ಬದನೆ ಬೆಳೆಕ್ರಮ ಹಾಗೂ ಹತೋಟಿ, ಕಂಪ್ಲೀಟ್ ಡಿಟೇಲ್ಸ್

ಬದನೆ ಉಷ್ಣವಲಯದ ಬೆಳೆ. ಇದು ಹಿಮವನ್ನು ಸಹಿಸುವುದಿಲ್ಲ. ಹೆಚ್ಚು ಉಷ್ಣೆತೆಯಿರುವ ದೀರ್ಘಾವಧಿ ದಿವಸಗಳಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ. ಬದನೆ ಬೀಜ ಮೊಳೆಯಲು ಸುಮಾರು 250 ಸೆ. ಉಷ್ಣತೆ ಉತ್ತಮ. ಭಾರತದಲ್ಲಿ ಎಲ್ಲ ಹವಾಗುಣಗಳಲ್ಲಿ ಇದರ ಬೇಸಾಯವಿದೆ.

ಬದನೆಯನ್ನು ವಿವಿಧ ಮಣ್ಣುಗಳಲ್ಲಿ ಬೆಳೆಸಬಹುದು. ಆದರೆ ಇದು ಯಾವುದೇ ಹಂತದಲ್ಲಿ ಜೌಗನ್ನು ಸಹಿಸುವುದಿಲ್ಲ. ರವೆಗೋಡು ಮಣ್ಣಿನಲ್ಲಿ ಉತ್ಕ್ರಷ್ಟವಾಗಿ ಬೆಳೆಯುತ್ತದೆ. ಮರಳುಗೋಡು ಮಣ್ಣಿನಲ್ಲಿ ಸಹ ಇದನ್ನು ಯಶಸ್ವಿಯಾಗಿ ಬೆಳೆಯಬಹುದು.

ಬದನೆಯನ್ನು ಮೆಣಸಿನಕಾಯಿ, ಈರುಳ್ಳಿ ಮತ್ತು ಸೊಪ್ಪು ಇತ್ಯಾದಿಗಳೊಂದಿಗೆ ಮಿಶ್ರಬೆಳೆಯಾಗಿ ಬೆಳೆಯುವುದು ರೂಢಿಯಲ್ಲಿದೆ.

ಬದನೆಕಾಯಿಯ ಬಣ್ಣ ಮತ್ತು ಆಕಾರವನ್ನು ಅವಲಂಬಿಸಿ ಬದನೆ ತಳಿಗಳ ವಿಂಗಡಣೆ ಆಗಿದೆ. ಅಂತೆಯೇ ಸಸ್ಯಗಳಲ್ಲಿ ಮುಳ್ಳು ಇರುವುದು ಅಥವಾ ಇಲ್ಲದೆ ಇರುವುದು. ಒಂಟಿ ಅಥವಾ ಗುಂಪಾಗಿ ಕಾಯಿ ಬಿಡುವುದನ್ನು ಗಣನೆಗೆ ತೆಗೆದುಕೊಳ್ಳುವುದೂ ಉಂಟು. ಬಣ್ಣದ ಪ್ರಕಾರ ಬಳಿ, ಹಳದಿ, ಕಂದು, ಹಸುರು, ಕಪ್ಪು, ಕೆನೆಗೆಂಪು, ಊದಾ ಮುಂತಾದ ತಳಿಗಳು ಬೇಸಾಯದಲ್ಲಿವೆ. ಆಕಾರಕ್ಕೆ ಅನುಗಣವಾಗಿ ಗುಂಡು, ಉದ್ದ ಎಂದೂ ಗುಂಪು ಅಥವಾ ಒಂಟಿ ಕಾಯಿಗಳಿಗೆ ಅನುಗುಣವಾಗಿ ಗ್ರೀನ್ ಲಾಂಗ್‍ಕ್ಲಸ್ಟರ್, ಗ್ರೀನ್ ಕ್ಲಸ್ಟರ್, ಕೆಂಗೇರಿ ಪರ್ಪಲ್, ವೈನಾಡ್ ಜಯಂಟ್ ಎಂದೂ ಮುಳ್ಳು ಇಲ್ಲದ ತಳಿಗಳು ಅಮೆರಿಕನ್ ಬ್ಲಾಕ್‍ಬ್ಯೂಟಿ, ನ್ಯೂಯಾರ್ಕ್ ಜಯಂಟ್, ಪೂಸಾಪರ್ಪಲ್ ಲಾಂಗ್, ಪೂಸಾಪರ್ಪಲ್ ರೌಂಡ್ ಹಾಗೂ ಮುಳ್ಳಿರುವ ತಳಿಗಳು ಎಂದೂ ತಳಿವಿಂಗಡಣೆ ಉಂಟು.

ಬದನೆಯ ಬಿತ್ತನೆಬೀಜ ಪ್ರಮಾಣ ಬೀಜದ ಗಾತ್ರ ಮತ್ತು ತೂಕ ಅನುಸರಿಸಿ ಹೆಕ್ಟೇರಿಗೆ 250 ರಿಂದ 500 ಗ್ರಾಮ್ ವರೆಗೆ ಬೇಕಾಗುತ್ತದೆ. ಬೀಜದ ಮೊಳೆಯುವ ಸಾಮರ್ಥ್ಯ 75-80%. ಬೀಜಗಳಿಗೆ ಸುಪ್ತಾವಸ್ಥೆ ಇಲ್ಲ. ಮೊಳೆಯುವ ಸಾಮರ್ಥ್ಯ ಸುಮಾರು ಮೂರು ವರ್ಷ ಪರ್ಯಂತ ಇರುತ್ತದೆ.

ಬದನೆ ಬೀಜವನ್ನು ಒಟ್ಲುಪಾತಿಯಲ್ಲಿ ಚೆಲ್ಲಿ ಸಸಿಗಳನ್ನು ಬೆಳೆಸಿ ಅನಂತರ ತೋಟದಲ್ಲಿ ನಾಟಿ ಮಾಡುವುದು ಪದ್ಧತಿ. ಶೀಘ್ರವಾಗಿ ಮತ್ತು ಸಮೃದ್ಧಿಯಾಗಿ ಸಸಿಗಳು ಹುಟ್ಟುವಂತೆ ಎತ್ತರಿಸಿದ ಒಟ್ಲುಪಾತಿಗಳಲ್ಲಿ ಬೀಜಬಿತ್ತುವುದೇ ರೂಢಿ. ಬಿತ್ತಿದ ಒಂದು ವಾರದಲ್ಲಿ ಬೀಜಗಳು ಮೊಳೆಯುತ್ತವೆ. ಚೆನ್ನಾಗಿ ಆರೈಕೆ ಮಾಡಿದರೆ ಸಸಿಗಳನ್ನು ಸುಮಾರು 6 ವಾರಗಳ ಅನಂತರ ತೋಟದಲ್ಲಿ ನಾಟಿಮಾಡಬಹುದು.

ಬದನೆಯನ್ನು ಸಾಲು ಮತ್ತು ಗುಂಡಿ ಎಂಬ ಎರಡು ವಿಧಾನದಲ್ಲಿ ನೆಡಬಹುದು. ಸಾಲಾಗಿ ನೆಡುವುದರಲ್ಲಿ ಎರಡು ವಿಧಾನಗಳಿವೆ. ಮೊದಲನೆಯದು ಒಂಟಿ ವಿಧಾನ. ಈ ವಿಧಾನದಲ್ಲಿ ಸಾಲಿನಿಂದ ಸಾಲಿಗೆ 1 ಮೀಟರ್, ಸಸ್ಯದಿಂದ ಸಸ್ಯಕ್ಕೆ 0.3 ಮೀ. ಅಂತರ ಕೊಡಲಾಗುತ್ತದೆ. ಎರಡನೆಯದು ಎರಡು ಸಾಲು ವಿಧಾನ. ಎರಡು ಸಾಲುಗಳಿಗೆ 5 ಮೀಟರ್ ಅಂತರವಿದ್ದು ಪಕ್ಕ ಪಕ್ಕದ ಸಾಲುಗಳಿಗೆ 1 ಮೀಟರ್ ಅಂತರವಿರುತ್ತದೆ. ಗುಂಡಿ ವಿಧಾನದಲ್ಲಿ 1 ಮೀಟರ್ ಅಂತರದಲ್ಲಿ ಅಗಲವಾದ ಗುಂಡಿಗಳನ್ನು ತೆಗೆದು ಪ್ರತಿ ಗುಂಡಿಯಲ್ಲಿ 0.5 ಮೀಟರಿಗೆ ಒಂದರಂತೆ ನಾಲ್ಕು ಐದು ಬದನೆ ಸಸಿಗಳನ್ನು ನೆಡಬಹುದು.

ಬದನೆಗೆ ನೀರಾವರಿ ಮಾಡುವುದು ಕಾಲ ಮತ್ತು ತಳಿಗಳನ್ನು ಅನುಸರಿಸುತ್ತದೆ. ಬೇಸಿಗೆ ಕಾಲದಲ್ಲಿ ಬೆಳೆದ ಬದನೆಗೆ ದಿನ ಬಿಟ್ಟು ದಿನ ನೀರು ಹಾಯಿಸಲಾಗುತ್ತದೆ.

ಬದನೆ ಬೆಳೆಗೆ ಸೀಮೆಗೊಬ್ಬರ ಹಾಕುವುದು ಮಣ್ಣಿನಲ್ಲಿರುವ ಪೋಷಕಗಳನ್ನು ಅವಲಂಬಿಸಿದೆ. ಸಾಮಾನ್ಯವಾಗಿ ಹೆಕ್ಟೇರಿಗೆ 100 ಕೆಜಿ ಸಾರಜನಕ 50 ಕೆಜಿ ರಂಜಕ ಮತ್ತು 50 ಕೆಜಿ ಪೊಟ್ಯಾಷ್ ಬಳಸುವುದು ವಾಡಿಕೆ.

ನಾಟಿ ಮಾಡಿದ ಎರಡು ತಿಂಗಳ ಅನಂತರ ಹೂ ಅರಳುವಿಕೆ ಆರಂಭ. ಹೂ ಬಿಟ್ಟು 2-3 ವಾರಗಳಲ್ಲಿ ಹೀಚು ಕಾಣಿಸಿಕೊಂಡು ತರುವಾಯ ಕಾಯಾಗುತ್ತದೆ. ಅಂದರೆ ನಾಟಿ ಮಾಡಿದ ಎರಡೂವರೆ ತಿಂಗಳಲ್ಲಿ ಫಸಲು ಕೊಯ್ಲಿಗೆ ಸಿದ್ಧ. ಬೇಸಾಯ ಕ್ರಮ ಮತ್ತು ತಳಿಗಳನ್ನು ಅನುಸರಿಸಿ ಹೆಕ್ಟೇರಿಗೆ ಸರಾಸರಿ 20,000 ದಿಂದ 25,000 ಕೆ.ಜಿ.ಗಳಷ್ಟು ಇಳುವರಿ ಸಿಕ್ಕುತ್ತದೆ.

ಉತ್ತರ ಕರ್ನಾಟಕದ ವಿಶೇಷ ಬಾಯಲ್ಲಿ ನೀರೂರಿಸುವ ಬದನೇಕಾಯಿ ಎಣ್ಣಿಗಾಯಿ.

ಸಾಮಾನ್ಯವಾಗಿ ಬದನೆಕಾಯಿ ತುಂಬುಗಾಯಿ ಅಥವಾ ಎಣ್ಣಿಗಾಯಿ ಒಬ್ಬೊಬ್ಬರು ಒಂದೊಂದು ವಿಧಾನದಲ್ಲಿ ತಯಾರಿಸುತ್ತಾರೆ
ಮೊದಲು ಬದನೆಕಾಯಿಗಳನ್ನ ನಾಲ್ಕು ಕಡೆಯಿಂದ ಸೀಳಿಕೊಂಡು ನೀರಿನಲ್ಲಿ ಹಾಕುತ್ತಾರೆ ( ಹಾಗೇ ಬಿಟ್ಟರೆ ಅವು ಕಪ್ಪಾಗುತ್ತವೆ ) ಅವುಗಳನ್ನು ಒಂದೊಂದಾಗಿ ತೆಗೆದುಕೊಂಡು ಮಸಾಲೆ ತುಂಬುತ್ತಾರೆ.

ಮಸಾಲೆಗೆ :-

ಒಣ ಕೊಬ್ಬರಿ ಪುಡಿ, ಎಳ್ಳಿನ ಪುಡಿ, ಮತ್ತು ಶೇಂಗಾ ಪುಡಿ ಸಮಪ್ರಮಾಣದಲ್ಲಿ ತೆಗೆದುಕೊಂಡು ಅದಕ್ಕೆ ಧನಿಯಾ ಪುಡಿ ಮತ್ತು ಕುಟ್ಟಿದ ಗರಂ ಮಸಾಲೆ ಪುಡಿ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಖಾರ ಸ್ವಲ್ಪ ಅರಿಸಿನ ರುಬ್ಬಿದ ಶುಂಠಿ ಬೆಳ್ಳುಳ್ಳಿ ರುಬ್ಬಿದ ಈರುಳ್ಳಿ ಸೇರಿಸಿ ಅದಕ್ಕೆ ನೆನೆಸಿದ ಹುಣಸೆ ಹಣ್ಣನ್ನು ಕಿವುಚಿಕೊಂಡು ಅದರ ರಸವನ್ನು ಸೇರಿಸಿ ಒಂದು ಹದಕ್ಕೆ ಪೇಸ್ಟ್ ಥರ ತಯಾರಿಸಿಕೊಂಡು ಬದನೆಕಾಯಿಯಲ್ಲಿ ತುಂಬುತ್ತಾರೆ.

ತಯಾರಿ :-

ಒಂದು ಬಾಣಲಿಗೆ ಎಣ್ಣೆ ಹಾಕಿಕೊಂಡು ಒಗ್ಗರಣೆಗೆ ಸಾಸಿವೆ ಜೀರಿಗೆ ಹಾಗೂ ಕರಿಬೇವು ಹಾಕಿ ಸಾಸಿವೆ ಸಿಡಿದಮೇಲೆ ಮಸಾಲೆ ತುಂಬಿದ ಬದನೆಕಾಯಿಗಳನ್ನು ಹಾಕಿ ಎಣ್ಣೆಯಲ್ಲಿಯೇ ಸ್ವಲ್ಪ ಹೊತ್ತು ಬಾಡಿಸಿಕೊಳ್ಳುತ್ತಾರೆ.
ಪಾತ್ರೆಯಲ್ಲಿ ಉಳಿದ ಮಸಾಲೆಗೆ ಸ್ವಲ್ಪ ನೀರು ಸೇರಿಸಿ ಅದನ್ನು ಎಣ್ಣೆಯಲ್ಲಿ ಬಾಡಿಸಿದ ಬದನೆ ಕಾಯಿಗೆ ಸೇರಿಸಿ ಒಂದು ಕುದಿ – ಕುದಿಸಿದರೆ ಘಮ ಘಮಿಸುವ ರುಚಿ ರುಚಿಯಾದ ಬದನೆಕಾಯಿ ಎಣ್ಣಿಗಾಯಿ / ಬದನೆಕಾಯಿ ತುಂಬುಗಾಯಿ ರೊಟ್ಟಿ ಮತ್ತು ಅನ್ನದ ಜೊತೆಗೆ ಸವಿಯಲು ಸಿದ್ಧವಾಗುತ್ತದೆ.

ನಿಮ್ಮ ಭಾಗದಲ್ಲಿ ಯಾವ ರೀತಿ ಮಾಡುವಿರಿ ಮತ್ತು ಮಸಾಲೆಗೆ ಏನೇನು ಸೇರಿಸುವಿರಿ ದಯವಿಟ್ಟು ಮಾಹಿತಿ ಹಂಚಿಕೊಳ್ಳಿ.

ತರಕಾರಿ/ಸೊಪ್ಪುಬೆಳೆಯ ಪ್ರಮುಖ ಅಂಶಗಳು

1) ಬೆಳೆ ಆಯೋಜನೆ
ತರಕಾರಿ/ಸೊಪ್ಪು ಬೆಳೆಯುವರು ಪೂರ್ವ ನಿಗಧಿತ ಮಾರುಕಟ್ಟೆ/ಗ್ರಾಹಕರನ್ನು ಗುರುತಿಸಿಕೊಂಡು ಬೇಡಿಕೆ ಅನುಸಾರ ವರ್ಷ ಪೂರ್ತಿ ಸರಪಣಿ ಮುಂದುವರೆಯುವಂತೆ ಬೆಳೆ ಆಯೋಜನೆ ಮಾಡಬೇಕು.15 ದಿನಕೊಮ್ಮೆ ಸೊಪ್ಪು,ತಿಂಗಳಿಗೊಮ್ಮೆ ಬೀನ್ಸ್,ಮೂಲಂಗಿ,ಮೂರು ತಿಂಗಳಿಗೊಮ್ಮೆ ಬದನೆ, ಟೊಮೇಟೊ, ಮೆಣಸಿನಕಾಯಿ, ಬೆಂಡೆಕಾಯಿ ಈ ರೀತಿಯಾಗಿ ಮುಂದುವರೆಸಬೇಕು.

2)ಮಾರುಕಟ್ಟೆ
ರೈತರು ಮತ್ತು ಗ್ರಾಹಕರು ಸೇರಿ ಪೂರ್ವ ನಿಗಧಿತ ಸ್ಥಳದಲ್ಲಿ ಪ್ರತಿ ವಾರ ಸಂತೆಗಳನ್ನು ನೆಡೆಸಬಹುದು.ಜಮೀನಿನ ಸಮೀಪ ಸ್ಥಳೀಯವಾಗಿ ವಾಸವಾಗಿರುವ 5-6 ಕುಟುಂಬಗಳನ್ನು ಸಂಪರ್ಕ ಮಾಡಿ ತರಕಾರಿ/ಸೊಪ್ಪು ಪೂರೈಸುವ ವ್ಯವಸ್ಥೆ ಮಾಡಿಕೊಳ್ಳಬಹುದು.

ಪೂರ್ವ ನಿಗಧಿತ ಮಾರುಕಟ್ಟೆ/ಗ್ರಾಹಕರನ್ನು ತಲುಪಲಾಗದ ರೈತರು ಮನೆ ಬಳಕೆಗೆ ಬೇಕಾಗುವ ತರಕಾರಿ/ಸೊಪ್ಪು ಬೆಳೆದುಕೊಳ್ಳಬಹುದು.

3)ಬೀಜ ಮತ್ತು ಗೊಬ್ಬರ

ದುಬಾರಿ ಬೀಜ,ಗೊಬ್ಬರ,ನೀರು, ಕೀಟನಾಶಕ ಹೆಚ್ಚಾಗಿ ಬಯಸುವ ತರಕಾರಿಗಳನ್ನು ರೈತರು ಬೆಳೆಯುವುದನ್ನು ಮತ್ತು ಗ್ರಾಹಕರು ಬಳಸುವುದಕ್ಕೆ ಕಡಿವಾಣ ಹಾಕಿಕೊಳ್ಳಬೇಕು(ಎಲೆಕೋಸು, ಹೂಕೋಸು, ಕ್ಯಾಪ್ಸಿಕಂ, ಹೈಬ್ರಿಡ್ ಟೊಮ್ಯಾಟೋ ಇತ್ಯಾದಿ)ಸ್ಥಳೀಯವಾಗಿ ಬರನಿರೋಧಕ ಮತ್ತು ರೋಗನಿರೋಧಕವಾಗಿ ಬೆಳೆಯುವ ಗೆಡ್ಡೆ ತರಕಾರಿಗಳಾದ ಸಿಹಿ ಗೆಣಸು, ಮರಗೆಣಸು,ಸುವರ್ಣಗೆಡ್ಡೆ,
ಕೆಸುವಿನ ಗೆಡ್ಡೆ ಮುಂತಾದವು ಮತ್ತು ಬಳ್ಳಿ ತರಕಾರಿಗಳಾದ ಸೋರೆಕಾಯಿ, ಹಿರೇಕಾಯಿ, ಕುಂಬಳಕಾಯಿ, ಹಾಗಲಕಾಯಿ, ಪಡವಲಕಾಯಿ, ತುಪ್ಪದ ಹಿರೇಕಾಯಿ, ತೊಂಡೆಕಾಯಿ,ಸೌತೆಕಾಯಿ, ಇತ್ಯಾದಿ ಇವುಗಳ ಬಳಕೆ ಹೆಚ್ಚಿಸಬೇಕು.

ನಾಟಿ/ಸುಧಾರಿತ ತಳಿ ಬೀಜ ಆಯ್ಕೆ ಮಾಡಿಕೊಂಡು ತದನಂತರ ಮುಂದಿನ ಬೆಳೆಗಳಿಗೆ ಬೀಜ ಉತ್ಪಾದನೆ ಮಾಡಿ ಬೀಜಗಳನ್ನು ಸಂರಕ್ಷಣೆ ಮಾಡಿಕೊಳ್ಳಬಹುದು.ಬೀಜ ಉತ್ಪಾದನೆ ಮತ್ತು ಸಂರಕ್ಷಣೆಯನ್ನು ಅನುಭವಿ ರೈತರಿಂದ ಕಲಿತು ಮಾಡುವುದು.

ತರಕಾರಿ ಬೆಳೆಯುವ ವಿಸ್ತರಣೆಗೆ ಅನುಗುಣವಾಗಿ compost ಗೊಬ್ಬರ
ತಯಾರಿಸಿಕೊಳ್ಳಬೇಕು.ಪ್ರತಿ 100 sqft(ಚದರಡಿ) ಪ್ರದೇಶಕ್ಕೆ 20 ಕೆಜಿ ಯಂತೆ 01 ಗುಂಟೆಗೆ (33’*33′) 200ಕೆಜಿ ಕಾಂಪೋಸ್ಟ್ ಗೊಬ್ಬರವನ್ನು ಮಣ್ಣಿನೊಂದಿಗೆ ಬೆರೆಸಬೇಕು.

ಬೆಳೆವಣಿಗೆ ಹಂತದಲ್ಲಿ ದ್ರವ ರೂಪದ ಗೊಬ್ಬರವನ್ನು ನೀರಿನೊಂದಿಗೆ ಅಥವಾ ಸಿಂಪಡಣೆ ಮೂಲಕ ಒದಗಿಸಬಹುದು.ಮೀನಿನ ದ್ರಾವಣ,ಗಂಜಲ, ಪಂಚಗವ್ಯ,ಜೀವಾಮೃತ, ವೇಸ್ಟ್ ಡಿಕಂಪೋಸರ್ ಇತ್ಯಾದಿಗಳು.

4)ಕಳೆ ನಿಯಂತ್ರಣ
ಭೂಮಿಯ ಸೂಕ್ತ ಸಿದ್ಧತೆ ಮತ್ತು ಸರಿಯಾದ ಕಾಂಪೋಸ್ಟ್ ಬಳಕೆ ಮಾಡುವುದರ ಮೂಲಕ ಶೇ 60% ಹೆಚ್ಚು ಕಳೆ ತರಕಾರಿ ಬೆಳೆಗಳ ನಡುವೆ ಬಾರದ ರೀತಿ ತಡೆಗಟಬಹುದು.
ತರಕಾರಿ ಬೆಳೆಯಲಿ ಕಳೆ ನಿಯಂತ್ರಣ ಪ್ರಮುಖ ಸವಾಲು,ಅಳುಗಳ ಮೂಲಕ ಕಳೆ ತೆಗೆಸುವುದು ಹೆಚ್ಚು ತ್ರಾಸದಾಯಕ ಮತ್ತು ಸಾಕಷ್ಟು ಆಳುಗಳನ್ನು ಬೇಡುತ್ತದೆ ಮತ್ತು ಹೆಚ್ಚು ಹಣ ವ್ಯಯಿಸಬೇಕಾಗುತ್ತದೆ.ತರಕಾರಿ ಬೆಳೆಯುವ ಒಟ್ಟು ಖರ್ಚಿನಲ್ಲಿ ಶೇ 60% ಕ್ಕೂ ಅಧಿಕ ಹಣ ಕಳೆ ನಿಯಂತ್ರಣಕ್ಕೆ ಮಾಡಬೇಕಾಗುತ್ತದೆ.ಕಳೆ ನಿಯಂತ್ರಣ ಮತ್ತು ಹಣ ಉಳಿತಾಯ ಮಾಡಲು ತರಕಾರಿ ಸಾಲುಗಳ ನಡುವೆ ಮೊದಲ ಹಂತದಲ್ಲಿ ಸೊಪ್ಪುಗಳನ್ನು ಬೆಳೆಸುವುದು,ಮುಚ್ಚಿಗೆ ಮಾಡುವುದು,ಸಾಲುಗಳ ನಡುವೆ ವೀಡರ್ ಅಥಾವಾ ಸಾಲಿಗೆ ಹೊಂದಾಣಿಕೆಯಾಗುವ ಟಿಲ್ಲರ್ ಬಳಸಿ ಮಾಡಿಕೊಳ್ಳಬೇಕು,ಏರುಮಡಿಯಲ್ಲಿ ಬರುವ ಕಳೆಗಳನ್ನು ಮಾತ್ರ ಆಳುಗಳ ಸಹಾಯದಿಂದ ಕೈ ಮೂಲಕ ತೆಗೆಯಬೇಕು.ಕಿತ್ತ ಕಳೆಗಳನ್ನು ಸಾಲಿನಲ್ಲಿ ಮುಚ್ಚಿಗೆ ಮಾಡಬೇಕು.

5)ಕೀಟ ಮತ್ತು ರೋಗ ನಿಯಂತ್ರಣಕ್ಕೆ
ಬೇವಿನ ಕಷಾಯ,ಹುಳಿ ಮಜ್ಜಿಗೆ, ಗಂಜಲ,ಸೀಗೆಪುಡಿ ಕಷಾಯ,ಎಲೆಗಳ ಕಷಾಯ, ಬೆಳ್ಳುಳಿ-ಶುಂಠಿ ಕಷಾಯ, companion plants(ಸಹಚರ ಸಸ್ಯಗಳು),ಚೆಂಡು ಹೂವು,ಬೆಳಕಿನ ಬಲೆ,ಆಕರ್ಷಕ ಬಲೆ ಇತ್ಯಾದಿಗಳ ಮೂಲಕ ಮಾಡುವುದು.

6)ಋತುಮಾನಕ್ಕೆ ಅನುಗುಣವಾಗಿ ಬೆಳೆಯುವ ತರಕಾರಿ ಮತ್ತು ಸೊಪ್ಪಿನ ಮಾಹಿತಿ

1)ಅಲಸಂದೆ:ಫೆಬ್ರವರಿ-ಮಾರ್ಚ್ ಮತ್ತು ಜೂನ್-ಜುಲೈ

2)ಆಲೂಗೆಡ್ಡೆ:ಏಪ್ರಿಲ್-ಮೇ ಮತ್ತು ನವೆಂಬರ್-ಡಿಸೆಂಬರ್

3)ಈರುಳ್ಳಿ :ವರ್ಷದ ಎಲ್ಲಾ ತಿಂಗಳು

4)ಎಲೆಕೋಸು:ಜೂನ್, ನವೆಂಬರ್

5)ಬೂದು ಕುಂಬಳ,ಸಿಹಿ ಕುಂಬಳ :ಮಾರ್ಚ್ ನಿಂದ ಜುಲೈ ತಿಂಗಳವರೆಗೆ.

6)ಕ್ಯಾರಟ್:ಜೂನ್,ಡಿಸೆಂಬರ್

7)ಸಿಹಿಗೆಣಸು:ವರ್ಷವಿಡೀ ಬೆಳೆಯಬಹುದು.

8)ಗೆಡ್ಡೆಕೋಸು:ಜೂನ್, ಡಿಸೆಂಬರ್

9)ಗೋರಿಕಾಯಿ:ಮಾರ್ಚ್-ಏಪ್ರಿಲ್,ಜೂನ್-ಜುಲೈ, ಅಕ್ಟೋಬರ್-ನವೆಂಬರ್

10)ಚಪ್ಪರದ ಅವರೆಕಾಯಿ:ಜುಲೈ, ಆಗಸ್ಟ್

11)ಟೊಮೊಟೊ:ವರ್ಷವಿಡೀ ಬೆಳೆಯಬಹುದು,ಜೂನ್-ಜುಲೈ,ಅಕ್ಟೋಬರ್-ನವೆಂಬರ್, ಜನವರಿ-ಫೆಬ್ರವರಿ ಉತ್ತಮ.

12)ತಿಂಗಳು ಹುರಳಿಕಾಯಿ:ವರ್ಷವಿಡೀ ಬೆಳೆಯಬಹುದು.

13)ತೊಂಡೆಕಾಯಿ:ಜೂನ್, ಜುಲೈ, ಆಗಸ್ಟ್

14)ಪಡವಲಕಾಯಿ:ಜನವರಿ-ಫೆಬ್ರವರಿ

15)ಬಟಾಣಿ:ಅಕ್ಟೋಬರ್, ನವೆಂಬರ್

16)ಬದನೆಕಾಯಿ:ವರ್ಷವಿಡೀ ಬೆಳೆಯಬಹುದು.ನವೆಂಬರ್-ಡಿಸೆಂಬರ್, ಜುಲೈ-ಆಗಸ್ಟ್ ತಿಂಗಳು ಉತ್ತಮ.

17)ಬೀಟ್ ರೂಟ್ -ಮಾರ್ಚ್, ಏಪ್ರಿಲ್,ಮೇ ತಿಂಗಳು ಬಿಟ್ಟು ವರ್ಷದ ಉಳಿದ ಯಾವುದೇ ತಿಂಗಳು.

18)ಬೆಂಡೆಕಾಯಿ:ವರ್ಷವಿಡೀ ಬೆಳೆಯಬಹುದು,ಮಾರ್ಚ್, ಸೆಪ್ಟೆಂಬರ್ ಉತ್ತಮ.

19)ಮೂಲಂಗಿ:ಮಾರ್ಚ್, ಏಪ್ರಿಲ್, ಮೇ ಹೊರತುಪಡಿಸಿ ಉಳಿದ ಕಾಲದಲ್ಲಿ ಬೆಳೆಯಬಹುದು.

20)ಸೀಮೆಬದನೆ:ವರ್ಷದ ಎಲ್ಲಾ ತಿಂಗಳು.

21)ಸೋರೆಕಾಯಿ:ಜೂನ್-ಜುಲೈ, ಜನವರಿ-ಫೆಬ್ರವರಿ

22)ಸೌತೆಕಾಯಿ:ಫೆಬ್ರವರಿಯಿಂದ ಜೂನ್ ತಿಂಗಳ ಅಂತ್ಯದವರೆಗೆ.

23)ಹಸಿ ಮೆಣಸಿನಕಾಯಿ:ವರ್ಷ ಪೂರ್ತಿ ಬೆಳೆಯಬಹುದು.ಮಾರ್ಚ್-ಏಪ್ರಿಲ್, ಜೂನ್-ಜುಲೈ, ಸೆಪ್ಟೆಂಬರ್-ಅಕ್ಟೋಬರ್ ಉತ್ತಮ ತಿಂಗಳು.

24)ಹಾಗಲಕಾಯಿ:ಜೂನ್-ಜುಲೈ, ಜನವರಿ-ಫೆಬ್ರವರಿ ಸರಿಯಾದ ಕಾಲ.

25)ಹಿರೇಕಾಯಿ:ಫೆಬ್ರವರಿ ಯಿಂದ ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೆ.

26)ಹೂಕೋಸು:ಜೂನ್,ಅಕ್ಟೋಬರ್ ತಿಂಗಳು ಸಕಾಲ.

27)ಹಸಿರು ಸೊಪ್ಪುಗಳು:ದಂಟು,ಹರಿವೆ, ಕೀರೆ, ಚಕ್ಕೋತ,ಬಸಳೆ, ಸಪ್ಪಸೀಗೆ,ಮೆಂತ್ಯ,ಕೊತ್ತಂಬರಿ,ಹುಳಿಚುಕ್ಕೆ,ಹಕ್ಕರಿಕೆ, ಪಾಲಕ್ ಇತ್ಯಾದಿ ಸೊಪ್ಪುಗಳನ್ನು ಮಳೆಗಾಲ ಬಿಟ್ಟು ಉಳಿದೆಲ್ಲ ಕಾಲದಲ್ಲೂ ಬೆಳೆಯಬಹುದು.

Spread positive news

Leave a Reply

Your email address will not be published. Required fields are marked *