ಪ್ರೀಯ ರೈತರೇ ಇವತ್ತು ನಾವು ರಾಜ್ಯ ಸರ್ಕಾರದ ಬಜೆಟ್ ಹಾಗೂ ರೈತರಿಗೆ ಇದರಿಂದ ಆಗುವ ಲಾಭವೇನು? ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ಧನ, ಕೃಷಿ ಅಭಿವೃದ್ಧಿಗೆ ಹೊಸ ಹೊಸ ಪ್ರಯೋಗಗಳನ್ನು ನಡೆಸುವ ಬಗ್ಗೆ ಹಾಗೂ ರೈತರ ಹಿತಾಸಕ್ತಿ ಕಾಪಾಡಲು ಕೈಗೊಳ್ಳಲು ಯಾವ ಯಾವ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಬಜೆಟ್ 2025 ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
* ರಾಜ್ಯದ ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರಿಗೆ ಕೃಷಿಯನ್ನು ಸುಸ್ಥಿರ ಮತ್ತು ಲಾಭದಾಯಕವಾಗಿಸಲು. ನಮ್ಮ ಸರ್ಕಾರವು ರೈತ ಸಮೃದ್ಧಿ ಯೋಜನೆಯನ್ನು ಜಾರಿಗೊಳಿಸಿದೆ. ಪ್ರಸಕ್ತ ಸಾಲಿನಲ್ಲಿ, ಈ ಯೋಜನೆಯಡಿ 10 ಹವಾಮಾನ ವಲಯಗಳಲ್ಲಿ ಕೃಷಿ ಇಲಾಖೆಯ ಅಧೀನದ ಕ್ಷೇತ್ರಗಳಲ್ಲಿ ಸಮಗ್ರ ಕೃಷಿ ಪದ್ಧತಿಯ ಮಾದರಿ ಪ್ರಾತ್ಯಕ್ಷಿಕೆ ತಾಕುಗಳನ್ನು ಅಭಿವೃದ್ಧಿಪಡಿಸಿ, ಈ ಪದ್ಧತಿಯನ್ನು ಅಳವಡಿಸಿಕೊಳ್ಳಲು ರೈತರಿಗೆ ಪ್ರಚುರಪಡಿಸಲಾಗುವುದು.
* 2025-26ನೇ ಸಾಲಿನಲ್ಲಿ ರಾಜ್ಯದಲ್ಲಿ ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ 50 ಸಾವಿರ ರೈತರಿಗೆ ಸಹಾಯಧನ ಒದಗಿಸಲು 428 ಕೋಟಿ ರೂ. ಅನುದಾನ ಕಲ್ಪಿಸಲಾಗುವುದು.
* ಕೃಷಿ ಬೆಳೆಗಳಲ್ಲಿ ನೀರನ್ನು ಸಮರ್ಥ ಬಳಕೆ ಮಾಡಿ. ಮಳೆಯಾಶ್ರಿತ ಪ್ರದೇಶದಲ್ಲಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಂದಾಜು 1.81 ಲಕ್ಷ ರೈತರಿಗೆ ಹನಿ ಮತ್ತು ತುಂತುರು ನೀರಾವರಿ ಘಟಕಗಳ ಅಳವಡಿಕೆಗೆ 440ರೂ. ಸಹಾಯ ಧನವನ್ನು ಒದಗಿಸಲಾಗುವುದು.
* ತೊಗರಿ ಬೆಳೆಯಲ್ಲಿ ನೂತನ ತಾಂತ್ರಿಕತೆಗಳ ಅಳವಡಿಕೆ. ಕ್ಷೇತ್ರ ವಿಸ್ತರಣೆ ಮತ್ತು ತೊಗರಿಯನ್ನು ಅಂತರ ಬೆಳೆಯನ್ನಾಗಿ ಪ್ರೋತ್ಸಾಹಿಸುವುದರ ಮೂಲಕ ಉತ್ಪಾದನೆಯಲ್ಲಿ ರಾಷ್ಟ್ರದಲ್ಲೇ ಮುಂಚೂಣಿ ರಾಜ್ಯವನ್ನಾಗಿಸಲು ಉದ್ದೇಶಿಸಿದೆ. ಈ ಮೂಲಕ ರೈತರ ಆದಾಯ ಮತ್ತು ಪೌಷ್ಟಿಕ ಭದ್ರತೆಯನ್ನು ಸುಧಾರಿಸಲು 88 ಕೋಟಿ ರೂ. ಒದಗಿಸಲಾಗುವುದು.
* ರಾಜ್ಯದಲ್ಲಿ 6,000 ಕಿರು ಆಹಾರ ಸಂಸ್ಕರಣಾ ಘಟಕಗಳು ಹಾಗೂ 14 ಸಾಮಾನ್ಯ ಇನ್‌ಕ್ಯೂಬೇಷನ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 5,000 ಕಿರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಕ್ರಮವಹಿಸಲಾಗುವುದು.
* ಕೃಷಿ ಭಾಗ್ಯ ಯೋಜನೆಯಡಿ ಮೂರು ಲಕ್ಷಕ್ಕಿಂತ ಅಧಿಕ ಕೃಷಿ ಹೊಂಡಗಳನ್ನು ನಿರ್ಮಿಸಿ ಮಳೆಯಾಶ್ರಿತ ಕೃಷಿ ಪ್ರದೇಶದ ಬೆಳೆಗಳಿಗೆ ರಕ್ಷಣಾತ್ಮಕ ನೀರಾವರಿ ಒದಗಿಸುವುದರೊಂದಿಗೆ ರೈತರ ಬೆಳೆಗಳ ಉತ್ಪಾದಕತೆ ಹಾಗೂ ಆದಾಯವನ್ನು ಹೆಚ್ಚಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಯೋಜನೆಯಡಿ 12,000 ಕೃಷಿ ಹೊಂಡಗಳನ್ನು ನಿರ್ಮಿಸಲಾಗುವುದು.
* ಜಾಗತಿಕ ಮಟ್ಟದಲ್ಲಿ ಡಿಜಿಟಲ್, ಕೃತಕ ಬುದ್ಧಿಮತ್ತೆ ಹಾಗೂ ಜಿಯೋ ಸ್ಪೇಷಿಯಲ್ ಕ್ಷೇತ್ರದಲ್ಲಿ ಆಗುತ್ತಿರುವ ಅವಿಷ್ಕಾರಗಳನ್ನು ಕೃಷಿ ಕ್ಷೇತ್ರದಲ್ಲಿ ಅಳವಡಿಸಿ, ಡಿಜಿಟಲ್ ಕೃಷಿ ಸೇವೆಗಳ ಕೇಂದ್ರವನ್ನು ಸ್ಥಾಪಿಸಲಾಗುವುದು. ಈ ಕೇಂದ್ರವು ರೈತರಿಗೆ ಮತ್ತು ನೀತಿ ನಿರೂಪಕರಿಗೆ ಬೆಳೆಗಳ ಕುರಿತು ನಿಖರವಾದ ತೀರ್ಮಾನವನ್ನು ಕೈಗೊಂಡು ಬೆಳೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ.
* ರಾಜ್ಯದಲ್ಲಿ ಚಾಲ್ತಿಯಿರುವ ಹವಾಮಾನ ವಲಯಗಳ ವರ್ಗೀಕರಣ ಬಹಳ ವರ್ಷಗಳ ಹಿಂದೆ ಗುರುತಿಸಲಾಗಿರುವುದರಿಂದ ಹಾಗೂ ಇತ್ತೀಚಿನ ವರ್ಷಗಳ ನೈಸರ್ಗಿಕ ವೈಪರೀತ್ಯಗಳ ಬದಲಾವಣೆಯಿಂದ ಹವಾಮಾನ ವಲಯಗಳನ್ನು ಮರುವ್ಯಾಖ್ಯಾನಗೊಳಿಸಲು ತಜ್ಞರ ಸಮಿತಿಯನ್ನು ರಚಿಸಲಾಗುವುದು.
* ರೈತರಿಗೆ ಮಣ್ಣು ಪರೀಕ್ಷೆ ಹಾಗೂ ಅವರು ಬಳಸುವ ಪರಿಕರಗಳಾದ ರಸಗೊಬ್ಬರ, ಬಿತ್ತನೆ ಬೀಜ, ಸಸ್ಯ ಸಂರಕ್ಷಣಾ ಔಷಧಿ, ಜೈವಿಕ ಗೊಬ್ಬರ ಇತ್ಯಾದಿಗಳ ಗುಣಮಟ್ಟವನ್ನು ಪರೀಕ್ಷಿಸಲು ಇಲಾಖೆಯಡಿ ಇರುವ 58 ಪ್ರಯೋಗಾಲಯಗಳನ್ನು ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಬಲವರ್ಧನೆಗೊಳಿಸಲಾಗುವುದು.
* ಸುಸ್ಥಿರ ಸಾವಯವ ಕೃಷಿಯನ್ನು ಉತ್ತೇಜಿಸಲು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕನ್ನು ರಾಜ್ಯದ ಪ್ರಥಮ ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸಿ, ರೈತರ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಸಾವಯವ ಪ್ರಮಾಣೀಕರಣ ವ್ಯವಸ್ಥೆ ಕಲ್ಪಿಸಲಾಗುವುದು.
* ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಒಟ್ಟಾರೆ 3,000 ಹೆಕ್ಟೇರ್ ಪ್ರದೇಶದಲ್ಲಿ ಸಮಗ್ರ ಮಣ್ಣು ಮತ್ತು ನೀರಿನ ನಿರ್ವಹಣೆ, ಸಮರ್ಪಕ ತ್ಯಾಜ್ಯ ನಿರ್ವಹಣೆ, ನೀರಿನ ಬಳಕೆ ಮತ್ತು ಸಮತೋಲನ ಪೋಷಕಾಂಶ ನಿರ್ವಹಣೆಯನ್ನು ಸಕ್ಕರೆ ಕಾರ್ಖಾನೆಗಳ ಸಹಯೋಗದೊಂದಿಗೆ ಜಾರಿಗೊಳಿಸಲಾಗುವುದು.
* ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಯೋಜನೆಯಡಿ ಈವರೆಗೆ ಒಟ್ಟಾರೆ 12.90 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭೂ-ಸಂಪನ್ಮೂಲ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಮೀಕ್ಷೆಯನ್ನು ಪೂರ್ಣಗೊಳಿಸಲು ಕ್ರಮವಹಿಸಲಾಗುವುದು. ಭೂ-ಸಂಪನ್ಮೂಲ ಸಮೀಕ್ಷೆ ಆಧಾರದ ಮೇಲೆ ರೈತರು ಸೂಕ್ತವಾದ ಬೆಳೆಗಳನ್ನು ಬೆಳೆಯಲು, ಅಗತ್ಯವಿರುವ ರಾಸಾಯನಿಕ ಗೊಬ್ಬರ ಹಾಗೂ ಪೋಷಕಾಂಶಗಳನ್ನು ಬಳಸಿ ಬೆಳೆಗಳ ಉತ್ಪಾದನೆ ಹೆಚ್ಚಿಸಲು ಪ್ರೋತ್ಸಾಹಿಸಲಾಗುವುದು.
* ಮಂಡ್ಯ ಕೃಷಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಈಗಾಗಲೇ ಅನುಮೋದನೆ ನೀಡಿದ್ದು, ಮೂಲಸೌಕರ್ಯ ಕಲ್ಪಿಸಲು 25 ಕೋಟಿ ರೂ. ಒದಗಿಸಿ, ಪ್ರಸಕ್ತ ಸಾಲಿನಲ್ಲಿ ತರಗತಿಗಳನ್ನು ಆರಂಭಿಸಲಾಗುವುದು.
* ರಾಮನಗರ ಮತ್ತು ಶಿಡ್ಲಘಟ್ಟ ಹೈ-ಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಯ ಮೊದಲನೇ ಹಂತದ ಕಾಮಗಾರಿಗಳು ಮುಕ್ತಾಯಗೊಳ್ಳಲಿದ್ದು, ಪ್ರಸಕ್ತ ಸಾಲಿನಲ್ಲಿ ಎರಡನೇ ಹಂತದ ಕಾಮಗಾರಿಗಳನ್ನು 250 ಕೋಟಿ ಅನುಷ್ಠಾನಗೊಳಿಸಲಾಗುವುದು. ರೂ. ವೆಚ್ಚದಲ್ಲಿ
* ಮೈಸೂರು ಮತ್ತು ಸುತ್ತಮುತ್ತಲಿನ ಭಾಗದ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವಂತೆ ಮೈಸೂರಿನಲ್ಲಿ ರೇಷ್ಮೆಗೂಡಿನ ಮಾರುಕಟ್ಟೆಯನ್ನು NABARD ಸಹಯೋಗದಲ್ಲಿ ಸ್ಥಾಪಿಸಲಾಗುವುದು