ಪ್ರಾಕೃತಿಕವಾಗಿ ನಿರ್ಮಾಣವಾದ ಭೂಮಿಯ ಮೇಲ್ಪದರಿಗೆ ಮಣ್ಣು ಎನ್ನುವರು. ರಾಸಾಯನಿಕ, ಭೌತಿಕ ಮತ್ತು ಜೈವಿಕ ಸಂರಚನೆಯಲ್ಲಿ ವ್ಯತ್ಯಾಸಗಳಿಂದಾಗಿ ಮಣ್ಣಿನಲ್ಲಿ ಹಲವಾರು ಬಗೆಯ ಅಂದರೆ, ಕಪ್ಪು ಕರ್ಲು, ಕೆಂಪು, ಬಿಳುಪು, ಕಟಕ, ಕೆಂಪು-ಮಸಾರಿ, ಕೇಸರಿ, ಬಿಳಿಯ, ಮಣ್ಣಿನಗರಸು, ಮಸಾರಿ ಹಿಟ್ಟಗರಸು, ಸುಣ್ಣದ ಹರಳುಳ್ಳ ಮೊರಡಿ, ಸವಳು ಭೂಮಿ ಹಾಗೂ ಚೌಗಿನ ಭೂಮಿ ಮುಂತಾದ ಪ್ರಕಾರಗಲಿವೆ. ಕೃಷಿಯಲ್ಲಿ ಮಣ್ಣಿನ ಗುಣಧರ್ಮಗಳನ್ನು ತಿಳಿಯಲು ಮಣ್ಣು ಪರೀಕ್ಷೆ ಅತ್ಯವಶ್ಯಕ. ಮಾದರಿ ಮಣ್ಣನ್ನು ಸಾಂಪ್ರದಾಯಿಕವಾಗಿ ಭೌತಿಕ, ರಾಸಾಯನಿಕ ಅಥವಾ ಜೈವಿಕ ಗುಣಧರ್ಮ ವಿಶ್ಲೇಷಣೆ ಮಾಡುವ ಪದ್ಧತಿಗಳನ್ನು ಮಣ್ಣು ಪರೀಕ್ಷೆ ಎಂದು ಕರೆಯುತ್ತಾರೆ.
ಮಣ್ಣು ಪರೀಕ್ಷೆಯ ಉದ್ದೇಶಗಳು
• ಮಣ್ಣಿನಲ್ಲಿರುವ ಪೋಷಕಾಂಶಗಳ ಲಭ್ಯತೆ ತಿಳಿಯಲು
• ಬೆಳೆಗಳಿಗೆ ಹಾಕುವ ಗೊಬ್ಬರಗಳ ಪ್ರಮಾಣ ನಿರ್ಧರಿಸಲು
• ಹುಳಿ, ಸವಳು ಮತ್ತು ಕ್ಷಾರ ಮಣ್ಣುಗಳ ಬಗ್ಗೆ ತಿಳಿಯಲು
• ಮಣ್ಣಿಗೆ ಸೂಕ್ತವಾದ ಬೆಳೆ ನಿರ್ಧರಿಸಲು
• ರಸಗೊಬ್ಬರದ ಖರ್ಚಿನಲ್ಲಿ ಉಳಿತಾಯ ಹಾಗೂ ಅಧಿಕ ಇಳುವರಿ ಪಡೆಯಲು
* ಮಣ್ಣು ಪರೀಕ್ಷೆಯ ಹಂತಗಳು
* ಮಣ್ಣಿನ ಮಾದರಿ ಸಂಗ್ರಹಣೆ
* ಮಣ್ಣು ಮಾದರಿ ವಿಶ್ಲೇಷಣೆ
• ಗೊಬ್ಬರಗಳ ಶಿಫಾರಸ್ಸು ಮತ್ತು ಸಲಹೆ
• ಹುಳಿ, ಚೌಳು ಮತ್ತು ಕ್ಷಾರ ಮಣ್ಣುಗಳ ಸುಧಾರಣೆ.
ಮಣ್ಣು ಮಾದರಿ ಸಂಗ್ರಹಣೆ
ಒಂದು ಹೆಕ್ಟರಿಗೆ ವಿಸ್ತೀರ್ಣದ ಕ್ಷೇತ್ರದ ಮೇಲ್ಮಣ್ಣು ಅಂದಾಜು 2000 ಟನ್ನಗಳಷ್ಟಿದ್ದು, ಒಂದು ಜಮೀನಿನ ಮಣ್ಣನ್ನು ಪರೀಕ್ಷೆಗೆ ಒಳಪಡಿಸಿದಾಗ ಆ ಜಮೀನಿನಲ್ಲಿರುವ ಎಲ್ಲಾ ಮಣ್ಣನ್ನು ಸಂಗ್ರಹಿಸುವುದು ಮತ್ತು ವಿಶ್ಲೇಷಣೆಗೆ ಒಳಪಡಿಸುವುದು ಕಷ್ಟಸಾಧ್ಯ. ಆದುದರಿಂದ ಆ ಜಮೀನಿನಲ್ಲಿ ಕೆಲವು ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಿಸುವುದು ಅವಶ್ಯಕ. ಆದರೆ ಹೀಗೆ ಸಂಗ್ರಹಿಸಿದ ಮಣ್ಣಿನ ಮಾದರಿಗಳು ನಿಜವಾದ ಜಮೀನಿನ ಪರಿಸ್ಥಿರಿಗಳನ್ನು ಪ್ರತಿನಿಧಿಸುವಂತಹ ಮಾದರಿಗಳಾಗಿರಬೇಕು.
ಮಣ್ಣಿನ ಮಾದರಿಗಳನ್ನು ಸಂಗ್ರಹಿಸುವ ವಿಧಾನ –
1. ಜಮೀನಿನಲ್ಲಿ ಮೊದಲು ತಿರುಗಾಡಿ ಭೂಮಿಯ ಇಳಿಜಾರು, ಬಣ್ಣ, ಕಣ ವಿನ್ಯಾಸ, ಬೆಳೆಗಳ ಪದ್ಧತಿ ಹಾಗೂ ಪೂರ್ವ ನಿರ್ವಹಣೆ ಪದ್ಧತಿಗಳಲ್ಲಿ ಇರುವ ವ್ಯತ್ಯಾಸವನ್ನು ಪರಿಶೀಲಿಸಿ ಏಕರೀತಿಯ ತುಂಡುಗಳಾಗಿ ವಿಂಗಡಿಸುವುದು.
2. ಪ್ರತಿ ಏಕರೀತಿಯ ತುಂಡುಗಳಿಂದ ಉಪಮಾದರಿ ಮಣ್ಣನ್ನು ತೆಗೆಯುವ ಸುಮಾರು 8-10 ಜಾಗಗಳನ್ನು ಗುರುತು ಹಾಕುವುದು.
3. ಮಣ್ಣಿನ ಮಾದಿರಯನ್ನು ತೆಗೆಯಲು ಗುದ್ದಲಿ, ಹಾರೆ ಬಳಸಬೇಕು.
4. ಬೈರಿಗೆ ಉಪಯೋಗಿಸದಿದ್ದರೆ, ಗುದ್ದಲಿಯಿಂದ ‘V’ ಆಕಾರದ ಗುಂಡಿಯನ್ನು ಶಿಫಾರಸ್ಸು ಮಾಡಿದ ಆಳದವರೆಗೆ ತೆಗೆಯುವುದು. ಗುಂಡಿಯಲ್ಲಿರುವ, ಮಣ್ಣನ್ನು ಗುಂಡಿಯಿಂದ ಹೊರಗಡೆ ತೆಗೆದು ಹಾಕುವುದು. ಗುಂಡಿಯ ಒಂದು ಪಕ್ಕದಲ್ಲಿ ಎರಡು ಅಂಗಲ ದಪ್ಪದ ಮಣ್ಣಿನ ಪದರವನ್ನು ಮೇಲಿಂದ ಗುಂಡಿಯ ತಳಭಾಗದವರೆಗೂ ಕತ್ತರಿಸಿ ತೆಗೆಯುವುದು. ಧಾನ್ಯದ ಬೆಳೆ, ಎಣ್ಣೆಕಾಳು, ಹೂವು, ತರಕಾರಿ, ಔಷಧೀಯ ಮತ್ತು ಸುಗಂಧ ಬೆಳೆಗಳಾಗಿದ್ದಲ್ಲಿ 9 ಅಂಗುಲ ಆಳದವರೆಗೆ, ಹಣ್ಣು ಮತ್ತು ತೋಟದ ಬೆಳೆಗಳಾಗಿದ್ದಲ್ಲಿ 0 ಯಿಂದ 12 ಅಂಗುಲ, 13 ರಿಂದ 24 ಅಂಗುಲ, 25 ರಿಂದ 36 ಅಂಗುಲಗಳಲ್ಲಿ ಬೇರೆ ಬೇರೆಯಾಗಿ ಭಾಗ ಮಾಡಿ ಮಣ್ಣಿನ ಮಾದರಿಯನ್ನು ತೆಗೆಯುವುದು.
5. ಸಂಗ್ರಹಿಸಿದ ಎಲ್ಲಾ ಮಾದರಿ ಮಣ್ಣನ್ನು ಒಂದು ಪ್ಲಾಸ್ಟಿಕ್ ಬಕೆಟ್ನಲ್ಲಿ ಹಾಕಿಕೊಂಡು ಒಂದು ಚೊಕ್ಕಟವಾದ ಪ್ಲಾಸ್ಟಿಕ್ ಹಾಳೆಯ ಮೇಲೆ ಸುರಿದು ಚೆನ್ನಾಗಿ ಬೆರೆಸಬೇಕು. ಅನಂತರ ಹೆಂಟೆಗಳೇನಾದರೂ ಇದ್ದಲ್ಲಿ ಒಡೆದು ಪುಡಿ ಮಾಡುವುದು, ಕಲ್ಲಿನ ಚೂರು, ಗಾಜು ಮುಂತಾದ ವಸ್ತುಗಳನ್ನು ಆರಿಸಿ ತೆಗೆಯುವುದು. ಹೀಗೆ ಸಂಗ್ರಹಿಸಿದ ಮಾದರಿ ತೂಕವು ಸುಮಾರು 8 ರಿಂದ 10. ಕೆ.ಜಿ. ಮಣ್ಣು ಸಾಕಾಗುವುದರಿಂದ ಕ್ವಾರ್ಟರಿಂಗ್ ತಂತ್ರಜ್ಞಾನವನ್ನು ಬಳಸಿ ಅವಶ್ಯಕವಾದ ಮಣ್ಣನ್ನು ತೆಗೆಯುವುದು.
6. ಕ್ವಾಟರಿಂಗ್ ತಂತ್ರಜ್ಞಾನವೆಂದರೆ ಸಂಗ್ರಹಿಸಿದ ಎಲ್ಲಾ ಉಪಮಾದ- ರಿಗಳನ್ನು ಮಿಶ್ರಣ ಮಾಡಿ ಅಗಲವಾದ ಪಾಲಿಥಿನ್ ಹಾಳೆ ಮೇಲೆ ಸುರಿದು ಸಮವಾಗಿ ಹರಡಿ ನಾಲ್ಕು ಭಾಗಗಳಾಗಿ ಗುರುತು ಹಾಕುವುದು. ಮೊದಲನೆ ಸಲ 1 ಮತ್ತು 3ನೇ ಭಾಗದ ಮಣ್ಣನ್ನು ತೆಗೆದುಕೊಳ್ಳುವುದು. ತೆಗೆದ ಮಣ್ಣನ್ನು ಪುನ: ಮಿಶ್ರಣ ಮಾಡಿ ಮೊದಲಿನಂತೆ ನಾಲ್ಕು ಭಾಗಗಳಾಗಿ ಮಾಡಿ ಈ ಸಲ 2 ಮತ್ತು 4 ನೇ ಭಾಗದ ಮಣ್ಣನ್ನು ತೆಗೆದುಕೊಳ್ಳುವುದು. ಈ ವಿಧಾನವನ್ನು ಸುಮಾರು ಅರ್ಧ ಕೆ.ಜಿ. ಮಣ್ಣು ಸಿಗುವವರೆಗೂ ಪುನರಾವರ್ತಿಸಬೇಕು.
ಮಣ್ಣು ಮಾದರಿಗಳನ್ನು ಸಂಗ್ರಹಿಸುವಾಗ ಗಮನಿಸಬೇಕಾದ ಅಂಶಗಳು
• ತಿಪ್ಪೆಗುಂಡಿ, ರಸ್ತೆ, ಕಾಲುವೆ, ಬದುಗಳ ಪಕ್ಕ, ಮರದ ಕೆಳಗೆ ಮಣ್ಣು ಮಾದರಿಗಳನ್ನು ತೆಗೆಯಬಾರದು.
• ಮಣ್ಣಿಗೆ ಗೊಬ್ಬರ ಸೇರಿಸಿದ ನಂತರ ಮಾದರಿಗಳನ್ನು ತೆಗೆಯಬಾರದು.
• ಮಣ್ಣು ಮಾದರಿಗಳನ್ನು ರಸಗೊಬ್ಬರದ ಚೀಲಗಳಲ್ಲಿ ತುಂಬಬಾರದು.
• ಮಣ್ಣು ಮಾದರಿಗಳಲ್ಲಿ ತೇವಾಂಶವಿದ್ದರೆ ನೆರಳಿನಲ್ಲಿ ಒಣಗಿಸುವುದು.
• ಬೆಳೆಯ ಸಾಲುಗಳಲ್ಲಿ ಮಣ್ಣಿನ ಮಾದರಿಯನ್ನು ತೆಗೆಯಬಾರದು. ಉದಾಹರಣೆ ಕೃಷಿ ಬೆಳೆಗಳು, ತರಕಾರಿ ಬೆಳೆಗಳು, ಹೂವಿನ ಬೆಳೆಗಳು, ಔಷಧೀಯ ಹಾಗೂ ಸುಗಂಧದ ಬೆಳೆಗಳಲ್ಲಿ ಬೆಳೆಗಳ ಸಾಲುಗಳ ಮಧ್ಯ ಬಾಗದಲ್ಲಿ ಹಾಗೂ ಹಣ್ಣಿನ ಮತ್ತು ತೋಟದ ಬೆಳೆಗಳಾದಲ್ಲಿ ಮರದ ಕಾಂಡ ಮತ್ತು ಮರದ ಹೊರ ಪರಿಧಿಯ ಮಧ್ಯಭಾಗದಲ್ಲಿ ಮಾದರಿಯನ್ನು ತೆಗೆಯುವುದು.
• ಲಘು ಪೋಷಕಾಂಶಗಳ ವಿಶ್ಲೇಷಣೆಗಾಗಿ ಮಣ್ಣು ಮಾದರಿಗಳನ್ನು ಸಂಗ್ರಹಿಸುವಾಗ ಲೋಹಗಳ ಕಲಬೆರಕೆ ಆಗದಂತೆ, ಸ್ಪೇನ್ಲೆಸ್ ಸ್ಟೀಲ್ ಅಥವಾ ಪ್ಲಾಸ್ಟಿಕ್ ಅಥವಾ ಮರದ ಉಪಕರಣ ಬಳುಸುವುದು. ಅಥವಾ ಪ್ಲಾಸ್ಟಿಕ್ ಅಥವಾ ಮರದ ಉಪಕರಣ ಬಳುಸುವುದು.
ಮಣ್ಣಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸುವ ವಿಧಾನ –
ಸಂಗ್ರಹಿಸಿದ ಮಣ್ಣಿನ ಮಾದರಿಯನ್ನು 7-8 ಅಂಗುಲ ಉದ್ದ ಮತ್ತು 4 ಅಂಗುಲ ಅಗಲದ ಬಟ್ಟೆಯ/ಪ್ಲಾಸ್ಟಿಕ್ ಚೀಲದಲ್ಲಿ ಅಥವಾ ಸೂಕ್ತವಾದ ಅಳತೆಯ ಪ್ಲಾಸ್ಟಿಕ್/ಬಟ್ಟೆ ಚೀಲದಲ್ಲಿ ಮಾದರಿಯನ್ನು ತುಂಬಿ ಚೀಲದೊಳಗೆ ಕೆಳಗಿನ ವಿವರಗಳನ್ನು ಒಳಗೊಂಡ ಗುರುತಿನ ಚೀಟಿಯನ್ನು ಇಡುವುದು.
1. ರೈತನ ಹೆಸರು, ಗ್ರಾಮ ಮತ್ತು ತಾಲೂಕು
2. ಮಣ್ಣಿನ ಮಾದರಿ ಅನುಕ್ರಮ ಸಂಖ್ಯೆ
3. ಸರ್ವೇ ನಂಬರ್
4. ಮಣ್ಣಿನ ನಮೂನೆ
5. ಮಾದರಿಯನ್ನು ತೆಗೆದ ಆಳ
6. ಕಳೆದ ಮೂರು ವರ್ಷಗಳಲ್ಲಿ ಬೆಳೆದ ಬೆಳೆಗಳು
7. ಬಳಸಿದ ಗೊಬ್ಬರಗಳು ನೀರಾವರಿ ಇನ್ನಿತರ ವಿವರ
8. ಬೆಳೆಯಲು ಉದ್ದೇಶಿಸಿರುವ ಬೆಳೆಗಳು
ಮೇಲಿನ ಎಲ್ಲಾ ವಿವರಗಳನ್ನು ಇನ್ನೊಂದು ಚೀಟಿಯಲ್ಲಿ ಚೀಲಕ್ಕೆ ಕಟ್ಟಬೇಕು. ಎಲ್ಲಾ ವಿವರಗಳನ್ನೊಳಗೊಂಡ ಮಣ್ಣಿನ ಮಾದರಿಯನ್ನು ಮಣ್ಣು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿ ಕೊಡುವುದು. ಪ್ರಯೋಗಾಲಯದಲ್ಲಿ ವಿಶ್ಲೇಷಣೆ ನಂತರ ರೈತರಿಗೆ ಗೊಬ್ಬರ ಹಾಕುವ ಮತ್ತು ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿವರವನ್ನು ನೀಡುತ್ತಾರೆ.