ಗೃಹ ಜ್ಯೋತಿ ಯೋಜನೆಯಲ್ಲಿ ಈ ಹೊಸ ನಿಯಮ ಜಾರಿ: ಇಂಧನ ಸಚಿವ ಕೆಜೆ ಜಾರ್ಜ್

ಇಂದಿನ ಬೆಲೆ ಏರಿಕೆ ಹಾಗೂ ಜಿಎಸ್‍ಟಿಯಿಂದಾಗಿ ಜನರ ಆರ್ಥಿಕತೆ ಕುಸಿದಿದ್ದು, ಅವರ ಜೀವನ ಸುಧಾರಣೆ ಮಾಡುವ ನಿಟ್ಟಿನಲ್ಲಿ ಅದರಲ್ಲಿಯೂ ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರವು ಐದು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಲು ನಿರ್ಧರಿಸಿದೆ. ಅದರಲ್ಲಿ ಒಂದಾದ ಮಹತ್ವಾಕಾಂಕ್ಷಿ ಯೋಜನೆಯಾದ ‘ಗೃಹ ಜ್ಯೋತಿ’ ಯೋಜನೆ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುವ ಯೋಜನೆಯಾಗಿದೆ.ಈ ಯೋಜನೆ ಕೇವಲ ವಿದ್ಯುತ್ ಶುಲ್ಕ ಕಡಿಮೆ ಮಾಡುತ್ತಿಲ್ಲ, ಬದಲಾಗಿ ಕುಟುಂಬದ ಆರ್ಥಿಕ ಪ್ರಗತಿಯ ಮೂಲಕ ಸಾಮಾಜಿಕ ಭದ್ರತೆ ನೀಡಲಿದೆ.

‘ಗೃಹ ಜ್ಯೋತಿ’ ಯೋಜನೆಯ ಅನುಷ್ಠಾನದ ಮೊದಲ ತಿಂಗಳಿನಲ್ಲೇ ಸುಮಾರು 1 ಕೋಟಿ 42 ಲಕ್ಷ ಕುಟುಂಬಗಳು ನೋಂದಣಿಯಾಗಿದ್ದು, ಇದರ ಪ್ರಯೋಜನ ಪಡೆಯಲಿವೆ. ಜುಲೈ 27ರ ಮೊದಲು ಅರ್ಜಿ ಸಲ್ಲಿಸಿದವರು ಮಾತ್ರ ಜುಲೈ ತಿಂಗಳ ವಿದ್ಯುತ್ ಬಳಕೆಯ ಶುಲ್ಕದಲ್ಲಿ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ಜುಲೈ 27ರ ನಂತರ ಅರ್ಜಿ ಸಲ್ಲಿಸಿದವರು ಆಗಸ್ಟ್‍ನಲ್ಲಿ ಅವರ ಬಳಕೆಯ ಆಧಾರದ ಮೇಲೆ ಸೆಪ್ಟೆಂಬರ್‍ನ ಬಿಲ್ಲಿಂಗ್‍ನಲ್ಲಿ ಪ್ರಯೋಜನ ಪಡೆಯುತ್ತಾರೆ.

ಯೋಜನೆಗೆ ನೋಂದಾಯಿಸಿಕೊಳ್ಳಲು ಯಾವುದೇ ಅಂತಿಮ ದಿನಾಂಕ ನಿಗಧಿಪಡಿಸಿಲ್ಲ. ಯಾವುದೇ ಸಮಯದಲ್ಲಿ ನೋಂದಾಯಿಸಿಕೊಂಡರೂ ಅದರ ನಂತರದ ತಿಂಗಳಿನಿಂದ ಪ್ರಯೋಜನ ಪಡೆಯಬಹುದು. 1 ಕೋಟಿ 42 ಲಕ್ಷ ಅರ್ಜಿದಾರರ ಪೈಕಿ ಸುಮಾರು 18 ಲಕ್ಷ ಮಂದಿ ‘ಭಾಗ್ಯ ಜ್ಯೋತಿ’, ‘ಕುಟೀರ ಜ್ಯೋತಿ’ ಮತ್ತು ‘ಅಮೃತ್ ಜ್ಯೋತಿ’ಯಂತಹ ಹಾಲಿ ಯೋಜನೆಗಳ ಫಲಾನುಭವಿಗಳು ಇದ್ದಾರೆ.

2 ಕೋಟಿ 14 ಲಕ್ಷ ಗೃಹಬಳಕೆದಾರರ ಮಾಸಿಕ ವಿದ್ಯುತ್ ಬಳಕೆಯ ಅಂದಾಜು ನಿರ್ಧರಿಸಲು ಈಗಾಗಲೇ ಒಂದು ವರ್ಷದ ವಿದ್ಯುತ್ ಬಳಕೆಯ ಸರಾಸರಿ ಲೆಕ್ಕಾಚಾರ ಮಾಡಲಾಗಿದೆ. 2022- 2023 ಹಣಕಾಸು ವರ್ಷದ ಸರಾಸರಿ ಬಳಕೆಯನ್ನು ಪರಿಗಣಿಸಿ, ಪ್ರತಿ ಗ್ರಾಹಕರ ಸರಾಸರಿ ಬಳಕೆಯ ಮೇಲೆ ಹೆಚ್ಚುವರಿ 10 ಪ್ರತಿಶತವನ್ನು ನೀಡುವ ಮೂಲಕ ಮಾಸಿಕ ವಿದ್ಯುತ್ ಬಳಕೆಯ ಅಂದಾಜು ನಿರ್ಧರಿಸಲಾಗುತ್ತದೆ. ಆದಾಗ್ಯೂ, ಗರಿಷ್ಠ ಉಚಿತ ವಿದ್ಯುತ್ ಬಳಕೆಯ ಮಿತಿಯನ್ನು 200 ಯುನಿಟ್‍ಗಳಿಗೆ ನಿರ್ಬಂಧಿಸಲಾಗಿದೆ.

ಸರಾಸರಿ ಬಳಸುವ ಯೂನಿಟ್ ವಿದ್ಯುತ್ 200 ಯೂನಿಟ್‍ಗಳಿಗಿಂತ ಕಡಿಮೆಯಿದ್ದರೆ, ಮನೆಯ ಗ್ರಾಹಕರು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಸರಾಸರಿಗಿಂತ ಹೆಚ್ಚಿನ ಯೂನಿಟ್ ಬಳಸಿದರೆ, ಹೆಚ್ಚುವರಿ ಯೂನಿಟ್‍ಗೆ ಮಾತ್ರ ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ, 200ಕ್ಕೂ ಹೆಚ್ಚು ಯೂನಿಟ್ ಬಳಸಿದರೆ ಪೂರ್ಣ ಶುಲ್ಕ ಪಾವತಿಸಬೇಕಾಗುತ್ತದೆ.

ಗೃಹ ಜ್ಯೋತಿ ಯೋಜನೆಯ ಪ್ರಮುಖ ವಿವರಗಳು:
• ರಾಜ್ಯದ ಎಲ್ಲಾ ಗೃಹಬಳಕೆದಾರರಿಗೆ 200 ಯೂನಿಟ್‍ಗಳವರೆಗಿನ ವಿದ್ಯುತ್ ಬಳಕೆ ಉಚಿತ.
• 2023ರ ಆಗಸ್ಟ್‍ನಲ್ಲಿ ‘ಗೃಹ ಜ್ಯೋತಿ’ ಯೋಜನೆಯಿಂದ 1.42 ಕೋಟಿ ಕುಟುಂಬಗಳಿಗೆ ಲಾಭ.
• ಈ ಯೋಜನೆಯು ವಾಣಿಜ್ಯ ಗ್ರಾಹಕರಿಗೆ ಅನ್ವಯಿಸುವುದಿಲ್ಲ.
• 2022- 2023ರ ಹಣಕಾಸು ವರ್ಷದ ಸರಾಸರಿ ವಿದ್ಯುತ್ ಬಳಕೆಯನ್ನು ಗಣನೆಗೆ ತೆಗೆದುಕೊಂಡು ಪ್ರತಿ ಗ್ರಾಹಕರ ಸರಾಸರಿ ಬಳಕೆಯ ಮೇಲೆ ಹೆಚ್ಚುವರಿ 10 ಪ್ರತಿಶತವನ್ನು ಮಾಸಿಕ ವಿದ್ಯುತ್ ಬಳಕೆಯ ಅಂದಾಜು ನಿರ್ಧರಿಸಲಾಗುತ್ತದೆ.
• ಗರಿಷ್ಠ ಉಚಿತ ವಿದ್ಯುತ್ ಬಳಕೆಯ ಮಿತಿಯನ್ನು 200 ಯುನಿಟ್‍ಗಳಿಗೆ ನಿಬರ್ಂಧಿಸಲಾಗಿದೆ.
• ಪ್ರತಿ ಬಳಕೆದಾರರಿಗೆ ನಿಗದಿಪಡಿಸಲಾದ ತಿಂಗಳ ಸರಾಸರಿ ಯೂನಿಟ್‍ಗೆ ಅನುಗುಣವಾಗಿ ವಿದ್ಯುತ್ ಬಳಕೆ ಮಾಡುವ ಗ್ರಾಹಕರ ಬಿಲ್ ಮೊತ್ತ ಶೂನ್ಯವಾಗಿರುತ್ತದೆ.
• ನಿಗದಿತ ಸರಾಸರಿ ಬಳಕೆಯ ಮಿತಿ ಮೀರಿದರೂ 200 ಯೂನಿಟ್ ಒಳಗಿದ್ದರೆ ಹೆಚ್ಚುವರಿ ಯೂನಿಟ್‍ಗೆ ಮಾತ್ರ ಶುಲ್ಕ ಪಾವತಿಸಬೇಕಾಗುತ್ತದೆ.
• ಗ್ರಾಹಕರ ಮಾಸಿಕ ಸರಾಸರಿ ಬಳಕೆಯು 200 ಯುನಿಟ್‍ಗಳನ್ನು ಮೀರಿದರೆ ಬಿಲ್‍ನ ಸಂಪೂರ್ಣ ಮೊತ್ತವನ್ನು ಪಾವತಿಸಬೇಕಾಗುತ್ತದೆ.
• ಯೋಜನೆಯ ಲಾಭ ಪಡೆಯಲು ಬಯಸುವ ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳಬಹುದು.
• ಗ್ರಾಹಕರು ತಮ್ಮ ಆಧಾರ್ ಸಂಖ್ಯೆಗಳನ್ನು ಬಿಲ್‍ನಲ್ಲಿ ನಮೂದಿಸಲಾದ ಗ್ರಾಹಕ ಐಡಿ ಅಥವಾ ಖಾತೆ ಐಡಿಯೊಂದಿಗೆ ಲಿಂಕ್ ಮಾಡಬೇಕು.
• ಭಾಗ್ಯ ಜ್ಯೋತಿ/ಕುಟೀರ ಜ್ಯೋತಿ ಮತ್ತು ಅಮೃತ ಜ್ಯೋತಿ ಫಲಾನುಭವಿಗಳನ್ನು ಹೊಸದಾಗಿ ಪ್ರಾರಂಭಿಸಲಾದ ಗೃಹ ಜ್ಯೋತಿ ಯೋಜನೆಗೆ ಜೋಡಣೆ ಮಾಡಲಾಗುತ್ತದೆ.
• ಯೋಜನೆಯನ್ನು ಕಾರ್ಯಗತಗೊಳಿಸಲು ಸರ್ಕಾರವು ಗೃಹ ಜ್ಯೋತಿ ಸಬ್ಸಿಡಿ ಮೊತ್ತ ಮತ್ತು ಈ ಮೊತ್ತವನ್ನು ಎಲ್ಲಾ ಎಸ್ಕಾಂಗಳಿಗೆ ಮುಂಚಿತವಾಗಿ ಪಾವತಿಸುತ್ತದೆ. ಇಂಧನ ಇಲಾಖೆಗೆ ಇದರಿಂದ ಆರ್ಥಿಕ ಹೊರೆ ಬೀಳದು.

Spread positive news

Leave a Reply

Your email address will not be published. Required fields are marked *