ಈ ಬಾರಿ ನೈಋತ್ಯ ಮುಂಗಾರು ಮಳೆ ರೈತರಿಗೆ ನಿರಾಸೆ ಉಂಟು ಮಾಡಿದೆ. ಜೂನ್ ತಿಂಗಳಿನಲ್ಲಿ ಮಳೆಯಾಗದೇ ಮಳೆ ಕೊರತೆ ಉಂಟಾಗಿತ್ತು. ಜುಲೈ ತಿಂಗಳಿನಲ್ಲಿ ದಿನಗಳ ಕಾಲ ಮಾತ್ರ ಮಳೆಯಾಗಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳಿಗೆ ಭಾರೀ ಹಿನ್ನಡೆಯಾಗಿದೆ.ಧಾರವಾಡ ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಮಳೆಯು ಸರಿಯಾದ ಸಮಯಕ್ಕೆ ಬಾರದೆ ಇರುವುದರಿಂದ ಮುಂಗಾರು ಬೆಳೆಗಳ ಬಿತ್ತನೆಯನ್ನು ತಡವಾಗಿ ಜುಲೈ ತಿಂಗಳಿನಲ್ಲಿ ಮಾಡಲಾಗಿದೆ.
ತಡವಾಗಿ ಬಿತ್ತನೆಯಾ ಕಾರಣದಿಂದಾಗಿ ಮುಂಗಾರು ಬೆಳೆಗಳಿಗೆ ಮುಂದಿನ ದಿನಗಳಲ್ಲಿ ಹಲವಾರು ಕೀಟ, ರೋಗಗಳು ಕಾಣಿಸಿಕೊಳ್ಳುವ ನಿರೀಕ್ಷೆ ಇದೆ. ಆದ್ದರಿಂದ ಇವುಗಳ ಹತೋಟಿ ಕ್ರಮಗಳ ಬಗ್ಗೆ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ರೈತರಿಗೆ ಸಲಹೆಗಳನ್ನು ನೀಡಿದ್ದಾರೆ.
ರೈತರು ವಿವಿಧ ಬೆಳೆಗಳ ರಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಅಲ್ಲದೇ ಹತ್ತಿರದ ಕೃಷಿ ಇಲಾಖೆ ಅಧಿಕಾರಿಗಳನ್ನು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.
* ಗೋವಿನಜೋಳಕ್ಕೆ ಫಾಲ್ ಸೈನಿಕ ಹುಳು: ಪ್ರತಿ ಎಕರೆಗೆ 10 ಮೋಹಕ ಬಲೆಗಳನ್ನು ಹಾಕಬೇಕು. 2 ಗ್ರಾಂ ಮೆಟಾರೈಜಿಯಂ ರಿಲೈ ಶಿಲೀಂಧ್ರನಾಶಕದ ಜೊತೆಗೆ ಶೇ.0.1ರ ಟ್ವಿನ್ 80ಯನ್ನು ಪ್ರತಿ ಲೀಟರ್ ನೀರಿಗೆ ಬೆರಸಿ ಬೆಳೆಯ ಸುಳಿಯ ಮೇಲೆ ಬೀಳುವಂತೆ ಸಿಂಪಡಿಸಬೇಕು.
ಬಿತ್ತಿದ 15-20 ದಿನಗಳ ನಂತರ 0.5 ಮಿ.ಲೀ. ಸ್ಪೈನೆಟೊರಾಮ್ 11.7 ಎಸ್. ಸಿ. ಅಥವಾ 0.2 ಮಿ.ಲೀ. ಕ್ಲೋರಂಟ್ರಿನಿಲಿಪ್ರೋಲ್ 18.5 ಎಸ್.ಸಿ. ಅಥವಾ 0.2 ಗ್ರಾಂ. ಇಮಾಮೆಕ್ಟೀನ್ ಬೆಂಜೋಯೆಟ್ನ್ನು 5.0 ಎಸ್.ಜಿ. ಅಥವಾ 0.15 ಗ್ರಾಂ ಇಮಾಮೆಕ್ಟಿನ್ ಬೆಂಜೋಯೇಟ್ 5% + ಲುಫೆನ್ಯೂರಾನ್ 40% ಡಬ್ಲು.ಜಿ. ಅಥವಾ 0.4 ಮಿ.ಲೀ ಕ್ಲೋರಂಟ್ರನಿಲಿಪ್ರೋಲ್ 9.3% + ಲ್ಯಾಂಬ್ಡಾ ಸೈಯಾಲೋಥ್ರಿನ್ 4.6% ಝೆಡ್.ಸಿ. ಪ್ರತೀ ಲೀಟರ್ ನೀರಿಗೆ ಬೆರೆಸಿ ಬೆಳೆಯ ಸುಳಿಯಲ್ಲಿ ಬೀಳುವಂತೆ ಸಿಂಪಡಿಸಬೇಕು. ಅವಶ್ಯವಿದ್ದಲ್ಲಿ ಪುನರಾವರ್ತಿತ ಕೀಟನಾಶಕಗಳ ಸಿಂಪರಣೆ ಮಾಡಬೇಕು ಎಂದು ಸಲಹೆ ನೀಡಲಾಗಿದೆ.
* ಸೋಯಾಅವರೆ. ಎಲೆ ತಿನ್ನುವ ಹುಳುಗಳು. ಕೀಟದ ಸಮೀಕ್ಷೆ ಮಾಡಲು 30 ದಿನಗಳ ಬೆಳೆಯಲ್ಲಿ ಪ್ರತಿ ಎಕರೆಗೆ 6 ಸ್ಪೋಡಾಪ್ಟೆರಾ ಮೋಹಕ ಬಲೆಗಳನ್ನು ಬೆಳೆಗಿಂತ ಒಂದು ಅಡಿ ಎತ್ತರದಲ್ಲಿ ನೇತು ಹಾಕಬೇಕು. ಬಿತ್ತಿದ 35 ರಿಂದ 40 ದಿನಗಳಲ್ಲಿ ಜೈವಿಕ ಕೀಟನಾಶಕಗಳಾದ 2 ಗ್ರಾಂ. ಮೆಟಾರೈಜಿಯಂ ರಿಲೈ ಶಿಲೀಂಧ್ರನಾಶಕದ ಜೊತೆಗೆ ಶೇ.0.1ರ ಟ್ವಿನ್ 80ಯನ್ನು ಅಥವಾ 1 ಮಿ.ಲೀ. ಬಿ.ಟಿ. ಅಥವಾ ಎನ್.ಪಿ.ವಿ. ನಂಜಾಣು (108 ಪಿ.ಓ.ಬಿ/ಮಿಲೀ) ಪ್ರತಿ ಲೀಟರ್ ನೀರಿಗೆ 1 ಮಿ.ಲೀ. ಯಂತೆ ಬೆರೆಸಿ ಸಾಯಂಕಾಲ ಸಿಂಪರಣೆ ಮಾಡಬೇಕು. 0.2 ಮಿ.ಲೀ. ಕ್ಲೋರಂಟ್ರನಿಲಿಪ್ರೋಲ್ 18.5% ಎಸ್.ಸಿ. ಅಥವಾ 0.5 ಮಿ.ಲೀ. ಲ್ಯಾಂಬ್ಡಾಸೈಯಾಲೋಥ್ರಿನ್ 5 ಇ.ಸಿ. ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.
* ತುಕ್ಕುರೋಗ. ಕಾಯಿ ಮೇಲೆ ಬರುವ ಅಂತ್ರಾಕ್ನೋಸ್ ರೋಗ, ಹಳದಿ ನಂಜು ರೋಗ: ಬೆಳೆ ಹೂವಾಡುವ ಹಂತದಲ್ಲಿದ್ದಾಗ ಪ್ರತಿ ಲೀಟರ್ ನೀರಿಗೆ 1.0 ಮಿ.ಲೀ. ಹೆಕ್ಸಾಕೋನಜೋಲ್ 5 ಇ.ಸಿ. ಅಥವಾ 1.0 ಮಿ.ಲೀ. ಪ್ರೊಪಿಕೋನಾಜೋಲ್ 25 ಇ.ಸಿ. ಅಥವಾ 1.0 ಮಿ.ಲೀ. ಟೆಬುಕೊನಾಜೋಲ್ 25.9 ಇಸಿ ಅಥವಾ 10 ಮಿ.ಲೀ. ಬೇವಿನ ಎಣ್ಣೆ ಬೆರೆಸಿ ಸಿಂಪಡಿಸಬೇಕು.
ರೋಗದ ತೀವ್ರತೆಗನುಗುಣವಾಗಿ 15 ದಿನಗಳ ಅಂತರದಲ್ಲಿ ಮತ್ತೊಂದು ಸಿಂಪರಣೆಯನ್ನು ಕೈಗೊಳ್ಳಬೇಕು. ಹಳದಿ ನಂಜು ರೋಗದ ಹತೋಟಿಗಾಗಿ ಪ್ರತಿ ಲೀಟರ್ ನೀರಿಗೆ 0.3 ಗ್ರಾಂ ಥೈಯೋಮಿಥಾಕ್ಸಾಮ್ 25 ಡಬ್ಲು.ಜಿ. ಅಥವಾ 5 ಮಿ.ಲೀ. ಬೇವಿನ ಮೂಲದ ಕೀಟನಾಶಕ ಬೆರೆಸಿ ಸಿಂಪಡಿಸಬೇಕು.
ತದನಂತರ ನಂಜುರೋಗ ತಗುಲಿದ ಗಿಡಗಳನ್ನು ಕಿತ್ತು ಮಣ್ಣಿನಲ್ಲಿ ಹೂಳಬೇಕು. 20 ಗ್ರಾಂ. ಡಿಎಪಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಹೂವಾಡು ಸಮಯದಲ್ಲಿ ಸಿಂಪಡಿಸಬೇಕು. ಪ್ರತಿ ಎಕರೆಗೆ 15-20ರಂತೆ ಹಳದಿ ಬಣ್ಣದ ಅಂಟಿನ ಬಲೆಗಳನ್ನು ಬೆಳೆಯ ಎತ್ತರಕ್ಕೆ ನೆಡಬೇಕು ಎಂದು ಸಲಹೆಗಳನ್ನು ನೀಡಲಾಗಿದೆ.