ರೈತರ ಬೆಳೆ ಸಮೀಕ್ಷೆ ಮಾಡಿಕೊಳ್ಳುವ ಅವಕಾಶವನ್ನು ಸರ್ಕಾರ ಕಲ್ಪಿಸಿದ್ದು, ರೈತರೇ ತಾವು ಬೆಳೆದ ಬೆಳೆಯ ಚಿತ್ರಗಳ ಸಮೇತ ಮಾಹಿತಿಯನ್ನು ಆಯಪ್ ಬಳಸಿ ಮೊಬೈಲ್ನಲ್ಲೇ ದಾಖಲಿಸಬಹುದು. ಹೀಗೆ ಮಾಡುವ ಮೂಲಕ ಬೆಳೆ ಹಾನಿಯಾದಲ್ಲಿ, ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಿದೆ ಎಂದು ಉಪ ಕೃಷಿ ನಿರ್ದೇಶಕ ಡಾ.ಎನ್.ಕೆಂಗೇಗೌಡ ಅವರು ತಿಳಿಸಿದರು. ಬುಧವಾರದಂದು, ಕುರುಗೋಡು ಹೋಬಳಿಯ ಮುಸ್ಟಘಟ್ಟ ಗ್ರಾಮದ ರೈತರೊಂದಿಗೆ ಬೆಳೆ ಸಮೀಕ್ಷೆ ಕುರಿತು ಪ್ರಾತ್ಯಕ್ಷಿಕೆ ನೀಡಿ ಮಾಹಿತಿ ವಿವರಿಸುತ್ತಾ, ಸರಕಾರಗಳ ಸೌಲಭ್ಯ ಸಿಗಲು ಬೆಳೆ ಸಮೀಕ್ಷೆಯೇ ಮೂಲವಾಗಿದ್ದು, ರೈತರು ತಮ್ಮ ಜಮೀನಿನ ಪಹಣಿ ರಕ್ಷಣೆಯಷ್ಟೇ ಮುಖ್ಯವಾಗಿ ಬೆಳೆ ಸಮೀಕ್ಷೆಯನ್ನು ಮಾಡಲು ಮುತುವರ್ಜಿ ವಹಿಸಬೇಕು ಎಂದರು.
ರೈತರೇ ನೇರವಾಗಿ ಬೆಳೆ ಸಮೀಕ್ಷೆಯನ್ನು ಮೊಬೈಲ್ನಲ್ಲಿ ಡೌನ್ಲೋಡ್ ಮಾಡಬಹುದು. ಹಿಂದೆಲ್ಲಾ ಅಧಿಕಾರಿಗಳು ಅಥವಾ ಗುತ್ತಿಗೆ ಸಿಬ್ಬಂದಿ ಬೆಳೆ ಸಮೀಕ್ಷೆ ಮಾಡುತ್ತಿದ್ದರು. ಆದರೆ ಈಗ ತಂತ್ರಜ್ಞಾನ ಬೆಳೆದಂತೆ ಎಲ್ಲವೂ ಬದಲಾಗಿದೆ. ಮೊಬೈಲ್ನಲ್ಲೇ ಬೆಳೆ ಸಮೀಕ್ಷೆ ಮಾಡಿ, ಬೆಳೆ ಹಾನಿಯಾದಲ್ಲಿ ಸರ್ಕಾರದಿಂದ ಸೌಲಭ್ಯ ಪಡೆಯಬಹುದಾಗಿದೆ ಎಂದರು.
ಬೆಳೆ ಸಮೀಕ್ಷೆಗೆ ಒತ್ತು ನೀಡಿ
ಬೆಳೆ ಸಮೀಕ್ಷೆ ವಿಷಯದಲ್ಲಿ ಮೊದಲ ಹಂತದಲ್ಲಿ ರೈತರಿಗೆ ಬೆಳೆ ಸಮೀಕ್ಷೆ ಮಾಡಲು ಅವಕಾಶ ನೀಡಲಾಗುತ್ತದೆ. ಆನಂತರ ಬೆಳೆ ಸಮೀಕ್ಷೆ ಮಾಡಲು ಗುತ್ತಿಗೆ ಆಧಾರದ ಮೇಲೆ ಖಾಸಗಿ ವ್ಯಕ್ತಿಗಳನ್ನು ಕಳುಹಿಸಲಾಗುತ್ತದೆ. ಮೂರನೇ ಹಂತದಲ್ಲಿ ಖಾಸಗಿ ವ್ಯಕ್ತಿಗಳು ಕೊಟ್ಟ ಮಾಹಿತಿಯನ್ನು ಕಂದಾಯ, ಕೃಷಿ, ತೋಟಗಾರಿಕೆ ಅಧಿಕಾರಿಗಳು ಪರಿಶೀಲಿಸಿ ಅನುಮೋದಿಸಿದರಷ್ಟೇ ಬೆಳೆ ಸಮೀಕ್ಷೆ ಅಂತಿಮವಾಗಲಿದೆ. ಹೀಗಾಗಿ ರೈತರು ಪರಿಹಾರ ಸಿಗಲಿಲ್ಲ, ಬೆಳೆದ ಬೆಳೆಗೆ ಬದಲಾಗಿ ಬೇರೆ ಬೆಳೆ ನಮೂದಿಸಲಾಗಿದೆ ಎಂದು ಇಲಾಖೆಗಳಿಗೆ ದೂರು ಕೊಡುವುದನ್ನು ಬಿಟ್ಟು ಕಾಲಕಾಲಕ್ಕೆ ಬೆಳೆ ಸಮೀಕ್ಷೆಗೆ ಒತ್ತು ಕೊಡಬೇಕಿದೆ ಎಂದು ತಿಳಿಸಿದರು.
ಸರ್ಕಾರದ ಯೋಜನೆ ರೈತರಿಗೆ: ಪ್ರಕೃತಿ ವಿಕೋಪಗಳಾದಾಗ ನಷ್ಟದ ಸಮೀಕ್ಷೆ, ಬೆಳೆ ವಿಮೆ, ಬೆಂಬಲ ಬೆಲೆಯಡಿ ಖರೀದಿ, ಸಹಾಯಧನ, ಬೆಳೆ ಪರಿಹಾರ ಹೀಗೆ ಎಲ್ಲಕ್ಕೂ ಬೆಳೆ ಸಮೀಕ್ಷೆ ಕಡ್ಡಾಯವಾಗಿದೆ. ನಿಮ್ಮ ಜಮೀನಿನಲ್ಲಿ ಯಾವ ಬೆಳೆ ಬೆಳೆಯಾಗುತ್ತಿದೆ ಎನ್ನುವುದರ ಆಧಾರದ ಮೇಲೆ ಸರಕಾರದ ಯೋಜನೆಗಳು ರೈತರಿಗೆ ಸಿಗಲಿವೆ. ಹೀಗಾಗಿ ಎಲ್ಲ ರೈತರು ತಮ್ಮ ಜಮೀನಿನ ದಾಖಲೆಗಳ ಕಡೆ ಹೇಗೆ ಗಮನಹರಿಸುತ್ತೀರೋ ಹಾಗೇ ಬೆಳೆ ಸಮೀಕ್ಷೆಯನ್ನು ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.
ಯಾವುದು ಆ ಆಯಪ್?
ಖಾರೀಫ್ ಫಾರ್ಮರ್ ಕ್ರಾಫ್ 2023-24 ಇದು ಬೆಳೆ ಸಮೀಕ್ಷೆ ಮಾಡಲು ಇರುವ ಆಯಪ್, ಸ್ಮಾರ್ಟ್ ಫೋನ್ಗಳಲ್ಲಿ ಪ್ಲೇ ಸ್ಟೋರ್ಗೆ ಹೋಗಿ ಆಯಪ್ ಡೌನ್ಲೋಡ್ ಮಾಡಿಕೊಂಡರೆ ಬೆಳೆ ಸಮೀಕ್ಷೆಗೆ ಸಂಬಂಧಿಸಿದ ಎಲ್ಲ ಮಾಹಿತಿಯೂ ಆಯಪ್ನಲ್ಲಿ ಲಭ್ಯವಾಗಲಿದೆ. ಬೆಳೆಯ ಫೋಟೋಗಳ ಜೊತೆಗೆ ಸರ್ವೆ ನಂಬರ್, ಬೆಳೆಯ ಸ್ಥಿತಿ ಎಲ್ಲವನ್ನೂ ಈ ಆಯಪ್ನಲ್ಲಿ ಡೌನ್ಲೋಡ್ ಮಾಡಬಹುದು. ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಸರಕಾರ ಈ ಆಯಪ್ನ್ನು ಅಭಿವೃದ್ದಿಪಡಿಸಿದ್ದು, ರೈತರಿಗೆ ತಿಳಿಯದಿದ್ದರೆ ಮನೆಯಲ್ಲಿನ ವಿದ್ಯಾವಂತರಿಂದ ಬೆಳೆ ಸಮೀಕ್ಷೆ ಮಾಡಿಸಬಹುದು ಎಂದು ಮನವರಿಸಿದರು.
ಪ್ರಸಕ್ತ 2022-23ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆಯು ಈಗಾಗಲೇ ಆರಂಭವಾಗಿದ್ದು, ಹಿಂಗಾರು ಹಂಗಾಮಿನಲ್ಲಿ ರೈತರು ತಮ್ಮ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರಸಹಿತ ಬೆಳೆ ಸಮೀಕ್ಷೆ ಮೊಬೈಲ್ ಆಯಪ್ ಮೂಲಕ ದಾಖಲಿಸಬೇಕು. ವಿಧಾನ ರೈತರು ಸ್ಮಾರ್ಟ್ ಮೊಬೈಲ್ ಫೋನ್ ಬಳಸಿ ಬೆಳೆ ಸಮೀಕ್ಷೆ ಮೊಬೈಲ್ ಆಯಪ್ ಅನ್ನು ಗೂಗಲ್ ಪ್ಲೇ ಸ್ಟೋರಿನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.ಅಥವಾರ ರೈತರ ಪರವಾಗಿ ಅವರ ಕುಟುಂಬದ ಸದಸ್ಯರು, ಸಂಬಂಧಿಕರ ಸಹಾಯ ಪಡೆಯಬಹುದು. ಈ ಕಾರ್ಯಕ್ರಮದಡಿ ಗ್ರಾಮವಾರು ನೇಮಿಸಲಾಗಿರುವ ಖಾಸಗಿ ನಿವಾಸಿಗಳು ‘ರೈತರ ಬೆಳೆ ಸಮೀಕ್ಷೆ ಆಯಪ್” ಮೂಲಕ ತಾವು ಬೆಳೆದಿರುವ ಬೆಳೆಗಳ ವಿವರಗಳನ್ನು ಛಾಯಾಚಿತ್ರ ಸಮೇತ ದಾಖಲಿಸಬಹುದು. ಆಯಪ್ ಮೂಲಕ ದಾಖಲಾಗುವ ಮಾಹಿತಿಗಳನ್ನು ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ, ಬೆಂಬಲ ಬೆಲೆ ಮತ್ತು ಸರ್ಕಾರದ ವಿವಿಧ ಯೋಜನೆಗಳಡಿ ಸವಲತ್ತುಗಳನ್ನು ಒದಗಿಸಲು ಆರ್.ಟಿ.ಸಿ ಯಲ್ಲಿ ಅಳವಡಿಸಲು ಬಳಸಲಾಗುತ್ತದೆ.
ಈ ಬೆಳೆ ವಿವರಗಳನ್ನು ದಾಖಲಿಸುವುದರಿಂದ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆ, ಬೆಳೆ ವಿಮೆ ಯೋಜನೆ, ಬರಗಾಲ ಮತ್ತು ಪ್ರವಾಹ ಸಂದರ್ಭದಲ್ಲಿ ನಷ್ಟದ ಪರಿಹಾರ ಪಡೆಯಲು, ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಹಾಗೂ ಬೆಳೆ ಸಾಲ ಪಡೆಯಲು ಇದು ಅನುಕೂಲವಾಗಲಿದೆ. ರೈತರು ಬೆಳೆ ವಿವರಗಳನ್ನು ದಾಖಲಿಸದಿದ್ದರೆ, ಸರ್ಕಾರದ ಯೋಜನೆಗಳಿಂದ ವಂಚಿತರಾಗುವ ಸಾಧ್ಯತೆ ಇದೆ. ಬೆಳೆ ವಿವರಗಳನ್ನು ಖಾಸಗಿ ನಿವಾಸಿಗಳು ಮೊಬೈಲ್ ಆಯಪ್ ಮೂಲಕ ದಾಖಲಿಸುವಾಗ ಛಾಯಾಚಿತ್ರದಲ್ಲಿ ರೈತರು ಕಡ್ಡಾಯವಾಗಿ ಹಾಜರಿರಬೇಕು. ಆಧಾರ್ ಕಾರ್ಡ್ ಅಪ್ಲೋಡ್ ಮಾಡಬೇಕು. ಒಂದು ವೇಳೆ ರೈತರು ಹಾಜರಾಗಲು ಸಾಧ್ಯವಾಗದಿದ್ದ ಸಂದರ್ಭಗಳಲ್ಲಿ ಖಾಸಗಿ ನಿವಾಸಿಗಳು ಬೆಳೆ ವಿವರಗಳನ್ನು ದಾಖಲಿಸಲು ಒಪ್ಪಿಗೆ ಪತ್ರವನ್ನು ನೀಡಬೇಕು
ನೀರಾವರಿ ಯೋಜನೆ ಸಬ್ಸಿಡಿಗಾಗಿ ರೈತರಿಂದ ಅರ್ಜಿ ಆಹ್ವಾನ
ಕೃಷಿಭೂಮಿ ಇದ್ದರೆ 36000 ರೂಪಾಯಿ ಪಿಂಚಣಿ : ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ
ಬೆಳೆ ಸಮೀಕ್ಷೆ ಆಯಪ್ ಕುರಿತು ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನಾಗಲಿ ಅಥವಾ ತೋಟಗಾರಿಕಾ ಅಧಿಕಾರಿಗಳನ್ನಾಗಲಿ ಅಥವಾ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಅಥವಾ ಆಯಾ ಗ್ರಾಮಗಳಿಗೆ ನಿಯೋಜಿಸಿದ ಖಾಸಗಿ ನಿವಾಸಿಗಳನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ರೈತರು ಹಾಜರಿದ್ದರು.
One thought on “ಬೆಳೆ ಸಮೀಕ್ಷೆ ಆಯಪ್ ಕುರಿತು ರೈತರಿಗೆ ಹೊಸ ಅಪ್ಡೇಟ್”