ರಾಜ್ಯದಲ್ಲಿ ಪ್ರವಾಹ ರೆಡ್ ಅಲರ್ಟ್ ಘೋಷಣೆ.

ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರವು (INCOIS) ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ ಕರಾವಳಿ ಪ್ರದೇಶಗಳಿಗೆ ಹೆಚ್ಚಿನ ಅಲೆಗಳ ಎಚ್ಚರಿಕೆ ಮತ್ತು ಉಬ್ಬರದ ಅಲರ್ಟ್ ನೀಡಿದೆ. ಈ ಅಲರ್ಟ್ ಜುಲೈ 19 ರಂದು ಸಂಜೆ 05 :30ರಿಂದ ಜುಲೈ 21 ರ ರಾತ್ರಿ 11.30 ರ ವರೆಗೆ ಜಾರಿಯಲ್ಲಿರುತ್ತದೆ. ಮುಂದಿನ ಐದು ದಿನಗಳ ವರೆಗೆ ಸಂಭವಿಸಬಹುದಾದ ಘಟನೆಗಳ ಬಗ್ಗೆ ಎಲ್ಲಾ ಜಿಲ್ಲೆಗಳಿಗೆ ಅದರ ತೀವ್ರತೆಯ ಆಧಾರದ ಮೇಲೆ ಬೇರೆ ಬೇರೆ ಬಣ್ಣದ (ಕೆಂಪು, ಕಿತ್ತಳೆ ಮತ್ತು ಹಳದಿ) ಕೋಡ್‌ನಲ್ಲಿ ದಿನಕ್ಕೆ ಎರಡು ಬಾರಿ ಎಚ್ಚರಿಕೆಗಳನ್ನು ನೀಡಲಾಗುತ್ತದೆ. ಈ ತರಹದ ಮಾಹಿತಿ ಒದಗಿಸುವ ಹವಾಮಾನ ಕೇಂದ್ರಗಳು ಪ್ರತಿ ರಾಜ್ಯದ ರಾಜಧಾನಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಕಡೆ ಭಾರಿ ಮಳೆಯಾಗುವ ಸಾಧ್ಯತೆಗಳಿದ್ದು, ಜುಲೈ 21ರಂದು ಹವಾಮಾನ ಇಲಾಖೆಯು ಆರೆಂಜ್‌ ಅಲರ್ಟ್‌ ಘೋಷಿಸಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಬೆಳಗಾವಿ, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಿಗೆ ಜುಲೈ 22ರ ವರೆಗೆ ಹಳದಿ ಅಲರ್ಟ್‌ ಘೋಷಿಸಲಾಗಿದೆ. ಇನ್ನು ಬೆಂಗಳೂರಿನಲ್ಲಿ ಜುಲೈ 22ರ ವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.

ರಾಜ್ಯದಲ್ಲಿ ಹಲವಾರು ಕಡೆ ಇನ್ನೂ ಮಳೆ ನಿರಂತರವಾಗಿ ಇದ್ದು ದಕ್ಷಿಣ ಕರ್ನಾಟಕದ ಭಾಗ ಜಲಾವೃತ ವಾಗಿದೆ.
ಉತ್ತರ ಕನ್ನಡದ ಕರಾವಳಿಯಲ್ಲೂ ಭಾರೀ ಮಳೆ ಸುರಿಯುತ್ತಿದೆ. ಅಘನಾಶಿನಿ, ವಾಲಗಳ್ಳಿ-ಅರೋಡಿ ರಸ್ತೆಗಳು ಜಲಾವೃತವಾಗಿವೆ. ಅಂಕೋಲಾದ ಹಾರವಾಡದಲ್ಲಿ ಕಡಲ್ಕೊರೆತವಾಗಿದೆ. ಕಾರವಾರದ ಚೆಂಡಿಯಾ, ಇಡೂರು ಬಳಿ ಮನೆಗಳಿಗೆ ಮಳೆ ನೀರು ನುಗ್ಗಿದ ಕಾರಣ ಜಲದಿಗ್ಬಂಧನ ಉಂಟಾಗಿತ್ತು. ಸುಪಾ ಹಿನ್ನೀರು, ಕೊಡಸಳ್ಳಿ, ಕದ್ರಾದಲ್ಲಿ ಭಾರೀ ಮಳೆ ಸುರಿದಿದೆ.

ಈಗಾಗಲೇ ಆಯಾ ಜಿಲ್ಲೆಯ ಸಚಿವರು ಶಾಸಕರು ಜನರ ಸಂಕಷ್ಟಕ್ಕೆ ನಿಂತಿದ್ದು ರಾಜ್ಯದಲ್ಲಿ ಮುಖ್ಯಮಂತ್ರಿಗಳು ಸಹ ಸಂತ್ರಸ್ತರಿಗೆ ನೆರವು ನೀಡಲು ಮುಂದಾಗಿದೆ. ಅಂಕೋಲಾ-ಶಿರೂರು ನಡುವಿನ ಹೆದ್ದಾರಿ ಕುಸಿತದಿಂದ ಸಾಕಷ್ಟು ನಷ್ಟ ಉಂಟಾಗಿದ್ದು, ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ (ಜು.21) ಭೇಟಿ ನೀಡಿ ಪರಿಶೀಲಿಸಲು ಮುಂದಾಗಿದ್ದಾರೆ. ಅದೇ ರೀತಿ ಆಯಾ ಜಿಲ್ಲೆಯ ಉಸ್ತುವಾರಿ ಸಚಿವರು ಡಿಸಿ ಗಳಿಗೆ ರಾಜ್ಯದಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡಲು ಸಭೆ ಕರೆದಿದ್ದು ನೆರೆ ಪ್ರದೇಶದಲ್ಲಿ ಜನರ‌ ಹಿತ ಕಾಪಾಡಲು ಸರ್ಕಾರವು ಮುಂದಾಗಿದೆ.

ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗೆ ‘ಆರೆಂಜ್ ಅಲರ್ಟ್’ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ 40ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ. ಬೆಳಗಾವಿ ಜಿಲ್ಲೆಗೆ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ. ಈ ಜಿಲ್ಲೆಯಲ್ಲಿ ಗುಡುಗು ಸಹಿತ ಭಾರಿ ಮಳೆಯ ಜೊತೆಗೆ 30ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಂಭವವಿದೆ ಎಂದು ಇಲಾಖೆ ತಿಳಿಸಿದೆ.

ಉತ್ತರ ಒಳನಾಡಿನ ಬಾಗಲಕೋಟೆ, ಬೀದ‌ರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಯ ಹಲವೆಡೆ 30ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಹಾಗೂ ವಿಜಯನಗರ ಜಿಲ್ಲೆಯ ಹಲವೆಡೆ 40ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಸಹಿತ ಸಾಧಾರಣ ಮಳೆಯಾಗಬಹುದು ಎಂದು ಇಲಾಖೆ ಮುನ್ಸೂಚನೆ ನೀಡಿದೆ.

Spread positive news

Leave a Reply

Your email address will not be published. Required fields are marked *