ಈ ಕೃಷಿಕರಿಗೆ ಹವಾಮಾನ ಇಲಾಖೆಯಿಂದ ಸಿಹಿ ಸುದ್ದಿ
ದಾಖಲೆಯ ಬಿಸಿಲಿನಿಂದ ಬಸವಳಿದ ದೇಶದ ರೈತರಿಗೆ ಭಾರತೀಯ ಹವಾಮಾನ ಇಲಾಖೆ (India Meteorological Department) ಶುಭ ಸುದ್ದಿಯೊಂದನ್ನು ನೀಡಿದೆ (Good News For Farmers). ಈ ತಿಂಗಳು ಇಡೀ ಭಾರತದಲ್ಲಿ ಮಾಸಿಕ ಮಳೆ ಶೇ. 106ಕ್ಕಿಂತ ಹೆಚ್ಚು ಸುರಿಯು ಸಾಧ್ಯತೆ ಇದೆ ಎಂದು ತಿಳಿಸಿದೆ. ಈ ವರ್ಷದ ಜೂನ್‌ನಲ್ಲಿ 123 ವರ್ಷಗಳ ಇತಿಹಾಸದಲ್ಲೇ ಅತ್ಯಂತ ಅಧಿಕ ತಾಪಮಾನ ದಾಖಲಾಗಿತ್ತು. ಇದೀಗ ಐಎಂಡಿಯ ವರದಿ ಕೃಷಿಕರಿಗೆ ತುಸು ಸಮಾಧಾನ ತಂದಿದೆ.
ಖಾರಿಫ್ ಬೆಳೆಗಳ ಬಿತ್ತನೆಗೆ (ವಿಶೇಷವಾಗಿ ಭತ್ತದಂತಹ ಹೆಚ್ಚಿನ ನೀರಿನ ಆವಶ್ಯಕತೆಯಿರುವ ಬೆಳೆ) ಸಜ್ಜಾಗುತ್ತಿರುವ ರೈತರಿಗೆ ಇದು ಶುಭ ಸುದ್ದಿ ಎನಿಸಿಕೊಂಡಿದೆ. ಮಳೆಯ ಕೊರತೆಯು ಜೂನ್‌ನಲ್ಲಿ ಸುಮಾರು ಶೇ. 32.6ಕ್ಕೆ ತಲುಪಿದ್ದರಿಂದ ವಾಯುವ್ಯ ಭಾರತದಲ್ಲಿ ಕಳೆದ ತಿಂಗಳು ಶುಷ್ಕ ವಾತಾವರಣ ಕಂಡು ಬಂದಿತ್ತು. ಹೀಗಾಗಿ ಈ ಪ್ರದೇಶವು ತೀವ್ರವಾದ ಶಾಖದ ಅಲೆಗಳಿಂದ ಸುಟ್ಟು ಹೋಗಿತ್ತು. ಅಲ್ಲದೆ 123 ವರ್ಷಗಳಲ್ಲಿ ಅತ್ಯಂತ ಬೆಚ್ಚಗಿನ ಜೂನ್ ಎನಿಸಿಕೊಂಡಿತ್ತು. ಸರಾಸರಿ ಮಾಸಿಕ ತಾಪಮಾನವು ಸಾಮಾನ್ಯಕ್ಕಿಂತ ಸುಮಾರು 1.65 ಡಿಗ್ರಿ ಹೆಚ್ಚು ದಾಖಲಾಗಿತ್ತು. ಐಎಂಡಿಯ ಮಾಸಿಕ ಮುನ್ಸೂಚನೆಯ ಪ್ರಕಾರ ಜುಲೈಯಲ್ಲಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಲಿದೆ. ಜತೆಗೆ ಈ ಪ್ರದೇಶದಲ್ಲಿ ಪ್ರವಾಹ ಉಂಟಾಗಬಹುದಾದಷ್ಟು ವಿಪರೀತ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಹರಿಯಾಣ, ಉತ್ತರಾಖಂಡಕ್ಕೆ ಎಚ್ಚರಿಕೆ
ಐಎಂಡಿ ಡಿಜಿ ಡಾ.ಎಂ.ಮೊಹಾಪಾತ್ರ ಅವರ ಪ್ರಕಾರ ಜುಲೈನಲ್ಲಿ ಸುರಿಯುವ ಧಾರಾಕಾರ ಮಳೆಯು ಪಶ್ಚಿಮ ಹಿಮಾಲಯದ ರಾಜ್ಯಗಳಾದ ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ಮತ್ತು ಬೆಟ್ಟದ ತಪ್ಪಲಿನ ರಾಜ್ಯಗಳಲ್ಲಿ ನದಿ ಪ್ರವಾಹಕ್ಕೆ ಕಾರಣವಾಗಬಹುದು. ‘ಮುನ್ಸೂಚನೆಯ ಪ್ರಕಾರ ಭಾರೀ ಮಳೆಯಾಗಲಿದೆ. ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಮೇಘಸ್ಫೋಟ, ಭಾರಿ ಮಳೆಯಿಂದ ಭೂಕುಸಿತದಂತಹ ಅಪಾಯ ಎದುರಾಗುವ ಸಾಧ್ಯತೆ ಇದೆ. ಮಧ್ಯ ಭಾರತದ ಕೆಲವು ಭಾಗಗಳಲ್ಲಿ, ಗೋದಾವರಿ, ಮಹಾನದಿ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಭಾರೀ ಮಳೆಯಾಗುವ ನಿರೀಕ್ಷೆಯಿರುವುದರಿಂದ ಸ್ಥಳೀಯರು ಎಚ್ಚರಿಕೆ ವಹಿಸಬೇಕುʼʼ ಎಂದು ಅವರು ತಿಳಿಸಿದ್ದಾರೆ. ಆದಾಗ್ಯೂ, ಈಶಾನ್ಯ ಭಾರತದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಬಹುದು. ಇದರ ಹೊರತಾಗಿ ಉತ್ತರ ಪ್ರದೇಶದ ಕೆಲವು ಭಾಗಗಳಾದ ಗೋರಖ್ಪುರ, ಬಿಹಾರದ ಪಶ್ಚಿಮ ಜಿಲ್ಲೆಗಳು, ಜಾರ್ಖಂಡ್, ಮುಂತಾದ ಕೆಲವು ಭಾಗಗಳು ಮತ್ತು ಲಡಾಖ್‌ನಲ್ಲಿಯೂ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಊಹಿಸಿದೆ.
ಜೂನ್‌ನಲ್ಲಿ ಮಳೆ ಕೊರತೆ
ಭಾರತವು ಜೂನ್‌ನಲ್ಲಿ ಸುಮಾರು ಶೇ. 10.9ರಷ್ಟು ಮಳೆ ಕೊರತೆಯನ್ನು ದಾಖಲಿಸಿದೆ. ವಾಯುವ್ಯ ಭಾರತದಲ್ಲಿ ಇದರ ಪ್ರಮಾಣ ಹೆಚ್ಚು (ಶೇ. 32.6). ಮಧ್ಯ ಭಾರತ, ಪೂರ್ವ ಮತ್ತು ಈಶಾನ್ಯ ಭಾರತ (ಸುಮಾರು ಶೇ. 13)ದಲ್ಲಿಯೂ ಮಳೆ ಕೊರತೆ ಕಂಡು ಬಂದಿದೆ. ಸದ್ಯ ನೈಋತ್ಯ ಮಾನ್ಸೂನ್ ವೇಗ ಪಡೆದುಕೊಂಡಿದ್ದು, ಮತ್ತು ಮುಂದಿನ ಎರಡು-ಮೂರು ದಿನಗಳಲ್ಲಿ ಭಾರತವನ್ನು ಆವರಿಸಲಿದೆ ಎಂದು ಐಎಂಡಿ ತಿಳಿಸಿದೆ.
ಮಳೆಯ ಕೊರತೆಯು ಕಳೆದ ಕೆಲವು ದಿನಗಳಲ್ಲಿ ಉತ್ತರ ಭಾರತದ ಹಲವೆಡೆ ತಾಪಮಾನ ಹೆಚ್ಚಳಕ್ಕೆ ಮತ್ತು ತೀವ್ರವಾದ ಶಾಖದ ಅಲೆಗಳಿಗೆ ಕಾರಣವಾಗಿತ್ತು. ಹವಾಮಾನ ಇಲಾಖೆಯ ಪ್ರಕಾರ ಈ ಬೇಸಿಗೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ಪಂಜಾಬ್, ಹರಿಯಾಣ ಮತ್ತು ದೆಹಲಿಯಲ್ಲಿ ಸುಮಾರು 20ರಿಂದ 38 ದಿನಗಳವರೆಗೆ ಉಷ್ಣಗಾಳಿ ಬೀಸಿದೆ. ಜುಲೈ 12 ರಿಂದ ರಾಜ್ಯದಲ್ಲಿ ಮತ್ತೆ ಮಳೆ ಆರ್ಭಟ ಜೋರಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ವಾರ ಭಾರೀ ಮಳೆಯಿಂದ ತತ್ತರಿಸಿದ ಕರಾವಳಿ, ಪಶ್ಚಿಮ ಘಟ್ಟದ ಜಿಲ್ಲೆಗಳಲ್ಲಿ ಕಳೆದ ಎರಡು ದಿನದಿಂದ ಮಳೆ ಪ್ರಮಾಣ ತಗ್ಗಿದೆ. ಆದರೆ ಶುಕ್ರವಾರದಿಂದ ಮತ್ತೆ ಮುಂಗಾರು ಮಳೆ ಜೋರಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಳಗಾವಿ, ಬೀದರ್, ಕಲಬುರಗಿ, ಯಾದಗಿರಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗದಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆಯಿದೆ. ಕಳೆದ ಕೆಲವು ವಾರಗಳಿಂದ ದಕ್ಷಿಣ ಕನ್ನಡ, ಚಿಕ್ಕಮಗಳೂರು. ಉತ್ತರ ಕನ್ನಡ, ಉಡುಪಿ, ಕೊಡಗು ಸೇರಿದಂತೆ ಹಲವು ಕಡೆ ಭರ್ಜರಿಯಾಗಿ ಮಳೆಯಾಗುತ್ತಿದೆ. ಜೂನ್ ಆರಂಭದಲ್ಲಿ ಸುಮ್ಮನಿದ್ದ ವರುಣ ಜುಲೈ 15 ರ ಬಳಿಕ ಧೋ ಎಂದು ಮಳೆ ಸುರಿಸುತ್ತಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ತುಸು ಕಡಿಮೆಯಾಗಿದೆ. ಜಿಲ್ಲೆಯಾದ್ಯಂತ ಮಂಗಳವಾರ ಸಾಧಾರಣ ಮಳೆಯಾಗಿದೆ.
ಮಂಗಳೂರು ನಗರದಲ್ಲಿ ಬೆಳಗ್ಗೆಯಿಂದ ಸಂಜೆಯವರಗೆ ಮಳೆ ಬಿಡುವು ನೀಡಿತ್ತು. ಬಿಸಿಲು ಮತ್ತು ಮೋಡದ ವಾತಾವರಣ ಇತ್ತು. ಸಂಜೆ ವೇಳೆ ಬಿರುಸು ಮಳೆಯಾಗಿದ್ದು, ಬಳಿಕ ಮಳೆಯ ತೀವ್ರತೆ ಕಡಿಮೆಯಾಗಿತ್ತು. ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಸುಬ್ರಹ್ಮಣ್ಯದಲ್ಲಿ ಸಂಜೆ ವೇಳೆ ಉತ್ತಮ ಮಳೆ ಯಾಗಿದೆ. ಹಗಲಿನ ವೇಳೆ ಕೆಲವೆಡೆ ಬಿಸಿಲಿನ ವಾತಾವರಣವಿತ್ತು. ಸೋಮವಾರ ನೆರೆ ಕಾಣಿಸಿದ್ದ ಪ್ರದೇಶದಲ್ಲಿ ನೀರು ಇಳಿಕೆಯಾಗಿದೆ. ಕೊಡಗು ಮತ್ತು ಕಾಸರಗೋಡು ಜಿಲ್ಲೆಯಲ್ಲಿಯೂ ಮಳೆ ಪ್ರಮಾಣ ಸೋಮವಾರಕ್ಕಿಂತ ಇಂದು ಕಡಿಮೆ ಯಾಗಿತ್ತು. ಸೋಮವಾರ ರಾತ್ರಿ ನಗರದಲ್ಲಿ ಸುರಿದ ಭಾರೀ ಮಳೆಯಿಂದ ಕುಲಶೇಖರದ ಸಿಲ್ವರ್ ಗೇಟ್‌ನ ವೀರನಾರಾಯಣ ಕಟ್ಟೆ ಮನೆಗೆ ಹಾನಿ ಉಂಟಾಗಿದೆ. ಶಾಸಕ ಡಿ. ವೇದವ್ಯಾಸ ಕಾಮತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಂದು “ಎಲ್ಲೋ ಅಲರ್ಟ್’
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಜು.10 ರಿಂದ 13ರ ವರೆಗೆ ಕರಾವಳಿ ಭಾಗದಲ್ಲಿ “ಎಲ್ಲೋ ಅಲರ್ಟ್’ ಘೊಷಿಸಲಾಗಿದೆ. ಈ ವೇಳೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ನಗರದಲ್ಲಿ ಮಂಗಳವಾರ 29.4 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.5 ಡಿ.ಸೆ. ಏರಿಕೆ ಕಂಡಿತ್ತು. 22.4 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.8 ಡಿ.ಸೆ. ಕಡಿಮೆ ಇತ್ತು.