ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರಳಗೊಳಿಸಲು ಕರ್ನಾಟಕ ಸರ್ಕಾರವು ರಾಜ್ಯದ ಜನರಿಗೆ ವಾಟ್ಸಾಪ್ ಚಾಟ್ಬಾಟ್ ಸೇವೆಯನ್ನು ಪರಿಚಯಿಸಿದೆ. ಪ್ರಸ್ತುತ ಈ ಯೋಜನೆಗೆ ಅರ್ಜಿ ಸಲ್ಲಿಸಲು ಸಲ್ಲಿಸಬೇಕಾದರೆ ಫಲಾನುಭವಿಗಳು ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಆದರೆ ಇಲ್ಲಿ ಜನಸಂದಣಿ ಹೆಚ್ಚಾಗಿದೆ. ಈ ನಡುವೆ ಸರ್ಕಾರವು ಜನರಿಗೆ ಸಹಾಯವಾಗುವಂತೆ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರಳಗಗೊಳಿಸಿದೆ. ನಾವು ಸಾಮಾನ್ಯವಾಗಿಯೇ ವಾಟ್ಸಾಪ್ ಅನ್ನು ಬಳಕೆ ಮಾಡುತ್ತಾ ಇರುತ್ತೇವೆ. ಪ್ರತಿ ದಿನ ಬೆಳಗಾದರೆ, ರಾತ್ರಿಯಾದರೆ ನಾವು ವಾಟ್ಸಾಪ್ ನೋಡಿಯೇ ಏಳುತ್ತೇವೆ, ಮಲಗುತ್ತೇವೆ. ಈಗ ಈ ತಂತ್ರಜ್ಞಾನವನ್ನೇ ಬಳಸಿಕೊಂಡು ನಾವು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಚಾಟ್ಬಾಟ್ ಲಿಂಕ್ ಆಗಿರುವ ವಾಟ್ಸಾಪ್ ಸಂಖ್ಯೆ 8147500500 ಅನ್ನು ಸರ್ಕಾರ ಒದಗಿಸಿದೆ. ವಾಟ್ಸಾಪ್ ಬಳಕೆದಾರರು ತಮ್ಮ ವಿವರಗಳನ್ನು ಈ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಚಾಟ್ಬಾಟ್ ಅರ್ಜಿ ಸಲ್ಲಿಸಲು ಬಳಕೆದಾರರಿಗೆ ಸಹಾಯ ಮಾಡಲಿದೆ ಮತ್ತು ಮಾರ್ಗದರ್ಶನ ನೀಡಲಿದೆ.
ಚಾಟ್ಬಾಟ್ ಈ ಅರ್ಜಿಯನ್ನು ಬೆಂಗಳೂರುಒನ್, ಕರ್ನಾಟಕ ಒನ್ ಮತ್ತು ಗ್ರಾಮಒನ್ ಕಚೇರಿಗಳಿಗೆ ವರ್ಗಾಯಿಸುತ್ತದೆ. ಅಲ್ಲಿ ಎಲ್ಲ ಪರಿಶೀಲನೆ ನಡೆಯಲಿದೆ. ಮಾಧ್ಯಮ ವರದಿಗಳ ಪ್ರಕಾರ, ವಾಟ್ಸಾಪ್ ಚಾಟ್ಬಾಟ್ ಸೇವೆಗಳಿಂದ ಏಳು ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಈಗಾಗಲೇ ಸ್ವೀಕರಿಸಲಾಗಿದೆ.
ಅರ್ಜಿದಾರರು ತಮ್ಮ ಆಧಾರ್ ಕಾರ್ಡ್ ಜೊತೆಗೆ ತಮ್ಮ ಪಡಿತರ ಚೀಟಿಯಾದ ಬಿಪಿಎಲ್ ಕಾರ್ಡ್ ಅಥವಾ ಎಪಿಎಲ್ ಕಾರ್ಡ್ ಅಥವಾ ಅಂತ್ಯೋದಯ ಕಾರ್ಡ್ ಅನ್ನು ಒದಗಿಸಬೇಕಾಗುತ್ತದೆ. ಇನ್ನು ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಲ್ಲದಿದ್ದರೆ, ಆಧಾರ್ ಕಾರ್ಡ್ ಮಾಹಿತಿ ಜೊತೆಗೆ ಪಾಸ್ಬುಕ್ ಅನ್ನು ನೀಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಕ್ತಿ ಯೋಜನೆಯಲ್ಲಿಯೂ ಚಾಟ್ಬಾಟ್ ಸೇವೆಗಳನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಉಚಿತ ಬಸ್ ಪ್ರಯಾಣಕ್ಕಾಗಿ ಶಕ್ತಿ ಸ್ಮಾರ್ಟ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಲು ಮಹಿಳಾ ಪ್ರಯಾಣಿಕರಿಗೆ ಈಗಾಗಲೇ ಸರ್ಕಾರವು ತಿಳಿಸಿದೆ. ಈ ಯೋಜನೆಗಾಗಿ ಶೀಘ್ರದಲ್ಲೇ ವಾಟ್ಸಾಪ್ ಚಾಟ್ಬಾಟ್ ಅನ್ನು ಪರಿಚಯಿಸುವ ಸಾಧ್ಯತೆಯಿದೆ.
ಏನಿದು ಗೃಹ ಲಕ್ಷ್ಮೀ ಯೋಜನೆ ತಿಳಿಯಿರಿ
ಗೃಹಲಕ್ಷ್ಮೀ ಯೋಜನೆಯು ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರವು ಜಾರಿ ಮಾಡಿರುವ ಯೋಜನೆಯಾಗಿದ್ದು, ಇದರಡಿಯಲ್ಲಿ ಪ್ರತಿ ತಿಂಗಳು ಕೂಡಾ ಮನೆಯ ಒಡತಿಗೆ ಎರಡು ಸಾವಿರ ರೂಪಾಯಿ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ. ಒಂದು ಕುಟುಂಬದಲ್ಲಿ ಮನೆಯ ಯಜಮಾನತ್ವವನ್ನು ಮಹಿಳೆ ವಹಿಸಿದ್ದರೆ ಮಾತ್ರ ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.
ಈ ಯೋಜನೆಯ ಮಾರ್ಗಸೂಚಿ, ಮಾನದಂಡಗಳು
* ಈ ಯೋಜನೆಯ ಫಲಾನುಭವಿಗಳು 2023ರ ಜುಲೈ 16 ರಿಂದ ಅರ್ಜಿ ಸಲ್ಲಿಸಬೇಕು. ಆಯ್ಕೆಗೊಂಡ ಫಲಾನುಭವಿಗಳಿಗೆ ಆಗಸ್ಟ್ನಲ್ಲಿ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.
* ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ನೀಡುವ ಅಂತ್ಯೋದರ, ಬಿಪಿಎಲ್, ಎಪಿಎಲ್ ಪಡಿತ ಚೀಟಿಗಳಲ್ಲಿ ಕುಟುಂಬದ ಯಾಜಮಾನಿ ಎಂದು ಮಹಿಳೆಯನ್ನು ಗುರುತಿಸಲಾಗಿದ್ದರೆ ಮಾತ್ರ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿಯಾಗಿದ್ದಾರೆ.
* ಒಂದು ಕುಟುಂಬದಲ್ಲಿ ಒಂದಕ್ಕಿಂತ ಅಧಿಕ ಮಹಿಳೆಯರು ಇದ್ದರೆ ಎಲ್ಲರಿಗೂ ಈ ಯೋಜನೆಯ ಲಾಭ ಲಭ್ಯವಾಗುವುದಿಲ್ಲ. ಮನೆಯ ಯಜಮಾನಿ ಎಂದು ಗುರುತಿಸಲ್ಪಟ್ಟ ಒಬ್ಬರಿಗೆ ಮಾತ್ರ ಈ ಯೋಜನೆಯ ಮೂಲಕ ಎರಡು ಸಾವಿರ ರೂಪಾಯಿ ಲಭ್ಯವಾಗುತ್ತದೆ.
* ಆನ್ಲೈನ್ ಆಪ್, ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಸ್ಥಳೀಯವಾಗಿ ಕಾಂಗ್ರೆಸ್ ಕಾರ್ಯಕರ್ತರು ಈ ಅರ್ಜಿ ಸಲ್ಲಿಸುವ ಕಾರ್ಯವನ್ನು ಮಾಡುತ್ತಿದ್ದು, ಅವರ ಸಹಾಯ ಪಡೆಯಬಹುದಾಗಿದೆ.
* ಆರಂಭದಲ್ಲಿ ಯೋಜನೆಯ ಲಾಭ ಪಡೆಯಬೇಕಾದರೆ ಫಲಾನುಭವಿಗಳ ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ ಕಡ್ಡಾಯ ಎಂದು ಹೇಳಲಾಗಿತ್ತು. ಆದರೆ ಈಗ ಕಡ್ಡಾಯವಲ್ಲ ಎಂದು ಸರ್ಕಾರ ತಿಳಿಸಿದೆ.
* ನೀವು ಅರ್ಜಿ ಸಲ್ಲಿಸಿದ ಬಳಿಕ ಅರ್ಜಿ ಅನುಮೋದನೆಯಾಗಿ ನಿಮಗೆ ಆಗಸ್ಟ್ನಲ್ಲಿ ಹಣ ಲಭ್ಯವಾಗಬಹುದು. ಆದರೆ ಬಳಿಕ ನೀವು ಸಲ್ಲಿಸಿದ ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಿ ನೀವು ನಕಲಿ ದಾಖಲೆ ಸಲ್ಲಿಸಿರುವುದು ಖಚಿತವಾದರೆ, ಅಥವಾ ನೀವು ತಪ್ಪು ಮಾಹಿತಿ ನೀಡಿದ್ದರೆ, ನಿಮಗೆ ನೀಡಿದ ಹಣವನ್ನು ಹಿಂಪಡೆಯಲಾಗುತ್ತದೆ. ಹಾಗೆಯೇ ನಿಮ್ಮ ವಿರುದ್ಧ ಸೂಕ್ತವಾದ ಕ್ರಮವನ್ನು ಕೈಗೊಳ್ಳಲಾಗುತ್ತದೆ.