ಮೊಬೈಲ್ ನಲ್ಲಿಯೇ ಹವಾಮಾನ ವರದಿ ತಿಳಿಯಲು ಸುಲಭ ದಾರಿ ಇದೆಯೇ?
ಬನ್ನಿ ಮೊಬೈಲ್ ಮುಖಾಂತರ ವಾತಾವರಣದ ಬದಲಾವಣೆ ಬಗ್ಗೆ ಸಂಪೂರ್ಣ ತಿಳಿಯೋಣ.
ಹವಾಮಾನ ಒಂದು ನೈಸರ್ಗಿಕ ಸಂಪನ್ಮೂಲವಾಗಿದ್ದು ಕೃಷಿ ಯೋಜನೆ ಮತ್ತು ಬೆಳೆ ನಿರ್ವಹಣೆಯಲ್ಲಿ ಪ್ರಾಥಮಿಕ ಸಂಪನ್ಮೂಲವಾಗಿ ಪರಿಗಣಿಸಲಾಗಿದೆ. ಬೆಳೆಯ ಬೆಳೆವಣಿಗೆ, ಅಭಿವೃದ್ಧಿ ಮತ್ತು ಇಳುವರಿಗೆ ಸಂಬಂಧಿಸಿದ ಪ್ರತಿಯೊಂದು ಬೆಳೆ ಪ್ರಕ್ರಿಯೆಯು ಹವಾಮಾನದಿಂದ ಪ್ರಭಾವಿತವಾಗಿರುತ್ತದೆ. ಅದೇ ರೀತಿ ಬಿತ್ತನೆಯಿಂದ ಹಿಡಿದು ಕೊಯ್ದು ಮತ್ತು ಕೊಲ್ಲೋತ್ತರ ಚಟುವಟಿಕೆಗಳು ಹವಾಮಾನದಿಂದ ಪ್ರಭಾವಿತವಾಗಿರುತ್ತವೆ. ಬೆಳೆಗಳಿಗೆ ಬರುವ ವಿವಿಧ ಪೀಡೆಗಳ ಬಾಧೆ ಹವಾಮಾನವನ್ನು ಅಧರಿಸಿರುತ್ತದೆ. ಆದ್ದರಿಂದ ಹವಾಮಾನ ಶಾಸ್ತ್ರ ವಿಷಯ ಮತ್ತು ಬಳಕೆ ಅವಶ್ಯಕವಾಗಿದೆ. ಅದರಲ್ಲೂ ಇತ್ತೀಚಿನ ಹವಾಮಾನದಲ್ಲಾಗುತ್ತಿರುವ ಬದಲಾವಣೆ, ಏರುಪೇರು ಮತ್ತು ಆವುಗಳಿಂದ ಕೃಷಿ ಉತ್ಪಾದನೆ ಮೇಲೆ ಆಗುತ್ತಿರುವ ಹಾನಿಯನ್ನು ಕಡಿಮೆ ಮಾಡಲು ಅತೀ ಅವಶ್ಯ.
ಒಂದು ಸ್ಥಳದಲ್ಲಿ ನಿರ್ದಿಷ್ಟ ಕಾಲಾವಧಿಯಲ್ಲಿ ಇರುವ ಸರಾಸರಿ ವಾತಾವರಣ ಪರಿಸ್ಥಿತಿಯನ್ನು ಹವಾಮಾನ ಎಂದು ಕರೆಯಲ್ಪಡುತ್ತದೆ, ಮಳೆ, ಬಿಸಿಲು, ವಾಯುಭಾರ, ಗಾಳಿ ಹಾಗೂ ಉಷ್ಣತೆಗಳ ಆಧಾರದ ಮೇಲೆ ಅಯಾ ಸ್ಥಳದ ಹವಾಮಾನವನ್ನು ನಿರ್ಧರಿಸಲಾಗುತ್ತದೆ. ವಾತಾವರಣದಲ್ಲಿನ ಬದಲಾವಣೆಯು ಆಕಸ್ಮಿಕವಾಗಿ ಆಗಬಹುದು ಮತ್ತು ಸರಿಯಾಗಿ ದೀರ್ಘಕಾಲದ ವಾತಾವರಣವನ್ನು ಗಮನಿಸಿದರೆ ಅಸಾದರಣವೂ ಆಗಿರುವುದು. ಭೂ ವಾತಾವರಣದಲ್ಲಿ ಸಾವಿರಾರು ವರ್ಷಗಳ ಇತಿಹಾಸದಲ್ಲಿ ನಿಧಾನವಾಗಿ ಹಲವಾರು ಬದಲಾವಣೆಗಳಾಗಿದ್ದು, ಬಹುತೇಕ ಬಗೆಯ ಜೀವಿಗಳು ಈ ಬದಲಾಣೆಗೆ ಸಹಜವಾಗಿ ಒಗ್ಗಿಕೊಂಡಿರುವವು, ಆದರೆ ಕಳೆದ 150-200 ವರ್ಷಗಳಿಂದೀಚೆ ಈ ಬದಲಾವಣೆಯು ಅತೀ ವೇಗ ಪಡೆದುಕೊಂಡಿದ್ದು, ಹಲವು ಬಗೆಯ ಪ್ರಾಣಿ ಹಾಗೂ ಸಸ್ಯ ಪ್ರಬೇಧಗಳು ಅದಕ್ಕೆ ಒಗ್ಗಿಕೊಳ್ಳಲಾಗದೆ ನಶಿಸಿ ಹೋಗಿರುವವು. ಇಂತಹ ಬದಲಾವಣೆಗೆ ಮಾನವನ ಚಟುವಟಿಕೆಗಳೇ ಮುಖ್ಯ ಕಾರಣ ಎಂದು ವೈಜ್ಞಾನಿಕವಾಗಿ ಕಂಡುಬಂದಿದೆ.
ಮುಖ್ಯವಾಗಿ ಹೇಳಬೇಕೆಂದರೆ ವಾತಾವರಣದಲ್ಲಿ ತಾಪಮಾನ ಏರಿಕೆಯಿಂದ ಹಲವಾರು ಬೆಳೆಗಳ, ಧಾನ್ಯಗಳ ಇಳುವರಿ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಮಿತಿಮೀರಿದ ಉಷ್ಣತೆ, ವಿಪರೀತ ಮಳೆ, ನೆರೆ ಪ್ರವಾಹಗಳು, ಬರಗಾಲಗಳು ಮೊದಲಾದವು ಕೂಡ ಹೆಚ್ಚಿನ ಬೆಳೆ ಉತ್ಪಾದನೆ ಮತ್ತು ಕೃಷಿ ಭೂಮಿಗಳ ಮೇಲೆ ದುಷ್ಪರಿಣಾಮ ಬೀರುತ್ತವೆ. ಬಿಸಿ ಹವೆ ಹವಾಗುಣವು ಮಳೆಯ ವಿನ್ಯಾಸದಲ್ಲಿ ಬದಲಾವಣೆಯನ್ನು ತರುತ್ತದೆ. ಇದರಿಂದಾಗಿ ಕ್ಷಾಮ ಮತ್ತು ಪ್ರವಾಹಗಳು ಹೆಚ್ಚಿಗೆ ಮತ್ತು ಮೇಲಿಂದ ಮೇಲೆ ಮರುಕಳಿಸುತ್ತವೆ.
ಬೆಳೆ ಬೆಳವಣಿಗೆ ಮತ್ತು ಉತ್ಪಾದನೆಯಲ್ಲಿ ಹವಾಮಾನವು ಪ್ರಮುಖ ಪಾತ್ರವಹಿಸುತ್ತದೆ. ಎಲ್ಲಾ ಇತರ ಭೌತಿಕ ಅಂಶಗಳು, ಒಳಹರಿವು ಮತ್ತು ಕೃಷಿ ಪದ್ಧತಿಗಳನ್ನು ಕುಶಲತೆಯಿಂದ ನಿರ್ವಹಿಸಬಹುದು, ಆದರೆ ಹವಾಮಾನದ ವ್ಯತ್ಯಾಸಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಹವಾಮಾನಕ್ಕೆ ತಕ್ಕಂತೆ ಕೃಷಿ ಚಟುವಟಿಕೆಗಳೂ ಸಹ ಬದಲಾಗಬೇಕಾಗಿದೆ. ಹವಾಮಾನ ಮಾಹಿತಿಯನ್ನು ಒದಗಿಸುವುದರ ಮೂಲಕ ಬೆಳೆಗಳ ಮೇಲೆ ಆಗಬಹುದಾದ ಪ್ರತಿಕೂಲ ಪರಿಣಾಮಗಳನ್ನು ಬಹಳಷ್ಟು ಮಟ್ಟಿಗೆ ತಗ್ಗಿಸಬಹುದು. ಹೀಗಾಗಿ ಕೃಷಿ ಕಾರ್ಯಾಚರಣೆಗಳಲ್ಲಿನ ಅಪಾಯವನ್ನು ಕಡಿಮೆ ಮಾಡಬಹುದು. ಈ ನಿಟ್ಟಿನಲ್ಲಿ ಹವಾಮಾನ ಮುನ್ಸೂಚನೆಯು ಪ್ರಮುಖ ಪಾತ್ರವಹಿಸುತ್ತದೆ.
ಯಾವ ಯಾವ ಸಂಸ್ಥೆಗಳು ಈ ಅಪ್ಲಿಕೇಶನ್ ಬಿಡುಗಡೆ ಮಾಡಿದೆ? ಇದರ ಪಾತ್ರ ಏನು?
ಭಾರತೀಯ ಹವಾಮಾನ ಇಲಾಖೆ (IMD), ಭಾರತ ಸರ್ಕಾರದ ಭೂ ವಿಜ್ಞಾನ ಸಚಿವಾಲಯದ ಒಂದು ಸಂಸ್ಥೆಯಾಗಿದೆ. ಇದು ಹವಾಮಾನ ಅವಲೋಕನಗಳು, ಹವಾಮಾನ ಮೂನ್ಸೂಚನೆ ಮತ್ತು ಭೂಕಂಪಶಾಸ್ತ್ರದ ಪ್ರಮುಖ ಸಂಸ್ಥೆಯಾಗಿದೆ. ಭಾರತೀಯ ಹವಾಮಾನ ಇಲಾಖೆ (IMD), ಭೂ ವಿಜ್ಞಾನ ಸಚಿವಾಲಯವು ಇತ್ತೀಚಿನ ವರ್ಷಗಳಲ್ಲಿ ಹವಾಮಾನ ಮೂನ್ಸೂಚನೆ ಮತ್ತು ಇತ್ತೀಚಿನ ಉಪಕರಣಗಳು ಮತ್ತು ತಂತ್ರಜ್ಞಾನದ ಆಧಾರದ ಮೇಲೆ ಎಚ್ಚರಿಕೆ ಸೇವೆಗಳ ಪ್ರಸಾರದಲ್ಲಿ ಸುಧಾರಣೆಗಾಗಿ ವಿವಿಧ ಉಪಕ್ರಮಗಳನ್ನು ಕೈಗೊಂಡಿದೆ. ಈ ಉಪಕ್ರಮವನ್ನು ಇನ್ನಷ್ಟು ಹೆಚ್ಚಿಸಲು ಭಾರತೀಯ ಹವಾಮಾನ ಇಲಾಖೆ (IMD) ಭಾರತೀಯ ಉಷ್ಣವಲಯ ಹವಾಮಾನ ಸಂಸ್ಥೆ (IITM) ಪುಣೆ, ಭಾರತೀಯ ಕೃಷಿ ಅನುಸಂಧಾನ ಪರಿಷತ್ (ICAR) ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (KSNDMC) ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ಸಾರ್ವಜನಿಕರು ಮತ್ತು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಮೋಬೈಲ್ ಅಪ್ಲಿಕೇಶಗಳನ್ನು ಬಿಡುಗಡೆ ಮಾಡಿದೆ. ಈ ಆ್ಯಪ್‌ಗಳ ಮಾಹಿತಿ, ಬಳಸುವ ವಿಧಾನ, ಅದರ ಉಪಯೋಗಗಳು ಈ ಕೆಳಗಿನಂತಿವೆ.
ಹವಾಮಾನ ಇಲಾಖೆ ವರದಿಯನ್ನು ಯಾವಾಗ ಬಿಡುಗಡೆ ಮಾಡಿತು? ಅದರ ಸೇವೆಗಳೇನು?
ಹವಾಮಾನ ಇಲಾಖೆ (IMD) ತನ್ನ ಮೊದಲ 2020 ರ ಜುಲೈ 27 ರಂದು ಬಿಡುಗಡೆ ಮಾಡಿತು.
MAUSAM “ಮೌಸಮ್” ಅಪ್ಲಿಕೇಶನ್ ಒದಗಿಸುವ ಸೇವೆಗಳು.
1. ಪ್ರಸ್ತುತ ಹವಾಮಾನ – ಸುಮಾರು 200 ನಗರಗಳಿಗೆ ಮಳೆ, ತಾಪಮಾನ, ಸಾಪೇಕ್ಷ ಆದ್ರತೆ, ಗಾಳಿಯ ವೇಗ ಮತ್ತು ಗಾಳಿಯ ದಿಕ್ಕುಗಳ ಮಾಹಿತಿಯನ್ನು ದಿನಕ್ಕೆ 8 ಬಾರಿ ನವೀಕರಿಸಿ ನೀಡುತ್ತದೆ. ಸೂರ್ಯೋದಯ/ ಸೂರ್ಯಾಸ್ತ ಮತ್ತು ಚಂದ್ರೋದಯ/ಚಂದ್ರಾಸ್ತದ ಮಾಹಿತಿಯನ್ನು ಸಹ ನೀಡುತ್ತದೆ.
2. ನಗರ ಹವಾಮಾನ ಮೂನ್ಸೂಚನೆ – ಕಳೆದ 24 ಗಂಟೆಗಳ ಹವಾಮಾನ ಸ್ಥಿತಿ ಮುಂದಿನ 7 ದಿನಗಳ ಹವಾಮಾನ ಮೂನ್ಸೂಚನೆ ಭಾರತದ ಸುಮಾರು 450 ನಗರಗಳಿಗೆ ನೀಡುತ್ತದೆ.
3. ಪ್ರಸ್ತುತ ಹವಾಮಾನ ಮೂನ್ಸೂಚನೆ – ರಾಜ್ಯ ಹವಾಮಾನ ಕೇಂದ್ರಗಳು ಪ್ರತಿ 3 ಗಂಟೆಗಳಿಗೊಮ್ಮೆ ಸ್ಥಳೀಯ ಹವಾಮಾನ ವಿದ್ಯಾಮಾನಗಳು ಮತ್ತು ಅವುಗಳ ತೀವ್ರತೆಯ ಎಚ್ಚರಿಕೆಯನ್ನು ಸುಮಾರು 800 ಕೇಂದ್ರಗಳು ಮತ್ತು ಜಿಲ್ಲೆಗಳಿಗೆ ನೀಡುತ್ತದೆ.
4.ಎಚ್ಚರಿಕೆಗಳು – ನಾಗರಿಕರನ್ನು ಎಚ್ಚರಿಸಲು ಎಲ್ಲಾ ಜಿಲ್ಲೆಗಳಿಗೆ ಮುಂದಿನ 5 ದಿನಗಳವರೆಗೆ ಅಪಾಯಕಾರಿ ಹವಾಮಾನ ಮೂನ್ಸೂಚನೆಯನ್ನು ವಿವಿಧ ಬಣ್ಣದ ಕೋಡ್ ನಿಂದ (ಕೆಂಪು, ಕಿತ್ತಳೆ ಮತ್ತು ಹಳದಿ) ದಿನಕ್ಕೆ ಎರಡು ಬಾರಿ ಎಚ್ಚರಿಕೆಗಳನ್ನು ನೀಡುತ್ತದೆ.
ಮೊಬೈಲ್ ನಲ್ಲಿಯೇ MAUSAM “ಮೌಸಮ್” ಅಪ್ಲಿಕೇಶನ್ ಡೌನ್‌ಲೋಡ್
ಮಾಡುವುದು ಹೇಗೆ?
• ರೈತರೇ ನಿಮ್ಮ ಮೊಬೈಲಿನಲ್ಲಿ play store en MAUSAM ಎಂದು ಟೈಪ್ ಮಾಡಿ,
• Mausam IMD-AAS
• Install/ಸ್ಥಾಪಿಸು
• Open/ ತೆರೆಯಿರಿ
• Use/ ಬಳಸಿ
ಮೇಘದೂತ ಎಂಬ ಅಪ್ಲಿಕೇಶನ್ ಅನ್ನು ಎಷ್ಟರಲ್ಲಿ ಬಿಡುಗಡೆ ಮಾಡಿತು?
ಭಾರತ ಹವಾಮಾನ ಇಲಾಖೆ (IMD), ಭಾರತೀಯ ಉಷ್ಣವಲಯ ಹವಾಮಾನ ಸಂಸ್ಥೆ (IITM) ಪುಣೆ, ಭಾರತೀಯ ಕೃಷಿ ಅನುಸಂಧಾನ ಪರಿಷತ್ (ICAR) ಜಂಟಿಯಾಗಿ ದಿನಾಂಕ 7, ಆಗಸ್ಟ್ 2019 ರಂದು ಭೂ ವಿಜ್ಞಾನ ಸಚಿವಾಲಯದ ಸಂಸ್ಥಾಪನಾ ದಿನಾಚರಣೆ ದಿನದಂದು “ಮೇಘದೂತ” (MEGHDOOT) ಅಪ್ಲಿಕೇಷನ್‌ನನ್ನು ಬಿಡುಗಡೆ ಮಾಡಿತು.
MEGHDOOT “ಮೇಘದೂತ” ಅಪ್ಲಿಕೇಶನ್ ಎಂದರೇನು? ಅದರ ಕಾರ್ಯ ಏನು?
1. ಹವಾಮಾನ ಮೂನ್ಸೂಚನೆ: ಈ ಅಪ್ಲಿಕೇಶನ್ ಮುಂದಿನ ಐದು ದಿನಗಳವರೆಗಿನ ಗರಿಷ್ಟ ಮತ್ತು ಕನಿಷ್ಟ ತಾಪಮಾನ, ಮಳೆಯ ಪ್ರಮಾಣ, ಆದ್ರ್ರತೆ, ಗಾಳಿಯವೇಗ, ಗಾಳಿಯದಿಕ್ಕು, ಮೋಡದ ಪ್ರಮಾಣ ಇವುಗಳ ಮೂನ್ಸೂಚನೆ ಮಾಹಿತಿಯನ್ನು ಒದಗಿಸುತ್ತದೆ.
2. ಹವಾಮಾನ ಆಧಾರಿತ ಬೆಳೆ ಸಲಹೆ: ತಜ್ಞರ ಶಿಫಾರಸ್ಸಿನಂತೆ ನಿರ್ದಿಷ್ಟ ಸ್ಥಳಗಳ ಕೃಷಿ ಚಟುವಟಿಕೆಗಳಿಗೆ ಅನುಗುಣವಾಗಿ ಹವಾಮಾನ ಆಧಾರಿತ ಕೃಷಿ ಸಲಹೆಗಳನ್ನು ಅಪ್ಲಿಕೇಶನ್ ನೊಂದಿಗೆ ಸಂಯೋಜಿಸಲಾಗಿದೆ. ಕೃಷಿ, ಜಾನುವಾರು, ಮೀನುಗಾರಿಕೆ, ರೇಷ್ಮೆ ಕೃಷಿ ಮತ್ತು ಜೇನು ಸಾಕಣಿಕೆ ಸಲಹೆಗಳು ಸಹ ಲಭ್ಯವಿರುತ್ತವೆ. ಆಯಾ ಪ್ರದೇಶದ ಪ್ರಮುಖ ಬೆಳೆಗಳಿಗೆ ಪ್ರಚಲಿತ ಹವಾಮಾನದಿಂದಾಗುವ ಪರಿಣಾಮಗಳು ಮತ್ತು ಅದಕ್ಕೆ ಸಂಬಂಧಿಸಿದಂತೆ ಬೆಳೆಗಳಲ್ಲಿ ಕೈಗೊಳ್ಳಬೇಕಾದ ತ್ವರಿತ ಕೃಷಿ ಚಟುವಟಿಕೆಗಳು (ಬಿತ್ತನೆ ಮೇಲುಗೋಬ್ಬರ ಕೊಡುವುದು, ನೀರು ನಿರ್ವಹಣೆ, ಸಿಂಪರಣೆ, ಕಟಾವು) ಮತ್ತು ಇತರೆ ಕೃಷಿ ಚಟುವಟಿಕೆಗಳ ಯೋಜನೆ ರೂಪಿಸಲು ಸಹಾಯಕರವಾಗಿದೆ. ಈ ಎಲ್ಲಾ ಮಾಹಿತಿಯನ್ನು ಕನ್ನಡ, ಇಂಗ್ಲಿಷ್ ಸೇರಿದಂತೆ 12 ಭಾರತೀಯ ಪ್ರಾದೇಶಿಕ ಭಾಷೆಯಲ್ಲಿ ಜಿಲ್ಲಾವಾರು ಮಾಹಿತಿ ಒದಗಿಸುತ್ತದೆ.