ಆತ್ಮೀಯ ರೈತ ಬಾಂಧವರೇ ಕೃಷಿ ತಾಣ ಜಾಲತಾಣಕ್ಕೆ ಸ್ವಾಗತ. ಕರಾವಳಿ ಸೇರಿ ಹಲವು ಜಿಲ್ಲೆಗಳಲ್ಲಿ ನೀರಿನ ಆಹಾಕಾರ ಮುಗಿಲು ಮುಟ್ಟಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಕರಾವಳಿ ತೀರವನ್ನು ಹೊಂದಿರುವ ಜಿಲ್ಲೆ ಉತ್ತರ ಕನ್ನಡ, ವಿಶ್ವ ಆರ್ಥಿಕ ವೇದಿಕೆಯು ಇತ್ತೀಚಿಗೆ ಬಿಡುಗಡೆ ಮಾಡಿದ 2024 ನೇ ಸಾಲಿನ ಜಾಗತಿಕ ಅಪಾಯ ವರದಿಯ 19 ನೇ ಆವೃತ್ತಿಯ ಪ್ರಕಾರ ತೀವ್ರ ಹವಾಮಾನ ಪರಿಣಾಮಗಳು ಎಲ್ಲಕ್ಕಿಂತಲೂ ಮುಖ್ಯವಾದ ಜಾಗತಿಕ ಸಮಸ್ಯೆ ಎಂದು ಪ್ರತಿಪಾದಿಸಿದೆ. ಇದಕ್ಕೆ ಇಂಬು ಕೊಡುವಂತೆ ಇತ್ತೀಚೆಗೆ ಬದಲಾದ ಮಳೆಯ ಸ್ವರೂಪ, ಬಿಸಿಲಿನ ಝಳ ಹವಾಮಾನ ಬದಲಾವಣೆಯು ಮಿಣುಕು ನೋಟವನ್ನು ಪಶ್ಚಿಮ ಘಟ್ಟದ ಮೇಲೆ ತೋರಿಸುತ್ತಿರುವಂತಿದೆ. ಪ್ರಕೃತಿ ಮತ್ತು ಪ್ರಾಣಿ ಪೂಜೆಯು ಭಾರತೀಯ ಸಂಸ್ಕೃತಿಯ ಒಂದು ಅಂಗವಾಗಿ ಬೆಳೆದು ಬಂದಿದ್ದು, ಪ್ರತಿಯೊಂದು ಜೀವಿಯನ್ನೂ ಚೇತನ ಸ್ವರೂಪವಾಗಿ ಕಾಣಬೇಕು, ಅವುಗಳ ಮೇಲೆ ತಿಳಿಗೇಡಿತನದ ದರ್ಪವನ್ನು ತೋರುವುದಾಗಲೀ, ದುಃಖವನ್ನುಂಟು ಮಾಡುವುದಾಗಲೀ ಮಾಡಬಾರದು ಪ್ರತಿಜೀವಿಯೊಂದಿಗೂ ಏಕತ್ವ ಭಾವನೆಯನ್ನು ಹೊಂದಬೇಕು (ಯಜುರ್ವೇದ 40, 7) ನಿಷ್ಕಳಂಕಿತ ಜೀವಿಗಳಾದಂತಹ ಹಸು, ಕುದುರೆ, ಮಾನವನ ಹತ್ಯೆ ಅತಿ ದೊಡ್ಡ ಪಾಪಕೃತ್ಯ (ಅಥರ್ವ ವೇದ 10, 1, 29) ಹಸುಗಳು ಮತ್ತು ವೃಷಭಗಳು ರಕ್ಷಣೆಗೆ ಅರ್ಹವಾಗಿದೆ (ಯಜುರ್ವೇದ 13,49.) ಎಂದು ಭಾರತೀಯ ಧಾರ್ಮಿಕ ಗ್ರಂಥಗಳು ಭೋಧಿಸಿವೆ.
ಹೆಚ್ಚುತ್ತಿರುವ ಜಾಗತಿಕ ತಾಪಮಾನದಿಂದ ಉಂಟಾದ ಹವಾಮಾನ ಬದಲಾವಣೆಯು ಸಾಕು ಪ್ರಾಣಿಗಳ ಮೇಲೂ ತನ್ನ ಪರಿಣಾಮವನ್ನು ಬೀರುತ್ತಿದೆ. ಈ ಕುರಿತು ಹೆಚ್ಚಿನ ಸ್ಪಷ್ಟತೆಯನ್ನು ಪಡೆದುಕೊಳ್ಳಲು ಉತ್ತರ ಕನ್ನಡದ ಅಂಕೋಲಾ ತಾಲೂಕಿನಲ್ಲಿ ಕೈಗೊಂಡ ನಮ್ಮ ಅಧ್ಯಯನ ಇಲ್ಲಿನ ಭಾಗದಲ್ಲಿ ಪಶುರೋಗಗಳ ಸ್ಥಿತಿ, ಅದರ ತೀವ್ರತೆ ಹಾಗೂ ಉಂಟಾಗುತ್ತಿರುವ ಹಾನಿಯನ್ನು ಅರಿತುಕೊಳ್ಳುವ ಪ್ರಯತ್ನವಾಗಿದೆ. ಅಧ್ಯಯನದ ಪ್ರಾಥಮಿಕ ಮಾಹಿತಿಗಾಗಿ ರೈತರೊಂದಿಗೆ ವಿವರಣಾತ್ಮಕ ಪ್ರಶ್ನೆಗಳು ಹಾಗೂ ಸ್ಥಳೀಯ ಪಶು ಇಲಾಖೆಯ ದತ್ತಾಂಶವನ್ನು ದ್ವಿತೀಯ ಆಧಾರ ಮಾಹಿತಿಯನ್ನಾಗಿ ಪರಿಗಣಿಸಿ ಪ್ರಸ್ತುತ ಸ್ಥಿತಿಯನ್ನು ವಿಶ್ಲೇಷಿಸುವ ಪ್ರಯತ್ನವನ್ನು ಮಾಡಲಾಗಿದೆ.
ಅಧ್ಯಯನದಿಂದ ಪತ್ತೆಯಾಗಲ್ಪಟ್ಟ ವಿಚಾರಗಳು ಕಳವಳಕಾರಿಯಾಗಿದ್ದು, ಕರಾವಳಿ ಕೃಷಿ ಪದ್ಧತಿಯಲ್ಲಿ ಬೆಳೆಯುತ್ತಿರುವ ಪಶುಗಳ ಹಲವು ಪೌಷ್ಟಿಕಾಂಶಗಳ ಕೊರತೆಯಿಂದ ಬಳಲುತ್ತಿದ್ದು ಇದರಿಂದ ಹಲವು ರೋಗಗಳು ತೀವ್ರ ಪರಿಣಾಮಗಳು ಬೀರುತ್ತಿರುವುದು ತಿಳಿದು ಬಂದಿದೆ. ಕಡಿಮೆಯಾಗುತ್ತಿರುವ ಹುಲ್ಲುಗಾವಲು. ಸಮುದ್ರ ತೀರದ ಲವಣ ಭರಿತ ಪರಿಸರ, ಮರಳು ಮಿಶ್ರಿತ ಮಣ್ಣು ಪಶು ಆಹಾರ ಬೆಳೆಯಲು ಇರುವ ಸಮಸ್ಯೆಗಳಲ್ಲಿ ಒಂದಾಗಿದೆ. ಹೆಚ್ಚಿನ ಕಾರ್ಮಿಕ ವರ್ಗದ ಅಗತ್ಯ ಇರುವ ವಾರ್ಷಿಕ ಬೆಳೆಗಳಾದ ಭತ್ತ ಮುಂತಾದ ಆಹಾರ ಬೆಳೆಯಿಂದ ಬಹುವಾರ್ಷಿಕ ಬೆಳೆಯೆಡೆಗೆ ರೈತರ ಹೆಚ್ಚುತ್ತಿರುವ ಒಲವು ಪಶುಗಳಿಗೆ ಅಗತ್ಯವಿರುವ ಆಹಾರ ಕೊರತೆಗೆ ಕಾರಣವಾಗುತ್ತಿದೆ. ಜೊತೆಗೆ ಹಾಲನ್ನು ಸೂಕ್ತ ಬೆಲೆಗೆ ಪಡೆದುಕೊಳ್ಳುವ ಡೈರಿ ವ್ಯವಸ್ಥೆಯೂ ಹಳ್ಳಿಗಳೆಡೆಯಲ್ಲಿ ಇಲ್ಲದಿರುವುದು ಪಶುಗಳ ಅವಶ್ಯಕ ಆಹಾರ ಒದಗಿಸದೆ ಇರಲು ಕಾರಣ. ಇದರೊಂದಿಗೆ ಕುಗ್ಗುತ್ತಿರುವ ಅರಣ್ಯ ಪ್ರದೇಶದಿಂದಾಗಿ ಮಾನವ ವನ್ಯಜೀವಿ ಸಂಘರ್ಷವೂ ಹೆಚ್ಚಾಗಿದ್ದು 2021-22 ನೇ ಸಾಲಿನಲ್ಲಿ ಆದ ಒಟ್ಟು 77 ಪಶುಗಳ ಸಾವಿನಲ್ಲಿ 62 ಸಾವುಗಳು ಚಿರತೆ/ ಚಿಟ್ಟೆ ಹುಲಿ/ ಕುರ್ಕಾ (ಲೆಪರ್ಡ್) ನ ಕಾರಣದಿಂದಾಗಿ ಎಂದು ದಾಖಲಾಗಿದೆ. ವಿಪರೀತ ಬೇಸಿಗೆ ಕಾಲದಲ್ಲಿ ಕರಾವಳಿಯಲ್ಲಿ ಉಂಟಾಗುತ್ತಿರುವ ನೀರಿನ ಕೊರತೆಯೂ ಪಶುಸಾಕಣಿಕೆಗೆ ಪ್ರಮುಖ ಸಮಸ್ಯೆ ಯಾಗಿದೆ. ಇದರೊಂದಿಗೆ ಹವಾಮಾನ ಬದಲಾವಣೆ ಈ ಸ್ಥಿತಿಯನ್ನು ಮತ್ತಷ್ಟು ನಾಜೂಕುಗೊಳಿಸಿದೆ.
ಪಶುಗಳಿಗೆ ಯಾವ ರೀತಿಯ ರೋಗಗಳು ಭಾದಿಸಲಿವೆ?
ಚರ್ಮ ಗಂಟು ರೋಗ, ಪ್ರೋಟೋರೋ ಆ ಸಂಬಂಧಿ ರಕ್ತ ಕಾಯಿಲೆಗಳು, ರೇಬಿಸ್, ಕಾಲುಬಾಯಿ ರೋಗ, ಗುಲ್ಮಜೋರಾ (ಅಂತರಾಕ್ಸ್) ಹಾಗೂ ಮಂಗನ ಕಾಯಿಲೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಪಶು ರೋಗಗಳಾಗಿವೆ. ಇದರೊಂದಿಗೆ ಬೃಸಲ್ಲೋಸಿಸ್, ಹೀರೆಬೇನೆ (ಪಿಪಿಆರ್) ಅಂತರೋಟ್ಯಾಕ್ಸೆಮಿಯ, ನೀಲಿ ನಾಲಿಗೆ ರೋಗ, ಸದ್ದಿಲ್ಲದಂತೆ ತನ್ನ ಕಬಂಧ ಬಾಹುವನ್ನು ಚಾಚುತ್ತಿದೆ. ಜೊತೆಗೆ ಬೇಸಿಗೆಯಲ್ಲಿ ಹೆಚ್ಚಿದ ಬಿಸಿಲಿನ ಝಳದಿಂದ ಬೆವರುವಿಕೆಯ ಕಾರಣದಿಂದಾಗಿ ಕ್ಷೀರ ಉತ್ಪಾದಕತೆಯು ಬೇಸಿಗೆಯಲ್ಲಿ ಕಡಿಮೆಯಾಗಲು ಕಾರಣವಾಗುತ್ತಿದೆ. ಇದೆಲ್ಲದರಿಂದ ಒಟ್ಟಾರೆ ಪರಿಣಾಮವೆಂಬಂತೆ ಕರಾವಳಿ ಪ್ರದೇಶದ ಪಶುಉತ್ಪಾದಕತೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿರುವುದರ ಹಿಂದೆ ಹವಾಮಾನ ಬದಲಾವಣೆಯು ಪ್ರಮುಖವಾದ ಕಾರಣವೆಂದು ಕಂಡುಬಂದಿದೆ. ಜೊತೆಗೆ ಕೆಲ ರೋಗಗಳು ನೋಟಿಕ್ ಕಾಯಿಲೆಗಳಾಗಿದ್ದು ಪ್ರಾಣಿಗಳಿಂದ ಅವು ಮಾನವನಿಗೂ ಹರಡುವಂತಹ ಸಂಭವನೀಯತೆ ಇದೆ. ಇದೆಲ್ಲದರ ವಿರುದ್ಧ ಜನರಲ್ಲಿ ಅರಿವು ಮೂಡಿಸಲು ಹಾಗೂ ಋಣಾತ್ಮಕ ಪರಿಣಾಮವನ್ನು ತಡೆಗಟ್ಟಲು ಸ್ಥಳೀಯ ಪಶು ವೈದ್ಯಕೀಯ ಇಲಾಖೆಯ ಶ್ರಮಿಸುತ್ತಿರುವುದು ಶ್ಲಾಘನೀಯ.
ಕರಾವಳಿಯಲ್ಲಿ ಉದ್ಭವಿಸುತ್ತಿರುವ ಪಶುರೋಗಗಳನ್ನು ತಡೆಗಟ್ಟಲು ರೈತರು ಸೂಕ್ತ ಪಶು ನಿರ್ವಹಣಾ ಪದ್ಧತಿಗಳನ್ನು ಅನುಷ್ಠಾನಗೊಳಿಸುವ ಅಗತ್ಯವಿದೆ.
ಪಶುಗಳ ಆರೋಗ್ಯ ಕಾಪಾಡಲಿ ಮುಂಜಾಗ್ರತಾ ಕ್ರಮಗಳು:
ಪಶುಗಳು ಇರುವ ಸ್ಥಳ ಅಥವಾ ಕೊಟ್ಟಿಗೆಯಲ್ಲಿ ಶುಚಿತ್ವ ಕಾಪಾಡುವುದು, ಅವಶ್ಯಕವಿರುವ ಚುಚ್ಚುಮದ್ದು ಹಾಗೂ ಚಿಕಿತ್ಸೆಗಳನ್ನು ಸೂಕ್ತ ಸಂದರ್ಭದಲ್ಲಿ ಕೊಡಿಸುವುದು, ರೋಗಗಳ ಲಕ್ಷಣಗಳು ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಅರಿವು ಹೊಂದಿರುವುದು, ಸ್ಥಳೀಯ ಪಶು ವೈದ್ಯಕೀಯ ಅಧಿಕಾರಿಗಳೊಂದಿಗೆ ಸೂಕ್ತ ಸಂಪರ್ಕ ಮತ್ತು ಸಲಹೆ ಪಡೆದುಕೊಳ್ಳುವುದು ಇಂತಹ ಕೆಲ ಕ್ರಮಗಳಿಂದಾಗಿ ಉಂಟಾಗುತ್ತಿರುವ ಸಮಸ್ಯೆಯನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಿಕೊಂಡು ಹೋಗಬಹುದಾಗಿರುತ್ತದೆ