ಪ್ರೀಯ ರೈತರೇ ಈಗಾಗಲೇ ನಾವು ಸಾಕಷ್ಟು ಬರಗಾಲವನ್ನು ಎದುರಿಸುತ್ತಿದ್ದೇವೆ. ಅದೇ ರೀತಿ ಬರಗಾಲ ಇದೆಯೆಂಬ ಭಯಬೇಡ ಉದ್ಯೋಗ ಖಾತ್ರಿ ಕೆಲಸ ಇದೆ. ಬರಗಾಲವಿದೆಯೆಂದು ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಭಯಬೇಡ. ಎಪ್ರಿಲ್-1 ರಿಂದ ಉದ್ಯೋಗ ಖಾತ್ರಿ ಕೆಲಸ ಆರಂಭವಾಗುತ್ತಿದ್ದು, ಯೋಜನೆಯಡಿ ಅನೇಕ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಅವಕಾಶವಿದೆ. ಕರ್ನಾಟಕದಲ್ಲಿ 316 ರೂ.ನಿಂದ 349 ರೂಪಾಯಿಗೆ ಏರಿಕೆ ನರೇಗಾ ದಿನಗೂಲಿ ಹೆಚ್ಚಳ ಗ್ರಾಮೀಣ ಪ್ರದೇಶಗಳ ಕಡುಬಡವರಿಗೂ ಯೋಜನೆಯ ಸದೂಪಯೋಗ ದೊರಕುವಂತಾಗಲಿ ಎಂದು ನರಗುಂದ ತಾಲೂಕು ಪಂಚಾಯತ ಸಹಾಯಕ ನಿರ್ದೇಶಕ (ಗ್ರಾಮೀಣ&ಉದ್ಯೋಗ) ಸಂತೋಷಕುಮಾರ್ ಪಾಟೀಲ ಅಭಿಪ್ರಾಯಪಟ್ಟರು.
ನಗರದ ತಾಲೂಕು ಪಂಚಾಯತ ಸಭಾಭವನದಲ್ಲಿ ಶುಕ್ರವಾರ ನಡೆದ ಪಿಡಿಓ, ಕಾಯಕಬಂಧು ಹಾಗೂ ನರೇಗಾ ಸಿಬ್ಬಂದಿಯ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬರಗಾಲದ ತೀವ್ರತೆಯಿಂದ ಕೆಲಸ ಸಿಗದಿರುವ ಆತಂಕದಲ್ಲಿರುವ ಗ್ರಾಮೀಣ ಪ್ರದೇಶ ಕೂಲಿಕಾರರಿಗೆ ನೆರವಾಗಲೆಂದು ಎಪ್ರೀಲ್-1 ರಿಂದ ನರೇಗಾ ಯೋಜನೆಯಡಿ ಸಮುದಾಯ ಕಾಮಗಾರಿಗಳನ್ನು ಆರಂಭಿಸಲಾಗುತ್ತಿದೆ. ಇದ್ದೂರಲ್ಲೇ ನರೇಗಾ ಕೆಲಸ ಕೊಡುತ್ತಿರುವುದು ಗ್ರಾಮೀಣ ಪ್ರದೇಶದ ಜನರ ಗುಳೆ ತಪ್ಪಿಸುವ ಕೆಲಸವಾಗಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ನರೇಗಾ ಯೋಜನೆ ಮಹತ್ವದ ಪಾತ್ರವಹಿಸಿದೆ.
ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾರ್ಮಿಕರ ವೇತನ ಪರಿಷ್ಕರಿಸಿದೆ. ದೇಶದ ವಿವಿಧ ರಾಜ್ಯಗಳಲ್ಲಿನ ವೇತನವನ್ನು ಪ್ರತ್ಯೇಕವಾಗಿ ಹೆಚ್ಚಿಸಿದ್ದು, 2024 ಏ.1ರಿಂದಲೇ ಪರಿಷ್ಕೃತ ವೇತನ ಕಾರ್ಮಿಕರಿಗೆ ದೊರೆಯಲಿದೆ. ಕೇಂದ್ರದ ಈ ನಿರ್ಧಾರದಿಂದಾಗಿ ಕರ್ನಾಟಕದಲ್ಲಿದ್ದ ನರೇಗಾ ದಿನಗೂಲಿ ಮೊತ್ತ 316 ರೂ.ಗಳಿಂದ 349 ರೂ.ಗೆ ಏರಿಕೆಯಾಗಿದೆ.
ನರೇಗಾದಡಿ 2023-24ನೇ ಸಾಲಿನಲ್ಲಿ ಮಾ.20 ರವರೆಗೆ ಕರ್ನಾಟಕದಲ್ಲಿ 13 ಕೋಟಿ ಮಾನವ ದಿನ ಸೃಜನೆಯಾಗಿದೆ. ಜತೆಗೆ ರಾಜ್ಯದ 15 ಜಿಲ್ಲೆಗಳಲ್ಲಿ ಮಾನವ ದಿನ ಸೃಜನೆಯಲ್ಲಿ ಗುರಿ ಮೀರಿದ ಸಾಧನೆ ಆಗಿದೆ. ತುಮಕೂರು, ಚಿತ್ರದುರ್ಗ ಹಾಗೂ ಗದಗ ಜಿಲ್ಲೆಗಳು ಸಾಧನೆಯಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ -ತೃತೀಯ ಸ್ಥಾನದಲ್ಲಿದ್ದು, ಕೊಡಗಿನಲ್ಲಿ ರಾಜ್ಯದೆಲ್ಲ ಜಿಲ್ಲೆಗಳಿಗೆ ಗುರಿಗಿಂತ ಕಡಿಮೆ ಮಾನವ ದಿನಗಳ ಸೃಜನೆಯಾಗಿದೆ.
ಕಳೆದ ಸಾಲಿನಲ್ಲಿ 64.64 ಲಕ್ಷ ಮಾನವದಿನ ಸೃಜಿಸುವ ಮೂಲಕ ಚಿತ್ರದುರ್ಗದಲ್ಲಿ ಗುರಿ ಮೀರಿದ ಸಾಧನೆಯಾಗಿದೆ. ಹೊಸ ಆರ್ಥಿಕ ಸಾಲಿನಲ್ಲಿ ಈ ಗುರಿ ಕನಿಷ್ಠ 51 ಲಕ್ಷಕ್ಕೆ ಏರಿಕೆ ಆಗುವ ನಿರೀಕ್ಷೆ ಇದೆ. ಇತ್ತೀಚೆಗೆ ಶೇ.60-40 ಅನುಪಾತದ ಬದಲು, ಕೆರೆ ಹೂಳೆತ್ತುವುದು ಇತ್ಯಾದಿ ಶೇ.100 ಕಾರ್ಮಿಕರ ಆಧರಿತ ಕೆಲಸಗಳಿಗೆ ಆದ್ಯತೆ ನೀಡಲಾಗಿದೆ