ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ ಎನ್ನುವಂತೆ ನೇಗಿಲ ನಂಬಿ ನಡೆದರೆ ನೌಕರಿಗಿಂತಲೂ ಹೆಚ್ಚು ಆದಾಯ ಗಳಿಸಲು ಸಾಧ್ಯವಿದ್ದು, ಮಿಶ್ರ ಬೆಳೆಯಲ್ಲಿ ನೆಮ್ಮದಿ ಕಾಣಬಹುದಾಗಿದೆ ಎಂಬುದಕ್ಕೆ ತಾಲೂಕಿನ ಕೊರವಿಕೊಪ್ಪ ಗ್ರಾಮದ ಸಾಮಾನ್ಯ ರೈತ ಸುರೇಶ ಮಲ್ಲಪ್ಪ ಹೊಳೆ ಸಾಕ್ಷಿಯಾಗಿದ್ದಾರೆ.
ಮಲಪ್ರಭೆಯ ಮಡಿಲಲ್ಲಿನ ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ತರಹೇವಾರಿ ಮಿಶ್ರ ಬೆಳೆಗಳನ್ನು ಬೆಳೆದು ಈ ಕ್ಷೇತ್ರದ ರೈತರಿಗೆ ಮಾದರಿಯಾಗಿದ್ದಾರೆ. ಮೂಲತಃ ಕೃಷಿ ಕುಟುಂಬದಿಂದ ಬಂದ ಇವರು ಕೃಷಿಯಲ್ಲಿಯೇ ಸಂತೋಷ ಕಂಡು ಅಭಿವೃದ್ಧಿ ಪಥದತ್ತ ಸಾಗಿದ್ದಾರೆ. ಪಿಯುಸಿ ನಂತರ ಓದಿಗೆ ವಿದಾಯ ಹೇಳಿ ಅಲ್ಲಿಂದ ಇಲ್ಲಿಯವರೆಗೆ ಮಣ್ಣನ್ನೇ ನಂಬಿ ಬದುಕುತ್ತಿದ್ದು ನೌಕರಿ ಹಿಡಿದಿದ್ದರೆ ಇಷ್ಟೊಂದು ನೆಮ್ಮದಿ ಸಿಗುತ್ತಾ ಇರಲಿಲ್ಲ ಎಂದು ತಮ್ಮ ಯಶೋಗಾಥೆಯನ್ನು ತೆರೆದಿಡುತ್ತಾರೆ.
ಪತ್ನಿ, ಇಬ್ಬರು ಮಕ್ಕಳೊಂದಿಗೆ ಕಾಯಕವೇ ಕೈಲಾಸವೆಂದು ಕೃಷಿ ಕಾರ್ಯದೊಂದಿಗೆ ಗ್ರಾಮದ ವಿವಿಧ ಮನೆಗಳಿಂದ ಹಾಲು ಶೇಖರಣೆ ಮಾಡಿ ಕಾರ್ಖಾನೆಯೊಂದಕ್ಕೆ ಸರಬರಾಜು ಮಾಡುವ ಇವರು ಧಾನ್ಯಗಳ (ಕಾಳು) ವ್ಯಾಪಾರದ ಸೇವೆಯನ್ನು ಮೈಗೂಡಿಸಿಕೊಂಡಿದ್ದಾರೆ.
ವಿವಿಧ ಬೆಳೆ: ತಮ್ಮ ಫಲವತ್ತಾದ ನೀರಾವರಿ ಭೂಮಿಯಲ್ಲಿ ಇದೀಗ ಮೆಣಸಿನಕಾಯಿ, ಟೊಮ್ಯಾಟೋ, ಹತ್ತಿ, ಡೊಣ್ಣ ಮೆಣಸು, ಬದನೆಕಾಯಿ, ಹಿರೇಕಾಯಿ, ಕುಂಬಳಕಾಯಿ, ಚವಳಿಕಾಯಿ, ಗೊಂಜಾಳ, ಸೌತೆಕಾಯಿ, ಪುಂಡಿ, ಹರವಿ, ಗವಾರ ಕಾಯಿ, ಮೂಲಂಗಿ, ಬೆಂಡೆ ಗಿಡ ಸೇರಿದಂತೆ ಸುಮಾರು 10 ರಿಂದ 15 ರೀತಿಯ ಮಿಶ್ರ ಬೆಳೆಯೊಂದಿಗೆ ಜಾನುವಾರುಗಳಿಗೆ ಆಹಾರಕ್ಕಾಗಿ ಫಾರಂ ಹುಲ್ಲು ಬೆಳೆಯುತ್ತಿದ್ದಾರೆ. ಜೀವನೋಪಾಯಕ್ಕಾಗಿ ಎರಡು ಹಸುಗಳನ್ನು ಕೂಡ ಸಾಕಿದ್ದಾರೆ.
ತಮ್ಮ ದಿನಚರಿಯಂತೆ ಹಾಲು ಶೇಖರಣೆ ಮುಕ್ತಾಯದ ನಂತರ ನಿತ್ಯಹೊಲಕ್ಕೆ ತೆರಳಿ ಬೆಳೆಗಳಿಂದ ಬಂದಂತ ಫಸಲನ್ನು ಮನೆಯ ಅವಶ್ಯಕತೆಗೆ ತಕ್ಕಂತೆ ಬಳಸಿಕೊಂಡು ಉಳಿದಿದ್ದನ್ನು ಮಾರಾಟ ಮಾಡುತ್ತಿದ್ದಾರೆ. ಕಡಿಮೆ ಜಮೀನಿದೆ ಅಂತಾ ಕಾಲ ಕಳೆದು ಕೊರಗುವ ಬದಲು ಅದರಲ್ಲೇ ಹೆಚ್ಚಿನ ಇಳುವರಿ ಪಡೆದು ಕೃಷಿ ರಂಗದಲ್ಲಿಯೂ ಸಾಧಕನಾಗಿ ಸಮಾಜದಲ್ಲಿ ಹೊರ ಹೊಮ್ಮಬಹುದಾಗಿದೆ ಎಂದು ಉಳಿದ ರೈತರಿಗೆ ಸ್ಫೂರ್ತಿ ಕೊಡುತ್ತಿದ್ದು, ರೈತ ಬೆಳೆದ ಫಸಲಿಗೆ ನಿರ್ಧಿಷ್ಟ ಬೆಲೆಯನ್ನು ಸರಕಾರ ನಿಗದಿಪಡಿಸಿದಾಗ ಮಾತ್ರ ಕೃಷಿಕನ ಬಾಳು ಬಂಗಾರವಾಗಲು ಸಾಧ್ಯವೆನ್ನುತ್ತಾರೆ.
ಒಕ್ಕಲುತನದಲ್ಲಿ ನಿರಾಸಕ್ತಿ ತಾಳದೇ ವಿಶ್ವಾಸವಿಟ್ಟು ದುಡಿದರೆ ದೇಶದಲ್ಲಿ ಆಹಾರದ ಕೊರತೆಯು ಕಂಡು ಬರುವುದಿಲ್ಲ ಜೊತೆಗೆ ಅನ್ನದಾತನ ಆತ್ಮಹತ್ಯೆ ಎಂತಹ ಘಟನೆಗಳು ಜರುಗುವುದಿಲ್ಲ. ಆತನು ಸಾಲಗಾರನೂ ಆಗುವದಿಲ್ಲ. ಮೈಮುರಿದು ದುಡಿದರೆ ಸರಕಾರಕ್ಕಾಗಲೀ, ಮತ್ತೂಬ್ಬರಿಗೂ ಸಾಲ ನೀಡುವಷ್ಟು ಶಕ್ತಿ ಕಂಡು ಕೊಳ್ಳಬಹುದಾಗಿದೆ ಎಂತಾರೆ ಸುರೇಶ.
ಸುರೇಶ ಅವರು ತಮ್ಮ ಕೃಷಿ ಉತ್ಪನ್ನಗಳನ್ನು ಬೈಲಹೊಂಗಲ, ಬೆಳಗಾವಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದು, ಕೃಷಿಯಿಂದ ವಾರ್ಷಿಕ ಸುಮಾರು ಲಕ್ಷ ಹಾಗೂ ಹೈನುಗಾರಿಕೆಯಿಂದ 1 ಲಕ್ಷ ರೂ ಗಳಿಸುತ್ತಿದ್ದಾರೆ.
ಪ್ರತಿ ವರ್ಷ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುವ ಕೃಷಿ ಮೇಳಕ್ಕೆ ತಪ್ಪದೇ ತಮ್ಮ ಸ್ನೇಹಿತರೊಂದಿಗೆ ತೆರಳಿ ಅಲ್ಲಿನ ಮಾಹಿತಿಯೊಂದಿಗೆ ಸಂಬಂಧಿಸಿದ ರೈತ ಸಂಪರ್ಕ ಹಾಗೂ ಇಲಾಖೆಗಳಿಂದ ಸೌಲಭ್ಯಗಳನ್ನು ಪಡೆದು ವಿವಿಧ ಪ್ರಯೋಗಗಳಿಂದ ಯಶಸ್ವಿಯಾಗಿದ್ದಾರೆ. ಜಮೀನಿಗೆ ರಸಾಯನ ಯುಕ್ತ ಗೊಬ್ಬರಕ್ಕೆ ಆದ್ಯತೆ ನೀಡದೇ ಕೊಟ್ಟಿಗೆ ಗೊಬ್ಬರ ಬಳಸಿ ಅದರಿಂದ ಅ?ಧಿಕ ಇಳುವರಿ ಗಳಿಸುವಲ್ಲಿ ಮೂಂಚೂಣಿಯಲ್ಲಿದ್ದಾರೆ. ಒಟ್ಟಾರೆ ಕೃಷಿ ಮೂಲದಿಂದ ಅವಿರತ ಶ್ರಮ ಇವರದ್ದಾಗಿದ್ದು ಭವಿಷ್ಯದಲ್ಲಿ ಹಲವಾರು ಯೋಜನೆ-ಯೋಚನೆಗಳನ್ನು ಹಾಕಿಕೊಂಡಿದ್ದಾರೆ.
ಕೊರವಿಕೊಪ್ಪ ಗ್ರಾಮದಲ್ಲಿ ಸುರೇಶ ಹೊಳಿ ತಮ್ಮ ಅಲ್ಪ ಜಮೀನಿನಲ್ಲಿ ಬಹು ವಿಧದ ಬೆಳೆಗಳನ್ನು ಬೆಳೆದು ಆ ಮೂಲಕ ಇನ್ನುಳಿದ ಅನ್ನದಾತರಿಗೆ ಪ್ರೇರೇಪಣೆ ನೀಡುವಲ್ಲಿ ಯಶಸ್ವಿ ಪಥದತ್ತ ಸಾಗಿದ್ದಾರೆ. ಮಡಿವಾಳಪ್ಪ ಎಸ್. ಬುಳ್ಳಿ, ಕೊರವಿಕೊಪ್ಪ ರೈತ
ರೇಷನ್ ಕಾರ್ಡ್ ಗೆ ಹೆಸರು ಸೇರಿಸುವುದು/ತಿದ್ದುಪಡಿ ಮಾಡುವುದು ಹೇಗೆ?
ರೈತರೇ ಪಿಎಂ ಕಿಸಾನ್ ಖಾತೆಯಲ್ಲಿ ಈ ತಪ್ಪುಗಳಿದ್ದರೆ ಮೊಬೈಲ್ ನಿಂದಲೇ ತಿದ್ದುಪಡಿ
ವಾಟ್ಸಾಪ್ ಚಾಟ್ಬಾಟ್ ಬಳಸಿ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಕೃಷಿ ಪ್ರಧಾನವಾದ ಭಾರತ ಮತ್ತಷ್ಟು ಅಭಿವೃದ್ಧಿ ಕಾಣಬೇಕಾದರೆ ನಿರುದ್ಯೋಗಿ ಯುವಕರು ಒಕ್ಕಲುತನ ಮಾಡಲು ಇಚ್ಛಾಶಕ್ತಿ ಹೊಂದಬೇಕು. ಕಡಿಮೆ ಹೊಲ ಇದ್ದರೂ ಸಹ ಮಿಶ್ರ ಬೆಳೆ ಬೆಳೆದು ಆದಾಯ ಕಂಡು ಕೊಂಡರೆ ಇದ್ದಲ್ಲಿಗೆ ಬಂದು ಕೃಷಿಕನಿಗೆ ಹೆಣ್ಣು ಕೊಡುತ್ತಾರೆ. ರೈತ ಪರಾವಲಂಬಿಯಲ್ಲ, ಸ್ವಾವಲಂಭಿ ಎನ್ನುವದನ್ನು ತೋರಿಸಿಕೊಟ್ಟಾಗ ಮಾತ್ರ ಒಕ್ಕಲುತನ ನಂಬಿದವರ ಜೀವನ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು. ಸಮಾಜದಲ್ಲಿ ಆತನಿಗೆ ಸ್ಫೂರ್ತಿ ತುಂಬುವ ಕಾರ್ಯಗಳು ನಡೆಯಬೇಕು. -ಸುರೇಶ ಮಲ್ಲಪ್ಪ ಹೊಳಿ