Ration card : ರಾಜ್ಯದ ಪಡಿತರ ಚೀಟಿದಾರರಿಗೆ ಸಿಎಂ ಬಿಗ್‌ ಗುಡ್‌ನ್ಯೂಸ್‌

ಸಿಎಂ ಬಿಗ್‌ ಗುಡ್‌ನ್ಯೂಸ್‌ : ರಾಜ್ಯದ ಪಡಿತರ ಚೀಟಿದಾರರಿಗೆ ಸಿಎಂ ಸಿದ್ದರಾಮಯ್ಯ ಅವರು ಸಿಹಿಸುದ್ದಿ ನೀಡಿದ್ದಾರೆ. ಈಗಾಗಲೇ ರಾಜ್ಯದ ಜನತೆಗಾಗಿ ಬಿಪಿಎಲ್ ಕುಟುಂಬಗಳಿಗೆ 10 ಕೆಜಿ ಅಕ್ಕಿ ಉಚಿತವಾಗಿ ವಿತರಿಸುವ ಅನ್ನಭಾಗ್ಯ ಎನ್ನುವ ಮಹತ್ವದ ಯೋಜನೆ ಜಾರಿ ಮಾಡಲಾಗಿದ್ದು ಇತ್ತೀಚೆಗೆ ಇದರಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದೆ.

ಇದೀಗ ಹೆಚ್ಚುವರಿ 5 ಕೆ.ಜಿ ಅಕ್ಕಿಯ ಬದಲು “ಇಂದಿರಾ ಆಹಾರ ಕಿಟ್” ನೀಡಲಾಗುತ್ತಿದೆ. ಈ ಕಿಟ್‌ನಲ್ಲಿ 5 ಕೆ.ಜಿ ಅಕ್ಕಿ, ತೊಗರಿಬೇಳೆ, ಅಡುಗೆ ಎಣ್ಣೆ, ಸಕ್ಕರೆ ಮತ್ತು ಉಪ್ಪು ಸೇರಿದಂತೆ ಇತರೆ ದಿನಸಿ ಇರಲಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.

ಇಂದು ಇಂದಿರಾ ಆಹಾರ ಕಿಟ್ ಯೋಜನೆ ಅನುಷ್ಠಾನ ಕುರಿತು ಸಿಎಂ ಸಭೆ ನಡೆಸಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆ.ಜಿ ಅಕ್ಕಿ ಬದಲು ಇಂದಿರಾ ಆಹಾರ ಕಿಟ್ ವಿತರಿಸುವ ಕುರಿತು ಈಗಾಗಲೇ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ಯೋಜನೆಯಡಿ ಕುಟುಂಬದ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಐದು ಕೆ.ಜಿ ಅಕ್ಕಿ ಬದಲಾಗಿ ತೊಗರಿ ಬೇಳೆ, ಸೂರ್ಯಕಾಂತಿ ಎಣ್ಣೆ, ಸಕ್ಕರೆ, ಉಪ್ಪು ನೀಡಲಾಗುವುದು ಎಂದಿದ್ದಾರೆ.

ಇಂದಿರಾ ಕಿಟ್‌ಗೆ ತಿಂಗಳಿಗೆ 466 ಕೋಟಿ ರೂ. ವೆಚ್ಚ

ಪ್ರತಿ ತಿಂಗಳು ಪ್ರಸ್ತುತ 1,25,08,262 ಇಂದಿರಾ ಆಹಾರ ಕಿಟ್‌ಗಳ ಅಗತ್ಯವಿದೆ. ಇದಕ್ಕಾಗಿ ಪ್ರತಿ ತಿಂಗಳು ರೂ.466 ಕೋಟಿ ವೆಚ್ಚವಾಗಲಿದೆ. ಈ ಯೋಜನೆಯಡಿ ಪ್ರತಿ ತಿಂಗಳು ಒಟ್ಟು 18,628 ಮೆಟ್ರಿಕ್‌ ಟನ್ ತೊಗರಿ ಬೇಳೆ ಮತ್ತು ತಲಾ 12,419 ಮೆಟ್ರಿಲ್‌ ಟನ್ ಸೂರ್ಯಕಾಂತಿ ಎಣ್ಣೆ, ಸಕ್ಕರೆ ಮತ್ತು ಉಪ್ಪು ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಆಹಾರ ಕಿಟ್‌ನಲ್ಲಿ ಪೌಷ್ಟಿಕಾಂಶಗಳಿಂದ ಕೂಡಿರುವ ತೊಗರಿ ಬೇಳೆ ಗರಿಷ್ಟ ಪ್ರಮಾಣದಲ್ಲಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

ನಾಫೆಡ್, ಎನ್‌ಸಿಸಿಎಫ್‌ನಂತಹ ಕೇಂದ್ರ ಸರಬರಾಜು ಸಂಸ್ಥೆಗಳ ಮೂಲಕ ಅಥವಾ ಖರೀದಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಕೆಟಿಪಿಪಿ ಅನ್ವಯ ಕೈಗೊಳ್ಳಲು ಕ್ರಮ ಕೈಗೊಳ್ಳಬೇಕು. ಉತ್ತಮ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿ ರಾಜಿಯಾಗಬಾರದು. ಅದೇ ರೀತಿ ಅಳತೆಯಲ್ಲಿ ಹೆಚ್ಚು ಕಡಿಮೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ನ್ಯಾಯಬೆಲೆ ಅಂಗಡಿಗಲ್ಲಿ ಕ್ಯುಆರ್‌ ಕೋಡ್‌

ಪಡಿತರದಲ್ಲಿ ಅತ್ಯುತ್ತಮ ಗುಣಮಟ್ಟ ಕಾಯ್ದುಕೊಳ್ಳಬೇಕು. ಯಾವುದೇ ರೀತಿಯ ದೂರಿಗೆ ಅವಕಾಶವಾಗದಂತೆ ಪಾರದರ್ಶಕವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕು. ಪ್ರತಿ ನ್ಯಾಯಬೆಲೆ ಅಂಗಡಿಯಲ್ಲಿಯೂ ಸಹ ಕ್ಯೂಆರ್ ಕೋಡ್‌ ಸ್ಕ್ಯಾನ್ ಮಾಡಬಹುದಾದ ತಂತ್ರಾಂಶವನ್ನು ಅಳವಡಿಸಿ, ಅದರ ಆಧಾರದ ಮೇಲೆ ಪಡಿತರ ಚೀಟಿದಾರರಿಗೆ ಇಂದಿರಾ ಕಿಟ್ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಸರಬರಾಜು ಆದ ಕಿಟ್‌ಗಳನ್ನು ನಿಗಮದ ಗೋದಾಮು ಅಥವಾ ಸಗಟು ಮಳಿಗೆಗಳ ಮೂಲಕ ನ್ಯಾಯಬೆಲೆ ಅಂಗಡಿಗಳಿಗೆ 10ನೇ ತಾರೀಖಿನೊಳಗೆ ವಿತರಣೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

Spread positive news

Leave a Reply

Your email address will not be published. Required fields are marked *