ಏಪ್ರಿಲ್ 1ರಿಂದ ಆನ್‌ಲೈನ್ ಪಾವತಿಯಲ್ಲಿ ಮಹತ್ವದ ಬದಲಾವಣೆಗಳು : ಇಲ್ಲಿದೆ, 8 ಹೊಸ ರೂಲ್ಸ್

ಮುಂದಿನ ಆರ್ಥಿಕ ವರ್ಷ ಆರಂಭಕ್ಕೆ ಎರಡು ದಿನಗಳು ಬಾಕಿ ಉಳಿದಿದೆ. ಈಗಾಗಲೇ ಏಪ್ರಿಲ್ ಒಂದರಿಂದ ಅನ್ವಯವಾಗುವಂತೆ, ಹಲವು ಬದಲಾವಣೆಗಳಾಗಲಿವೆ. ಈ ಸಾಲಿನಲ್ಲಿ ಆನ್ಲೈನ್ ಬ್ಯಾಂಕ್ ಪೇಮೆಂಟ್ ಕೂಡಾ ಒಂದು. ಇನ್ನು ಮುಂದೆ, ಆನ್ಲೈನ್ ಪೇಪೆಂಟ್ ಮಾಡಬೇಕಾದರೆ ಹೊಸ ಪದ್ದತಿಯನ್ನು ಅಳವಡಿಸಿಕೊಳ್ಳಬೇಕಿದೆ.

ಮುಂಬರುವ ಆರ್ಥಿಕ ವರ್ಷದಿಂದ (2026-27) ಅನ್ವಯವಾಗುವಂತೆ, ಬ್ಯಾಂಕಿಂಗ್ ನಿಯಮದಲ್ಲಿ ಹಲವು ಬದಲಾವಣೆಗಳು ಆಗಲಿದೆ. ಏಪ್ರಿಲ್ 1, 2026ರಿಂದ ಜಾರಿಗೆ ಬರುವಂತೆ, ಆನ್‌ಲೈನ್ ಪಾವತಿಯ ವೇಳೆ ಒಟಿಪಿ (One Time Password) ನಮೂದಿಸುವ ವಿಧಾನದಲ್ಲಿ ಹೊಸ ಸಿಸ್ಟಂ ಪಾಲಿಸಬೇಕಾಗುತ್ತದೆ.

ಹೆಚ್ಚುತ್ತಿರುವ ಡಿಜಿಟಲ್ ಮತ್ತು ಬ್ಯಾಂಕಿಂಗ್ ವಂಚನೆ ಪ್ರಕರಣಗಳಿಂದಾಗಿ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕೆಲವೊಂದು ಮಹತ್ತರ ಬದಲಾವಣೆ ಜಾರಿಗೆ ಬರಲಿದೆ. ಈಗಾಗಲೇ, ಹೊಸದಾಗಿ ಅಪ್ಲೈ ಮಾಡಲು ಅಥವಾ ನವೀಕರಣ ಮಾಡಲು, ಪ್ಯಾನ್ ಕಾರ್ಡ್ ನಿಯಮದಲ್ಲಿ ಬದಲಾವಣೆಯನ್ನು ಪ್ರಕಟಿಸಲಾಗಿದೆ. ಆನ್‌ಲೈನ್ ಪಾವತಿಯ ವೇಳೆ ಜಾರಿಗೆ ಬರಲಿರುವ ಪ್ರಮುಖ ನಿಯಮಗಳು ಹೀಗಿದೆ:

ಡೈನಾಮಿಕ್- ಟು-ಫ್ಯಾಕ್ಟರ್ ದೃಢೀಕರಣ
ಮೊದಲ ನಿಯಮದ ಪ್ರಕಾರ, ಡೈನಾಮಿಕ್- ಟು-ಫ್ಯಾಕ್ಟರ್ ದೃಢೀಕರಣದ ಭಾಗವಾಗಿ, ಬ್ಯಾಂಕಿಂಗ್ ಗ್ರಾಹಕರು ತಾವು ಮಾಡುವ ಪಾವತಿಯನ್ನು ಎಲ್ಲಿಂದ ಮಾಡಲಾಗುತ್ತಿದೆ ಎನ್ನುವುದನ್ನು ಪರಿಶೀಲಿಸಲಾಗುತ್ತದೆ. ಇದು ಪಾವತಿಯ ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ.

ಆನ್‌ಲೈನ್ ಪಾವತಿಯ ವೇಳೆ, ಸ್ಕ್ರೀನ್’ಶಾಟ್ ತೆಗೆದುಕೊಳ್ಳುವಂತಿಲ್ಲ
ಎರಡನೇ ನಿಯಮದ ಪ್ರಕಾರ, ಸಾಮಾನ್ಯವಾಗಿ ಕೆಲವು ಗ್ರಾಹಕರು ಆನ್‌ಲೈನ್ ಪಾವತಿಯ ವೇಳೆ, ಸ್ಕ್ರೀನ್’ಶಾಟ್ ತೆಗೆದುಕೊಳ್ಳುವುದನ್ನು ರೂಢಿಸಿಕೊಂಡಿರುತ್ತಾರೆ. ಇನ್ನು ಮುಂದೆ, ಬ್ಯಾಂಕಿಂಗ್ ಅಪ್ಲಿಕೇಶನ್ ’ನಲ್ಲಿ ಸ್ಕೀನ್’ಶಾಟ್ ಅಥವಾ ಸ್ಕ್ರೀನ್ ರೆಕಾರ್ಡಿಂಗ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ. ವಂಚನೆ ಮಾಡುವವರು, ಎನಿಡೆಸ್ಕ್ (Any Desk) ಮುಂತಾದ ಅಪ್ಲಿಕೇಶನ್’ಗಳನ್ನು ಬಳಸಿ, ಸ್ಕ್ರೀನ್ ರೆಕಾರ್ಡ್ ಮಾಡಿ, ಒಟಿಪಿ / ಪಾಸ್ವರ್ಡ್ ಪತ್ತೆಹಚ್ಚಿ ವಂಚಿಸಿದ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನಲೆಯಲ್ಲಿ, ಇದನ್ನು ಮಟ್ಟ ಹಾಕಲು ಇದು ಸಹಕಾರಿಯಾಗಬಲ್ಲದು.

ರಾತ್ರಿ ಹನ್ನೊಂದರಿಂದ ಬೆಳಗ್ಗೆ ಆರರವರೆಗೆ ಬಂದ್
ಮೂರನೇ ನಿಯಮದ ಪ್ರಕಾರ, ಬ್ಯಾಂಕುಗಳು ತಮ್ಮ ಅಪ್ಲಿಕೇಶನ್’ಗಳಲ್ಲಿ ರಾತ್ರಿ ಹನ್ನೊಂದು ಗಂಟೆಯಿಂದ, ಬೆಳಗ್ಗೆ ಆರು ಗಂಟೆಯವರೆಗೆ ಎಲ್ಲಾ ವಹಿವಾಟುಗಳನ್ನು ಲಾಕ್ ಮಾಡುವ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಲಿದೆ. ಈ ಸೌಲಭ್ಯವನ್ನು ಆಕ್ಟೀವ್ ಮಾಡಿಕೊಂಡರೆ, ಈ ಸಮಯದಲ್ಲಿ ಯಾವುದೇ ಆನ್ಲೈನ್ ಬ್ಯಾಂಕಿಂಗ್ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ. ರಾತ್ರಿ ವೇಳೆ ನಡೆಯುವ ವಂಚನೆಯನ್ನು ತಡೆಗಟ್ಟಲು ಇದು ಉಪಯೋಗವಾಗಲಿದೆ.

ಫ್ರಾಡ್ ಅಪ್ಲಿಕೇಶನ್ ಅಥವಾ ಮಾಲ್ವೇರ್
ನಾಲ್ಕನೇ ನಿಯಮದ ಪ್ರಕಾರ, ಏಪ್ರಿಲ್ 1, 2026ರಿಂದ ಅನ್ವಯವಾಗುವಂತೆ, ಫ್ರಾಡ್ ಅಪ್ಲಿಕೇಶನ್, ಅಥವಾ ಮಾಲ್ವೇರ್ ಡೌನ್’ಲೋಡ್ ಆದ ತಕ್ಷಣ, ಬ್ಯಾಂಕ್ ನಲ್ಲಿ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರಿಗೆ ಎಚ್ಚರಿಕೆಯ ಸಂದೇಶಗಳು ರವಾನೆಯಾಗಲಿದೆ.

ಒಟಿಪಿಯಲ್ಲಿ ದೊಡ್ಡ ಬದಲಾವಣೆ
ಐದನೇ ನಿಯಮಯದ ಪ್ರಕಾರ, ಆನ್ಲೈನ್ ಪಾವತಿಯ ವೇಳೆ ಒಟಿಪಿಯಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಇನ್ನು ಮುಂದೆ ಎಸ್ಎಂಎಸ್ (SMS) ಮೂಲಕ ಒಟಿಪಿ ಕಳುಹಿಸುವುದನ್ನು ನಿಷೇಧಿಸಲಾಗುತ್ತದೆ. ಗ್ರಾಹಕರು ಬಳಸುವ ಬ್ಯಾಂಕಿಂಗ್ ಅಪ್ಲಿಕೇಶನ್’ನಲ್ಲಿಯೇ ಒಟಿಪಿ ಲಭ್ಯವಾಗಲಿದೆ.

ಆನ್ಲೈನ್ ಪಾವತಿಯ ವೇಳೆ ಹೆಚ್ಚುವರಿ ಪ್ರಶ್ನೆ
ಆರನೇ ನಿಯಮಯದ ಪ್ರಕಾರ, ಇನ್ನು ಮುಂದೆ ಆನ್ಲೈನ್ ಪಾವತಿಯ ವೇಳೆ, ಹೆಚ್ಚುವರಿ ಪ್ರಶ್ನೆಗಳನ್ನು ಕೇಳಬಹುದು. ಸಾಮಾನ್ಯವಾಗಿ ನಡೆಸುವ ಆನ್ಲೈಲ್ ಪೇಮೆಂಟ್ ಹಿಸ್ಟರಿಗೆ ವ್ಯತಿರಿಕ್ತವಾಗಿ ಏನಾದರೂ ವಹಿವಾಟು ನಡೆದರೆ, ಭದ್ರತಾ ಕಾರಣಕ್ಕಾಗಿ ’ತಾಯಿಯ ಹೆಸರು’, ’ಓದಿದ ಶಾಲೆ’ ಮುಂತಾದ ಪ್ರಶ್ನೆಗಳನ್ನು ಕೇಳಬಹುದು. ಈ ಮಾಹಿತಿಗಳು ಹೊಂದಿಕೆಯಾದರೆ ಮಾತ್ರ, ಪೇಮೆಂಟ್ ವಿಂಡೋ ಮುಂದಕ್ಕೆ ಸಾಗಲಿದೆ.

ಬಿಹೇವಿಯರ್ ಬಯೋಮೆಟ್ರಿಕ್ಸ್ ಅಳವಡಿಕೆ
ಏಳನೇ ನಿಯಮದ ಪ್ರಕಾರ, ಬಿಹೇವಿಯರ್ ಬಯೋಮೆಟ್ರಿಕ್ಸ್ ಅನ್ನು ಅಳವಡಿಸಲಾಗುತ್ತದೆ. ಇದರ ಭಾಗವಾಗಿ, ಬ್ಯಾಂಕಿಂಗ್ ಅಪ್ಲಿಕೇಶನ್ ಅನ್ನು ಗ್ರಾಹಕರು ಟೈಪ್ ಮಾಡುವಾಗ, ಟೈಪ್ ಮಾಡುವ ವಿಧಾನ, ಟೈಪ್ ಮಾಡುವ ವೇಗ, ಸ್ಕ್ರೀನ್ ನಿರ್ವಹಿಸುವ ವಿಧಾನದ ಮೂಲಕ ಖಚಿತ ಪಡಿಸಿಕೊಳ್ಳಲಾಗುತ್ತದೆ. ಆ ಮೂಲಕ, ಸರಿಯಾದ ಗ್ರಾಹಕರು ಲಾಗಿನ್ ಆಗಿದ್ದಾರೆ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲು ಇದು ಸಹಕಾರಿಯಾಗಲಿದೆ.
ಫಿಂಗರ್ ಪ್ರಿಂಟ್ ಅಥವಾ ಫೇಸ್ ಸ್ಕ್ಯಾನ್
ಎಂಟನೇ ನಿಯಮದ ಪ್ರಕಾರ, ಬ್ಯಾಂಕಿಂಗ್ ಅಪ್ಲಿಕೇಶನ್ ಮೂಲಕ ದೊಡ್ಡ ಮೊಟ್ಟದ ವಹಿವಾಟು ನಡೆದರೆ, ಅಂದರೆ ಐದು ಲಕ್ಷಕ್ಕಿಂತ ಮೇಲ್ಪಟ್ಟು ಮಾಡುವ ಎಲ್ಲಾ ವಹಿವಾಟಿಗೆ ಆಧಾರ್ ಲಿಂಕ್, ಫಿಂಗರ್ ಪ್ರಿಂಟ್ ಅಥವಾ ಫೇಸ್ ಸ್ಕ್ಯಾನ್ ಕೇಳಲಾಗುತ್ತದೆ. ಇದಿಲ್ಲದೇ ಯಾವುದೇ ಪಾವತಿಯನ್ನು ಮಾಡಲು ಸಾಧ್ಯವಾಗುವುದಿಲ್ಲ

Spread positive news

Leave a Reply

Your email address will not be published. Required fields are marked *