ್‌ಬಾಟ್ ಸೇವೆಗಳಿಂದ ಏಳು ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಈಗಾಗಲೇ ಸ್ವೀಕರಿಸಲಾಗಿದೆ.
ಅರ್ಜಿದಾರರು ತಮ್ಮ ಆಧಾರ್ ಕಾರ್ಡ್ ಜೊತೆಗೆ ತಮ್ಮ ಪಡಿತರ ಚೀಟಿಯಾದ ಬಿಪಿಎಲ್ ಕಾರ್ಡ್ ಅಥವಾ ಎಪಿಎಲ್ ಕಾರ್ಡ್ ಅಥವಾ ಅಂತ್ಯೋದಯ ಕಾರ್ಡ್ ಅನ್ನು ಒದಗಿಸಬೇಕಾಗುತ್ತದೆ. ಇನ್ನು ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಲ್ಲದಿದ್ದರೆ, ಆಧಾರ್ ಕಾರ್ಡ್ ಮಾಹಿತಿ ಜೊತೆಗೆ ಪಾಸ್‌ಬುಕ್ ಅನ್ನು ನೀಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾರು ಯೋಜನೆಗೆ ಅರ್ಹರಲ್ಲ
ಒಂದು ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಜಿಎಸ್‌ಟಿ ರಿಟರ್ನ್ಸ್ ಅನ್ನು ಸಲ್ಲಿಕೆ ಮಾಡುತ್ತಿದ್ದರೆ ಈ ಯೋಜನೆಗೆ ಅರ್ಹರಾಗುವುದಿಲ್ಲ. ಇನ್ನು ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರು ಆಗಿದ್ದರೂ ಕೂಡಾ ಈ ಯೋಜನೆಯ ಫಲವನ್ನು ಪಡೆಯಲು ಅರ್ಹರಾಗಿರುವುದಿಲ್ಲ.