ಯೂರಿಯಾ ರಸಗೊಬ್ಬರ ಖರೀದಿಗೆ ಇನ್ಮುಂದೆ ರೈತರು ಕಡ್ಡಾಯವಾಗಿ ಎಫ್‌ಐಡಿ ಹೊಂದಿರಬೇಕು. ಅಷ್ಟೇ ಅಲ್ಲ. ತಮ್ಮ ಭೂಮಿಯನ್ನು ಸಹ ಎಫ್‌ಐಡಿಗೆ ಜೋಡಿಸಿರಬೇಕು. ಇದರ ಆಧಾರದಲ್ಲಿಯೇ ಯೂರಿಯಾ ರಸಗೊಬ್ಬರವನ್ನು ಕೆ.ಕಿಸಾನ್ ತಂತ್ರಾಂಶದ ಮೂಲಕ ವಿತರಣೆ ಮಾಡಲಾಗುತ್ತದೆ. ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 5.36.347 ತಾಕು (ಸರ್ವೇ ನಂಬರ್)ಗಳಿದ್ದು ಇದರ ಪೈಕಿ 4,18,482 ತಾಕು (ಸರ್ವ ನಂಬರ್ಗಗಳು ಮಾತ್ರ (ಶೇ. 78.02) ಎಫ್ ಐಡಿಗೆ ಜೋಡಣೆಯಾಗಿದ್ದು ಇನ್ನೂಳಿದ 1,17,665 ತಾನು (ಸರ್ವೆ ನಂಬರ್‌ಗಳಿಗೆ ಎಫ್ ಐಡಿ ಜೋಡಣೆಯಾಗಿರುವುದಿಲ್ಲ.
ಯೂರಿಯಾ ರಸಗೊಬ್ಬರ ತಯಾರಿಕೆಗೆ ವಿದೇಶದಿಂದ ಕಚ್ಚಾಸಾಮಗ್ರಿ ಹೆಚ್ಚು ಆಮದು ಮಾಡಿಕೊಳ್ಳಲಾಗುತ್ತಿದೆ. ಯುದ್ಧದಿಂದ ರಸಗೊಬ್ಬರ ತಯಾರಿಕೆ ಕಚ್ಚಾ ಸಾಮಗ್ರಿ ಆಮದಿನಲ್ಲಿ ಭಾರಿ ಸಮಸ್ಯೆಯಾಗಿದೆ. ಹೀಗಾಗಿ ಈ ಬಾರಿ ರಸಗೊಬ್ಬರ ಉತ್ಪಾದನೆಯಲ್ಲಿ ಕುಸಿತವಾಗುವ ಸಾಧ್ಯತೆ ಇದೆ. ಇದರಿಂದ ರಸಗೊಬ್ಬರ ವಿತರಣೆಯ ಮೇಲೆ ವಿಶೇಷ ನಿಗಾ ಇರಿಸಲು ನಿರ್ಧರಿಸಲಾಗಿದೆ. ಈ ಕುರಿತು ರಾಜ್ಯ ಸರ್ಕಾರದ ಕೃಷಿ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು ರೈತರು ರಸಗೊಬ್ಬರ ಖರೀದಿ ಮಾಡಬೇಕಿದ್ದರೆ ಎಫ್‌ಐಡಿಯಲ್ಲಿ ತಮ್ಮ ಎಲ್ಲಾ ಸರ್ವೇ ನಂಬರ್ ಗಳನ್ನು ಜೋಡಣೆಯಾಗಿರಬೇಕು.
ಇದರ ಆಧಾರದ ಮೇಲೆ ಹಾಕಿದ ಬೆಳೆಗೆ ಯೂರಿಯಾ ರಸಗೊಬ್ಬರವನ್ನು ರೈತರಿಗೆ ಕೆ ಕಿಸಾನ್ ತಂತ್ರಾಂಶದ ಮೂಲಕವೇ ವಿತರಣೆ ಮಾಡಲಾಗುವುದು ಹಾಗೂ ರೈತರ ಹೆಸರಿನಲ್ಲಿ ರಸಗೊಬ್ಬರ ಖರಿದಿಸಿ ಕಾಳಸಂತೆಯಲ್ಲಿ ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದನ್ನು ನಿಯಂತ್ರಿಸಲು ಮತ್ತು ರೈತರು ಸಹ ಮಿತವಾಗಿ ರಸಗೊಬ್ಬರ ಬಳಕೆ ಮಾಡುವಂತಾಗಬೇಕು ಎನ್ನುವ ಕಾರಣಕ್ಕಾಗಿ ಕೆ. ಕಿಸಾನ್ ತಂತ್ರಾಂಶದ ಮೂಲಕ ರಸಗೊಬ್ಬರ ವಿತರಣೆ ಮಾಡಲಾಗುತ್ತಿದೆ. ಅಂದರೆ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯ ಆಧಾರದಲ್ಲಿ ಬೇಕಾಗುವ ಪ್ರಮಾಣದ ರಸಗೊಬ್ಬರ ಮಾತ್ರ ಕೆ. ಕಿಸಾನ್ ತಂತ್ರಜ್ಞಾನದ ಮೂಲಕವೇ ವಿತರಣೆ ಮಾಡಲಾಗುತ್ತದೆ.
ರೈತರು ಈಗಾಗಲೇ ಎಫ್‌ಐಡಿ ಹೊಂದಿದ್ದಲ್ಲಿ ಅಥವಾ ಹೊಂದಿರದೆ ಇದ್ದಲ್ಲಿ ತಮ್ಮ ಎಲ್ಲ ಪಹಣಿ ಹಾಗೂ ಆಧಾರ್ ಕಾರ್ಡ್ ತೆಗೆದುಕೊಂಡು ಸಮೀಪದ ರೈತ ಸಂಪರ್ಕ ಕೇಂದ್ರ ಸಾಮಾನ್ಯ ಸೇವಾ ಕೇಂದ್ರ ಮತ್ತು ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಬೇಕು. ಎಫ್ ಐಡಿ ಹೊಂದಿದ್ದಲ್ಲಿ ನಿಮ್ಮ ಎಲ್ಲ ಸರ್ವೇ ನಂಬರ್ ಆ ಎಫ್‌ಐಡಿಗೆ ಲಿಂಕ್ ಮಾಡಿಸಿಕೊಳ್ಳಲು ಹಾಗೂ ಎಫ್‌ಐಡಿ ಹೊಂದಿರದೆ ಇದ್ದಲ್ಲಿ ಹೊಸದಾಗಿ ಎಫ್‌ಐಡಿ ಸೃಜಿಸಿಕೊಳ್ಳಬೇಕು.
ಕರ್ನಾಟಕದ ರೈತರು FRUITS (Farmer Registration and Unified beneficiary InformaTion System) ಪೋರ್ಟಲ್‌ನಲ್ಲಿ ತಮ್ಮ FID (Farmer ID) ಅನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಿ, ಇ-ಕೆವೈಸಿ (e-KYC) ಮಾಡಿಸುವುದು ಕಡ್ಡಾಯವಾಗಿದೆ. ಇದು ಸರ್ಕಾರದ ಸಬ್ಸಿಡಿ, ಬೆಳೆ ವಿಮೆ ಮತ್ತು ಪರಿಹಾರ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಪಡೆಯಲು ಸಹಕಾರಿಯಾಗಿದೆ.
ಎಫ್‌ಐಡಿ ಹೊಂದಿಲ್ಲದ ರೈತರು ತಕ್ಷಣವೇ ತಮ್ಮ ಪಹಣಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಆಧಾರ್ ಕಾರ್ಡ್ ದಾಖಲೆಗಳೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ, ಗ್ರಾಮ ಒನ್, ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಎಫ್‌ಐಡಿ ಸೃಜಿಸಿಕೊಳ್ಳಬೇಕು. ಈಗಾಗಲೇ ಎಫ್‌ಐಡಿ ಹೊಂದಿರುವ ರೈತರು ತಮ್ಮ ಎಲ್ಲ ಸರ್ವೆ ನಂಬರ್‌ಗಳನ್ನು ಅದಕ್ಕೆ ಜೋಡಣೆ ಮಾಡಬೇಕು ಎಂದು ಹೇಳಿದ್ದಾರೆ.
ರೈತರಲ್ಲದವರು ಆಧಾರ್, ಬೇರೆ ರೈತರ ಎಫ್‌ಐಡಿ ಬಳಸಿ ರಸಗೊಬ್ಬರ ಖರೀದಿಸಿ ಸಂಗ್ರಹಿಸಿ ಕೃತಕ ಅಭಾವ ಸೃಷ್ಟಿ ಮಾಡುವ ಪ್ರಕರಣ, ಕೃಷಿಯೇತರ ಚಟುವಟಿಕೆಗಳಿಗೆ ರಸಗೊಬ್ಬರ ಬಳಕೆ ಮಾಡುವಂತಹ ಪ್ರಕರಣ, ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು, ಕಾಳಸಂತೆಯಲ್ಲಿ ಮಾರಾಟ ಮಾಡುವುದು ಕಂಡು ಬಂದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

