ವಾರಸುದಾರರ ಹೆಸರಿಗೆ ಪಹಣಿ ನೋಂದಣಿ ಮಾಡಿಕೊಡಲು ಈ ಮನೆಗೇ ಪೌತಿ ಖಾತೆ ಆಂದೋಲನ

ರೈತರೇ ಕಂದಾಯ ಇಲಾಖೆಯಿಂದ ಒಂದು ಮಹತ್ವದ ಆದೇಶ ಬಂದಿದೆ. ಸರ್ಕಾರದ ಈ ಆದೇಶದಿಂದ ರೈತರಿಗೆ ಬಹಳಷ್ಟು ಉಪಯೋಗ ಸಿಗುತ್ತದೆ. ಅದೇನೆಂದರೆ ರಾಜ್ಯದಲ್ಲಿ ಮೃತಪಟ್ಟವರ ಹೆಸರಿನಲ್ಲಿರುವ 51.13 ಲಕ್ಷ ಜಮೀನುಗಳ ಪಹಣಿಗಳನ್ನು ವಾರಸುದಾರರಿಗೆ ನೋಂದಣಿ ಮಾಡಿಕೊಡಲು ಕಂದಾಯ ಇಲಾಖೆ ಮುಂದಾಗಿದ್ದು, ಇ- ಪೌತಿ ಆಂದೋಲನ ಕೈಗೊಂಡಿದೆ.

ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಅಭಿವೃದ್ಧಿ ಅಧಿಕಾರಿಗಳು ರೈತರ ಮನೆ ಬಾಗಿಲಿಗೆ ತೆರಳಿ ಪೌತಿ ಖಾತೆ ಮಾಡಿಕೊಡಲಿದ್ದಾರೆ.

ರೈತರ ಭೂಹಿಡುವಳಿ ಬಗ್ಗೆ ಸ್ವಷ್ಟತೆ ಪಡೆಯಲು ಸರ್ಕಾರ ಆಧಾರ್ ಸೀಡಿಂಗ್ ಕಾರ್ಯಕ್ಕೆ ಪೌತಿ ಖಾತೆ ಆಂದೋಲನ ಕೈಗೊಂಡಿದೆ. ಇ-ಪೌತಿ ಆಂದೋಲನಕ್ಕೆ ಪ್ರತ್ಯೇಕ ಸಾಫ್ಟ್ವೇರ್ ಸಿದ್ದಪಡಿಸಲಾಗಿದೆ.

ಮನೆ ಮನೆಗೆ ತೆರಳಿ ಅಧಿಕಾರಿಗಳು ವಾರಸುದಾರರ ನಿಖರ ಮಾಹಿತಿ ಪಡೆಯಲಿದ್ದು, ವಂಶವೃಕ್ಷವನ್ನು ಆಧಾರವಾಗಿ ಬಳಸಿಕೊಂಡು ಆಧಾರ್ ಸಂಖ್ಯೆ ಮೂಲಕ ಒಟಿಪಿ ಪಡೆದು ದಾಖಲು ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗಿದೆ.

ಏನಿದು ಪೌತಿ ಖಾತೆ ? ಮರಣ ಹೊಂದಿದ ವ್ಯಕ್ತಿಯ ಹೆಸರಿನಲ್ಲಿರುವ ಆಸ್ತಿಯನ್ನು ತಮ್ಮ ವಾರಸುದಾರರ ಅಥವಾ ಕುಟುಂಬಸ್ಥರ ಯಾವುದೇ ವ್ಯಕ್ತಿಯ ಹೆಸರಿಗೆ ಜಮೀನಿನ ಖಾತೆಯನ್ನು ವರ್ಗಾವಣೆ ಮಾಡುವುದನ್ನು ಪೌತಿ ಖಾತೆ ಎಂದು ಕರೆಯಲಾಗುತ್ತದೆ.

ರಾಜ್ಯದಲ್ಲಿ ಬಹಳ ಜಮೀನಿನ ಪಹಣಿಗಳು ಮೃತರ ಹೆಸರಿನಲ್ಲಿ ಇರುವುದು ಕಂಡು ಬಂದಿದೆ. 51.13 ಲಕ್ಷ ಜಮೀನುಗಳ ಮಾಲೀಕರು ನಿಧನರಾಗಿದ್ದಾರೆ. 70 ಲಕ್ಷ ಜಮೀನುಗಳು ಕೃಷಿಯೇತರ ಉದ್ದೇಶಕ್ಕೆ ಬಳಕೆಯಾಗಿದೆ. ಪಹಣಿಗಳಿಗೆ ಆಧಾರ್ ಜೋಡಣೆಯಿಂದ ಎಷ್ಟು ಕೃಷಿ ಭೂಮಿ ಇದೆ. ರೈತರ ಭೂ ಹಿಡುವಳಿ ಎಷ್ಟು? ಸಣ್ಣ ಮತ್ತು ಅತಿ ಸಣ್ಣ ರೈತರ ನಿಖರ ಅಂಕಿ ಸಂಖ್ಯೆ ಸಿಗುತ್ತದೆ.

ಅಭಿಯಾನ ಹೇಗಿದೆ?
ಪೌತಿ ಖಾತೆಗಾಗಿ ಈಗಾಗಲೇ ಪ್ರತ್ಯೇಕ ಸಾಫ್ಟ್‌ವೇ‌ರ್ ಸಿದ್ಧವಾಗಿದೆ. ಗ್ರಾಮ ಲೆಕ್ಕಿಗರೇ ಮನೆ ಮನೆಗೆ ಹೋಗುತ್ತಾರೆ. ವಾರಸುದಾರರ ನಿಖರ ಮಾಹಿತಿ ಪಡೆಯುತ್ತಾರೆ. ಇದಕ್ಕೆ ವಂಶವೃಕ್ಷವನ್ನು ಆಧಾರವಾಗಿ ಬಳಸಲಾಗುತ್ತದೆ.

ಆಧಾ‌ರ್ ಮೂಲಕವೇ ಒಟಿಪಿ ಪಡೆದು ದಾಖಲು ಮಾಡಲಾಗುತ್ತದೆ. ಒಬ್ಬರಿಗಿಂತ ಹೆಚ್ಚು ವಾರಸುದಾರರ ಪರಿಗಣನೆ ಇದ್ದಲ್ಲಿ ಒಬ್ಬರ ಬಳಿಕ ಒಬ್ಬರ ಹೆಸರು ದಾಖಲು ಮಾಡಿಕೊಂಡು ಒಟಿಪಿ ಪಡೆದು ಖಾತೆ ನೀಡಿಕೆ ಪ್ರಕ್ರಿಯೆ ಆರಂಭಿಸಲಾಗುತ್ತದೆ.

ದಾಯಾದಿ ಆಸ್ತಿ ಕಲಹವಿದ್ದರೂ ದಾಖಲಾಗುತ್ತದೆ. ಮೃತ ಮಾಲೀಕರ ದಾಖಲೆ ಇಲ್ಲದಿದ್ದರೆ ಪರ್ಯಾಯವಾಗಿ ಸ್ಥಳ ಮಹಜರು ನಡೆಸಿ, ದಾಖಲೆ ಸೃಷ್ಟಿಸಲಾಗುತ್ತದೆ. ಪೌತಿ ಖಾತೆ ಒಪ್ಪದಿದ್ರೆ ಕೋರ್ಟ್‌ಗೆ ಹೋಗಬಹುದು.

ಪೌತಿ ಖಾತೆ ಮಾಡಿಸಲು ರೈತರು ಕಚೇರಿಗಳಿಗೆ ಅಲೆದಾಡುವುದು ತಪ್ಪುತ್ತದೆ. ಪೌತಿ ಖಾತೆ ಮಾಡುವುದರಲ್ಲಿ ಅಕ್ರಮ ಭ್ರಷ್ಟಾಚಾರಕ್ಕೆ ಬ್ರೇಕ್ ಬೀಳಲಿದೆ. ಮರಣ ಹೊಂದಿದ ವ್ಯಕ್ತಿಯ ಹೆಸರಿನಲ್ಲಿರುವ ಆಸ್ತಿಯನ್ನು ವಾರಸುದಾರ ಅಥವಾ ಕುಟುಂಬದ ಯಾವುದೇ ವ್ಯಕ್ತಿ ಹೆಸರಿಗೆ ಜಮೀನಿನ ಖಾತೆಯನ್ನು ವರ್ಗಾವಣೆ ಮಾಡುವುದನ್ನು ಪೌತಿ ಖಾತೆ ಎನ್ನಲಾಗುತ್ತದೆ.

ಮೃತರ ಹೆಸರಿನಲ್ಲಿ ಜಮೀನು ಇದ್ದರೆ ಕೃಷಿ ಸಾಲ ಸಿಗುವುದಿಲ್ಲ. ಬೀಜ, ಗೊಬ್ಬರ, ಕೃಷಿ ಯಂತ್ರೋಪಕರಣ ಖರೀದಿಗೆ ಸಬ್ಸಿಡಿ ಸಿಗುವುದಿಲ್ಲ. ಬೆಳೆ ನಷ್ಟಕ್ಕೆ ಪರಿಹಾರ ಸಿಗುವುದಿಲ್ಲ. ಇತರೆ ಇಲಾಖೆಗಳ ಸೌಲಭ್ಯಗಳು ಕೂಡ ಸಿಗುವುದಿಲ್ಲ. ಬೆಳೆ ವಿಮೆ ಮಾಡಿಸಲು ಕೂಡ ಜಮೀನಿನ ಖಾತೆ ಬದುಕಿರುವವರ ಹೆಸರಿನಲ್ಲಿ ಇರಬೇಕು.

ಸ್ಥಿರಾಸ್ತಿಯ ಮಾಲೀಕತ್ವವನ್ನು ಒಬ್ಬ ವ್ಯಕ್ತಿ ಯಾವ ರೀತಿ ಪಡೆಯಬಹುದು?
ವಂಶಪಾರಂಪರ್ಯದಿಂದ ಬಂದ ಆಸ್ತಿಗಳನ್ನು ವಾರಸುದಾರರ ಹಕ್ಕಿನ ಮೂಲಕ.
ಮರಣ ಕಾನೂನು ಪತ್ರಗಳ ಮೂಲಕ.
ಸ್ವರ್ಯಾಜನೆ ಮೂಲಕ ಖರೀದಿ ಇತ್ಯಾದಿ.
ದಾನ, ಟ್ರಸ್ಟ್, ವ್ಯವಸ್ಥಾ ಪತ್ರಗಳ ಮೂಲಕ.
ಸರ್ಕಾರದಿಂದ ಅನುದಾನ, ಇನಾಮು ಮೂಲಕ.
ಕೋರ್ಟ್ ಡಿಕ್ಕಿ ಮೂಲಕ
ಮಾಲೀಕತ್ವವನ್ನು ಪಡೆಯಬಹುದಾಗಿದೆ. ಅಂದರೆ ಅಸ್ತಿಯ ಮಾಲೀಕತ್ವವನ್ನು ಎರಡು ವಿಧದಲ್ಲಿ ಪಡೆಯುತ್ತಾರೆ.

1. ಜನರು ತಮ್ಮ ತಮ್ಮಲ್ಲಿ ಮಾಡಿಕೊಂಡ ವ್ಯವಹಾರಳಿಂದಾಗಿ ನಡೆಯುವುದು, ಉದಾಹರಣೆ: ಖರೀದಿ, ದಾನ, ಇತ್ಯಾದಿ ವ್ಯವಹಾರಗಳ ಮೂಲಕ
2. ಕಾನೂನಿನ ನಡವಳಿ ಮೂಲಕ ಉದಾಹರಣೆ: ವಾರಸಾ, ಕೋರ್ಟ್ ಡಿಕ್ರಿ ಇತ್ಯಾದಿ (ಹೆಚ್ಚಿನ ವಿವರಗಳಿಗೆ ಆಸ್ತಿ ಹಸ್ತಾಂತರ ಕಾಯಿದೆ 1882 (ಕೇಂದ್ರ ಕಾನೂನು) ನೋಡಬೇಕು.

ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಆರ್ಟಿಕಲ್ 28ರ ಪ್ರಕಾರ, ದಾನಪತ್ರ ಬರೆದುಕೊಡುವವರಿಗೆ ಸಂಬಂಧಿಸಿದಂತೆ ಮಾಹಿತಿ ಉಲ್ಲೇಖವಾಗಿದೆ. ಇದರ ಪ್ರಕಾರ, ಕುಟುಂಬ ಎಂದರೆ ಸಂಬಂಧದಲ್ಲಿ ತಂದೆ-ತಾಯಿ, ಪತಿ-ಪತ್ನಿ, ಮಗ, ಮಗಳು, ಸೊಸೆ, ಸಹೋದರ, ಸಹೋದರಿ ಮತ್ತು ಮೊಮ್ಮಕ್ಕಳು ಆಗಿರುತ್ತಾರೆ. ಕುಟುಂಬದ ಒಳಗೆ ಗ್‌ಟಿ ಡೀಡ್ ನೋಂದಣಿ ಶುಲ್ಕ ಸಾವಿರ ರೂ. ನಿಗದಿ ಮಾಡಲಾಗಿದೆ.

ಆಸ್ತಿಯು ಬೆಂಗಳೂರು ಪ್ರದೇಶಾಭಿವೃದ್ಧಿ ಪ್ರದೇಶದ ಅಥವಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇದ್ದರೆ ಮುದ್ರಾಂಕ ಶುಲ್ಕ 5 ಸಾವಿರ ರೂ. ಆಗಲಿದೆ. ನಗರಸಭೆ, ಪುರಸಭೆ ಅಥವಾ ಪಟ್ಟಣ ಪಂಚಾಯಿತಿ ಪ್ರದೇಶಗಳ ವ್ಯಾಪ್ತಿಯಲ್ಲಿ ಸ್ಥಿರಾಸ್ತಿ ಇದ್ದರೆ ಮುದ್ರಾಂಕ ಶುಲ್ಕ 3 ಸಾವಿರ ರೂ. ನಿಗದಿ ಮಾಡಲಾಗಿದೆ.

ಆಸ್ತಿಯು ಈ ಮೇಲೆ ಹೇಳಲಾದ ಪ್ರದೇಶಗಳನ್ನು ಹೊರತುಪಡಿಸಿ ಇತರ ಮಿತಿಗಳಲ್ಲಿದ್ದರೆ ಮುದ್ರಾಂಕ ಶುಲ್ಕ ಸಾವಿರ ರೂ. ಹಾಗೂ ಹೆಚ್ಚುವರಿ ಮುದ್ರಾಂಕ ಶುಲ್ಕ ಮತ್ತು ಸೆಸ್ ಒಳಗೊಂಡಿರುತ್ತದೆ.

Spread positive news

Leave a Reply

Your email address will not be published. Required fields are marked *