ನಿಮ್ಮ ಜಮೀನಿಗೆ ದಾರಿ ಮಾಡಲು ಇರುವ ಹೊಸ ನಿಯಮಗಳ ಪಟ್ಟಿ

ಜಮೀನಿಗೆ ದಾರಿ : ರೈತರೇ ಈಗಾಗಲೇ ನಿಮಗೂ ತಿಳಿದಿರುವಂತೆ ವ್ಯವಸಾಯದ ಉದ್ದೇಶಗಳಿಗಾಗಿ ತಿರುಗಾಡಲು ಬಳಸುವ ಖಾಸಗಿ ಜಮೀನುಗಳಲ್ಲಿ ಗ್ರಾಮ ನಕಾಶೆ ಪ್ರಕಾರ ಇರುವ ಕಾಲುದಾರಿ, ಬಂಡಿದಾರಿ ಅಥವಾ ಇತರೆ ದಾರಿಗಳನ್ನು ಯಾವುದೇ ಜಮೀನಿನ ಮಾಲಿಕ ಮುಚ್ಚುವುದು ಕಾನೂನುಬಾಹಿರ. ಇಂತಹ ಪ್ರಕರಣಗಳಲ್ಲಿ ಅಗತ್ಯ ಕ್ರಮ ಕೈಗೊಂಡು ರೈತರು ಓಡಾಡಲು ಅನುವು ಮಾಡಿಕೊಡಬೇಕೆಂದು ಎಲ್ಲಾ ತಹಶೀಲ್ದಾರರಿಗೆ ಕಂದಾಯ ಇಲಾಖೆ ಸೂಚಿಸಿದೆ.

ಇಂಡಿಯನ್ ಈಸ್ ಮೆಂಟ್ ಆ್ಯಕ್ಟ್ 1882ರ ಪ್ರಕಾರ ಪ್ರತಿ ಜಮೀನಿನ ಮಾಲಿಕರು ಅಥವಾ ಜಮೀನಿನ ಅನುಭವದಲ್ಲಿರುವವರು ಅವರ ಭೂಮಿಯನ್ನು ಪ್ರವೇಶಿಸುವ ಹಕ್ಕು ಮತ್ತು ಅವರ ಭೂಮಿಯನ್ನು ಪ್ರವೇಶಿಸುವ ಹಕ್ಕು ಮತ್ತು ವಹಿವಾಟಿನ (ಈಸ್ಮೆಂಟ್) ಹಕ್ಕನ್ನು ಹೊಂದಿದ್ದಾರೆ. ಇದಕ್ಕ ನೆರೆ ಹೊರೆಯ ಜಮೀನಿನವರು ಯಾವುದೇ ಧಕ್ಕೆತರುವಂತಿಲ್ಲ ಎಂದು ವಿವರಿಸಲಾಗಿದೆ.

ಇಂತಹ ಸಮಸ್ಯೆ ಬಗೆಹರಿಸಲು ಆಯಾ ತಾಲೂಕಿನ ತಹಶೀಲ್ದಾರರು ಕ್ರಮ ಕೈಗೊಳ್ಳಬೇಕು. ನಕಾಶೆ ಪ್ರಕಾರ ಇರುವ ಕಾಲುದಾರಿ, ಬಂಡಿದಾರಿ ಅಥವಾ ಇತರೆ ರಸ್ತೆಗಳಲ್ಲಿ ಅನ್ಯ ಕೃಷಿ ಬಳಕೆದಾರರು ಬಳಸುವ ದಾರಿಯನ್ನು ಮುಚ್ಚಿರುವ ಪ್ರಕರಣಗಳು ಕಂಡು ಬಂದರೆಕೂಡಲೇ ತೆರವುಗೊಳಿಸಬೇಕು ಎಂದು ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ.

ನಮ್ಮ ಹೊಲ ನಮ್ಮ ದಾರಿ ಯೋಜನೆಯ ಉದ್ದೇಶ –

1. ರೈತರ ಹೊಲ/ಗದ್ದೆ/ತೋಟ/ಜಮೀನುಗಳಿಗೆ ರಸ್ತೆ ಸಂಪರ್ಕವನ್ನು ಕಲ್ಪಿಸುವುದು.
2. ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಾಣಿಕೆ ಮಾಡಲು ಅನುಕೂಲ ಮಾಡುವುದು.
3. ರೈತರ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಸಾರಿಗೆ ವೆಚ್ಚ ತಗ್ಗಿಸುವುದು.
4. ಸಾರ್ವಜನಿಕರು ಹಾಗೂ ರೈತರು ಸುರಕ್ಷಿತವಾಗಿ, ಸುಗಮವಾಗಿ ಸಂಚರಿಸುವುದು.
5. ಗ್ರಾಮೀಣ ಜನತೆಗೆ ಉದ್ಯೋಗವಕಾಶವನ್ನು ಕಲ್ಪಿಸುವುದು ಹಾಗೂ ಆರ್ಥಿಕವಾಗಿ ಸ್ವಾವಲಂಬಿಗಳಾಗುವಂತೆ ಮಾಡುವುದು.
6. ಗ್ರಾಮೀಣ ಜನತೆಯ ಜೀವನಮಟ್ಟ ಸುಧಾರಿಸಲು ಮತ್ತು ನಗರ ಪ್ರದೇಶಗಳಿಗೆ ವಲಸೆ ಹೋಗದಂತೆ ಕಡಿವಾಣ ಹಾಕುವುದು.

ರಸ್ತೆ ಕಾಮಗಾರಿಗಳನ್ನು ಆಯ್ಕೆ ಮಾಡುವ ವಿಧಾನ –

1. ಸರ್ಕಾರವು ನಿಗದಿಪಡಿಸಿದ ಮಿತಿಗೆ ಅನುಗುಣವಾಗಿ ರಸ್ತೆ ಕಾಮಗಾರಿಗಳನ್ನು ಆಯ್ಕೆ ಮಾಡುವುದು.
2. ಅತೀ ಹೆಚ್ಚು ಬಳಕೆಯಾಗುವ ಮತ್ತು ಹೆಚ್ಚಿನ ರೈತರು ಅವಲಂಬಿತವಾದ ರಸ್ತೆಗಳನ್ನು ಮಾತ್ರ ಆಯ್ಕೆ ಮಾಡುವುದು.
3. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ತಾಲ್ಲೂಕು ಕಾರ್ಯಕ್ರಮ ಅಧಿಕಾರಿಯಾದ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಂಬಂಧಪಟ್ಟ ತಮ್ಮ ಶಾಸಕರೊಂದಿಗೆ ಸಮಾಲೋಚನೆ ನಡೆಸಿ ತಮ್ಮ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಗತ್ಯವಾಗಿ ಕೈಗೆತ್ತಿಕೊಳ್ಳಬೇಕಾದ ರಸ್ತೆ ಕಾಮಗಾರಿಗಳನ್ನು ಆಯ್ಕೆ ಮಾಡುವುದು.
4. ರಸ್ತೆ ಕಾಮಗಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕಂದಾಯ ಇಲಾಖೆ ಮತ್ತು PRED ಅಧಿಕಾರಿಗಳ ಅಭಿಪ್ರಾಯಗಳನ್ನು ಪರಿಗಣಿಸಿ ಆಯ್ಕೆ ಪಟ್ಟಿಯನ್ನು ಅಂತಿಮಗೊಳಿಸುವುದು.
5. ಆಯ್ಕೆಯಾದ ಕಾಮಗಾರಿಗಳಿಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಅನುಮೋದನೆ ಪಡೆದು ಸದರಿ ಕಾಮಗಾರಿಗಳಿಗೆ 2022-23 ನೇ ಸಾಲಿಗೆ ವಿಶೇಷ ಕ್ರಿಯಾ ಯೋಜನೆಯನ್ನು ರೂಪಿಸಿ ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸಿಕೊಂಡು ಅನುಷ್ಠಾನಗೊಳಿಸುವುದು. ದಾರಿ ಅನುಷ್ಠಾನದ ಎಲ್ಲಾ ಹಂತಗಳಲ್ಲಿ ಜನರ ಸಹಭಾಗಿತ್ವವನ್ನು ಅವಶ್ಯಕವಾಗಿ ತೊಡಗಿಸಿಕೊಳ್ಳುವುದು.

ನಿಮ್ಮ ಜಮೀನಿಗೆ ಹೋಗಲು ಕಾಲುದಾರಿ, ಬಂಡಿದಾರಿ ಇದೆಯೇ?

ರೈತರು ತಮ್ಮ ಜಮೀನಿಗೆ ಹೋಗಲು ಕಾಲುದಾರಿ, ಬಂಡಿದಾರಿ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ https://landrecords.karnataka.gov.in/service3/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ತೆರೆದುಕೊಳ್ಳುವ ಪೇಜ್ ನಲ್ಲಿ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು.ಇದಾದ ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮ್ಯಾಪ್ ಟೈಪ್ ನಲ್ಲಿcadastral Maps ಆಯ್ಕೆ ಮಾಡಿಕೊಳ್ಳಬೇಕು ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು.

ಆಗ ನಿಮ್ಮ ಹೋಬಳಿಯಲ್ಲಿರುವ ಊರುಗಳ ಪಟ್ಟಿ ಕಾಣಿಸುತ್ತದೆ. ಅದರಲ್ಲಿ ನಿಮ್ಮ ಊರಿನ ಎದುರುಗಡೆ ಕಾಣುವ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಊರಿನ ಮ್ಯಾಪ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಜಮೀನಿಗೆ ಹೋಗಲು ಕಾಲುದಾರಿ, ಬಂಡಿದಾರಿ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕು. ಒಂದು ವೇಳೆನಿಮ್ಮ ಜಮೀನಿಗೆ ಹೋಗಲು ದಾರಿಯಿದ್ದು ಮುಚ್ಚುಹೋಗಿದ್ದು, ಒತ್ತುವರಿಯಾಗಿದ್ದರೆ ಅರ್ಜಿ ಸಲ್ಲಿಸಿ ದಾರಿ ಮಾಡಿಕೊಳ್ಳಬಹುದು.

ದಾರಿ ಮಾಡಲು ಇರುವ ಮಾನದಂಡಗಳು ಯಾವುವು?

1. ಕಂದಾಯ ಇಲಾಖೆಯು ಸರ್ವೇ ಮಾಡಿರುವ ಗ್ರಾಮ ನಕಾಶೆ ದಾಖಲೆಯಲ್ಲಿರುವ ಅಧಿಕೃತ (ಸಾರ್ವಜನಿಕ ರಸ್ತೆ/ಬಂಡಿದಾರಿ/ಕಾಲುದಾರಿ) ರಸ್ತೆಗಳನ್ನು ತಗೆದುಕೊಳ್ಳುವುದು.
2. ಒಂದು ವೇಳೆ ರಸ್ತೆ ಸಂಪರ್ಕಕ್ಕಾಗಿ ಖಾಸಗಿ ಸ್ವತ್ತಿನಲ್ಲಿ ಈ ಸಂಪರ್ಕವನ್ನು ಮಾಡಬೇಕಾದಲ್ಲಿ ನೊಂದಾಯಿತ ದಾನ (Registered Gift Deed) ಪತ್ರವನ್ನು ಭೂ ಮಾಲೀಕರಿಂದ ಗ್ರಾಮ ಪಂಚಾಯಿತಿಯ ಹೆಸರಿಗೆ ಉಪನೋಂದಾಣಾಧಿಕಾರಿ ಕಛೇರಿಯಲ್ಲಿ ನೋಂದಣಿ ಮಾಡಿಕೊಳ್ಳುವುದು. ಹಾಗೂ ಇದಕ್ಕಾಗಿ ಭೂ ಮಾಲೀಕರಿಗೆ ಯಾವುದೇ ಪರಿಹಾರ ನೀಡಲಾಗುವುದಿಲ್ಲ.
3. ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಒಂದು ವೇಳೆ ಭೂಸ್ವಾಧೀನ ಪಡಿಸಿಕೊಳ್ಳಬೇಕಿದ್ದಲ್ಲಿ ಭೂಸ್ವಾಧೀನ ಪರಿಹಾರಕ್ಕಾಗಿ ಸರ್ಕಾರದಿಂದ ಯಾವುದೇ ಅನುದಾನ ಒದಗಿಸಲಾಗುವುದಿಲ್ಲ . ಹಾಗಾಗಿ ರೈತರ ಮನವೋಲಿಸಿ ರಸ್ತೆ ಅಭಿವೃದ್ಧಿಪಡಿಸುವುದು ಹಾಗೂ ಒಂದು ವೇಳೆ ರೈತರು ಒಪ್ಪದಿದ್ದಲ್ಲಿ ಅಂತಹ ರಸ್ತೆಯನ್ನು ಪರಿಗಣಿಸದೆ ಬೇರೆ ರಸ್ತೆಯನ್ನು ಆಯ್ಕೆ ಮಾಡುವುದು.
4. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿಗಳನ್ನು ನಿರ್ವಹಿಸುವಾಗ ಕೂಲಿ ಮತ್ತು ಸಾಮಾಗ್ರಿಗಳ 60:40ರ ಅನುಪಾತವನ್ನು ಕಡ್ಡಾಯವಾಗಿ ಪಾಲನೆ ಮಾಡುವುದು. (ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ)
5. ಕಾಮಗಾರಿಯ ಅನುಷ್ಟಾನವನ್ನು ಸಾಕಷ್ಟು ಕೂಲಿ ಬೇಡಿಕೆ ಇರುವುದನ್ನು ಖಚಿತಪಡಿಸಿಕೊಂಡು ಅನುಷ್ಟಾನಗೊಳಿಸುವುದು.
6. ಕಾಮಗಾರಿಯ ಅಕುಶಲ ಕೆಲಸವನ್ನು ಕೇವಲ ನೋಂದಾಯಿತ (ಉದ್ಯೋಗ ಚೀಟಿ ಹೊಂದಿದ) ಕೂಲಿಕಾರರಿಂದ ನಿರ್ವಹಿಸತಕ್ಕದ್ದು.
7. ನರೇಗಾ ಯೋಜನೆಯ ಮಾರ್ಗಸೂಚಿಗಳಂತೆ ಕಡ್ಡಾಯವಾಗಿ ಗ್ರಾಮ ಸಭಾ ಅನುಮೋದನೆಯಾದ ನಂತರ ಕ್ರಿಯಾಯೋಜನೆಯಲ್ಲಿ ಸೇರಿಸಿಕೊಂಡು ಅನುಷ್ಟಾನಗೊಳಿಸುವುದು.
8. ಗ್ರಾಮ ಪಂಚಾಯತ್ ಮಟ್ಟದಲ್ಲಿ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿ ಜಿಲ್ಲಾ ಪಂಚಾಯಿತಿಗಳಿಂದ ಆಡಳಿತಾತ್ಮಕ ಅನುಮೋದನೆ ನೀಡುವುದು.
9. ಅನುಮೋದಿತ ಕ್ರಿಯಾ ಯೋಜನೆಗಳನ್ವಯ ಗ್ರಾಮ ಪಂಚಾಯಿತಿ/ತಾಲ್ಲೂಕು ಪಂಚಾಯಿತಿ ಮಟ್ಟದಲ್ಲಿ KTPP ನಿಯಾಮಾನುಸಾರ ಕಾಮಗಾರಿಯನ್ನು ಪೂರ್ಣಗೊಳಿಸುವುದು.
10. ಸರ್ಕಾರದಿಂದ ಲೆಕ್ಕ ಶೀರ್ಷಿಕೆ 3054 ಅಡಿಯಲ್ಲಿ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದಂತೆ ಕಾಮಗಾರಿಯ ವಾಸ್ತವಿಕ ಸ್ಥಿತಿಯ ಛಾಯಾಚಿತ್ರ, ಕಾಮಗಾರಿ ಪ್ರಾರಂಭಗೊಂಡ ತರುವಾಯದೆ ಛಾಯಾಚಿತ್ರ ಮತ್ತು ಪೂರ್ಣಗೊಂಡ ಕಾಮಗಾರಿಯ ಛಾಯಾಚಿತ್ರವನ್ನು ಕಾಮಗಾರಿಗಳ ವಿವರದೊಂದಿಗೆ NGSK ತಂತ್ರಾಂಶದಲ್ಲಿ ಕಡ್ಡಾಯವಾಗಿ ಅಳವಡಿಸುವುದು.
11. ಮಹತ್ಮಾ ಗಾಂಧಿ ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳಿಗೆ ಮೂರು ವಿಭಿನ್ನ ಹಂತಗಳಲ್ಲಿ ಜಿಯೋ-ಟ್ಯಾಗ್ ಮಾಡುವುದು ಅಂದರೆ ಕಾಮಗಾರಿ ನಡೆಯುವ ಮೊದಲು, ಕಾಮಗಾರಿ ನಡೆಯುವ ಸಮಯದಲ್ಲಿ ಮತ್ತು ಕಾಮಗಾರಿ ಪೂರ್ಣಗೊಳಿಸಿದ ನಂತರ ನಿರ್ವಹಿಸುವುದು.

Spread positive news

Leave a Reply

Your email address will not be published. Required fields are marked *