ಇಂದಿನ ಹವಾಮಾನ ವರದಿ ಪ್ರಕಾರ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಯಾವೆಲ್ಲಾ ಜಿಲ್ಲೆಗಳಿಗೆ ಮಳೆಯ ಸೂಚನೆಯಿದೆ ನೋಡಿ.
ಕಳೆದ ವಾರ ಬ್ರೇಕ್ ಪಡೆದುಕೊಂಡಿದ್ದ ಮುಂಗಾರು ಮಳೆ ಈ ವಾರ ಮತ್ತೆ ಆಗಮಿಸುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಒಂದು ರೌಂಡ್ ಮಳೆಯಾಗಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾಸನ, ಶಿವಮೊಗ್ಗ, ಹಾವೇರಿ, ಕೊಪ್ಪಳ, ಹುಬ್ಬಳ್ಳಿ, ಬಳ್ಳಾರಿ, ಬಾಗಲಕೋಟೆ, ಧಾರವಾಡ, ತುಮಕೂರು, ಚಿತ್ರದುರ್ಗ ಮತ್ತು ಉಡುಪಿ ಜಿಲ್ಲೆಗಳಿಗೆ ಈ ವಾರವಿಡೀ ಭಾರೀ ಮಳೆಯ ಸೂಚನೆಯಿದೆ. ಅದರಲ್ಲೂ ಇಂದು ಮತ್ತು ನಾಳೆ ಗುಡುಗು, ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ಇಂದು ಬೆಂಗಳೂರಿನಲ್ಲೂ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಸೂಚನೆಯಿದೆ.
ಉಳಿದಂತೆ ಮೈಸೂರು, ಮಂಡ್ಯ, ಚಿಕ್ಕಮಗಳೂರು, ಕೊಡಗು, ರಾಯಚೂರು, ವಿಜಯಪುರ, ಕಲಬುರಗಿ, ಬೀದರ್, ಕೋಲಾರ ಜಿಲ್ಲೆಗಳಲ್ಲಿ ಇಂದು ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ವರದಿಗಳು ಹೇಳಿವೆ.
ಗುರುವಾರದಿಂದ ಮೂರ್ನಾಲ್ಕು ದಿನ 8 ರಿಂದ 10 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಲಕ್ಷಣಗಳಿರುವುದರಿಂದ ರೆಡ್ ಅಲರ್ಟ್ನ ಎಚ್ಚರಿಕೆ ನೀಡಲಾಗಿದೆ.
ಕಳೆದ ಎರಡು ದಿನಗಳಿಂದ ರಾಜ್ಯದ ವಿವಿಧ ಭಾಗದಲ್ಲಿ ಮಳೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬುಧವಾರ ಉತ್ತರ ಕನ್ನಡ, ಉಡುಪಿ, ಗದಗ, ರಾಯಚೂರು, ಕಲಬುರಗಿ, ಕೊಪ್ಪಳ, ಯಾದಗಿರಿ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.
ರೆಡ್ ಅಲರ್ಟ್:
ಗುರುವಾರದಿಂದ ಮೂರ್ನಾಲ್ಕು ದಿನಕ್ಕೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಬೆಳಗಾವಿ, ಧಾರಾವಾಡ ಹಾಗೂ ಹಾವೇರಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ. ಜತೆಗೆ ಗದಗ, ಬೆಳಗಾವಿ, ಕೊಪ್ಪಳ, ರಾಯಚೂರು, ಬಳ್ಳಾರಿ, ದಾವಣಗೆರೆ, ವಿಜಯನಗರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಧಾರಾವಾಡ, ಬಾಗಲಕೋಟೆ, ಕಲಬುರಗಿ, ವಿಜಯಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಕೋಲಾರ, ಮಂಡ್ಯ, ರಾಯಮನಗರ ಹಾಗೂ ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ನ ಎಚ್ಚರಿಕೆ ನೀಡಲಾಗಿದೆ.
ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಿರುವ ಹವಾಮಾನ ವರದಿ ಪ್ರಕಾರ, ಚಿತ್ರದುರ್ಗದ ಪರಶರಾಮಪುರದಲ್ಲಿ ಅತಿ ಹೆಚ್ಚು 12 ಸೆಂ.ಮೀ. ಮಳೆಯಾಗಿದೆ. ಕುಂದಾಪುರ, ಕಕ್ಕೀರಿಯಲ್ಲಿ ತಲಾ 8, ಮಟ್ಟಿಕೊಪ್ಪ 6, ಸಿಂಧನೂರು, ಧಾರವಾಡ, ಬಳಗನೂರಿನಲ್ಲಿ ತಲಾ 5, ಕೋಟಾ, ಮಾಸ್ಕಿ, ಇಂಡಿ, ಔರಾದ್, ಮಂಠಾಳ, ನಿಪ್ಪಾಣಿ, ಹುಮನಾಬಾದ್, ಕೂಡಲಸಂಗಮ, ಆಗುಂಬೆ, ಭಾಗಮಂಡಲದಲ್ಲಿ ತಲಾ 4, ಹರಪನಹಳ್ಳಿ, ಮದ್ದೂರು, ಯಡ್ರಾಮಿ, ಕೆಂಭಾವಿ, ಮುನಿರಾಬಾದ್, ಮುಲ್ಕಿಯಲ್ಲಿ ತಲಾ 3, ಉಡುಪಿ, ಬರಗೂರು, ಶಹಪುರ, ಸಿಂದಗಿ, ಕನಕಪುರದಲ್ಲಿ ತಲಾ 2 ಸೆಂ.ಮೀ. ಮಳೆಯಾದ ವರದಿಯಾಗಿದೆ.
ಹಲವೆಡೆ ಅವಾಂತರ –
ದಕ್ಷಿಣ ಜಿಲ್ಲೆಯಲ್ಲಿ ಈಗಾಗಲೇ ಮಳೆಯಿಂದ ಅವಾಂತರಗಳು ಸೃಷ್ಟಿಯಾಗಿವೆ. ಎಲ್ಲೆಂದರಲ್ಲಿ ಮರಗಳು ಉರುಳಿ ಬೀಳುತ್ತಿವೆ, ರಸ್ತೆಯ ತಗ್ಗು ಪ್ರದೇಶಗಳಿಗೆ ನೀರು ಹರಿದು ಬಂದು ಕೃತಕ ಪ್ರವಾಹ ಸೃಷ್ಟಿಯಾಗುತ್ತಿದೆ. ಮತ್ತೊಂದು ಕಡೆ ಮರಗಳು ಬಿದ್ದು ವಾಹನಗಳು ಜಖಂ ಆಗುತ್ತಿವೆ. ನೀರಿನಲ್ಲಿ ವಾಹನ ಸಂಚಾರ ಮಾಡುವುದಕ್ಕೆ ಸವಾರರು ಪರದಾಡುತ್ತಿದ್ದಾರೆ.
ಬಂಟ್ವಾಳ, ಬೆಳ್ತಂಗಡಿ, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಪುತ್ತೂರು, ಮೂಡಬಿದ್ರೆ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ. ಅರಬ್ಬಿ ಸಮುದ್ರದಲ್ಲಿ ಅಲೆಗಳ ಅರ್ಭಟಕ್ಕೆ ಕಡಲ್ಗೊರೆತ ಉಂಟಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ಎಚ್ಚರಿಕೆ ಕೊಟ್ಟಿದೆ.
ಜಿಲ್ಲೆಯ ಕೆಲವು ಭಾಗಗಳಲ್ಲಿ ಗುಡುಗು ಸಿಡಿಲಿನೊಂದಿಗೆ ಹೆಚ್ಚಿನ ಗಾಳಿಯಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿರುವ ಕಾರಣ ಅವಘಡ ಘಟಿಸಿದರೆ ಸ್ಪಂದಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರವನ್ನು ತೆರೆಯಲಾಗಿದೆ. ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿತೀರ ಸಮುದ್ರತೀರಕ್ಕೆ ಹೋಗದಂತೆ ಸಾರ್ವಜನಿಕರು ಹಾಗೂ ಮುಖ್ಯವಾಗಿ ಮಕ್ಕಳು ಹೋಗದಂತೆ ಪಾಲಕರು ಜಾಗ್ರತೆ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ.
ಹವಾಮಾನ ಇಲಾಖೆಯ ವರದಿಯ ಪ್ರಕಾರ, ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.
“ಅಪಾಯಕಾರಿ ಮರಗಳು, ವಿದ್ಯುತ್ ಕಂಬದ ಹತ್ತಿರ ಜನರು ನಿಲ್ಲಬಾರದು. ತುಂಡಾದ ವಿದ್ಯುತ್ ತಂತಿಗಳಿಂದ ದೂರ ನಿಲ್ಲಬೇಕು. ದುರ್ಬಲವಾದ, ಹಳೆಯ ಕಟ್ಟಡಗಳ ಕೆಳಗೆ ನಿಲ್ಲಬಾರದು. ಸಮಸ್ಯೆಗಳಿಗೆ ತುತ್ತಾದರೆ ವಿಪತ್ತು ನಿರ್ವಹಣಾ ನಿಯಂತ್ರಣ ಕೊಠಡಿ (08382 229857, 9483511015) ಅಥವಾ ಆಯಾ ತಾಲೂಕಿನ ತಹಶೀಲ್ದಾರ್ ಕಚೇರಿಗೆ ಕರೆ ಮಾಡಬಹುದು’ ಎಂದು ಸೂಚಿಸಿದ್ದಾರೆ.