ಭಾರತ ದೇಶ ಕೃಷಿ ಪ್ರಧಾನವಾದ ದೇಶ ಆದರೂ ಇನ್ನು ಬಹುತೇಕ ಕೃಷಿ ಪ್ರದೇಶವು ಮಳೆ ಆಶ್ರಯದಲ್ಲಿ ಇದೆ. ಈಗ ಜನವರಿ ಇನ್ನೇನು ಹಿಂಗಾರು ಹಂಗಾಮು ಮುಗಿದು ಬೇಸಿಗೆ ಪ್ರಾರಂಭವಾಗುವುದರಲ್ಲಿ ಇದೆ. ಜನವರಿ ಮಧ್ಯದಲ್ಲಿ ಸಂಕ್ರಾತಿ ಹಬ್ಬ ಆಚರಣೆ ಮಾಡಿದ ನಂತರ ಸಾವಕಾಶವಾಗಿ ಬೇಸಿಗೆ ಶುರುವಾಗುವುದು. ಬೇಸಿಗೆಯಲ್ಲಿ ಸಾಮಾನ್ಯವಾಗಿ ತರಕಾರಿ ಉತ್ಪಾದನೆ ಕಡಿಮೆ ಆಗಿ ಬೆಲೆ ಹೆಚ್ಚಾಗುವುದು ಕಳೆದ ಹಲವಾರು ದಶಕಗಳಿಂದ ಕಂಡುಬಂದ ವಿಶ್ಲೇಷಣೆ. ಈ ದಿಶೆಯಲ್ಲಿ ರೈತರು ಸ್ವಲ್ಪ ಆಲೋಚನೆ ಮಾಡಿ ಬೇಸಿಗೆ ಹಂಗಾಮಿಗೆ ಸೂಕ್ತ ತರಕಾರಿ ಬೆಳೆಗಳನ್ನು ಆಯ್ಕೆ ಮಾಡಿ ಬೆಳೆದರೆ ಉತ್ತಮ ಬೆಲೆಯ ಜೊತೆಗೆ ಆದಾಯ ಪಡೆಯಲು ಅವಕಾಶವಿದೆ.
ವಿಶ್ವ ಆರೋಗ್ಯ ಸಂಸ್ಥೆ ಕೂಡ ಬೇಸಿಗೆಯಲ್ಲಿ ಸಾಮಾನ್ಯ ಮನುಷ್ಯನಿಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಮತ್ತು ದೇಹದ ತಾಪಮಾನ ನಿಯಂತ್ರಣ ಮಾಡಲು ಹೆಚ್ಚಿನ ಪ್ರಮಾಣದಲ್ಲಿ ಹಸಿ ತರಕಾರಿಯನ್ನು ಸೇವನೆ ಮಾಡಲು ಶಿಫಾರಸ್ಸು ಮಾಡಿದೆ. ಅದೇ ರೀತಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸಹ ಪ್ರತಿ ಮನುಷ್ಯ ದಿನನಿತ್ಯ ಸರಾಸರಿ ಕನಿಷ್ಠ 50 ಗ್ರಾಂ ಹಸಿ ತರಕಾರಿ ಅಥವಾ ತರಕಾರಿ ಸೇವನೆ ಮಾಡಬೇಕೆಂದು ಸಲಹೆ ನೀಡುತ್ತದೆ. ಇದರ ಅನ್ವಯ ಭಾರತ ದೇಶದ ಶೇ. 50ರಷ್ಟು ಜನಸಂಖ್ಯೆಯನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಪ್ರತಿ ನಿತ್ಯ 75,000 ಟನ್ ತರಕಾರಿ ಬೇಕಾಗುತ್ತದೆ. ಕಾರಣ ಸರಿಯಾದ ಯೋಜನೆ ಮಾಡಿಕೊಂಡು ಬೇಸಿಗೆಯಲ್ಲಿ ತರಕಾರಿ ಬೇಸಾಯ ಮಾಡಿದರೆ ಆರ್ಥಿಕ ಲಾಭವನ್ನು ಪಡೆಯಬಹುದು.
ಬೇಸಿಗೆಯಲ್ಲಿ ಬೆಳೆಯಬಹುದಾದ ಪ್ರಮುಖ ತರಕಾರಿಗಳಲ್ಲಿ ಮೊದಲ ಎರಡು ಸ್ಥಾನ ಬಳ್ಳಿ ಬೆಳೆಗಳಾದ ಸವತೆಕಾಯಿ, ಹಿರೇಕಾಯಿ ನಂತರ ಬದನೆ, ಮೆಣಸಿನಕಾಯಿ, ಟೊಮೆಟೋ ಹಾಗೂ ತಪ್ಪಲು ಪಲ್ಯ ಬೆಳೆಗಳಾದ ಕೋತಂಬರಿ, ಪಾಲಕ, ಮೆಂತೆ, ಸಬ್ಬಸಗಿ ಹಾಗೂ ಮೂಲಂಗಿ.
ಬೀಜ ಪಡೆಯುವ ವಿಧಾನ
ಈ ಬೆಳೆಗಳ ಬೀಜಗಳನ್ನು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಹೆಸರಗಟ್ಟದಿಂದ ಆನಲೈನ್ ಮುಖಾಂತರ ಅಥವಾ ಖುದ್ದಾಗಿ ಭೇಟಿ ನೀಡಿ ಪಡೆಯಬಹುದು. ಇಲ್ಲವೇ ಸ್ಥಳೀಯ ಕೃಷಿ ವಿಶ್ವವಿದ್ಯಾಲಯ, ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರ ಅಥವಾ ಪ್ರತಿಷ್ಠಿತ ಖಾಸಗಿ ಕಂಪನಿಗಳಾದ ಮಹಿಕೋ, ಸಿಂಜೆಂಟಾ, ಇಂಡೋ ಅಮೆರಿಕನ್ ಇತ್ಯಾದಿಗಳ ಬೀಜಗಳನ್ನು ಸ್ಥಳೀಯ ಬೀಜ ಮಾರಾಟಗಾರರಿಂದ ಅಥವಾ ಆನಲೈನ್ ಮುಖಾಂತರ ಖರೀದಿ ಮಾಡಬಹುದು.
ಭೂಮಿ ತಯಾರಿಕೆ, ಕ್ಷೇತ್ರ ನಿಗದಿ ಮತ್ತು ಮಾರಾಟ ವ್ಯವಸ್ಥೆ ಈ ವಿಷಯಗಳಲ್ಲಿ ಸ್ಪಷ್ಟವಾದ ನಿರ್ಧಾರ ಮಾಡಬೇಕು. ಈ ದಿಸೆಯಲ್ಲಿ ಕೆಳಗಿನ ಅಂಶಗಳು ಸಹಕಾರಿಯಾಗುವವು ತರಕಾರಿಗಳನ್ನು ಎಲ್ಲ ತರಹದ ಮಣ್ಣುಗಳಲ್ಲಿ ಬೇಸಾಯ ಮಾಡಬಹುದಾದರೂ ಚೆನ್ನಾಗಿ ನೀರು ಬಸಿದು ಹೋಗುವ ಜಮೀನು ಉತ್ತಮ.
ಒಂದು ಅಥವಾ ಎರಡು ಸಲ ಉಳುಮೆ ಮಾಡಿ ಕಸ ಕಡ್ಡಿಯನ್ನು ಕಳೆಯಿಂದ ಮುಕ್ತಗೊಳಿಸಿ ಭೂಮಿ ತಯಾರು ಮಾಡಿಕೊಳ್ಳಬೇಕು. ಸಗಣಿ ಗೊಬ್ಬರ ಸಾಧ್ಯವಾಗದಿದ್ದಲ್ಲಿ ನಗರ ಪ್ರದೇಶದ ತಾಜ್ಯ ಅಥವಾ ಸಿಟಿ ಕಾಂಪೋಷ್ಟ ಇಲ್ಲವೇ ಎರೆಹುಳು ಗೊಬ್ಬರವನ್ನು ಪ್ರತಿ ಗುಂಟೆಗೆ ಕನಿಷ್ಠ 10 ಕೆ.ಜಿ. ಮತ್ತು ಪ್ರಾರಂಭದಲ್ಲಿ ಸಾರಜನಕ, ರಂಜಕ ಹಾಗೂ ಪೊಟ್ಯಾಷ್ ಯುಕ್ತ 10:26:26 ಅಥವಾ 12:32:16 ರಸಗೊಬ್ಬರಗಳ ಪ್ರತಿ ಗುಂಟೆಗೆ 1.25 ಕೆ.ಜಿ. ಹಾಕಿ ಭೂಮಿ ತಯಾರು ಮಾಡಿಕೊಳ್ಳಬೇಕು.
ಆದಷ್ಟು ನಿರ್ವಹಣೆ ಮತ್ತು ಮಾರಾಟ ಮಾಡಲು ಸಾಧ್ಯವಾಗುವಷ್ಟು ಕ್ಷೇತ್ರ ನಿಗದಿ ಮಾಡಿ ಮಿತಿಗೊಳಿಸಬೇಕು. ಚಿಕ್ಕ ಮತ್ತು ಮಧ್ಯಮ ರೈತರು ಹತ್ತಿರದ ನಗರ ಪ್ರದೇಶಗಳಾದ ಹುಬ್ಬಳ್ಳಿ ಧಾರವಾಡ, ಬೆಳಗಾವಿ, ಮೈಸೂರು, ಬೆಂಗಳೂರು, ಮಂಗಳೂರು, ಕಲಬುರ್ಗಿಗಳಲ್ಲಿ ಮಧ್ಯವರ್ತಿಗಳ ಬದಲು ಸ್ವಂತ ಮಾರಾಟ ವ್ಯವಸ್ಥೆ ಮಾಡಿಕೊಂಡರೆ ಲಾಭದ ಅನುಪಾತ ಹೆಚ್ಚಳವಾಗುವದು.
ಬದನೆ, ಮೆಣಸಿನಕಾಯಿ, ಟೊಮೆಟೋ
ಈ ಬೆಳೆಗಳಿಗೆ ವರ್ಷ ಪೂರ್ತಿ ಬೇಡಿಕೆ ಇರುವುದು. ಈ ಬೆಳೆಗಳ ಬೇಸಾಯಕ್ಕೆ ಪ್ರಾಥಮಿಕವಾಗಿ ಸಸಿ ಮಡಿ ತಯಾರು ಮಾಡಿಕೊಂಡು ಅವು 4 ರಿಂದ 6 ವಾರದ ಸಸಿ ಇದ್ದಾಗ ಮುಖ್ಯ ಹೊಲದಲ್ಲಿ ನಾಟಿ ಮಾಡಬೇಕು. ಪ್ಲಾಸ್ಟಿಕ್ ಟ್ರೇಗಳಲ್ಲಿ ಸಸಿಗಳನ್ನು ತಯಾರು ಮಾಡಬಹುದು ಅಥವಾ ಪ್ರತಿಷ್ಠಿತ ನರ್ಸರಿಗಳಿಂದ ಸಸಿಗಳನ್ನು ಮಾರಾಟಕ್ಕೆ ಪಡೆಯಬಹುದು. ಸಾಮಾನ್ಯವಾದ ನಾಟಿ ಅಂತರವು ಸಾಲಿನಿಂದ ಸಾಲಿಗೆ 45 ರಿಂದ 60 ಸೆಂ.ಮೀ. ಸಸಿಯಿಂದ ಸಸಿಗೆ 30 ಸೆಂ.ಮೀ. ಇರುತ್ತದೆ. ನಾಟಿ ಮಾಡುವಾಗ ಸಾಮಾನ್ಯವಾಗಿ ದೊರಕುವ ಶಿಲೀಂಧ್ರನಾಶಕವಾದ ಕಾರ್ಬನ್ ಡೈಜಿಂನ್ನು ಪ್ರತಿ ಲೀಟರ್ ನೀರಿಗೆ 4 ಗ್ರಾಂ ಹಾಕಿ ಆ ದ್ರಾವಣದಲ್ಲಿ 10 ನಿಮಿಷ ಬೇರುಗಳನ್ನು ಅದ್ದಿ ನಾಟಿ ಮಾಡುವುದು ಉತ್ತಮ, ಪರ್ಯಾಯವಾಗಿ ಸಾವಯವ ಪದ್ಧತಿಯಲ್ಲಿ ಪ್ರತಿ ಲೀಟರ್ ನೀರಿನಲ್ಲಿ 10 ಗ್ರಾಂ ಟ್ರೈಕೋಡರ್ಮಾ ಶಿಲೀಂಧ್ರನಾಶಕವನ್ನು ಮಿಶ್ರಣ ಮಾಡಿದ ದ್ರಾವಣದಲ್ಲಿ 30 ನಿಮಿಷಗಳವರೆಗೆ ಅದ್ದಿ ನಾಟಿ ಮಾಡಬಹುದು. ಇದರಿಂದ ಸಸಿ ಒಣಗುವ ಮತ್ತು ಶಿಲೀಂಧ್ರದಿಂದ ಬರುವ ರೋಗಗಳನ್ನು ಹತೋಟಿ ಮಾಡಬಹುದು. ನಾಟಿಯ ನಂತರ ಬೆಳೆ 30 ದಿನವಿದ್ದಾಗ ಮೇಲು ಗೊಬ್ಬರವಾಗಿ ಗುಂಟೆಗೆ 100 ಗ್ರಾಂ ಸಾರಜನಕ ನೀಡುವ ಯೂರಿಯಾ ಗೊಬ್ಬರವನ್ನು ಒದಗಿಸಬೇಕು. ನೀರು ನಿಲ್ಲದಂತೆ ನೀರು ಒದಗಿಸಬೇಕು. ಹನಿ ನೀರಾವರಿ ಉತ್ತಮ.
ಸಿಂಚನ ನೀರಾವರಿ ಕೂಡ ಅಳವಡಿಸಿಕೊಳ್ಳಬಹುದು. ಇನ್ನು ಹಾಯಿ ನೀರು ಪದ್ಧತಿಯಿದ್ದಲ್ಲಿ ಸಾಲು ಬೋದು ಮಾಡಿಕೊಂಡು ಬೋದಿನ ಮೇಲೆ ಸಸಿಗಳನ್ನು ನಾಟಿ ಮಾಡಿಕೊಳ್ಳಬೇಕು. ಎಲೆ ತಿನ್ನುವ ಅಥವಾ ಕಾಯಿ ಕೊರಕ ಕಂಡು ಬಂದಲ್ಲಿ ಸಾಮಾನ್ಯವಾಗಿ ದೊರೆಯುವ ಕೀಟನಾಶಕಗಳಾದ ಸೈಪರ್ ಮೆಗ್ರಿನ, ಲ್ಯಾಮಡಾ ಸೈಲೋಥಿನ್ ಇಮಾಮೆಕ್ಟಿನ್ ಬೆಂಜೋಯೆಟ್‌ನ್ನು ಅಲ್ಪ ಪ್ರಮಾಣದಲ್ಲಿ ಬಳಸಬೇಕು. ಉತ್ತಮ ಕೀಟನಾಶವೆಂದರೆ ಬೇವಿನ ಎಣ್ಣೆ. ಇನ್ನೂ ರೋಗ ಬಾಧೆ ಕಂಡು ಬಂದಲ್ಲಿ ಹೆಕ್ಸಾಕೊನೊಜೋಲ್‌ನಂತಹ ಸರಳ ಶಿಲೀಂದ್ರನಾಶಕಗಳನ್ನು ಬಳಸುವುದು ಉತ್ತಮ.
ಕೋತಂಬರಿ, ಪಾಲಕ, ಮೆಂತೆ, ಸಬ್ಬಸಗಿ
ವೈದ್ಯಕೀಯ ಗುಣಧರ್ಮ ಹೊಂದಿದ ಉತ್ತಮ ತರಕಾರಿಗಳೆಂದರೆ ಹಸಿರು ತಪ್ಪಲು ತರಕಾರಿಗಳು. ಅಡುಗೆ ಮನೆಯ ಸ್ನೇಹಿತ ಕೋತಂಬರಿ ಎಂದರೆ ತಪ್ಪಾಗಲಾರದು. ಇದು ಸಿಹಿ ಮೂತ್ರದ ರೋಗ ನಿಯಂತ್ರಣ. ರೋಗ ನಿರೋಧಕತೆ ಮತ್ತು ಪಚನಕ್ರಿಯೆಗೆ ಸಹಾಯ ಮಾಡುತ್ತದೆ. ಇದೇ ತರಹದ ಗುಣಧರ್ಮಗಳನ್ನು ಸಬ್ಬಸಗಿ ಸೊಪ್ಪು ಸಹ ಹೊಂದಿದೆ. ಪಾಲಕ ಕಬ್ಬಿಣದ ಅಂಶ, ವಿಟಾಮಿನ್ ಎ, ಸಿ ಮತ್ತು ಕೆ ಹಾಗೂ ಹೇರಳವಾಗಿ ಖನಿಜಾಂಶಗಳನ್ನು ಹೊಂದಿದೆ. ಇನ್ನು ಮೆಂತೆ ಸೊಪ್ಪು ಕ್ಯಾನ್ಸರ್ ಮತ್ತು ನರರೋಗಳಿಗೆ ಉತ್ತಮ ಆಹಾರ, ಇವುಗಳ ಬೇಸಾಯಕ್ಕೆ ವಿಶೇಷವಾದ ಬೇಸಾಯ ಕ್ರಮಗಳ ಅವಶ್ಯಕತೆ ಇಲ್ಲ. ಆದರೂ ಪೋಷಕಾಂಶಗಳಿಗೆ ಉತ್ತಮ ಪ್ರತಿಕ್ರಿಯೆ ನೀಡುತ್ತವೆ. ಇವುಗಳನ್ನು ಸಾಲು ಬಿತ್ತನೆ ಬದಲಾಗಿ ಬೀಜ ಚೆಲ್ಲುವ ವಿಧಾನದಿಂದ ಬಿತ್ತುವುದು ಉತ್ತಮ. ಶಿಲೀಂಧ್ರನಾಶಕದಿಂದ (ಕಾರ್ಬನ್ ಡೈಜಿಂ) ಉಪಚಾರ ಮಾಡಿ ಬಿತ್ತುವುದು ಉತ್ತಮ. ಇವು ಕಡಿಮೆ ಅವಧಿಯ ಬೆಳೆಗಳಾಗಿದ್ದು 30 ರಿಂದ 45 ದಿನಗಳಲ್ಲಿ ಕಟಾವಿಗೆ ಬರುತ್ತವೆ. ಬೇಸಿಗೆಯಲ್ಲಿ ಉತ್ತಮ ದರ ಸಿಗುತ್ತದೆ.
ಸವತೆಕಾಯಿ, ಹಿರೇಕಾಯಿ
ಬಳ್ಳಿ ಬೆಳೆಗಳು ಮಣ್ಣು ಸಂರಕ್ಷಣೆಗೆ ಸಹಾಯ ಮಾಡುವುದರ ಜೊತೆಗೆ ಕಡಿಮೆ ನೀರು ಬಯಸುವ ಹೊದಿಕೆ ಬೆಳೆಗಳಾಗಿವೆ. ಇವುಗಳಿಗೆ ಬೇಸಿಗೆ ಹಂಗಾಮಿನಲ್ಲಿ ವಿಶೇಷವಾದ ಬೇಡಿಕೆ ಇರುತ್ತದೆ. ಸಾಲಿನಿಂದ ಸಾಲಿಗೆ 3 ಅಡಿ ಮತ್ತು ಸಸಿಯಿಂದ ಸಸಿಗೆ 1 ಅಡಿ ಸಾಮಾನ್ಯ ಬಿತ್ತನೆ ಅಂತರವಾಗಿದೆ. ಹಂದರ ಪದ್ಧತಿಯಲ್ಲಿ ಸಹ ಬಿತ್ತನೆ ಕೈಗೊಳ್ಳಬಹುದು. ಇವು ಕಡಿಮೆ ಗೊಬ್ಬರ ಮತ್ತು ನೀರು ಬಯಸುವ ಬೆಳೆಗಳು. ನೀರಿನ ಕೊರತೆ ಪ್ರದೇಶದಲ್ಲಿ ಇವುಗಳು ಉತ್ತಮ ಆಯ್ಕೆ. ಬೆಳೆಯ ಪ್ರಾರಂಭದಲ್ಲಿ ಎಲೆ ಸುರುಳಿ ಪೂಚಿ ಬಾಧೆ ಕಂಡು ಬರುವುದು ಇದರ ನಿರ್ವಹಣೆಗೆ ಪ್ರತಿ ಲೀಟರ್ ನೀರಿಗೆ 2 ಮಿ. ಲೀ. ಕ್ಲೋರೊಫೈರಿಫಾಸ್ ಅಥವಾ ಲ್ಯಾಮಡಾ ಸೈಲೋಥೀನ್ 1 ಮಿ.ಲೀ. ಮಿಶ್ರಣ ಮಾಡಿ ಸಿಂಪಡಣೆ ಮಾಡುವುದರಿಂದ ನಿಯಂತ್ರಣ ಮಾಡಬಹುದು. ಬೇಸಿಗೆಯಲ್ಲಿ ಈ ತರಕಾರಿಗಳಿಗೆ ಉತ್ತಮ ಬೇಡಿಕೆ ಇರುತ್ತದೆ.
ಮೂಲಂಗಿ
ಬೇಸಿಗೆಯಲ್ಲಿ ಉತ್ತಮವಾಗಿ ಬೆಳೆಯುವ ತರಕಾರಿ ಇದು. ಮೂಲಂಗಿಯನ್ನು ಮೂಲವ್ಯಾಧಿ ಮತ್ತು ಇತರ ಪಚನಕ್ರಿಯೆಯ ಸಮಸ್ಯೆಗಳಿಗೆ ವೈದ್ಯರು ಶಿಫಾರಸ್ಸು ಮಾಡುತ್ತಾರೆ. ಚೆಲ್ಲುವ ವಿಧಾನದಿಂದ ಬಿತ್ತನೆ ಮಾಡಬೇಕು. ಸಡಿಲವಾದ ಭೂಮಿ, ನೀರು ಬಸಿದು ಹೋಗುವ ಮಣ್ಣು ಇದರ ಬೇಸಾಯಕ್ಕೆ ಸೂಕ್ತ. ಉತ್ತಮವಾದ ಮೂಲಂಗಿ ಗಡ್ಡೆ ಬರಬೇಕಾದರೆ ಉತ್ತಮ ಪ್ರಮಾಣದಲ್ಲಿ ಪ್ರತಿ ಗುಂಟೆಗೆ 1 ಕೆ.ಜಿ. ಪೊಟ್ಯಾಷ್ ಗೊಬ್ಬರ ಕೊಡುವುದು ಉತ್ತಮ.
ಬೇಸಿಗೆ ಹಂಗಾಮಿನಲ್ಲಿ ತರಕಾರಿ ಬೆಳೆಗಳಿಗೆ ಬಹು ಬೇಡಿಕೆ ಇದ್ದು ಸರಿಯಾದ ಬಿತ್ತನೆ ಸಮಯ ಮತ್ತು ನಿರ್ವಹಣೆಯಿಂದ ಅಧಿಕ ಲಾಭಗಳಿಸುವ ಅವಕಾಶ ಹೆಚ್ಚು ಉಂಟು. ಲಾಭದಾಯಕತೆಯನ್ನು ಉತ್ತೇಜಿಸುವ ಅಂಶಗಳನ್ನು ಅರ್ಥಮಾಡಿಕೊಂಡು ಸರಿಯಾದ ಬೇಸಾಯ ಪದ್ಧತಿಗಳನ್ನು ಅನುಸರಿಸುವುದರ ಮೂಲಕ ಬೇಸಿಗೆ ಹಂಗಾಮಿನಲ್ಲಿ ಉತ್ತಮ ಇಳುವರಿ ಮತ್ತು ಆದಾಯವನ್ನು ಪಡೆಯಬಹುದು.

