ಕಾಶ್ಮೀರದಂತಾದ ಕಲಘಟಗಿ ತಾಲೂಕು. ಏನಿದು ಇಷ್ಟೋಂದು ಮಳೆ?

ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಬೀಸುತ್ತಿದ್ದು, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ 3 ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸುತ್ತ ಮುತ್ತಲಿನ ಪ್ರದೇಶದಲ್ಲಿ ಮಂಗಳವಾರ ಭಾರಿ ಆಲಿಕಲ್ಲು ಮಳೆಯಾದ ಪರಿಣಾಮ ಇಡೀ ಕಲಘಟಗಿ ಗ್ರಾಮದಲ್ಲಿ ಆಲಿಕಲ್ಲುಗಳ ರಾಶಿ ಬಿದ್ದು, ಇದು ಕಲಘಟಗಿಯೋ, ಕಾಶ್ಮೀರವೋ ಎಂಬ ಜಿಜ್ಞಾಸೆಗೆ ಎಡೆ ಮಾಡಿಕೊಟ್ಟಿತ್ತು.

ಕಲಘಟಗಿ ಗ್ರಾಮದ ಸುತ್ತ ಸುರಿದ ಮಳೆಯ ಜೊತೆಗೆ ಭಾರೀ ಪ್ರಮಾಣದಲ್ಲಿ ಆಲಿಕಲ್ಲುಗಳು ಬಿದ್ದಿದ್ದು, ರಸ್ತೆ, ಮನೆ ಸೇರಿದಂತೆ ಗಿಡ ಗಂಟೆಗಳೆಲ್ಲ ಅಕ್ಷರಶಃ ಮಂಜುಗಡ್ಡೆ ಆವರಿಸಿತ್ತು. ಸತತ ಮಂಜು ಸುರಿಯುವ ಪ್ರದೇಶದಂತೆ ಕಲಘಟಗಿಯ ಚಿತ್ರಣ ಬದಲಾಗಿತ್ತು. ರಸ್ತೆ, ಮನೆಗಳ ಮೇಲೆ ಬಿದ್ದಿದ್ದ ಆಲಿಕಲ್ಲುಗಳನ್ನು ತೆರವುಗೊಳಿಸಲು ಜನ ಹರಸಾಹಸ ಪಟ್ಟರು.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಈ ಪ್ರದೇಶದ ಪ್ರಸ್ತುತ ಹವಾಮಾನ ಮಾದರಿಗಳಿಗೆ ಚಂಡಮಾರುತದ ಪರಿಚಲನೆ ಪ್ರಮುಖ ಕಾರಣವಾಗಿದೆ. ಹೆಚ್ಚುವರಿಯಾಗಿ, ತಮಿಳುನಾಡಿನ ಉತ್ತರ ಕರಾವಳಿ ಪ್ರದೇಶಗಳಲ್ಲಿ ಪ್ರತ್ಯೇಕ ಚಂಡಮಾರುತ ವ್ಯವಸ್ಥೆ ವರದಿಯಾಗಿದ್ದು, ಹವಾಮಾನ ಅಸ್ಥಿರತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಹವಾಮಾನ ಬೇಸಿಗೆಯ ಅನುಭವವನ್ನೇ ನೀಡುತ್ತಿದ್ದು, ಆದರೆ ಕೆಲವು ಭಾಗಗಳಲ್ಲಿ ಹಗುರ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಉತ್ತರ ಒಳನಾಡು ಜಿಲ್ಲೆಗಳಾದ, ಬೆಳಗಾವಿ, ಧಾರವಾಡ, ವಿಜಯಪುರ, ಗದಗ, ಬಾಗಲಕೋಟೆ, ಹಾವೇರಿಯಲ್ಲಿ ಹಗುರದಿಂದ ಮಧ್ಯಮ ಅಥವಾ ಗುಡುಗು ಸಹಿತ ಮಳೆಯಾಗುವ (Heavy Rain) ಸಾಧ್ಯತೆ ಇದೆ ಎನ್ನಲಾಗಿದೆ.

ಮುಂದಿನ 4 ದಿನ ಮಳೆ ಸೂಚನೆ:
ಭಾರತೀಯ ಹವಾಮಾನ ಇಲಾಖೆ, ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನ ಮಳೆ ಬೀಳುವ ಸಾಧ್ಯತೆ ಇದೆ ಎಂದು ಸೂಚನೆ ನೀಡಿದೆ. ಆ ಪ್ರಕಾರ ರಾಜ್ಯದಲ್ಲಿ ಮಾರ್ಚ್‌ 21 ರವರೆಗೆ ಮಳೆ ಅಬ್ಬರಿಸುವ ಸಾಧ್ಯತೆ ಇದೆ. ಮಹಾರಾಷ್ಟ್ರದಿಂದ ತಮಿಳುನಾಡಿನವರೆಗೆ ಮೇಲ್ಮೈ ಸುಳಿಗಾಳಿ ಸೃಷ್ಟಿಯಾಗಿದ್ದು, ಆ ಪರಿಣಾಮ ರಾಜ್ಯದಲ್ಲಿ ದಿಢೀರ್‌ ಮಳೆಯಾಗಿದೆ. ಆದ್ದರಿಂದ ಕರ್ನಾಟಕದಲ್ಲಿ ಮುಂದಿನ 4 ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದ್ದು, ಅತ್ತ ಬೇಸಿಗೆ ಕಾಲದಲ್ಲೂ ಮಳೆ ಬರುವುದನ್ನು ನೋಡಿ ಜನರೇ ಆಶ್ಚರ್ಯಗೊಂಡಿದ್ದಾರೆ.

Spread positive news

Leave a Reply

Your email address will not be published. Required fields are marked *