ಅಡಿಕೆ ಬೆಳೆಯಲ್ಲಿ ಬರುವ ಪ್ರಮುಖ ರೋಗಗಳ ಸಮರ್ಗ ನಿರ್ವಹಣೆ

ಅಡಿಕೆ ಬೆಳೆಯಲ್ಲಿ ಬರುವ ಪ್ರಮುಖ ರೋಗಗಳ‌ ಸಮಗ್ರ ನಿರ್ವಹಣೆ

ಕೊಳೆ ರೋಗ/ ಮಹಾಲಿ ರೋಗ (ಫೈಟಾಪ್‌ ತೋರ ಅರಕೆ)
ಅಡಿಕೆಗೆ ಬರುವ ರೋಗಗಳಲ್ಲಿ ಇದು ಅತ್ಯಂತ ಮಾರಕ ರೋಗವಾಗಿದ್ದು ಅಡಿಕೆ ಇಳುವರಿಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ರೋಗವು ಹೆಚ್ಚಾಗಿ ಮಳೆ ಬೀಳುವ ಪ್ರದೇಶಗಳಲ್ಲಿ ಕಂಡುಬರುತ್ತದೆ. ಪ್ರಾರಂಭಿಕ ಹಂತದಲ್ಲಿ ಎಳೆಕಾಯಿಗಳ ತೊಟ್ಟಿನ ಭಾಗದಲ್ಲಿ ನೀರಿನಿಂದ ತೊಯ್ದ ಮಚ್ಚೆಗಳು ಕಂಡುಬರುತ್ತವೆ ನಂತರ ರೋಗ ಪೀಡಿತ ಕಾಯಿಗಳ ಮೇಲೆ ಬಿಳಿಯ ಬಣ್ಣದ ಬೂಸ್ಟಿನ ಬೆಳವಣಿಗೆಯಾಗಿ, ಕಾಯಿಗಳು ಕೊಳತು ಹೆಚ್ಚಿನ ಸಂಖ್ಯೆಯಲ್ಲಿ ಉದುರುತ್ತವೆ.

ಅಣಬೆ ರೋಗ (ಗ್ಯಾನೋಡರ್ಮ ಲುಸಿಡೆಮ್)

ರೋಗದ ಪ್ರಾರಂಭಿಕ ಹಂತದ ಲಕ್ಷಗಳೆಂದರೆ ಹೊರಸುತ್ತಿನ ಎಲೆಗಳು ಹಳದಿಯಾಗಿ ಒಂದೊಂದಾಗಿ ಕಾಂಡಕ್ಕೆ ಜೋತು ಬೀಳುತ್ತವೆ. ತದನಂತರ ಒಳ ಎಲೆಗಳೂ ಸಹ ಹಳದಿಯಾಗಿ ಜೋತು ಬೀಳುತ್ತಾ ಹೋಗುತ್ತವೆ. ಕೊನೆಯ ಹಂತದಲ್ಲಿ ಎಲ್ಲಾ ಎಲೆಗಳೂ ಒಣಗಿ ಬಿದ್ದು ಗಿಡದ ತುದಿ ಬೋಳಾಗುತ್ತದೆ. ರೋಗದ ಬೆಳವಣಿಗೆ ಮುಂದುವರೆದಂತೆ ಮರದ ಬುಡದಿಂದ ಸುಮಾರು ಮೂರು ಅಡಿ ಎತ್ತರದವರೆಗಿನ ಕಾಂಡದ ಬಿರುಕುಗಳ ಮೂಲಕ ಕಂದು ಬಣ್ಣದ ದ್ರವ ಹೊರಬರುತ್ತದೆ. ಇಂತಹ ಕಾಂಡಭಾಗವನ್ನು ಕೆತ್ತಿ ಮೇಲ್ಪದರವನ್ನು ತೆಗೆದು ನೋಡಿದರೆ ಕಾಂಡದ ಒಳಭಾಗವು ಕಂದು ಬಣ್ಣದ್ದಾಗಿರುತ್ತದೆ. ಇಂತಹ ರೋಗ ಪೀಡಿತ ಮರದ ಬೇರುಗಳನ್ನು ಪರೀಕ್ಷಿಸಿದರೆ ಬೇರುಗಳು ಕಪ್ಪು ಬಣ್ಣಕ್ಕೆ ತಿರುಗಿ ಸಾಯುತ್ತಿರುವುದನ್ನು ಕಾಣಬಹುದು. ಇದರಿಂದಾಗಿ ರೋಗ ಪೀಡಿತ ಗಿಡಗಳು ಪೋಷಕಾಂಶಗಳು ಮತ್ತು ನೀರನ್ನು ಸಮರ್ಪಕವಾಗಿ ಹೀರಿಕೊಳ್ಳಲು ಸಾಧ್ಯವಾಗದೆ ಗಿಡಗಳು ಸಾಯುತ್ತವೆ. ರೋಗದ ಕೊನೆಯ ಹಂತದಲ್ಲಿ ರೋಗಕ್ಕೆ ತುತ್ತಾಗಿ ಸತ್ತಿರುವ ಗಿಡಗಳ ಮೇಲೆ ಬಟ್ಟಲಿನಾಕರದ ಅಣಬೆಗಳನ್ನು ಕಾಣಬಹುದು. ಈ ರೋಗವು ನೀರು ಹಾಗೂ ಮಣ್ಣಿನ ಮುಖಾಂತರ ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಹರಡುವುದು.

ಸುಳಿ ಕೊಳೆರೋಗ (ಫೈಟಾಪ್‌ತೋರ ಮೈಡಿ):

ಸುಳಿಯ ಭಾಗದ ಎಳೆಗರಿ ಹಳದಿ ಬಣ್ಣಕ್ಕೆ ತಿರುಗುವುದು ರೋಗದ ಪ್ರಾರಂಭಿಕ ಲಕ್ಷಣ. ತದನಂತರ ಗರಿಯು ಕಂದು ಬಣ್ಣಕ್ಕೆ ತಿರುಗಿ ಸಂಪೂರ್ಣವಾಗಿ ಸಾಯುವುದು. ಈ ಹಂತದಲ್ಲಿ ರೋಗ ಪೀಡಿತ ಗರಿಯನ್ನು ಕೈಯಿಂದ ಎಳೆದಾಗ ಸುಲಭವಾಗಿ ಕಿತ್ತು ಬರುತ್ತದೆ. ಅಂತಹ ಎಲೆಯ ಕೆಳಭಾಗವು ಕೊಳೆತಿರುತ್ತದೆ. ಇದಾದನಂತರ ಸುತ್ತಲಿರುವ ಎಲೆಗಳಿಗೆ ಈ ರೋಗವು ಹರಡುತ್ತದೆ. ಕಾಲಕ್ರಮೇಣ ಸೋಂಕಿನಿಂದಾಗಿ ಮರದ ಸುಳಿ ಸಂಪೂರ್ಣವಾಗಿ ಕೊಳೆತು ಸಾಯುತ್ತದೆ ಮತ್ತು ರೋಗಕ್ಕೆ ತೀವ್ರವಾಗಿ ತುತ್ತಾದ ಗಿಡಗಳು ಸುಳಿಯಿರದೆ ಬೋಡಾಗಿರುವುದನ್ನು ನೋಡಬಹುದು.

ಸಿಂಗಾರ ಒಣಗುವ ಮತ್ತು ಮೊಗ್ಗು ಉದುರುವ ರೋಗ/ ಹೂಗೊನೆ ಒಣಗುವ ರೋಗ (ಕೊಲೆಟೋಟೈಕಮ್ ಗ್ಲಿಯೋಟ್ಟೋರಿಯೊಯಿಡ್ಸ್):
ಈ ರೋಗವು ವರ್ಷವಿಡೀ ಕಾಣಿಸಿಕೊಳ್ಳುತ್ತದೆ. ಆದರೆ ಫೆಬ್ರವರಿಯಿಂದ ಮೇ ತಿಂಗಳವರೆಗೆ ತುಂಬಾ ತೀವ್ರವಾಗಿರುತ್ತದೆ. ಹೂಗೊನೆಯು ತುದಿಯಿಂದ ಹಳದಿಯಾಗಿ ಕೆಳಭಾಗಕ್ಕೆ ಹರಡುತ್ತಿದ್ದಂತೆಯೆ ಕಪ್ಪನೆ ಕಂದು ಬಣ್ಣಕ್ಕೆ ತಿರುಗಿ ಒಣಗುತ್ತದೆ. ಇದರಿಂದ ಹೆಣ್ಣು ಹೂಗಳು ಮತ್ತು ಕಾಯಿಗಳು ಪೂರ್ಣವಾಗಿ ಒಣಗಿ ಇಳುವರಿಯು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.

ಎಲೆ ಚುಕ್ಕೆ ರೋಗಗಳು (ಕೊಲೆಟೋಟ್ರೈಕಮ್ ಗ್ಲಿಯೋಸ್ಟೋರಿಯೊಯಿಡ್ ಫಿಲ್ಲೊಸ್ಟಿಕ್ಟ ಅರಕೆ ಹಾಗೂ ಪೆಸ್ಟಲೋಸಿಯಾಪ್ಪಿಸ್ ಅರಕೆ):

ಈ ರೋಗಗಳು 3 ಪ್ರಭೇಧದ ಶಿಲೀಂಧ್ರಗಳಿಂದ ಬರುತ್ತದೆ. ಕೊಲೆಟೋಟ್ರೈಕಮ್ ಎಂಬ ಶಿಲೀಂಧ್ರವು ಗರಿಗಳ ಮೇಲೆ ಹಳದಿ ಮತ್ತು ಕಪ್ಪು ಬಣ್ಣದ ಚಿಕ್ಕ ಗಾತ್ರದ ಚುಕ್ಕೆಗಳನ್ನು ಉಂಟು ಮಾಡುತ್ತದೆ ಹಾಗೂ ಗರಿಗಳು ತುದಿಯಿಂದ ಒಣಗಲು ಪ್ರಾರಂಭಿಸುತ್ತವೆ. ಫಿಲ್ಲೊಸ್ಟಿಕ್ಷ ಎಂಬ ಶಿಲೀಂಧ್ರವು ಗರಿಗಳ ಮೇಲ್ಬಾಗದಲ್ಲಿ ದೊಡ್ಡ ಗಾತ್ರದ ಬೂದಿ ಮಿಶ್ರಿತ ಬಿಳಿ ಬಣ್ಣದ ಚುಕ್ಕೆಗಳನ್ನು ಉಂಟುಮಾಡುತ್ತದೆ ಅವುಗಳ ಅಂಚು ಕಂದು ಮತ್ತು ಕಪ್ಪು ಬಣ್ಣದ ಚುಕ್ಕೆಗಳ ರೂಪದಲ್ಲಿ ಕಾಣಿಸುತ್ತವೆ.

ಪೆಸ್ಟಲೋಸಿಯಾನ್ಸಿಸ್ ಎಂಬ ಶಿಲೀಂಧ್ರದಿಂದ ಗರಿಗಳ ಮೇಲೆ ನಸು ಹಳದಿ ಬಣ್ಣದ ಚುಕ್ಕೆಗಳು ಕಾಣಿಸುತ್ತವೆ, ಈ ಚುಕ್ಕೆಗಳು ಕೆಳಗಿನ ಎಲೆಗಳಿಂದ ಪ್ರಾರಂಭವಾಗಿ ಶೀಘ್ರವಾಗಿ ಒಂದಕ್ಕೊಂದು ಕೂಡಿಕೊಂಡು ಪೂರ್ತಿ ಗರಿಯನ್ನು ಅವರಿಸುತ್ತವೆ ಮತ್ತು ಗರಿಗಳು ಒಣಗಲು ಪ್ರಾರಂಭಿಸುತ್ತವೆ.

ಹಿಡಿಮುಂಡಿಗೆ ರೋಗ (ಫೈಟೋಪ್ಲಾಸ್ಮ):
ಈ ರೋಗವು 5 ವರ್ಷ ಅಥವಾ ಅದಕ್ಕೂ ಮೇಲ್ಪಟ್ಟ ಮರಗಳಲ್ಲಿ ಕಂಡುಬರುತ್ತದೆ. ಈ ರೋಗವು ಪ್ರಮುಖವಾಗಿ ಅಡಿಕೆಯನ್ನು ಈ ಹಿಂದೆ ಭತ್ತ ಅಥವಾ ಕಬ್ಬು ಬೆಳೆದಿದ್ದ ಪ್ರದೇಶಗಳಲ್ಲಿ ಮತ್ತು ನೀರು ಬಸಿದು ಹೋಗದ ಭೂಮಿಯಲ್ಲಿ ಬೆಳೆದಾಗ ಬರುವ ಸಾಧ್ಯತೆ ಹೆಚ್ಚು.

ಮೊದಲಿಗೆ ರೋಗ ಪೀಡಿತ ಮರಗಳ ಸುಳಿ ಎಲೆಯ ಕೆಳಗಿರುವ ಎಲೆಗಳು ಸಣ್ಣದಾಗಿ ಗಾಢ ಹಸಿರು ಬಣ್ಣವನ್ನು ಹೊಂದಿರುತ್ತವೆ ಅಥವಾ ಕೆಲವೊಮ್ಮೆ ಗಿಡದ ಎಲ್ಲಾ ಎಲೆಗಳು ಕಾಂಡದ ತುದಿಯಲ್ಲಿ ಕುಬ್ಬವಾಗಿ ಗುಂಪಾಗಿದ್ದು, ಗೊಂಚಲು ರೂಪದಲ್ಲಿ ಕಂಡುಬರುತ್ತವೆ. ಇಂತಹ ಮರದ ರೋಗಪೀಡಿತ ಎಲೆಗಳು ಸುಕ್ಕುಗಟ್ಟಿ, ಒರಟೊರಟಾಗಿ ಹಾಗೂ ಕಡು ಹಸಿರಾಗಿ ಕಂಡುಬರುತ್ತವೆ ಮತ್ತು ಮರದ ಗೆಣ್ಣುಗಳ ಅಂತರ ಸಹ ತೀವ್ರವಾಗಿ ಕಡಿಮೆಯಾಗಿರುತ್ತದೆ. ಇಂತಹ ಗಿಡದ ಬೇರುಗಳನ್ನು ಅಗೆದು ನೋಡಲಾಗಿ ಬೇರುಗಳು ತೀರಾ ಸಣ್ಣದಾಗಿರುತ್ತವೆ ಮತ್ತು ಸತ್ತು ಹೋಗಿರುವುದನ್ನು ಕಾಣಬಹುದು. ರೋಗಪೀಡಿತ ಗಿಡಗಳಲ್ಲಿ ಹೊಸ ಎಲೆಗಳು, ಮೊಗ್ಗುಗಳು ಹಾಗೂ ಕಾಯಿಗಳ ಉತ್ಪಾದನೆ ಕ್ರಮೇಣ ಕಡಿಮೆಯಾಗಿ ಗಿಡದ ಎಲ್ಲಾ ಎಲೆಗಳು ಒಣಗಿ ಗಿಡ ಸಾಯುತ್ತದೆ.

ಸಮಗ್ರ ನಿರ್ವಹಣೆ
ಮುಂಗಾರಿಗೆ ಮುಂಚೆ ಅಡಿಕೆ ಗೊಂಚಲುಗಳಿಗೆ ಶೇ. 1ರ ಬೋರ್ಡೊ ದ್ರಾವಣವನ್ನು ಸಿಂಪಡಿಸಬೇಕು.
ಪ್ರತಿ ವರ್ಷ ಒಂದು ಮರಕ್ಕೆ 2 ಕಿ.ಗ್ರಾಂ ನಂತೆ ಬೇವಿನ ಹಿಂಡಿ ಮತ್ತು 10 ಕಿ.ಗ್ರಾಂ ಕೊಟ್ಟಿಗೆ ಗೊಬ್ಬರದ ಜೊತೆ ಶಿಫಾರಸ್ಸು ಮಾಡಿರುವ ರಸಗೊಬ್ಬರಗಳನ್ನು ಮಣ್ಣು ಪರೀಕ್ಷೆ ಆಧಾರದ ಮೇಲೆ ಒದಗಿಸುವುದು.
ಅಣಬೆ ರೋಗ ಪೀಡಿತ ಗಿಡಗಳನ್ನು ಬೇರಿನ ಸಮೇತ ಕಿತ್ತು ನಾಶಪಡಿಸಬೇಕು.

ಜೈವಿಕ ಶಿಲೀಂಧ್ರನಾಶಕಗಳಾದ ಟ್ರೈಕೋಡರ್ಮ ಹಾರ್ಜಿಯಾನಮ್ ಮತ್ತು ನ್ಯೂಡೋಮೊನಾಸ್ ಪೊರೆಸೆನ್ಸ್‌ನ್ನು ಪ್ರತಿ ಮರಕ್ಕೆ 50 ಗ್ರಾಂ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರದ ಜೊತೆ ಬೆರಸಿ ಮರದ ಬುಡದ ಮಣ್ಣಿಗೆ ಸೇರಿಸಬೇಕು.

• ಅಣಬೆ ರೋಗದ ನಿರ್ವಹಣೆ ಮಾಡಲು ರೋಗ ಪೀಡಿತ ಮರಗಳಿಗೆ ಪ್ರಾರಂಭಿಕ ಹಂತದಲ್ಲಿಯೆ 3 ಮಿ.ಲೀ ಹೆಕ್ಸಾಕೋನಾಜೊಲ್ 5 ಇ.ಸಿ/ ಎಸ್.ಸಿ. ಶಿಲೀಂಧ್ರನಾಶಕವನ್ನು ಪ್ರತಿ 100 ಮಿ.ಲೀ. ನೀರಿನಲ್ಲಿ ಬೆರಸಿ ಬೇರಿನ ಮೂಲಕ ವರ್ಷಕ್ಕೆ 4 ಭಾರಿ ಕೊಡಬೇಕು.

ಎಲೆಚುಕ್ಕೆ ರೋಗಗಳ ನಿರ್ವಹಣೆಗಾಗಿ ಹೆಕ್ಸಾಕೊನಾಜೋಲ್ 5% ಎಸ್.ಸಿ./ ಇ.ಸಿ. ಅಥವಾ ಪ್ರೊಫಿಕೊನಾಜೋಲ್ 25% ಇ.ಸಿ. ಶಿಲೀಂಧ್ರನಾಶಕಗಳನ್ನು 1 ಮಿ.ಲೀ. ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸುವುದು.

ಹೂಗೊನೆ ಒಣಗುವುದನ್ನು ನಿರ್ವಹಣೆ ಮಾಡಲು ಕಾರ್ಬೆಂಡೆಜಿಮ್ 1 ಗ್ರಾಂ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಹೊಂಬಾಳೆ ಬರುವ ಹಂತದಲ್ಲಿ ಸಿಂಪಡಿಸುವುದು.

ಸುಳಿ ಕೊಳೆ ರೋಗಕ್ಕೆ ತುತ್ತಾದ ಸುಳಿಯ ಗರಿಗಳು ಒಣಗಲು ಪ್ರಾರಂಭಿಸಿದಾಗ ರೋಗ ಪೀಡಿತ ಭಾಗವನ್ನು ಸ್ವಚ್ಚಮಾಡಿ ಆ ಭಾಗಕ್ಕೆ ಶೇ. 1ರ ಬೋರ್ಡೊ ದ್ರಾವಣ ಅಥವಾ ಮೆಟಲಾಕ್ಸಿಲ್ + ಮ್ಯಾಂಕೊಜೆಬ್ ಸಂಯುಕ್ತ ಶಿಲೀಂಧ್ರನಾಶಕವನ್ನು ಪ್ರತಿ ಲೀಟರ್ ನೀರಿನಲ್ಲಿ 3 ಗ್ರಾಂ ನಂತೆ ಮಿಶ್ರಣ ಮಾಡಿ ಸುಳಿಜಾಗಕ್ಕೆ ಸುರಿಯಬೇಕು ಮತ್ತು ಎಲೆಗಳ ಮೇಲೆ ಸಿಂಪಡಿಸಬೇಕು. ಮೊದಲನೆ ಸಿಂಪರಣೆ ಮುಂಗಾರು ಪ್ರಾರಂಭವಾಗುವ ಮೊದಲು, ಎರಡನೇ ಸಿಂಪರಣೆಯನ್ನು 40-45 ದಿನಗಳ ನಂತರ ಹಾಗೂ ಮೂರನೇಯ ಸಿಂಪರಣೆಯನ್ನು ಮುಂಗಾರು ಮಳೆ ಮುಂದುವರಿದ ಸಮಯದಲ್ಲಿ ಕೊಡುವುದು.

Spread positive news

Leave a Reply

Your email address will not be published. Required fields are marked *