ಕೃಷಿಯಲ್ಲಿ ಎರೆಹುಳುವಿನ ಮಹತ್ವ ಹಾಗೂ ಉಪಯೋಗ


ಪ್ರೀಯ ರೈತರೇ ಯಾವುದೇ ಖರ್ಚು ಇಲ್ಲದೆ ಕೃಷಿಯಲ್ಲಿ ಆದಾಯ ಹೆಚ್ಚಿಸಬೇಕೆ?
ಹಾಗಾದರೆ ಬನ್ನಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಯಬಹುದು ಎಂಬುದನ್ನು ತಿಳಿಯೋಣ.

ರೈತ ಮಿತ್ರರೇ ದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಸಮಯದಲ್ಲಿ ರೈತರಿಗೆ ಬೆಳೆಗಳಿಗೆ ಪೋಷಕಾಂಶ ಒದಗಿಸುವ ಕೆಲಸ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಹಾಗೂ ರೈತರಿಗೆ ರಾಸಾಯನಿಕ ಗೊಬ್ಬರ ಸಮರ್ಪಕವಾಗಿ ಬಳಸಲು ಆಗುತ್ತಿಲ್ಲ, ರೈತರು ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಬಳಸುತ್ತಿದ್ದಾರೆ. ಅದಕ್ಕಾಗಿ ರಾಸಾಯನಿಕ ಗೊಬ್ಬರ ಹೆಚ್ಚಿಗೆ ಬಳಸುವುದರಿಂದ ಭೂಮಿ ಹಾಳಾಗುತ್ತದೆ. ಅದಕ್ಕಾಗಿ ಭೂಮಿ ಫಲವತ್ತತೆ ಹಾಗೂ ಬೆಳೆ ಅಭಿವೃದ್ಧಿ ಪಡಿಸಲು ಸಾವಯವ ರೂಪದ ಗೊಬ್ಬರ ಕೊಡುವುದು ಬಹಳ ಸೂಕ್ತವಾಗಿದೆ. ಅದಕ್ಕಾಗಿ ಎರೆಗೊಬ್ಬರ, ಎರೆಜಲ, ಹಸಿರೆಲೆ ಗೊಬ್ಬರ ಹೀಗೆ ಹಲವಾರು ಕೃಷಿ ತ್ಯಾಜ್ಯ ವಸ್ತುಗಳನ್ನು ಬಳಸುವುದರಿಂದ ರೈತರಿಗೆ ಭೂಮಿ ಫಲವತ್ತತೆ ಹಾಗೂ ಹೆಚ್ಚಿನ ಆದಾಯ ಪಡೆಯಲು ಸಹಾಯವಾಗುತ್ತದೆ.

ಪ್ರತಿಯೊಬ್ಬ ರೈತ ಸಹಜ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಇಂದಿನ ಅವಶ್ಯಕತೆಯಾಗಿದೆ. ಇದಕ್ಕೊಂದು ಉದಾಹರಣೆ “ಎರೆಹುಳು ಕೃಷಿ” ಹಲವಾರು ಸಂಶೋಧನೆಗಳಿಂದ ಗೊತ್ತುಪಡಿಸಿದ ಸಂಗತಿ ಏನೆಂದರೆ, ಸಾಗುವಳಿಗೆ ಯೋಗ್ಯವಾದ ಮಣ್ಣಿನ 3 ಸೆಂ.ಮೀ. ಮೇಲ್ಪದರು ತಯಾರಾಗಲು ಒಂದು ಸಾವಿರ ವರ್ಷಗಳು ಬೇಕು. ಆದರೆ ಎರೆಹುಳುವಿನ ಸಹಾಯದಿಂದ ಕಲ್ಲು ಉಸುಕಿನ ಹೊಲವನ್ನು ಹುಲ್ಲು ಗದ್ದೆಯಾಗಿ ಪರಿವರ್ತಿಸಲು ಕೇವಲ ಹತ್ತು ವರ್ಷಗಳು ಸಾಕು. ಇದಕ್ಕಾಗಿಯೇ ಎರೆಹುಳುವನ್ನು ಜೈವಿಕ ನೇಗಿಲು, ರೈತನ ಮಿತ್ರ, ರೈತ ಬಂಧು ಎಂದೂ ಕರೆಯಲಾಗುತ್ತದೆ.

ಎರೆಹುಳುವಿನ ಪರಿಚಯ:

ಎರೆಹುಳುಗಳಲ್ಲಿ ಹಲವು ಜಾತಿಯ ಹುಳುಗಳಿವೆ. ಆದರೆ ಇವುಗಳಲ್ಲಿ ಮುಖ್ಯವಾಗಿ ಕೆಂಪು ಎರೆಹುಳು (ಐಸೀನಿಯಾ ಪೊಟಿಡಾ) ಮತ್ತು ಯುಡ್ತಿಲಸ ಯೂಜಿನಿಯ ವನ್ನು ಗೊಬ್ಬರ ತಯಾರಿಕೆಗೆ ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ಏಕೆಂದರೆ, ಇವು ಅತಿ ವೇಗವಾಗಿ ಬೆಳವಣಿಗೆಯಾಗುತ್ತವೆ ಮತ್ತು ಕಡಿಮೆ ಸಮಯದಲ್ಲಿ ತನ್ನ ಸಂಖ್ಯೆಯನ್ನು ವೃದ್ಧಿಸಿಕೊಳ್ಳುತ್ತವೆ. ಹೀಗಾಗಿ ಸಾವಯವ ತ್ಯಾಜ್ಯಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಿ ಅತ್ಯುತ್ತಮ ಗುಣಮಟ್ಟದ ಗೊಬ್ಬರವಾಗಿಸುತ್ತವೆ. ಕೆಂಪು ಎರೆಹುಳುವಿನ ಕೋಶದಿಂದ ಹೊರಬಂದ ಹಳದಿ ಮಿಶ್ರಿತ ಕೆಂಪು ಬಣ್ಣದ ಚಿಕ್ಕ ಮರಿಹುಳು ಸುಮಾರು ಅರ್ಧ ಇಂಚು ಉದ್ದವಿರುತ್ತದೆ. ಮನುಷ್ಯನ ತಲೆಯ ನಾಲ್ಕು ಕೂದಲು ಸೇರಿದರೆ ಎಷ್ಟು ದಪ್ಪವಾಗುತ್ತದೆಯೊ ಅಷ್ಟೇ ದಪ್ಪವಿರುತ್ತದೆ.

ಇವು ಬೆಳೆಯುತ್ತಾ ಸುಮಾರು 3 ರಿಂದ 10 ಸೆಂ.ಮೀ. ಉದ್ದ, 0.4 ರಿಂದ 0.6 ಗ್ರಾಂ ತೂಕವಾಗುತ್ತವೆ. 50 ರಿಂದ 60 ದಿನಗಳಲ್ಲಿ ಕಡುಗೆಂಪು ಬಣ್ಣದ ವಯಸ್ಕ ಹುಳುವಾಗುತ್ತವೆ. ಈ ಹುಳುಗಳು 3 ರಿಂದ 6 ತಿಂಗಳ ಅವಧಿಯಲ್ಲಿ ಸುಮಾರು 100 ಮೊಟ್ಟೆಗಳಿರುವ ಕೋಶಗಳನ್ನಿಟ್ಟು ಅದರಿಂದ 300 ರಿಂದ 700 ಮರಿಗಳನ್ನು ಪಡೆಯುತ್ತವೆ. ಒಂದು ಸಾವಿರ ಹುಳುಗಳಿದ್ದರೆ ಒಂದು ತಿಂಗಳ ಸಂತಾನಾಭಿವೃದ್ಧಿಯಲ್ಲಿ 2.5 ಲಕ್ಷದಿಂದ 3 ಲಕ್ಷದಷ್ಟು ಹೆಚ್ಚಬಲ್ಲವು. ಇವು 2 ರಿಂದ 3 ವರ್ಷ ಬದುಕಿರಬಲ್ಲವು.

ಎರೆಹುಳುವಿನ ಚಟುವಟಿಕೆಗಳು:

ಭೂಮಿಯನ್ನು ಉಳುಮೆ ಮಾಡುವುದು ಮತ್ತು ಹಿಕ್ಕೆಗಳನ್ನು ಹಾಕುವುದು. ಭೂಮಿಯನ್ನು ಸಾಮಾನ್ಯ ಉಳುಮೆ ಮಾಡುವುದರಿಂದ 30 ಸೆಂ.ಮೀ. ವರೆಗೆ ಮಾಡಬಹುದು. ಆದರೆ ಎರೆಹುಳುಗಳು 3 ಮೀಟರ್ ವರೆಗೆ ಉಳುಮೆಯನ್ನು ಬೆಳೆಗೆ ಯಾವುದೇ ಹಾನಿ ಉಂಟು ಮಾಡುವುದಿಲ್ಲ.

ಎರೆ ಹುಳುಗಳ ಚಟುವಟಿಕೆಯಿಂದಾಗಿ ಆಗುವ ಲಾಭಗಳು –

1. ಭೂಮಿಯ ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ 10 ಪಟ್ಟು ಹೆಚ್ಚಾಗುತ್ತದೆ.
2. ಬೆಳೆಗೆ ಅತ್ಯವಶ್ಯಕವಾಗಿ ಬೇಕಾಗುವ ಪೋಷಕಾಂಶಗಳು ಕರಗಿ ಅಂತರ್ಜಲಕ್ಕೆ ಸೇರಿ, ಸೋರಿ ಹೋಗದಂತೆ ತಡೆಯುತ್ತದೆ.
3. ಎರೆಗಬ್ಬರ ಬಳಸಿ ಬೆಳೆಗೆ ಕೀಟ ರೋಗದ ಬಾಧೆ ಕಡಿಮೆ.
4. ಎಲ್ಲವುಗಳಿಗಿಂತ ಮಿಗಿಲಾಗಿ ಫಸಲಿನ ಆರೋಗ್ಯ ಹೆಚ್ಚು ಉತ್ತಮವಾಗಿದ್ದು ನೀರು ಗಾಳಿ ಆಹಾರಾದಿಗಳಲ್ಲಿ ವಿಷ ಬೆರಿಕೆ ಕಡಿಮೆಯಾಗುತ್ತದೆ.
ಪ್ರತಿ ಕ್ವಿಂಟಲ್ ಎರೆಗೊಬ್ಬರ ಸುಮಾರು 800 ಗ್ರಾಂ ಸಾರಜನಕ, 1100 ಗ್ರಾಂ ರಂಜಕ ಮತ್ತು 500 ಗ್ರಾಂ ಪೊಟ್ಯಾಶನ್ನು ಹೊಂದಿರುವದಾಗಿ ಸಂಶೋಧನೆಯಿಂದ ತಿಳಿದು ಬಂದಿದೆ.
ಎರೆಗೊಬ್ಬರವನ್ನು ಸಗಣಿಗೊಬ್ಬರಕ್ಕೆ ಹೋಲಿಸಿದರೆ, ಎರೆಗೊಬ್ಬರ ಸಗಣಿಗೊಬ್ಬರಕ್ಕಿಂತ ಎರಡು ಪಟ್ಟು ಸಾರಜನಕ ಐದು ಪಟ್ಟು ಹೆಚ್ಚು ರಂಜಕ ಹಾಗೂ ಐದು ಪಟ್ಟು ಹೆಚ್ಚು ಪೋಟ್ಯಾಷ್ ಅನ್ನು ಹೊಂದಿರುತ್ತದೆ. ಎರೆ ಗೊಬ್ಬರವನ್ನು ರಾಸಾಯನಿಕ ಗೊಬ್ಬರದೊಡನೆ ಹೋಲಿಸಿದಾಗ ಒಂದು ಕ್ವಿಂಟಲ್ ಎರೆ ಗೊಬ್ಬರ ಕೊಟ್ಟರೆ ಸುಮಾರು ಎರಡು ಕಿ.ಗ್ರಾಂ ಯೂರಿಯಾ, ಏಳು ಕಿ.ಗ್ರಾಂ ರಂಜಕ, ಒಂದು ಕಿ.ಗ್ರಾಂ ಪೊಟ್ಯಾಷ್ ಕೊಟ್ಟಂತೆ ಬೆಳೆಗಳು ಬೆಳೆಯುತ್ತವೆ.

ಇವು ಸಾವಯವ ವಸ್ತುಗಳನ್ನು ಮತ್ತು ಹೆಂಡಿಯನ್ನು ಮಣ್ಣಿನಲ್ಲಿ ಬೆರೆಸುತ್ತವೆ. ಆದ್ದರಿಂದ ಭುಮಿಯಲ್ಲಿ ವಿವಿಧ ಪದರಗಳಲ್ಲಿ ಪೋಷಕಾಂಶಗಳನ್ನು ಮಿಶ್ರಣ ಮಾಡುವುದಲ್ಲದೆ ಪೋಷಕಾಂಶಗಳನ್ನು ಬೆಳೆಗಳ ಬೇರಿನ ಹತ್ತಿರ ತಂದು ಅವುಗಳನ್ನು ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ. ಎರೆಹುಳುಗಳು ಭೂಮಿಯನ್ನು ಉಳುಮೆ ಮಾಡುತ್ತಾ ಹೋಗುವಾಗ ಸಾವಯವ – ಪದಾರ್ಥಗಳನ್ನು ತಿನ್ನುತ್ತಾ ಸಾಗುತ್ತವೆ. ಈ ಸಮಯದಲ್ಲಿ ಅಲ್ಪ – ಪ್ರಮಾಣದ ಆದ್ರತೆ ಮತ್ತು ಯೂರಿಯಾವನ್ನು ಅದರ ಮೂತ್ರದ ಮೂಲಕ ಸೇರಿಸುತ್ತಾ ಹೊಗುತ್ತದೆ. ಪೋಷಕಾಂಶಗಳನ್ನು ವಿಭಜಿಸಿ ಭೂಮಿಗೆ ಒದಗಿಸುವ ಮುಖಾಂತರ ಬೇರುಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಇವು ಭೂಮಿಯಲ್ಲಿ ರಂಧ್ರಗಳನ್ನು ಮಾಡುವುದರಿಂದ ಗಾಳಿಯಾಡಿ ಹೆಚ್ಚಿನ ಆಮ್ಲಜನಕ ಒದಗುವುದುಲ್ಲದೇ ಅನೇಕ ಸೂಕ್ಷ್ಮಾಣು ಜೀವಿಗಳ ವೃದ್ಧಿಗೆ ಅನುಕೂಲವಾಗುತ್ತದೆ. ಎರೆಹುಳುಗಳ ಹೊಟ್ಟೆಯಲ್ಲಿ ಇರುವ ಉಪಯುಕ್ತ ಸೂಕ್ಷ್ಮಾಣುಗಳು ಹಿಕ್ಕೆಯ ಜೊತೆಗೆ ಹೊರ ಬರುತ್ತವೆ. ಎರೆಹುಳು ಗೊಬ್ಬರ ತಯಾರಿಕೆಯಿಂದ ಜಮೀನಿನಲ್ಲಿ ಸಾವಯವ ತ್ಯಾಜ್ಯ ವಸ್ತುಗಳನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಬಹುದು. ರೈತನ ಮಿತ್ರ ಎರೆಹುಳು ರೈತನ ಹಾಗೆ ನಿರಂತರ ಭೂಮಿಯಲ್ಲಿ ಕೆಲಸ ಮಾಡುತ್ತಲೇ ಇರುತ್ತದೆ. ಕೆಳಭಾಗದ ಮಣ್ಣನ್ನು ಮೇಲಕ್ಕೆ ತಂದು ಭೂಮಿಯನ್ನು ನಿರಂತರವಾಗಿ ಉಳುತ್ತಾ ಭೂಮಿಯ ಫಲವತ್ತತೆಯನ್ನು ಕಾಪಾಡಲು ಸಹಕರಿಸುತ್ತದೆಙ ಹಾಗೂ

ಎರೆಹುಳು ಗೊಬ್ಬರದ ಮಹತ್ವ: ಎರೆಹುಳು ಸಾವಯವ ವಸ್ತುಗಳಾದ ಕೃಷಿ ತ್ಯಾಜ್ಯ ವಸ್ತುಗಳನ್ನು ತನ್ನ ಜಠರದಲ್ಲಿ ವಿಭಜಿಸಿ, ವಿವಿಧ ಪೋಷಕಾಂಶಗಳನ್ನೊಳಗೊಂಡ ಹಿಕ್ಕೆಗಳನ್ನು ಹಾಕುತ್ತದೆ. ಎರೆಗೊಬ್ಬರವನ್ನು ಎಕರೆಗೆ 1 ಟನ್ನಂತೆ ಬಳಸಿ ಉತ್ತಮ ಗುಣಮಟ್ಟದ ಇಳುವರಿಯನ್ನು ಪಡೆಯಬಹುದು. ಎರೆಹುಳುವಿನ ಅನ್ನನಾಳದಲ್ಲಿ ಅಧಿಕ ಸಂಖ್ಯೆಯಲ್ಲಿ ಸೂಕ್ಷ್ಮಾಣು ಜೀವಿಗಳು ವೃದ್ಧಿ ಹೊಂದಿ ಹುಳುವಿನ ಅಭಿವೃದ್ಧಿ ಆಗಬೇಕು.

ಎರೆಜಲ ಎಂದರೇನು? ಎರೆಜಲ ಪಡೆಯುವ ವಿಧಾನ ಹೇಗೆ?

• ಒಂದು ದೊಡ್ಡ ಪಾತ್ರೆಯಲ್ಲಿ (500ಲೀ. ನೀರಿನ ಬ್ಯಾರಲ್ / ಡ್ರಮ್) ಒಂದು ಸಣ್ಣ ಪಾತ್ರೆಯನ್ನು (20 ಲೀಟರ್ ನೀರು ಹಿಡಿಯುವ ಬಕೆಟ್) ತಲೆ ಕೆಳಗಾಗಿ ಇಡಬೇಕು. ಬ್ಯಾರಲ್‌ನಲ್ಲಿ ತಳಭಾಗದಿಂದ ಸುಮಾರು 25ಸೆಂ.ಮೀ. ಎತ್ತರದವರೆಗೆ ಇಟ್ಟಿಗೆ ತುಂಡು / ಉಸುಕಿನ ಪದರ / ಖಡಿ, ಜೆಲ್ಲೆಯನ್ನು ತುಂಬಬೇಕು.
• ಸಣ್ಣ ಪಾತ್ರೆಯಲ್ಲಿ ಸಂಗ್ರಹವಾದ ಎರೆ ಜಲವನ್ನು ಪಡೆಯಲು ಅದಕ್ಕೆ 10 -25ಸಂ.ಮೀ. ಅಳತೆಯ ಪ್ಲಾಸ್ಟಿಕ್ ಪೈಪನ್ನು ಬ್ಯಾರಲನ ಹೊರಗಡೆ ಬರುವಂತೆ ಜೋಡಿಸಬೇಕು.
• ನಂತರ ಚೆನ್ನಾಗಿ ಕಳಿತ ಸಾವಯವ ವಸ್ತುಗಳನ್ನು ದೊಡ್ಡ ಪಾತ್ರೆಯಲ್ಲಿ ಉಸುಕಿನ ಪದರ/ ಖಡಿ, ಮೇಲೆ ತುಂಬ ಪ್ರತಿ 100ಕಿ.ಗ್ರಾಂ ಸಾವಯವ ವಸ್ತುಗಳಗೆ 5ಕಿ.ಗ್ರಾಂ ಎರೆ ಹುಳುಗಳನ್ನು ಬಿಡಬೇಕು.
• ನಂತರ 5ಲೀಟರನಂತೆ ನೀರನ್ನು 50 ದಿನಗಳವರೆಗೆ ಹಾಕಬೇಕು.
• ಈ ನೀಲಿನಿಂದ ಎರೆಹುಳು ಮತ್ತು ಎರೆಗೊಬ್ಬರವನ್ನು ತೊಳೆದು ಬಸಿದು ಸಣ್ಣ ಪಾತ್ರೆಯಲ್ಲಿ ಸಂಗ್ರಹವಾಗುತ್ತದೆ.
• ಕೊನೆಗೆ ಬರುವ ಸಾವಯವ ಹಾಗೂ ಎರೆಹುಳು ಕಳಚುವ ದ್ರವರೂಪವೇ ಎರೆಜಲ.

ಎರೆಜಲದಲ್ಲಿರುವ ಪೋಷಕಾಂಶ ಪ್ರಮಾಣ – ಪೋಷಕಾಂಶಗಳು ಪ್ರಮಾಣ
ಸಾರಜನಕ – 0.17 %
ರಂಜಕ – 1.0-1.08 %
ಪೊಟ್ಯಾಶ್ – 1.19-1.45 %
ಮೆಗ್ನಿಸಿಯಂ – 10.0-13.0 ppm
ಕಬ್ಬಿಣ – 6.75-7.65 ppm
ಸತು – 22.4-36.30 ppm
ತಾಮ್ರ -ಅಲ್ಪ ಪ್ರಮಾಣ

ಎರಜಲದ ಉಪಯೋಗಗಳು –

• ಎರೆಜಲವನ್ನು ಬೆಳೆಗಳಿಗೆ ಸಿಂಪರಣೆ ಮಾಡಬಹುದು. (ನೀರಿನೊಡನೆ 2 -4ಮೀಲಿ ಪ್ರತಿ ಲೀಟರ್ ನೀರಿಗೆ) ಬೆರೆಸಿ ಸಿಂಪಡಿಸಬೇಕು.
• ಬೆಳೆಗಳಲ್ಲಿ ಉತ್ಪಾದನೆ, ಕೀಟನಿರೋಧಕ ಶಕ್ತಿ ಹೆಚ್ಚುವುದು ಕಂಡು ಬಂದಿರುವುದು.
• ಎರಜಲವನ್ನು ಎಲ್ಲ ಬೆಳೆಗಳಿಗೆ ಪ್ರಚೋದನಕಾರಿ ಉಪಯೋಗಿಸಬಹುದು.
• ಬೆಳೆಯವರ್ಧಕವಾಗಿ ಎಲ್ಲಾ ಬೆಳೆಗಳಲ್ಲಿ, ಬದನೆ ಈರುಳ್ಳಿ , ಸವತೆ, ಮೆಣಸಿನಕಾಯಿ ಮತ್ತು ಇತರ ತರಕಾರಿ ಬೆಳೆಗಳ ಮೇಲೆ ಬೆಳೆವರ್ಧಕವಾಗಿ ಉಪಯೋಗಿಸಬಹುದು.
• ದ್ರಾಕ್ಷಿ , ದಾಳಿಂಬೆ,ನಿಂಬೆ, ಬಾಳೆ ಮತ್ತು ಪಪಾಯದಲ್ಲಿ ಸಿಂಪರಣೆಯ ಮೂಲಕ ಎರೆಜಲವನ್ನು ಒದಗಿಸುವುದರಿಂದ ಅಥವಾ ಗಿಡದ ಬುಡಕ್ಕೆ ಹಾಕುವುದರಿಂದ ಗಿಡದ ಬೆಳವಣಿಗೆ ಮತ್ತು ಇಳುವರಿಯಲ್ಲಿ ಹೆಚ್ಚಾದದ್ದು ಕಂಡುಬರುತ್ತದೆ.
• ಗಿಡಗಳಲ್ಲಿ ಹೂ, ಕಾಯಿ ಉದುರುವುದು ಕಡಿಮೆಯಾಗುತ್ತದೆ.
• ಸಸ್ಯಗಳಿಗೆ ಬೇರು ಬೆಳೆಯಲು ಹಾಗೂ ನೀರು ಹಿಡಿಯುವ ಸಾಮರ್ಥ್ಯ ಹೆಚ್ಚಿಸುತ್ತದೆ.

• ಸ್ಥಾನಿಕ ಎರೆಕೃಷಿ ಎಂದರೇನು?

ಬೆಳೆಯ ಬುಡದಲ್ಲಿ (ಮಡಿಯಲ್ಲಿ) ಎರೆಹುಳುಗಳನ್ನು ಬಿಟ್ಟು ಬೆಳೆಗಳಿಗೆ ಪೋಷಕಾಂಶ ಒದಗಿಸುವ ವಿಧಾನವೇ ಸ್ತಾನಿಕಎರೆಕೃಷಿ. ಹೊಲಗಳ ಅಥವಾ ತೋಟಗಳ ಬೆಳೆಗಳಲ್ಲಿಯೇ ಎರೆಹುಳುಗಳನ್ನು ಬಿಟ್ಟು ಎರೆಕೃಷಿ ಮಾಡಬಹುದು. ಈ ಪದ್ಧತಿಯು ಎಲ್ಲಾ ಬೆಳೆಗಳಿಗೂ ಸೂಕ್ತ ವಾಗಿಲ್ಲವಾದರೂ ಕಬ್ಬು , ದ್ರಾಕ್ಷಿ , ದಾಳಿಂಬೆ , ನಿಂಬೆ , ಮಾವು ಮತ್ತು ಇತರೆ ಹನಿ ನೀರಾವರಿ ಅಳವಡಿಸುವ ಬೆಳೆಗಳಿಗೆ ಬಹಳ ಸೂಕ್ತವಾಗಿದೆ. ಇದು ಬೆಳೆಯ ಬೇರುಗಳಿಗೆ ಯಾವುದೇ ಹಾನಿಯಾಗದಂತೆ ತಡೆದು ಪೋಷಕಾಂಶಗಳ ನಿರ್ವಹಣೆ ಮಾಡುತ್ತದೆ. ಇದು ಹೆಚ್ಚಾಗಿ ಹನಿ ನೀರಾವರಿ ಪದ್ಧತಿ ಅಳವಡಿಸಿರುವ ಪ್ರದೇಶದಲ್ಲಿ ಸೂಕ್ತ.

ಕಬ್ಬಿನ ಬೆಳೆಯಲ್ಲಿ ಸ್ಥಾನಿಕ ಎರೆ ಕೃಷಿ ಮಾಡುವ ಪದ್ಧತಿ : 1. ಕಬ್ಬು ಕಟಾವು ಮಾಡಿದ ತಕ್ಷಣ ಬಂದಂತಹ ರವದಿಯನ್ನು ಸುಡದೇ ಎರಡು ಸಾಲುಗಳ ಮಧ್ಯ ಹಾಕಬೇಕು
2. ನಂತರ ಕಬ್ಬಿನ ರವದಿಯ ಮೇಲೆ ತೆಳುವಾಗಿ ಮಣ್ಣನ್ನು ಅಥವಾ ಕೊಟ್ಟಿಗೆ ಗೊಬ್ಬರವನ್ನು ಹಾಕಬೇಕು .
3. ಹರಿ ನೀರು , ಹನಿ ನೀರಾವರಿ ಅಥವಾ ತುಂತುರು ನೀರಾವರಿ ಮೂಲಕ ನೀರನ್ನು ಉಣಿಸಬೇಕು , ಶೇ .40 ರಿಂದ 50 ರಷ್ಟು ತೇವಾಂಶ ಕಾಪಾಡಬೇಕು .
4. ಸೂಕ್ತ ಜಾತಿಯ ( ಯುಲಸ್ ಯುಜಿನೇ ) ಎರೆಹುಳಗಳನ್ನು ಕಬ್ಬಿನ ಬೆಳೆಗೆ ಬಿಡಬೇಕು . ಒಂದು ಹೇಕ್ಟರ್‌ಗೆ ಸುಮಾರು 25 ಕೀ.ಗ್ರಾಂ ಎರೆಹುಳುಗಳನ್ನು ಬಿಡಬೇಕು .
5 , ಎರೆಹುಳುಗಳನ್ನು ಬಿಟ್ಟ ನಂತರ ಗೊಬ್ಬರ ತಯಾರಾಗಲು 3 ರಿಂದ 7 ತಿಂಗಳು ಬೇಕಾಗುತ್ತದೆ . ಈ ಹುಳುಗಳು ರವದಿಯನ್ನು ತಮ್ಮ ಅಹಾರವನ್ನಾಗಿಸಿಕೊಂಡು , ಅದನ್ನು ಬುಡದಿಂದ ತಿಂದು ಗೊಬ್ಬರವನ್ನಾಗಿ ಪರಿವರ್ತಿಸುತ್ತದೆ .
6. ಈ ಗೊಬ್ಬರವು ಪೋಷಕಾಂಶಗಳಿಂದ ಕೂಡಿದ್ದು , ಇದು ಬೆಳೆಗಳಿಗೆ ನೇರವಾಗಿ ಸಿಗುತ್ತದೆ
7. ಈ ಪದ್ಧತಿಯು ಬೆಳೆಗಳಲ್ಲಿ ಮಾಡುವುದರಿಂದ ಕೀಟ ಮತ್ತು ರೋಗದ ಬಾಧೆ ಕಡಿಮೆಯಾಗುತ್ತದೆ .
8. ಕಬ್ಬಿನ ಬೆಳೆಯಲ್ಲಿ ಅಧಿಕ ಗುಣಮಟ್ಟ ಮತ್ತು ಹೆಚ್ಚಿನ ಇಳುವರಿಯನ್ನು ಪಡೆಯಬಹುದು .
9. ಈ ಪದ್ಧತಿಯನ್ನು ಅಳವಡಿಸುವುದರಿಂದ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಹೆಚ್ಚಾಗಿ ಬಳಸಬಾರದು
10. ಕಬ್ಬಿನ ರವದಿಯನ್ನು ಹೊಲದಲ್ಲಿಯೇ ಹಾಕುವದರಿಂದ ಆಳುಗಳ ಕೊರತೆ ಮತ್ತು ಅದರ ವೆಚ್ಚ ಕಡಿಮೆಯಾಗುತ್ತದೆ .

ಪ್ರೀಯ ರೈತ ಬಾಂಧವರೆ ಇತರೆ ಬೆಳೆಗಳಲ್ಲಿ ಸ್ಥಾನಿಕ ಎರಕೃಷಿ ಮಾಡುವ ಪದ್ಧತಿ (ಇನ್ ಸಿಟು ಎರೆಕೃಷಿ) – ಸ್ಥಾನಿಕ ಕೃಷಿ ಎಂದರೆ ಬೆಳೆಯ ಬುಡದಲ್ಲಿ ಎರೆಹುಳುಗಳನ್ನು ಬಿಟ್ಟು ಪೋಷಕಾಂಶಗಳನ್ನು ಒದಗಿಸುವ ವಿಧಾನ. ಹೊಲಗಳ / ತೋಟಗಳ ಬೆಳೆಗಳಲ್ಲಿಯೇ ಎರೆಹುಳುಗಳನ್ನು ಬಿಟ್ಟು ಎರೆ ಕೃಷಿ ಮಾಡಬಹುದು. ಈ ಪದ್ಧತಿಯು ಎಲ್ಲಾ ಬೆಳೆಗಳಿಗೂ ಸೂಕ್ತವಾಗಿಲ್ಲವಾದರೂ, ಕಬ್ಬು, ದ್ರಾಕ್ಷಿ, ದಾಳಿಂಬೆ, ನಿಂಬೆ, ಮಾವು ಮತ್ತು ಪೇರಲ, ಹನಿ ನೀರಾವರಿ ಅಳವಡಿಸುವ ಬಹುವಾರ್ಷಿಕ ಬೆಳೆಗಳಿಗೆ ಬಹಳ ಸೂಕ್ತವಾದುದಾಗಿದೆ . ಸಾಕಷ್ಟು ಸಾವಯವ ಕಚ್ಚಾ ಅಥವಾ ಕೃಷಿ ತ್ಯಾಜ್ಯಗಳನ್ನು ಹಾಕಿ ಮೇಲೆ ಹುಲ್ಲು ಹಾಸಿಗೆ ಹೊದಿಸಿ ಎರೆಹುಳುಗಳನ್ನು ಬೆಳೆಯ ಪ್ರದೇಶದ ಎರಡೂ ಸಾಲುಗಳ ಮಧ್ಯ ಮತ್ತು ತೋಟದ ಬೆಳೆಗಳಲ್ಲಿ ಗಿಡಗಳ ಬುಡಕ್ಕೆ ಬಿಟ್ಟು ಶೇ 40 ರಿಂದ 50 ರಷ್ಟು ತೇವಾಂಶವನ್ನು ಕಾಪಾಡುವುದರಿಂದ ಎರೆಹುಳುಗಳು ಸಾವಯವ ವಸ್ತುಗಳನ್ನು ತಿಂದು ಗಿಡಗಳ ಬುಡಕ್ಕೆ ಎರೆಗೊಬ್ಬರ ಹಾಕುವುದರಿಂದ ಗಿಡಗಳ ಬೆಳವಣಿಗೆ ಅಭಿವೃದ್ಧಿ ಹೊಂದುತ್ತದೆ. ಈ ಪದ್ಧತಿಯನ್ನು ಅಳವಡಿಸಿದಲ್ಲಿ ಶೇ 50 ರಷ್ಟು ರಾಸಾಯನಿಕ ಗೊಬ್ಬರದ ಬಳಕೆಯನ್ನು ಕಡಿಮೆ ಮಾಡಬಹುದಲ್ಲದೇ ಒಳ್ಳೆಯ ಗುಣಮಟ್ಟದ ಮತ್ತು ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ.

Spread positive news

Leave a Reply

Your email address will not be published. Required fields are marked *