ಜನನ ಮರಣ ಪ್ರಮಾಣ ಪತ್ರ ಈಗ ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಲಭ್ಯ

ಗ್ರಾಮೀಣ ಪ್ರದೇಶದಲ್ಲಿ ಜನನ ಹಾಗೂ ಮರಣ ನೋಂದಣಿ ಪದ್ಧತಿಯನ್ನು ಬಲಪಡಿಸಲು ಹಾಗೂ 30 ದಿನಗಳ ಒಳಗೆ ಜನನ-ಮರಣ ಘಟನೆಗಳನ್ನು ನೋಂದಾಯಿಸುವ ಸಲುವಾಗಿ ಗ್ರಾಮ ಪಂಚಾಯತಿ ಕಾರ್ಯದರ್ಶಿಗಳನ್ನು ಜನನ, ಮರಣ ಉಪ ನೋಂದಣಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದ್ದು, ಜುಲೈ 1ರಿಂದ ಜಾರಿಗೆ ಬರುವಂತೆ ಗ್ರಾಮ ಪಂಚಾಯತಿಗಳಲ್ಲಿ ನೋಂದಣಿ ಪ್ರಕ್ರಿಯೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಪೂರ್ವಭಾವಿಯಾಗಿ ಎಲ್ಲಾ ಜಿಲ್ಲಾ ಪಂಚಾಯತಿಗಳಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿಗಳು ಹಾಗೂ ಜನನ, ಮರಣ ಉಪ ನೋಂದಣಾಧಿಕಾರಿಗಳು ಮತ್ತು ಗ್ರಾಮ ಪಂಚಾಯತಿ ಡೇಟಾ ಎಂಟ್ರಿ ಆಪರೇಟರ್‌ಗಳಿಗೆ ಜನನ, ಮರಣ ನೋಂದಣಿಗೆ ಸಂಬಂಧಿಸಿದ ಅಧಿನಿಯಮ ಹಾಗೂ ನಿಯಮಗಳು ಮತ್ತು ನೋಂದಣಿಗೆ ಬಳಸಲಾಗುತ್ತಿರುವ ಇ-ಜನ್ಮ ತಂತ್ರಾಂಶದ ಬಗ್ಗೆ ತರಬೇತಿಯನ್ನು ನೀಡಲಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಘಟಿಸುವ ಜನನ, ಮರಣ ಘಟನೆಗಳು ಸಂಭವಿಸಿದ 21 ದಿನಗಳೊಳಗೆ ಜನನ, ಮರಣ ಘಟನೆಗಳನ್ನು ನೋಂದಣಿ ಮಾಡಿದ ಪ್ರಸಂಗಗಳಲ್ಲಿ ಉಚಿತವಾಗಿ ಪ್ರಮಾಣ ಪತ್ರವನ್ನು ವಿತರಿಸಲಾಗುವುದು, 21 ದಿನಗಳ ತರುವಾಯ ಮತ್ತು 30 ದಿನಗಳ ಒಳಗಿನ ಘಟನೆಗಳನ್ನು ನಿಯಮಗಳಂತೆ 2ರೂ. ತಡೆ ಶುಲ್ಕ ಪಡೆದು ನೋಂದಾಯಿಸಲಾಗುವುದು, 30 ದಿನಗಳ ತರುವಾಯ ಒಂದು ವರ್ಷದೊಳಗೆ ವರದಿಯಾಗುವ ಜನನ, ಮರಣಗಳನ್ನು ತಹಶೀಲ್ದಾರರ ಲಿಖಿತ ಅನುಮತಿಯೊಂದಿಗೆ 5 ರೂ. ತಡೆ ಶುಲ್ಕ ಪಡೆದು ನೋಂದಾಯಿಸಲಾಗುವುದು.

ಒಂದು ವರ್ಷ ನಂತರ ವರದಿಯಾಗುವ ಜನನ, ಮರಣ ಘಟನೆಗಳಿಗೆ ವಿಳಂಬ ನೋಂದಣಿ ಮಾಡಲು ಮೊದಲನೇ ವರ್ಗದ ದಂಡಾಧಿಕಾರಿ ಅಥವಾ ಮಹಾ ಪ್ರಾಂತ ದಂಡಾಧಿಕಾರಿ (Presidency Magistrate) ಅವರ ಆದೇಶದೊಂದಿಗೆ 10 ರೂ. ತಡೆ ಶುಲ್ಕ ಪಡೆದು ನೋಂದಾವಣೆ ಮಾಡಲಾಗುವುದು ಎಂದೂ ಸಚಿವ ಪ್ರಿಯಾಂಕ್‌ ಖರ್ಗೆ ಮಾಹಿತಿ ನೀಡಿದ್ದಾರೆ.

ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಈಗ 72 ಸೇವೆಗಳು ಲಭ್ಯವಿದ್ದು, ಜನನ, ಮರಣ ನೋಂದಣಿ 73ನೆ ಸೇವೆಯಾಗಿ ಸೇರ್ಪಡೆಗೊಳ್ಳುತ್ತಿದೆ. ಇದೂ ಸೇರಿ ಒಟ್ಟು 9 ಸೇವೆಗಳನ್ನು ಜನನ, ಮರಣ ನೋಂದಣಿಗೆ ಸೇರಿದಂತೆ ಒದಗಿಸಲಾಗುತ್ತಿದೆ. ಜನನ ನೋಂದಣಿ, ಜನನ ಪ್ರಮಾಣ ಪತ್ರ ತಿದ್ದುಪಡಿ, ಜನನ ಪ್ರಮಾಣ ಪತ್ರ ವಿತರಣೆ, ಮಗುವಿನ ಹೆಸರು ಸೇರ್ಪಡೆ, ನಿರ್ಜೀವ ಜನನ ನೋಂದಣಿ, ನಿರ್ಜೀವ ಜನನ ಪ್ರಮಾಣ ಪತ್ರ ವಿತರಣೆ, ಮರಣ ನೋಂದಣಿ, ಮರಣ ಪ್ರಮಾಣ ಪತ್ರ ತಿದ್ದುಪಡಿ ಹಾಗೂ ಮರಣ ಪ್ರಮಾಣ ಪತ್ರ ವಿತರಣೆ ಸೇವೆಗಳನ್ನು ಬಾಪೂಜಿ ಸೇವಾ ಕೇಂದ್ರದಲ್ಲಿ ಒದಗಿಸಲಾಗುವುದು ಎಂದೂ ಸಚಿವರು ತಿಳಿಸಿದ್ದಾರೆ.

ಜನನ, ಮರಣ ನೋಂದಣಿ ಸಂಬಂಧದಲ್ಲಿ ಸಂದೇಹ/ಸ್ಪಷ್ಟೀಕರಣ ಅವಶ್ಯಕತೆಯಿದ್ದಲ್ಲಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿ ಹಾಗೂ ಜನನ, ಮರಣಗಳ ಮುಖ್ಯ ನೋಂದಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಹಾಗೂ ಇ-ಮೇಲ್‌ http://crbdkar@gmail.com/ejanmahelpdesk@gmail.com ಮತ್ತು ಇ-ಜನ್ಮ ಸಹಾಯವಾಣಿ 1800-425-6578 ಸಂಖ್ಯೆಗೆ ಸಂಪರ್ಕಿಸಿಯೂ ಮಾಹಿತಿ ಪಡೆಯಬಹುದಾಗಿದೆ ಎಂದೂ ಸಚಿವರು ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಇನ್ನು ಮುಂದೆ ಜನನ – ಮರಣ ಉಪ ನೋಂದಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಈ ಕುರಿತು ಜನನ – ಮರಣಗಳ ಮುಖ್ಯ ನೋಂದಣಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದು, ಪಂಚಾಯಿತಿ ವ್ಯಾಪ್ತಿಯಲ್ಲಿ ಜನನ – ಮರಣಗಳಾದ 21 ದಿನಗಳ ಒಳಗೆ ನೋಂದಣಿ ಮಾಡಿಕೊಂಡು ಉಚಿತವಾಗಿ ಪ್ರಮಾಣ ಪತ್ರ ವಿತರಿಸಬೇಕು. 21 ದಿನಗಳ ನಂತರ ಮಾಹಿತಿ ನೀಡುವ ಪ್ರಕರಣಗಳಲ್ಲಿ ₹2 ಶುಲ್ಕ ಪಡೆದು ನೋಂದಣಿ ಮಾಡಬೇಕು. 30 ದಿನಗಳ ತರುವಾಯ ಕಾರ್ಯದರ್ಶಿಗಳು ನೋಂದಣಿ ಮಾಡಬಾರದು ಎಂದು ಸೂಚಿಸಿದೆ.

ಜನನ- ಮರಣಗಳು ನಡೆದು 30 ದಿನಗಳ ತರುವಾಯ ಮಾಹಿತಿ ನೀಡುವ ಜನನ-ಮರಣಗಳ ನೋಂದಣಿ ಅಧಿಕಾರವನ್ನು ಆಯಾ ಗ್ರಾಮಗಳ ಗ್ರಾಮ ಆಡಳಿತ ಅಧಿಕಾರಿಗೆ ನೀಡಲಾಗಿದೆ. ಜನರು ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಬೇಕು. ತಹಶೀಲ್ದಾರ್‌ ಅವರ ಲಿಖಿತ ಅನುಮತಿ ಪಡೆದು ನೋಂದಣಿ ಮಾಡಬೇಕು ಎಂದು ಸೂಚಿಸಲಾಗಿದೆ.
#BirthandDeathCertificate

Spread positive news

Leave a Reply

Your email address will not be published. Required fields are marked *