ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರವು (INCOIS) ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ ಕರಾವಳಿ ಪ್ರದೇಶಗಳಿಗೆ ಹೆಚ್ಚಿನ ಅಲೆಗಳ ಎಚ್ಚರಿಕೆ ಮತ್ತು ಉಬ್ಬರದ ಅಲರ್ಟ್ ನೀಡಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಮಾರ್ಚ್ 20ರವರೆಗೆ ರಣಬಿಸಿಲಿರಲಿದೆ ಎಂಬ ಮುನ್ಸೂಚನೆ ನೀಡುವೆಯೂ ಕರ್ನಾಟಕದ ಹಲವು ಭಾಗಗಳಲ್ಲಿ ಇಂದು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನ ಹವಾಮಾನ ಕೇಂದ್ರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಮತ್ತು ಚಾಮರಾಜನಗರ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಏತನ್ಮಧ್ಯೆ, ಕಲಬುರಗಿಯ ಕೋಡ್ಲಿ ಹೋಬಳಿ ಮತ್ತು ರಾಯಚೂರು ಜಿಲ್ಲೆಗಳ ಕಲ್ಲೂರು ಹೋಬಳಿಯಲ್ಲಿ ಮಂಗಳವಾರ ಗರಿಷ್ಠ ತಾಪಮಾನ 42.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಬಿಸಿಲ ಧಗೆಯಿಂದ ಬೇಸತ್ತು ಹೋಗಿದ್ದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊನೆಗೂ ವರ್ಷಧಾರೆಯಾಗಿದ್ದು, ಇಂದು ಸಂಜೆ ಸುರಿದ ಮಾರ್ಚ್ ತಿಂಗಳ ಮೊದಲ ಮಳೆಯಿಂದಾಗಿ ನಗರದ ತಾಪಮಾನ ಗಣನೀಯವಾಗಿ ಇಳಿಕೆಯಾಗಿದೆ.
ಸಂಜೆ 6 ಗಂಟೆ ಹೊತ್ತಿಗೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಮಳೆ ಆರಂಭವಾಗಿದ್ದು, ಶಾಂತಿನಗರ, ಕಾರ್ಪೊರೇಷನ್, ರಿಚ್ಮಂಡ್ ಸರ್ಕಲ್, ಕೆ.ಆರ್.ಮಾರ್ಕೆಟ್, ಮೆಜೆಸ್ಟಿಕ್ಸೇರಿದಂತೆ ಹಲವೆಡೆ ಮಳೆಯಾಗಿದೆ. ಅಂತೆಯೇ ಭಾರಿ ಗಾಳಿಯಿಂದಾಗಿ ಮೋಡಗಳಲ್ಲಿಯೂ ಚಲನೆ ಕಂಡುಬಂದಿದ್ದು, ಮಳೆ ಮೋಡಗಳು ಈಶಾನ್ಯ ಬೆಂಗಳೂರಿನಿಂದ ದಕ್ಷಿಣದತ್ತ ಚಲಿಸುತ್ತಿವೆ. ಪರಿಣಾಮ ಹಲಸೂರು, ಇಂದಿರಾನಗರ, ಬನಶಂಕರಿ, ಜಯನಗರದಲ್ಲೂ ಮಳೆಯಾಗುತ್ತಿದೆ ಎಂದು ತಿಳಿದುಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾಪಮಾನವು ಈಗಾಗಲೇ 40 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ತಾಪಮಾನ ಹೆಚ್ಚಳಾಗುತ್ತಿರುವ ಹಿನ್ನೆಲೆಯಲ್ಲಿ ಹೀಟ್ ಸ್ಟ್ರೋಕ್ ಬಗ್ಗೆ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಬೇಸಿಗೆ ಶುರುವಾಗಿದ್ದು, ನಗರದಲ್ಲಿ ತಾಪಮಾನದಲ್ಲಿ ಏರಿಕೆ ಕಂಡು ಬಂದಿದೆ. ಬಿರು ಬಿಸಿಲಿಗೆ ಜನ ಬಸವಳಿದು ಹೋಗಿದ್ದಾರೆ. ಬಿಸಿಲಿನ ಝಳ ಶಿಶುಗಳು, ವಯಸ್ಸಾದವರು, ಮಕ್ಕಳು, ಗರ್ಭೀಣಿಯರಿಗೆ, ಬೀದಿಬದಿಯಲ್ಲಿ ವ್ಯಾಪಾರ ಮಾಡುವವರಿಗೆ, ಬಿಸಿಲಲ್ಲಿ ಕೂಲಿ ಕೆಲಸ ಮಾಡುವ ಬಡ ಮತ್ತು ಸಾಮಾನ್ಯ ವರ್ಗದವರಿಗೆ, ವಿಶೇಷ ಚೇತನ ವ್ಯಕ್ತಿಗಳಿಗೆ, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಸಾಕಷ್ಟು ಕಾಡುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾಪಮಾನವು ಈಗಾಗಲೇ 40 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ತಾಪಮಾನ ಹೆಚ್ಚಳಾಗುತ್ತಿರುವ ಹಿನ್ನೆಲೆಯಲ್ಲಿ ಹೀಟ್ ಸ್ಟ್ರೋಕ್ ಬಗ್ಗೆ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.
ತಕ್ಷಣದ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು, ಅಸ್ತಿತ್ವದಲ್ಲಿರುವ ಕೆಲವು ಸೌಲಭ್ಯಗಳನ್ನು ಚಿಕಿತ್ಸಾ ಕೊಠಡಿಗಳಾಗಿ ಪರಿವರ್ತಿಸಲು ಮುಂದಾಗಿದೆ. ಈ ಕೊಠಡಿಗಳಲ್ಲಿ ಅಗತ್ಯ ಔಷಧಗಳು, ಫ್ಯಾನ್‌ಗಳನ್ನು ಅಳವಡಿಸಲಾಗುತ್ತಿದೆ.
ಪರಿಸ್ಥಿತಿ ಎದುರಿಸಲು ಸಿದ್ಧರಾಗಿರುವಂತೆ ತಜ್ಞ ವೈದ್ಯರಿಗೆ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆಗಳನ್ನು ನೀಡಿದೆ. ಶೀಘ್ರದಲ್ಲೇ ತಾಲ್ಲೂಕು ಆರೋಗ್ಯಾಧಿಕಾರಿಗಳೊಂದಿಗೆ ಸಭೆ ನಡೆಸುವ ಸಾಧ್ಯತೆಗಳಿವೆ ಎಂದು ಆರೋಗ್ಯಾಧಿಕಾರಿಯೊಬ್ಬರು ಹೇಳಿದ್ದಾರೆ.
ರಾಜ್ಯದಲ್ಲಿ ಈವರೆಗೂ ಹೀಟ್ ಸ್ಟ್ರೋಕ್ ಪ್ರಕರಣಗಳು ವರದಿಯಾಗಿಲ್ಲ. ತಾಪಮಾನ 40 ಡಿಗ್ರಿ ತಲುಪಿದ ಸಂದರ್ಭದಲ್ಲಿ ಪ್ರಕರಣಗಳು ವರದಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ರಾಜ್ಯದವಲ್ಲಿ ಕಳೆದ ವರ್ಷ 6000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಹಿಂದ ಆರೋಗ್ಯ ಇಲಾಖೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿತ್ತು. ಮಧ್ಯಾಹ್ನ 12-3 ಗಂಟೆ ವರೆಗೆ ಹೊರಗಿನ ಚಟುವಟಿಕೆಗಳನ್ನು ನಿಯಂತ್ರಿಸುವಂತೆ ಸಲಹೆ ನೀಡಿತ್ತು.