ಭೂಮಿಯಲ್ಲಿ ಸಿಕ್ಕ ನಿಧಿ ಯಾರ ಆಸ್ತಿ: ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದ ನಿಧಿ ಪ್ರಕರಣವು ದೇಶದ ಗಮನ ಸೆಳೆದಿದೆ. ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ 470 ಗ್ರಾಂ ನಿಧಿ ಸಿಕ್ಕಿದೆ. ಪುರತತ್ವ ಇಲಾಖೆಯು ಅಧಿಕಾರಿಯೊಬ್ಬರು ನೀಡಿದ್ದ ಹೇಳಿಕೆಯು ಭಾರೀ ಗೊಂದಲಕ್ಕೆ ಕಾರಣವಾಗಿತ್ತು. ಮುತ್ತಜ್ಜರ ಆಭರಣ ಇರಬಹುದು ಎಂದು ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿ ರಮೇಶ್ ಮೂಲಿಮನಿ ಹೇಳಿದ್ದರು.
ಇದು ಯಾವುದಾದರೂ ಜಾಗದಲ್ಲಿ ನಿಧಿ / ಚಿನ್ನಾಭರಣ ಸಿಕ್ಕರೆ ಯಾರಿಗೆ ಸೇರಬೇಕು, ನಿಧಿ ಅಲ್ಲದಿದ್ದರೆ ಕುಟುಂಬಸ್ಥರಿಗೇ ಸೇರಬೇಕಲ್ಲವೇ ಎನ್ನುವ ಗೊಂದಲಗಳು ಶುರುವಾಗಿದ್ದವು. ಕೊನೆಗೂ ಈ ಎಲ್ಲಾ ಗೊಂದಲಗಳಿಗೂ ತೆರೆ ಬಿದ್ದಂತೆ ಆಗಿದೆ.
ಇಲ್ಲಿನ ಐತಿಹಾಸಿಕ ಪ್ರಸಿದ್ಧ ಲಕ್ಕುಂಡಿ ಗ್ರಾಮದಲ್ಲಿ ಇತ್ತೀಚೆಗೆ ಪತ್ತೆಯಾದ ನಿಧಿ (ಚಿನ್ನಾಭರಣಗಳ) ಪ್ರಕರಣಕ್ಕೆ ಸಂಬಂಧಿಸಿದಂತೆ ಪುರಾತತ್ವ ಇಲಾಖೆಯು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. ಲಕ್ಕುಂಡಿ ಗ್ರಾಮಕ್ಕೆ ಹಂಪಿಯ ಪುರಾತತ್ವಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ತಂಡ ಪರಿಶೀಲನೆ ಮಾಡಿದ್ದು, ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ.
ಏನೇ ಸಿಕ್ಕರೂ ಅದು ಸರ್ಕಾರ ಸೇರಬೇಕು
ಇನ್ನು ಭೂಮಿಯಲ್ಲಿ ಏನಾದರೂ ಸಿಕ್ಕರೆ, ಅದು ಆ ಭೂಮಿಯ ವಾರಸುದಾರರಿಗೆ ಸಿಗಬೇಕೇ ಅಥವಾ ಸರ್ಕಾರಕ್ಕೆ ಸೇರಬೇಕೇ ಎನ್ನುವ ಗೊಂದಲಗಳಿಗೆ ಪುರಾತತ್ವ ಇಲಾಖೆಯ ಅಧಿಕಾರಿಗಳು ತೆರೆ ಎಳೆದಿದ್ದಾರೆ. ಪುರಾತತ್ವ ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ನಿರ್ದೇಶಕ ಸೈಜೇಶ್ವರ ಅವರು, 1962ರ ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಹಾಗೂ ಪುರಾತತ್ವ ನಿವೇಶನಗಳು ಹಾಗೂ ಅವಶೇಷಗಳ ನಿಯಮಗಳ ಪ್ರಕಾರ 10 ರೂಪಾಯಿಗಿಂತಲೂ ಹೆಚ್ಚಿನ ಮೊತ್ತದ ಮೌಲ್ಯದ ವಸ್ತು ಭೂಮಿಯೊಳಗೆ ಸಿಕ್ಕರೂ ಸಹ ಅದು ಸರ್ಕಾರದ ಆಸ್ತಿ ಆಗಲಿರಲಿದೆ. ಅದು ಸರ್ಕಾರಕ್ಕೇ ಸಲ್ಲುತ್ತದೆ ಎಂದು ಅವರು ಹೇಳಿದ್ದಾರೆ.
ಅಲ್ಲದೇ ಭೂಮಿಯ ಒಂದು ಅಡಿ ಆಳದಲ್ಲಿ ಯಾವುದೇ ವಸ್ತು ಸಿಕ್ಕರೂ ಅದನ್ನು ನಿಧಿ ಎಂದೇ ಪರಿಗಣಿಸಬಹುದಾಗಿದೆ. ಇನ್ನು ಈ ರೀತಿ ಸಿಗುವ ನಿಧಿಯಲ್ಲಿ ಒಟ್ಟು ಮೊತ್ತದಲ್ಲಿ 5ನೇ ಒಂದು ಭಾಗದಷ್ಟು ಅಂದರೆ ಅಂದಾಜು ಶೇ. 20 ಹಣವನ್ನು ನಿಧಿ ಪತ್ತೆ ಮಾಡಿದ ಕುಟುಂಬಕ್ಕೆ ಕೊಡಬೇಕು ಎನ್ನುವ ಕಾನೂನು ಸಹ ಇದೆ ಎಂದು ಅವರು ಹೇಳಿದ್ದಾರೆ.
ಇನ್ನು ಇಲ್ಲಿನ ಲಕ್ಕುಂಡಿ ಗ್ರಾಮದಲ್ಲಿ ಸಿಕ್ಕಿರುವ ನಿಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಸಿ.ಸಿ. ಪಾಟೀಲ್ ಅವರು ಮೆಚ್ಚುಗೆ ಸೂಚಿಸಿದ್ದಾರೆ. ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ಗಂಗವ್ವ ರಿತ್ತಿ ಅವರನ್ನು ಶಾಸಕ ಸಿ.ಸಿ ಅವರು ಸನ್ಮಾನಿಸಿದ್ದಾರೆ. ಅಲ್ಲದೇ ಈ ಕುಟುಂಬಕ್ಕೆ ಸರ್ಕಾರದಿಂದ ಸಿಗಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ಕೊಡಿಸುವುದಕ್ಕೆ ಪ್ರಯತ್ನ ಮಾಡಲಾಗುವುದು. ಇನ್ನು ಮನೆ ಕಟ್ಟಿಕೊಳ್ಳುವುದಕ್ಕೆ ಜಿಲ್ಲಾಡಳಿತದ ವತಿಯಿಂದ ಸಹಾಯ ಮಾಡಲಾಗುವುದು ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಸರ್ಕಾರಕ್ಕೆ ನಿಧಿ ಒಪ್ಪಿಸಿರುವ ಕುಟುಂಬಕ್ಕೆ ಸರ್ಕಾರದಿಂದ ಸಿಗಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ಕೊಡಿಸಲು ಶ್ರಮಿಸಲಾಗುವುದು. ಚಿನ್ನಾಭರಣಗಳನ್ನು ಸರ್ಕಾರಕ್ಕೆ ಒಪ್ಪಿಸಿದ ಕುಟುಂಬದ ಪ್ರಾಮಾಣಿಕತೆಯನ್ನು ನಾವು ಗೌರವಿಸುತ್ತೇವೆ. ಆದರೆ ಅದು ನಿಧಿ ಅಲ್ಲ, ಕುಟುಂಬದವರ ಚಿನ್ನಾಭರಣೆ ಎಂದು ಹೇಳುವ ಮೂಲಕ ಪುರಾತತ್ವ ಇಲಾಖೆಯ ಅಧೀಕ್ಷಕ ರಮೇಶ್ ಮೂಲಿಮನಿ ಹೇಳಿಕೆ ಅನಗತ್ಯ ಗೊಂದಲ ಸೃಷ್ಟಿ ಮಾಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಯ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿಯೂ ಅವರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ.

