ಮುಂಗಾರು ಬೆಳೆ ನಷ್ಟ! ಈ ಸಂಖ್ಯೆಗೆ ಕರೆ ಈಗಲೇ ಮಾಡಿ ನೋಂದಾಯಿಸಿ

ಮುಂಗಾರು ಮಳೆಯ ಕೊರತೆ ಮತ್ತು ಚಂಡಮಾರುತದಿಂದ ಸುರಿದ ಮಳೆಯಿಂದಾಗಿ ರೈತರಿಗೆ ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟವಾಗಿದೆ. ಆದ್ದರಿಂದ ಬೆಳೆ ವಿಮೆ ಮಾಡಿಸಿರುವ ರೈತರಿಗೆ ಪರಿಹಾರದ ಬಗ್ಗೆ ಮಾಹಿತಿ ನೀಡಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು 60 ಸಾವಿರ ಹೇಕ್ಟರ್‌ಗಳಲ್ಲಿ ಭತ್ತ ನಾಟಿಯಾಗಿರುತ್ತದೆ. ಭತ್ತವು ಮುಖ್ಯವಾಗಿ ಗಂಗಾವತಿ, ಕಾರಟಗಿ ಮತ್ತು ಕೊಪ್ಪಳ ತಾಲ್ಲೂಕಿನ ಹಿಟ್ನಾಳ ಹೋಬಳಿ ಭಾಗದಲ್ಲಿ ಬೆಳೆಯಲಾಗುತ್ತಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬೆಳೆ ಕಟಾವಿನ ನಂತರ ಜಮೀನಿನಲ್ಲಿ ಒಣಗಲು ಬಿಟ್ಟ ಸಂದರ್ಭದಲ್ಲಿ ಕಟಾವು ಮಾಡಿದ 2 ವಾರದೊಳಗಾಗಿ ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಷ್ಟವಾದರೆ ಭತ್ತ ಬೆಳೆಯ ಬೆಳೆವಿಮೆ ನೋಂದಾಯಿಸಿರುವ ಎಲ್ಲಾ ರೈತರು ಬೆಳೆ ಹಾನಿ ಕುರಿತು ವಿಮೆ ಕಂಪನಿಗೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ.

 

ಪ್ಯೂಚರ್ ಜನರಲಿ ಇಂಡಿಯಾ ಇನ್ಸೂರೆನ್ಸ್ ಕಂಪನಿಯ ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ 18002677983ಯನ್ನು ದೂರು ದಾಖಲಿಸಲು, ಮಾಹಿತಿ ನೀಡಲು ಸಂಪರ್ಕಿಸಬಹುದು. ವಿಮಾ ಸಂಸ್ಥೆಯ ಕಚೇರಿಗಳಿಗೆ ಅಥವಾ ಕೃಷಿ ತೋಟಗಾರಿಕೆ ಇಲಾಖೆಗೆ ತಕ್ಷಣ ಮಾಹಿತಿ ನೀಡಬಹುದು. ಎಫ್‌ಡಿಐ ಸಂಖ್ಯೆ ಕಡ್ಡಾಯ; ಬೆಳೆ ವಿಮೆ ನೋಂದಣಿಗೆ ಕನಿಷ್ಟ ಬೆಂಬಲ ಬೆಲೆಯಲ್ಲಿ, ಕೃಷಿ ಉತ್ಪನ್ನ ಮಾರಾಟ ಮಾಡಲು ಬೆಳೆ ಸಾಲ ಪಡೆಯಲು, ಬೆಳೆ ಹಾನಿಗೆ ಪರಿಹಾರ ಪಡೆಯಲು ಹಾಗೂ ಇತರೆ ಸೌಲಭ್ಯ ಪಡೆಯಲು ರೈತರ ಗುರುತಿನ ಸಂಖ್ಯೆ (ಎಫ್‌ಐಡಿ) ಕಡ್ಡಾಯವಾಗಿದೆ ಎಂದು ರೈತರಿಗೆ ಮಾಹಿತಿ ನೀಡಲಾಗಿದೆ. ಎಫ್‌ಐಡಿ (ರೈತರ ಗುರುತಿನ ಸಂಖ್ಯೆ) ಮಾಡಿಸದ ರೈತರು ಕೂಡಲೇ ಕೃಷಿ ಅಥವಾ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ತಮ್ಮ ಆಧಾರ್ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್‌ಬುಕ್, ಮೊಬೈಲ್ ಸಂಖ್ಯೆಯೊಂದಿಗೆ ತೆರಳಿ ನೋಂದಣಿ ಮಾಡಿಸಿ ಎಫ್‌ಐಡಿ ಸಂಖ್ಯೆ ಪಡೆಯಬೇಕು.

 

ದಾಖಲಿಸಿದ ಜಮೀನಿನ ವಿಸ್ತೀರ್ಣಗಳಿಗೆ ಮಾತ್ರ ಸರ್ಕಾರದ ಪರಿಹಾರ ಸೌಲಭ್ಯ ದೊರೆಯುವುದರಿಂದ ರೈತ ಬಾಂಧವರು ತಾವು ಹೊಂದಿರುವ ಎಲ್ಲಾ ಜಮೀನಿನ ಸರ್ವೆ ನಂಬರ್‌ಗಳನ್ನು, ವಿಸ್ತೀರ್ಣಗಳನ್ನು ಕೂಡಲೇ ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ/ ತೋಟಗಾರಿಕೆ ಇಲಾಖೆ ಕಚೇರಿಗೆ ಸಂಪರ್ಕಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರು ಮನವಿ ಮಾಡಿದ್ದಾರೆ. ನವೆಂಬರ್ 15ರಂದು ಕೊಪ್ಪಳ ತಾಲೂಕಿನಲ್ಲಿ ಬೆಳೆ ಹಾನಿ ಮತ್ತು ಬರ ಪರಿಹಾರ ಕುರಿತು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ನಡೆಯಲಿದೆ. ಅದೇ ರೀತಿ ಗಂಗಾವತಿ, ಕನಕಗಿರಿ ಮತ್ತು ಕಾರಟಗಿ ತಾಲೂಕುಗಳಲ್ಲಿನ ಬೆಳೆ ಹಾನಿ ಮತ್ತು ಬರ ಪರಿಹಾರ ಕುರಿತ ಸಭೆಯು ಅದೇ ದಿನ ಮಧ್ಯಾಹ್ನ 3 ಗಂಟೆಗೆ ಗಂಗಾವತಿ ತಾಲೂಕು ಪಂಚಾಯತ್ ಕಚೇರಿಯ ಮಂಥನ ಸಭಾಂಗಣದಲ್ಲಿ ನಡೆಯಲಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

 

ಹಿಂಗಾರು ಬೆಳೆಗಳಿಗೆ ಸಲಹೆ; ಮುಂಗಾರು ಮಳೆ ಕೈ ಕೊಟ್ಟಿದೆ. ಆದರೆ ಹಿಂಗಾರು ಮಳೆಯಾಗುತ್ತಿದೆ. ಬಿತ್ತನೆ ಮಾಡಿದ ಬೆಳೆಗಳಿಗೆ ಒಂದೆರಡು ದಿನದಿಂದಾಗುತ್ತಿರುವ ಮಳೆಯಿಂದ ಜೀವ ಬಂದಿದ್ದು, ಎಲ್ಲ ಅಧಿಕಾರಿಗಳು ತಮ್ಮ ತಾಲೂಕುಗಳಲ್ಲಿ ಹಿಂಗಾರು ಬೆಳೆಗಳನ್ನು ಕಾಪಾಡುವ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ. ಹಿಂಗಾರು ಬೆಳೆಗಳ ಬಗ್ಗೆ ಎಲ್ಲ ತಾಲೂಕಿನ ಸಹಾಯಕ ನಿರ್ದೇಶಕರು 4-5 ಬೆಳೆಗಳ ಬಗ್ಗೆ ತರಬೇತಿ ಹಮ್ಮಿಕೊಂಡು ವಿಜ್ಞಾನಿಗಳನ್ನು ಕರೆಸಿ ಮಾಹಿತಿ ಕೊಡಿಸಬೇಕು. ಗಂಗಾವತಿ ಭಾಗದಲ್ಲಿ ಎರಡನೇ ಬೆಳೆಯಾಗಿ ಭತ್ತ ಬೆಳೆಯದಂತೆ ರೈತರಿಗೆ ಅರಿವು ಮೂಡಿಸಬೇಕು. ಇದಕ್ಕಾಗಿ ಕರ ಪತ್ರಗಳನ್ನು ಮುದ್ರಿಸಿ ಹಂಚಬೇಕೆಂದು ತಿಳಿಸಿದರು.

Spread positive news

Leave a Reply

Your email address will not be published. Required fields are marked *