ಕಡಿಮೆ ಸಮಯದಲ್ಲಿ ಕಾಂಪೋಸ್ಟ್ ಹೇಗೆ ತಯಾರಿಸಬೇಕು?

ಕಡಿಮೆ ಸಮಯದಲ್ಲಿ ಕಾಂಪೋಸ್ಟ್ ತಯಾರಿಸುವ ವಿಧಾನ ಬೇಕೇ?
ಬನ್ನಿ ರೈತರೇ ಭೂಮಿಯ ಫಲವತ್ತತೆ ಹೆಚ್ಚಿಸುವ ಕಾಂಪೋಸ್ಟ್ ಬಗ್ಗೆ ಮಾಹಿತಿ ಪಡೆಯೋಣ.

ರೈತ ಮಿತ್ರರೇ ಕೃಷಿಯಲ್ಲಿ ಹೆಚ್ಚಿನ ಆದಾಯ ಪಡೆಯಲು ಹಾಗೂ ಮಣ್ಣಿನ ಫಲವತ್ತತೆ ಹೆಚ್ಚಿಸುವ ನಿಟ್ಟಿನಲ್ಲಿ ಸಾವಯವ ಗೊಬ್ಬರ ತಯಾರಿಕೆ ಬಹಳ ಮುಖ್ಯ ಅವಶ್ಯಕ. ಹಾಗೂ ಗೊಬ್ಬರ ಮಣ್ಣಿಗೆ ಅತಿ ಅವಶ್ಯಕ ಆಗಿದೆ. ಗೊಬ್ಬರವನ್ನು ಮಣ್ಣಿಗೆ ಹಾಕುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಿ ಬೆಳೆಗಳಿಗೆ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಗೂ ರೈತರು ಹೆಚ್ಚಿನ ಪ್ರಮಾಣದಲ್ಲಿ ಈ ಸಾವಯವ ಗೊಬ್ಬರ ತಯಾರಿಕೆ ಹೆಚ್ಚಿನ ಆದ್ಯತೆ ನೀಡಬೇಕು.

ಕಾಂಪೋಸ್ಟ್ ಗೊಬ್ಬರ ಎಂದರೇನು?
ನಾವು ಸಗಣಿಯನ್ನೇ ಗೊಬ್ಬರ ಎಂದು ತಿಳಿದುಕೊಂಡಿದ್ದೇವೆ. ಆದರೆ ಸಗಣಿಯೇ ಗೊಬ್ಬರವಲ್ಲ. ಸಗಣಿ ಎಂಬುದು ಗೊಬ್ಬರ ಮಾಡಲು ಬಳಸುವ ಕಚ್ಚಾವಸ್ತು, ಆಕ್ಟಿವೇಟರ್, ಪ್ರಮೋಟರ್,ಕೇಟಲಿಸ್ಟ್ ಮಾತ್ರ ಎಂದು ಅರ್ಥ ಮಾಡಿಕೊಳ್ಳಬೇಕು. ಸಗಣಿಯನ್ನು ಗೊಬ್ಬರ ಮಾಡದೇ, ಭೂಮಿಯ ಮೇಲೆ ನೇರವಾಗಿ ಬಿಸಿಲು ಬೀಳುವ ಕಡೆ ಗುಡ್ಡೆ ಹಾಕುವುದರಿಂದ 30 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿನ ತಾಪಮಾನ ಇದ್ದಾಗ ಸಗಣಿ ರಾಶಿಯಿಂದ ಸಾರಜನಕ ಮತ್ತು ಇಂಗಾಲದ ಅಂಶ ಆವಿಯಾಗಿ ಹೋಗುತ್ತದೆ. ಗೊಬ್ಬರವನ್ನು ಕಾಂಪೋಸ್ಟ್ ಮಾಡಿ ಹಾಕದೇ ಇಂತಹ ಅರೆಬೆಂದ ಗೊಬ್ಬರ(undigested manure)ಹಾಕುವುದರಿಂದ ನಮ್ಮ ಹಣ,ಶ್ರಮ ನಷ್ಟವಾಗುವುದರ ಜೊತೆಗೆ ಭೂಮಿಯ ಮತ್ತು ಬೆಳೆಯ ಆರೋಗ್ಯ ಕೂಡ ಕೆಡುತ್ತದೆ. ಗೊಬ್ಬರ ಕೊಳೆಯಬಾರದು, ಕಳಿಯಬೇಕು. ಹಣ್ಣು ಕೊಳೆತರೆ ತಿನ್ನಲಾಗುವುದಿಲ್ಲ. ಕಳಿತ ಬಾಳೆಹಣ್ಣು ಅನ್ನುವುದು ಅದಕ್ಕೆ,ಗೊಬ್ಬರವು ಸಹ ಹಾಗೆಯೇ.

ಮುಖ್ಯವಾಗಿ ರೈತರು ಇಲ್ಲಿ ಗಮನಿಸಬೇಕಾದ ಅಂಶವೆಂದರೆ ತಿಪ್ಪೆ ಅಥವಾ ಗುಡ್ಡೆಯಲ್ಲಿ ಹಾಕಿರುವ ಸಗಣಿ ರಾಶಿ ಗಬ್ಬು ನಾರುತ್ತಿದ್ದಾರೆ ಅದನ್ನು ಯಾವುದೇ ಕಾರಣಕ್ಕೂ ಭೂಮಿ ಅಥವಾ ಬೆಳೆಗಳಿಗೆ ನೀಡಬಾರದು( Anything that smells bad is not good for Soil or Crop/Plant).

ಗೊಬ್ಬರದ ಗುಣಮಟ್ಟ ತಿಳಿಯುವ ವಿಧಾನ –
ಚೆನ್ನಾಗಿ ಕಳೆತ ಕಾಂಪೋಸ್ಟ್ ಗೊಬ್ಬರ ಉಪಯೋಗ ಮಾಡುವ ಮುನ್ನ ಅದರ ಗುಣಮಟ್ಟ ತಿಳಿಯಲು ಒಂದಷ್ಟು ಪ್ರಮಾಣದ ಗೊಬ್ಬರವನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟು ಚೀಲದ ಬಾಯಿ ಕಟ್ಟಿಡಬೇಕು. ಒಂದು ವಾರಗಳ ನಂತರ ಗೊಬ್ಬರದಿಂದ ಯಾವುದೇ ರೀತಿ ದುರ್ವಾಸನೆ/ಕೆಟ್ಟ ವಾಸನೆ ಬಾರದೆ ಇದ್ದರೆ ಅದು ಭೂಮಿಗೆ ಸೇರಿಸಲು ಮತ್ತು ಬೆಳೆಗಳಿಗೆ ನೀಡಲು ಯೋಗ್ಯವಾಗಿದೆ ಎಂದು ತಿಳಿಯುವುದು. ಗೊಬ್ಬರ ಮಳೆ ಬಿದ್ದಾಗ ಬರುವ ಮಣ್ಣಿನ ವಾಸನೆ ರೀತಿ ಘಮಗುಟ್ಟಬೇಕು. ಕೆಟ್ಟ/ಕೊಳೆತ ರೀತಿಯ ವಾಸನೆ ಬಂದರೆ ಗಾಳಿ ಸರಿಯಾಗಿ ಆಡದೆ Hydrosulphide ಅನಿಲದಿಂದ ದುರ್ವಾಸನೆ ಬೀರುತ್ತಿರುತ್ತದೆ. ಗೊಬ್ಬರದ ರಾಶಿಗೆ ಗಾಳಿಯಾಡುವಂತೆ ಮಾಡಬೇಕು. ಬೆವರು ಅಥವಾ ಮೂತ್ರದ ರೀತಿ ಘಾಟು ವಾಸನೆ ಇದ್ದರೆ ಅದು ಸಾರಾಜನಕ ಜಾಸ್ತಿಯಾಗಿ Ammonia ಅನಿಲ ಕಾರಣದಿಂದ,ಆಗ ಗೊಬ್ಬರದ ರಾಶಿಗೆ ಇಂಗಾಲ ಪ್ರಮಾಣ ಸೇರಿಸಲು ಒಣ ತ್ಯಾಜ್ಯ ಸೇರಿಸಬೇಕು.

ಗೊಬ್ಬರ ಮತ್ತು ಕಾಂಪೋಸ್ಟ್ ಗೊಬ್ಬರ ನಡುವೆ ಇರುವ ವ್ಯತ್ಯಾಸವೇನು?
• ಯಾವುದೇ ಪ್ರಾಣಿಯ ಘನ ರೂಪದ ವಿಸರ್ಜನೆಯನ್ನು (Animal waste/Dung) ಗೊಬ್ಬರ(Manure) ಎಂದು ಕರೆಯಲಾಗುತ್ತದೆ.
ಪ್ರಾಣಿಯ ಗೊಬ್ಬರವನ್ನು ನೇರವಾಗಿ ಭೂಮಿಗೆ ಸೇರಿಸಲಾಗುವುದಿಲ್ಲ,ಭೂಮಿ ಅಥವಾ ಬೆಳೆಗಳಿಗೆ ಚೆನ್ನಾಗಿ ಕಳೆತ ಗೊಬ್ಬರ(Well Decomposed Farm yard manure) ಕೊಡಬೇಕು.

ಕಳೆತ(Decompose) ಮತ್ತು ಕೊಳೆತ(foul smell) ನಡುವಿನ ವ್ಯತ್ಯಾಸವೇನು?
ಯಾವುದೇ ಪ್ರಾಣಿಯ ಉದರದಲ್ಲಿ (ಹೊಟ್ಟೆ) ಅದು ಸೇವಿಸುವ ಆಹಾರ ಪದಾರ್ಥದಲ್ಲಿರುವ ಪೋಷಕಾಂಶಗಳು ಶೇ 30% ಮಾತ್ರ ವಿಘಟನೆಯಾಗಿ ವಿಸರ್ಜಿಸಲ್ಪಟ್ಟಿರುತ್ತದೆ. ಉಳಿದ ಶೇ 70% ವಿಘಟನೆ ಸೂಕ್ಷ್ಷ್ಮಾಣುಜೀವಿಗಳ ಸಹಾಯದಿಂದ ಆಗುತ್ತದೆ. ಯಾವುದೇ ಪ್ರಾಣಿಯ ವಿಸರ್ಜನೆ ಅಥವಾ ಸಗಣಿಯಲ್ಲಿರುವ ಪದಾರ್ಥ ಶೇ 30% ಮಾತ್ರ ಕಳಿದಿರುತ್ತದೆ,ಉಳಿಕೆ ಶೇ 70% ಪದಾರ್ಥ ಕಳಿಯಲು/ಮಾಗಲು (Decompose) ಸೂಕ್ಷ್ಷ್ಮಾಣುಜೀವಿಗಳ
ನೆರವಿನಿಂದ ಸ್ವಭಾವಿಕೆ ಕ್ರಿಯೆ ಮೂಲಕ ಆಗುತ್ತದೆ. ಹೀಗೆ ಆಗುವ ಸ್ವಾಭಾವಿಕ ಕ್ರಿಯೆಯ ತದ್ರೂಪಿ ಕ್ರಮದ ಮೂಲಕ ಮಾಡುವುದನ್ನು ಕಾಂಪೋಸ್ಟ್ ಗೊಬ್ಬರ ಎಂದು ಕರೆಯಲಾಗುತ್ತದೆ.
ಕಾಂಪೋಸ್ಟ್ ಗೊಬ್ಬರದ ಮೂಲಕ ಬೆಳೆಗಳಿಗೆ ಬೇಕಾಗುವ ಪೋಷಕಾಂಶ ಪೂರೈಸಲು ಸಾಧ್ಯ.

ಸಗಣಿ ನೇರವಾಗಿ ಭೂಮಿಯ ಮೇಲೆ ಹಾಕುವುದರಿಂದ ಆಗುವ ಪರಿಣಾಮಗಳು –

• ಸಗಣಿಯಲ್ಲಿರುವ ವಿಷ ಅನಿಲಗಳಾದ Hydrosulphide,Carbon monoxide, Methane ಬಿಡುಗಡೆಯಾಗಿ, ಇವುಗಳು ಬೆಳೆಯ ಬೇರು ಸುಡಲು ಕಾರಣವಾಗುತ್ತದೆ.
• ರೋಗಕಾರಕ ವೈರಸ್, ಬ್ಯಾಕ್ಟೀರಿಯಾ ಉತ್ಪತಿಯಾಗುತ್ತೆ.(Pathogens)
• ಸಗಣಿಯಲ್ಲಿರುವ ಕಳೆ ಬೀಜಗಳು ಮರು ಹುಟ್ಟು ಪಡೆಯುತ್ತೆ.
• ಸೂಕ್ತ ಸಾರಜನಕ:ಇಂಗಾಲ ಅನುಪಾತ(C:N) ಪ್ರಮಾಣ ದೊರೆಯದೇ,ಪೋಷಕಾಂಶ ದೊರೆಯುವುದಿಲ್ಲ.
• ಸಸ್ಯಗಳ ಬೆಳವಣಿಗೆಗೆ ಬೇಕಾದ ಎಲ್ಲಾ ಪೋಷಕಾಂಶಗಳನ್ನು ಒದಗಿಸುವುದು ಕಾಂಪೋಸ್ಟ್ ಗೊಬ್ಬರದಿಂದ ಮಾತ್ರ ಸಾಧ್ಯ.

ಒಂದು ಎಕರೆಗೆ ಬೇಕಾಗುವ ಕಾಂಪೋಸ್ಟ್ ಗೊಬ್ಬರದ ಪ್ರಮಾಣ ಎಷ್ಟು?

• ಯಾವುದೇ ಬೆಳೆಗೆ ಪ್ರತಿ 100 ಚದರಡಿ ಪ್ರದೇಶಕ್ಕೆ 20 ಕೆಜಿ ಕಾಂಪೋಸ್ಟ್ ಗೊಬ್ಬರ ಹಾಕಿ ಉತ್ತಮ ಬೆಳವಣಿಗೆ ಕಾಣಬಹುದು.

*33’*33’=1089 ಚದರಡಿ =1 ಗುಂಟೆ =200 ಕೆಜಿ.
*40 ಗುಂಟೆ *200 ಕೆಜಿ= 08 ಟನ್
*01 ಎಕರೆ ಪ್ರದೇಶಕ್ಕೆ 8 ಟನ್ ಕಾಂಪೋಸ್ಟ್ ಬಳಕೆ ಮಾಡುವುದರಿಂದ ಸಾರಜನಕ(N):120 ಕೆಜಿ,ರಂಜಕ(P):50 ಕೆಜಿ , ಪೊಟಾಷ್(K):80 ಕೆಜಿ ಒದಗಿಸಬಹುದು.

ಕಾಂಪೋಸ್ಟ್ ತೊಟ್ಟಿ ನಿರ್ಮಾಣ –

• ಪೂರ್ವ -ಪಶ್ಚಿಮಕ್ಕೆ: 6 ಅಡಿ ಅಗಲ. ಅಗಲ ಜಾಸ್ತಿ ಮಾಡಬಾರದು. ಗಾಳಿಯಾಡಲು ತೊಂದರೆಯಾಗುತ್ತದೆ.
• ಉತ್ತರ -ದಕ್ಷಿಣಕ್ಕೆ :10 ಅಡಿ ಉದ್ದ.ಉದ್ದ ನಿಮ್ಮ ಅನುಕೂಲಕ್ಕೆ ತಕ್ಕಂತೆ ಜಾಸ್ತಿ ಮಾಡಬಹುದು.
• ತೊಟ್ಟಿಯ ಎತ್ತರ :3 ಅಡಿ.
• ತೊಟ್ಟಿಯನ್ನು ಮಣ್ಣಿನ ಇಟ್ಟಿಗೆ, ಸಿಮೆಂಟ್ ಬ್ಲಾಕ್, ಕಲ್ಲು ಚಪ್ಪಡಿ(1.5’*4′ ಅಡಿ) ಬಳಸಿ ಕಟ್ಟಬಹುದು.
• ಗಾಳಿಯಾಡಲು ಸುತ್ತ ರಂದ್ರ ಬಿಡಬೇಕು.
• ತೊಟ್ಟಿಯ ತಳಭಾಗ ಕಾಂಕ್ರೀಟ್ ಮಾಡದೇ ಆಗೆಯೇ ಬಿಡಬೇಕು.ಸೂಕ್ಷ್ಮಜೀವಿಗಳು ಮಣ್ಣಿನ ಮೂಲಕ ಬರಲು ಅನುಕೂಲವಾಗುವಂತೆ ಮಣ್ಣಿನ ನೆಲವಿರಬೇಕು.
• 10’*6’*3′ ತೊಟ್ಟಿಯಲ್ಲಿ 90-120 ದಿನಗಳಲ್ಲಿ 2500 ಕೆಜಿ ಕಾಂಪೋಸ್ಟ್ ಗೊಬ್ಬರ ತಯಾರು ಮಾಡಬಹುದು.
ವರ್ಷಕ್ಕೆ 3 ಬಾರಿ ಒಂದು ತೊಟ್ಟಿಯಿಂದ 7.5 ಟನ್ ಕಾಂಪೋಸ್ಟ್ ತಯಾರಿಸಬಹುದು.ಇದು ಒಂದು ಎಕ್ರೆ ಪ್ರದೇಶಕ್ಕೆ ಒಂದು ವರ್ಷಕ್ಕೆ ಸಾಕಾಗುವ ಪ್ರಮಾಣ.

ಕಾಂಪೋಸ್ಟ್ ಮಾಡಲು ಬೇಕಾಗುವ ಪದಾರ್ಥ –
1)150 ಕೆಜಿ ಸಗಣಿ
(ಯಾವುದೇ ಸಸ್ಯಾಹಾರಿ ಪ್ರಾಣಿ/ಪಕ್ಷಿಗಳ ಸಗಣಿ/ಹಿಕ್ಕೆ ಬಳಸಬಹುದು.ರೈತರು ಹೆಚ್ಚಾಗಿ ಹಸು ಸಾಕಾಣಿಕೆ ಮಾಡುವುದರಿಂದ ಹಸುವಿನ ಸಗಣಿ ಬಳಕೆ ರೂಡಿಯಲ್ಲಿದೆ).
2)1350 ಕೆಜಿ ಕೃಷಿ ತ್ಯಾಜ್ಯ
(3 ಭಾಗ ಒಣ ತ್ಯಾಜ್ಯ :810 ಕೆಜಿ,2 ಭಾಗ ಹಸಿ ತ್ಯಾಜ್ಯ :540 ಕೆಜಿ ).
3)1500 ಕೆಜಿ ಚೌಳು ಇಲ್ಲದ ಮಣ್ಣು.

ಸಗಣಿ ಮತ್ತು ಹಸಿ ತ್ಯಾಜ್ಯ ಸಾರಾಜನಕ ಮೂಲ,ಒಣ ತ್ಯಾಜ್ಯ ಇಂಗಾಲ ಮೂಲ.

ಗೊಬ್ಬರದ ತೊಟ್ಟಿ ತುಂಬುವುದು ಹೇಗೆ?
ತೊಟ್ಟಿಯ ಪ್ರತಿ ಪದರದಲ್ಲಿ 27 ಕೆಜಿ ಒಣ ತ್ಯಾಜ್ಯ,18 ಕೆಜಿ ಹಸಿ ತ್ಯಾಜ್ಯ,5 ಕೆಜಿ ಸಗಣಿ(70 ಲೀಟರ್ ನೀರಿನಲ್ಲಿ ಕಲಸಿ),50 ಕೆಜಿ ಮಣ್ಣು ಈ ಪ್ರಕಾರ 30 ಪದರ ಹಾಕುವುದು. ಮೂವತ್ತನೇ ಪದರದ ಮೇಲೆ 4 ಇಂಚು ಮಣ್ಣು ಮುಚ್ಚಿ ಸಗಣಿಯಿಂದ ಸಾರಿಸುವುದು. 90 ರಿಂದ 120 ದಿನಗಳಲ್ಲಿ ಗೊಬ್ಬರ ತಯಾರಗುತ್ತದೆ,ಈ ಗೊಬ್ಬರವನ್ನು 01 ವರ್ಷ ಕಾಲ ಸಂಗ್ರಹಿಸಿ ಇಟ್ಟುಕೊಳ್ಳಬಹುದು.

ದೇಶದಲ್ಲಿ ಇನ್ನೂ ಮುಂದೆ ಒಂದೇ ಹೆಸರಿನಲ್ಲಿ ಗೊಬ್ಬರ ಸಿಗುತ್ತದೆ. ಇಲ್ಲಿ ರೈತರಿಗೆ ಎಷ್ಟು ಸಬ್ಸಿಡಿ ದೊರೆಯಲಿದೆ ನೋಡಿ

60 ವರ್ಷ ವಯಸ್ಸು ಮೇಲ್ಪಟ್ಟವರಿಗೆ ಸರ್ಕಾರದಿಂದ ಪ್ರತಿ ವರ್ಷ 15000ರೂಪಾಯಿ

Spread positive news

Leave a Reply

Your email address will not be published. Required fields are marked *