ರಸಗೊಬ್ಬರ ಕಲಬೆರಕೆ ಇದೆಯೇ? ಇಲ್ಲವೋ? ಎಂದು ತಿಳಿಯೋಣ ಬನ್ನಿ.
ಆತ್ಮೀಯ ರೈತ ಬಾಂಧವರಿಗೆ ನಮಸ್ಕಾರಗಳು, ಈ ಲೇಖನದಲ್ಲಿ ಹೇಳಬಯಸುವ ವಿಷಯವೇನೆಂದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ರಸಗೊಬ್ಬರಗಳು ಕಲಬೆರಕೆ ಆಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಹೇಗೆ ತಿಳಿದುಕೊಳ್ಳುವ ಕುರಿತು.
ಆಧುನಿಕ ಕೃಷಿಯಲ್ಲಿ ರೈತರು ಅಧಿಕ ಇಳುವರಿ ಪಡೆಯಲು ಹೆಚ್ಚಾಗಿ ರಾಸಾಯನಿಕ ರಸಗೊಬ್ಬರಗಳ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ಕೇಲವು ರಸಗೊಬ್ಬರಗಳು ಕಲಬೆರಕೆಯಾಗಿರುತ್ತವೆ. ಈ ಅಂಶವನ್ನು ಅರಿಯದ ರೈತರು ಮೋಸ ಹೋಗುತ್ತಾರೆ. ರೈತರು ಮನೆಯಲ್ಲಿ ತಾವೇ ಸ್ವತಃ ರಸಗೊಬ್ಬರಗಳು ಕಲಬೆರಕೆ ಆಗಿದೆಯೋ ಅಥವಾ ಇಲ್ಲವೋ ಎಂದು ಪರೀಕ್ಷಿಸಬಹುದು.
ರಸಗೊಬ್ಬರಗಳು ಕಲಬೆರಕೆ ಆಗಿದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿಯಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಿ.
1. ಭೌತಿಕ ಪರೀಕ್ಷೆ :
ಹರಳು ರೂಪದ ರಸಗೊಬ್ಬರಗಳು ಒಂದೇ ಬಣ್ಣ, ಆಕಾರ, ಗಾತ್ರದಿಂದ ಕೂಡಿದ್ದು ಕಣ್ಣಿಗೆ ಕಾಣುವಂತಹ ಇತರೆ ಪದಾರ್ಥಗಳು ರಸಗೊಬ್ಬರದಲ್ಲಿ ಇರಬಾರದು. ಹೆಚ್ಚು ಪುಡಿಯಾಗಿರಬಾರದು ಮತ್ತು ಹೆಚ್ಚಿನ ತೇವಾಂಶವನ್ನು ಹೊಂದಿರಬಾರದು.
2. ನೀರಿನಲ್ಲಿ ಕರಗಿಸುವ ಪರೀಕ್ಷೆ :
ಕೆಲವು ರಸಗೊಬ್ಬರಗಳು ನೀರಿನಲ್ಲಿ ಸಂಪೂರ್ಣವಾಗಿ ಕರಗುತ್ತವೆ. ಅಂತಹ ರಸಗೊಬ್ಬರಗಳನ್ನು ನೀರಿನಲ್ಲಿ ಕರಗಿಸಿದಾಗ ಕರಗೆದೆ ಇರುವ ಪದಾರ್ಥ ಉಳಿದರೆ ಅದು ಕಲಬೆರಕೆಯಾಗಿರುತ್ತದೆ.
ಉದಾಹರಣೆಗೆ : ಯೂರಿಯಾ, ಅಮೋನಿಯಂ ಸಲ್ಪೇಟ್, ಅಮೋನಿಯಂ ಕ್ಲೋರೈಡ್, ಮ್ಯುರೇಟ್ ಆಫ್ ಪೊಟ್ಯಾಷ್, ಕ್ಯಾಲ್ಸಿಯಂ ಅಮೋನಿಯಂ ನೈಟ್ರೇಟ್, ಸತುವಿನ ಸಲ್ಫೇಟ್, ಮೆಗ್ನೀಷಿಯಂ ಸಲ್ಫೇಟ್ ಮತ್ತು ಶೇ.100 ರಷ್ಟು ನೀರಿನಲ್ಲಿ ಕರಗುವ ರಸಗೊಬ್ಬರಗಳು.
ನೀರಿನಲ್ಲಿ ಕರಗಿಸಿದಾಗ ಆಗುವ ಅನುಭವ:
• ಕೆಲವು ರಸಗೊಬ್ಬರಗಳು ನೀರಿನಲ್ಲಿ ಕರಗಿಸಿದಾಗ ತಣ್ಣನೆ ಅನುಭವ ನೀಡುತ್ತವೆ.
• ಹಾಗೆ ನೀಡದಿದ್ದಲ್ಲಿ ಅಂತಹ ರಸಗೊಬ್ಬರಗಳು ಕೆಲಬರಕೆಯಾಗಿರುವ ಸಾಧ್ಯತೆಗಳಿರುತ್ತದೆ.
ಉದಾಹರಣೆಗೆ : ಯೂರಿಯಾ, ಅಮೋನಿಯಂ ಕ್ಲೋರೈಡ್, ಮ್ಯುರೇಟ್ ಆಫ್ ಪೋಟ್ಯಾಷ್, ಕ್ಯಾಲ್ಸಿಯಂ ಅಮೋನಿಯಂ ನೈಟ್ರೇಟ್.
3. ಬಿಸಿ ಮಾಡುವ ಪರೀಕ್ಷೆ :
• ಯೂರಿಯಾ ರಸಗೊಬ್ಬರವನ್ನು ಬಿಸಿ ಮಾಡಿದಾಗ ಸಂಪೂರ್ಣವಾಗಿ ಕರಗಿ ನೀರಾಗುತ್ತದೆ. ಕರಗದೇ ಇರುವ ವಸ್ತು ಉಳಿದರೆ ರಸಗೊಬ್ಬರ ಕಲಬೆರಕೆಯಾಗಿದೆ ಎಂದು ತಿಳಿಯಬಹುದು.
• ಡಿ.ಎ.ಪಿ ರಸಗೊಬ್ಬರವನ್ನು ರೈತರಲ್ಲಿ ಲಭ್ಯವಿರುವ ಒಂದು ತಗಡಿನ ಮೇಲೆ ಬಿಸಿ ಮಾಡಿದಾಗ ಡಿ.ಎ.ಪಿ ಹರಳುಗಳು ಸುಣ್ಣದಂತೆ ಅರಳುತ್ತವೆ ಮತ್ತು ತಣ್ಣಗಾದ ಮೇಲೆ ತಳಕ್ಕೆ ಅಂಟಿಕೊಳ್ಳುತ್ತವೆ. ಹರಳುಗಳು ಅರಳದೇ ತಳಕ್ಕೆ ಅಂಟಿಕೊಳ್ಳದಿದ್ದರೆ ರಸಗೊಬ್ಬರವು ಕಲಬೆರಕೆ/ ನಕಲಿ ಆಗಿರಬಹುದೆಂದು ತಿಳಿಯಬಹುದು.
4. ಪೋಷಕಾಂಶಗಳ ಪರೀಕ್ಷೆ :
(A) ಸುಟ್ಟ ಸುಣ್ಣದ ಪರೀಕ್ಷೆ (ಸಾರಜನಕದ ಪರೀಕ್ಷೆ):
ಅಮೋನಿಯಂ ರೂಪದ ಸಾರಜನಕ ರಸಗೊಬ್ಬರಗಳನ್ನು ತೇವ ಮಾಡಿ ಸುಟ್ಟ ಸುಣ್ಣದಿಂದ ತೀಡಿದಾಗ ಅಮೋನಿಯ ಘಾಟು ವಾಸನೆ ಬರುತ್ತದೆ. ವಾಸನೆ ಬರದಿದ್ದರೆ ಆಂತಹ ರಸಗೊಬ್ಬರವು ನಕಲಿ ಗೊಬ್ಬರವಾಗಿರುತ್ತದೆ. ಈ ರೀತಿ ಸುಮಾರು 30 ರಸಗೊಬ್ಬರಗಳನ್ನು ಪರೀಕ್ಷೆ ಮಾಡಬಹುದು.
ಉದಾಹರಣೆಗೆ : ಡಿ.ಎ.ಪಿ, 10:26:26, ಆಮೋನಿಯಂ ಸಲ್ಫೇಟ್, ಅಮೋನಿಯಂ ಕ್ಲೋರೈಡ್, ಕ್ಯಾಲ್ಸಿಯಂ ಅಮೋನಿಯಂ ನೈಟ್ರೇಟ್.
(B) ರಂಜಕದ ಪರೀಕ್ಷೆ :
ಸ್ವಲ್ಪ ರಸಗೊಬ್ಬರವನ್ನು ನೀರಿನಲ್ಲಿ ಕರಗಿಸಿ, ಸೂಪರ್ ಫಾಸ್ಪೇಟ್ ಮತ್ತು ಡಿ.ಎ.ಪಿ ರಸಗೊಬ್ಬರಗಳಾದಲ್ಲಿ ಸಿಲ್ಲರ್ ನೈಟ್ರೇಟ್ ದ್ರಾವಣ ಇತರೆ ಓಕ ಮತ್ತು ಓಕಏ ರಸಗೊಬ್ಬರಗಳಿಗೆ ಫೆರಿ ಕ್ಲೋರೈಡ್ ದ್ರಾವಣ ಹಾಕಿದಾಗ ಹಳದಿ / ಬಿಳಿ ಮಿಶ್ರಿತ ಹಳದಿ ಬಣ್ಣದ ಕಣಗಳು ಕಂಡುಬರುತ್ತದೆ. ಹಳದಿ ಬಣ್ಣದ ಕಣಗಳು ಕಂಡು ಬರದಿದ್ದರೆ ಅದು ನಕಲಿ ರಸಗೊಬ್ಬರವಾಗಿರುತ್ತದೆ.
(C) ಪೋಟ್ಯಾಷ್ ಪರೀಕ್ಷೆ :
ರಸಗೊಬ್ಬರಗಳಲ್ಲಿ ಪೋಟ್ಯಾಷ್ ಅಂಶವಿರುವ ರಸಗೊಬ್ಬರವನ್ನು ನೀರಿನಲ್ಲಿ ಕರಗಿಸಿ ಎರಡು ಹನಿ ಕೋಬಾಲ್ಟ್ ನೈಟ್ರೇಟ್ ದ್ರಾವಣವನ್ನು ಹಾಕಿದಾಗ ಹಳದಿ ಬಣ್ಣದ ಕಣಗಳು ಕಂಡು ಬರುತ್ತದೆ. ರಸಗೊಬ್ಬರವು ನಕಲಿ ಆಗಿದ್ದರೆ ಕೋಬಾಲ್ಟ್ ನೈಟ್ರೇಟ್ನೊಂದಿಗೆ ಹಳದಿ ಬಣ್ಣದ ಕಣಗಳು ಕಂಡು ಬರುವುದಿಲ್ಲ ಬರೀ ದ್ರಾವಣದ ಬಣ್ಣ ಕಂಡು ಬರುತ್ತದೆ. ಇದರಿಂದ ರಸಗೊಬ್ಬರವು ನಕಲಿ ಎಂದು ತಿಳಿಯಬಹುದು.
(D) ಸತುವಿನ ಸಲ್ಫೇಟ್ :
ಸತುವಿನ ಸಲ್ಫೇಟ್ ನೀರಿನಲ್ಲಿ ಕರಗಿಸಿದಾಗ ಸಂಪೂರ್ಣವಾಗಿ ಕರಗುತ್ತದೆ. ಕರಗದಿದ್ದರೆ ಕಲಬೆರೆಕೆಯಾಗಿದೆ. ನೀರಿನಲ್ಲಿ ಕರಗಿಸಿದ ಸತುವಿನ ಸಲ್ಫೇಟ್ಗೆ ಸ್ವಲ್ಪ ದುರ್ಬಲ ಸೋಡಿಯಂ ಹೈಡ್ರಾಕ್ಸೈಡ್ ಹಾಕಿದಾಗ ಬಿಳಿ ಬಣ್ಣದ ಕಣಗಳು ಕಂಡುಬರುತ್ತದೆ. ಇದೇ ದ್ರಾವಣಕ್ಕೆ ಹೆಚ್ಚಿನ ಪ್ರಮಾಣದ ಪ್ರಬಲ ಸೋಡಿಯಂ ಹೈಡ್ರಾಕ್ಸೈಡ್ ಹಾಕಿದಾಗ ಕಣಗಳು ಕರಗಿದರೆ ಅದು ಸತುವಿನ ಸಲ್ಫೇಟ್ ಆಗಿರುತ್ತದೆ. ಕರಗದಿದ್ದರೆ ನಕಲಿ/ಕಲಬೆರೆಕೆ ಆಗಿರುವ ಸಾದ್ಯತೆ ಇರುತ್ತದೆ.