ಆಡು ಸಾಕಾಣಿಕೆ : ಪ್ರೀಯ ರೈತರೇ ನೀವು ಮನಸ್ಸು ಮಾಡಿದರೆ ಏನೂ ಬೇಕಾದರೂ ಮಾಡಬಹುದು ಎಂದು ತೋರಿಸಲು ನಾನು ಇವತ್ತು ಒಂದು ಮುಖ್ಯವಾದ ಉದ್ಯಮದ ಬಗ್ಗೆ ಮಾಹಿತಿ ನೀಡುತ್ತೇನೆ. ಅದು ಏನೆಂದರೆ ವೈಜ್ಞಾನಿಕ ಆಡು ಸಾಕಾಣಿಕೆ ಹೇಗೆ ಮಾಡಬೇಕು. ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಹೇಗೆ ಆಡು ಸಾಕಾಣಿಕೆ ಮಾಡಿ ರೈತರು ಹೆಚ್ಚಿನ ಆದಾಯ ಪಡೆಯಬಹುದು ಎಂದು ಸಂಪೂರ್ಣ ಮಾಹಿತಿ ನೀಡುತ್ತೇನೆ.
ಮೊದಲು ಆಡು ಸಾಕಾಣಿಕೆ ಒಂದು ಬಹುದೊಡ್ಡ ಉದ್ಯಮ. ಆಡು ಸಾಕಾಣಿಕೆ ಮಾಡಿದರೆ ಕೈಯಲ್ಲಿ ಯಾವಾಗಲೂ ದುಡ್ಡು ಇದ್ದಂತೆ. ಆಡು ಸಾಕಾಣಿಕೆ ಬಹಳ ಲಾಭ ತಂದು ಕೊಡುವಂತಹ ಒಂದು ಬಹುದೊಡ್ಡ ಉದ್ಯಮ ಆಗಿದೆ. ರೈತರು ತಮ್ಮ ಕೃಷಿ ಜೀವನದ ಜೊತೆಗೆ ಆಡು ಸಾಕಾಣಿಕೆ, ಕುರಿ ಕೋಳಿ ಸಾಕಾಣಿಕೆ ಮಾಡುವುದರಿಂದ ಆದಾಯ ಮೂಲವನ್ನು ಇನ್ನೂ ಜಾಸ್ತಿ ಹೆಚ್ಚಿಸಬಹುದು. ಬನ್ನಿ ಹಾಗಾದರೆ ಆಡು ಸಾಕಾಣಿಕೆ ಮಾಡುವುದರ ಬಗ್ಗೆ ಮಾತಾಡೋಣ.
ಆಡುಗಳನ್ನು ಖರೀದಿಸುವಾಗ ಗಮನಿಸಬೇಕಾದ ಅಂಶಗಳು –
- ಆಡುಗಳನ್ನು ಖರೀದಿಸುವಾಗ ಅವುಗಳ ಶಾಶ್ವತ ಬಾಚಿ ಹಲ್ಲನ್ನು ಪರೀಕ್ಷಿಸಿ ವಯಸ್ಸನ್ನು ಕಂಡು ಹಿಡಿದು 1-2 ವರ್ಷದ ಮೇಕೆಗಳನ್ನು ಖರೀದಿಸುವುದು ಉತ್ತಮ.
- ಬಾಚಿ ಹಲ್ಲು ವಯಸ್ಸು
- ಒಂದು ಜೊತೆ ಒಂದು ವರ್ಷ
- ಎರಡು ಜೊತೆ ಎರಡು ವರ್ಷ
- ಮೂರು ಜೊತೆ ಮೂರು ವರ್ಷ
- ನಾಲ್ಕು ಜೊತೆ ನಾಲ್ಕು ವರ್ಷ
ಆಡು ಸಾಕಾಣಿಕೆಯಲ್ಲಿ ವೈಜ್ಞಾನಿಕ ಆಹಾರ ಪದ್ದತಿ :
ಆಡುಗಳು ವಿವಿಧ ಬಗೆಯ ಗಿಡಗಂಟಿಗಳನ್ನು ತಿಂದು ತಮ್ಮ ಆಹಾರದ ಅವಶ್ಯಕತೆಯನ್ನು ಪೂರೈಸಿಕೊಳ್ಳುತ್ತವೆ. ಆಡುಗಳನ್ನು ಉತ್ಪತ್ತಿಗಾಗಿ ಹಿಂಡಿನಲ್ಲಿ ಸಾಕಿದಾಗ ಮೇಯಿಸುವ ಜೊತೆಗೆ ದಾಣಿ ಮಿಶ್ರಣ ಮತ್ತು ಹಸಿರು ಮೇವನ್ನು ಪೂರೈಸಬೇಕಾಗುತ್ತದೆ. ಆಡು ದ್ವಿದಳ ಮೇವು ಮತ್ತು ಗಿಡ ಕಂಟಿಗಳ ಎಲೆ, ಚಿಗುರು ಮತ್ತು ಕಾಯಿಗಳನ್ನು ತಿನ್ನಲು ಇಷ್ಟಪಡುತ್ತದೆ. ಸ್ಥಳಿಯ ಹುಲ್ಲು, ಹಲಸಿನ ಎಲೆ, ತೆಂಗಿನ ಗರಿಗಳು, ಬಾಳೆಎಲೆ ಇತ್ಯಾದಿಗಳನ್ನು ತಿನ್ನಿಸಬಹುದು. ಆಡು ಹೊಲಸಾದ ಮೇವನ್ನು ತಿನ್ನುವುದಿಲ್ಲ. ಆಡು ನೆಲದ ಮೇಲೆ ಮೇಯದೆ ಸ್ವಲ್ಪ ಎತ್ತರದ ಮೇಲೆ ಎಲ್ಲಾ ತರಹದ ಗಿಡಗಂಟಿಗಳ ಎಲೆಗಳನ್ನು ತಿನ್ನುತ್ತದೆ. ಸಾಧಾರಣವಾಗಿ ಒಂದು ಬಲಿತ ಆಡಿಗೆ 5 ಕಿಲೋ ಮೇವು ಹುಲ್ಲು ಮತ್ತು 0.2 ರಿಂದ 0.7 ಕಿಲೋ ದಾಣಿ ಮಿಶ್ರಣವನ್ನು ಪ್ರತಿನಿತ್ಯ ಕೊಡಬೇಕು.
ಆಡುಗಳ ರೋಗ ತಡೆಯಲು ಪ್ರಮುಖ ಅಂಶಗಳು –
* ಆಡುಗಳು ನಿರೋಗಿಯಾಗಿ ಬದುಕಿ ಅಧಿಕ ಉತ್ಪನ್ನ ಮತ್ತು ಆದಾಯ ನೀಡಬೇಕಾದರೆ ಸರಿಯಾದ ಆಹಾರ ಒದಗಿಸಬೇಕು.
* ಜವಳು ಇಲ್ಲದ ಭೂಮಿಯಲ್ಲಿ ಚೊಕ್ಕಟವಾದ ಹುಲ್ಲು ಗಾವಲುಗಳಲ್ಲಿ ಮೇಯಿಸಬೇಕು.
* ಹರಿಯುವ ನೀರಿನಲ್ಲಿ ನೀರು ಕುಡಿಸಬೇಕು. ಇಲ್ಲವಾದಲ್ಲಿ ಶುಚಿಯಾದ ನೀರನ್ನು ಒದಗಿಸಬೇಕು.
* ಆಡುಗಳಿಗೆ ನೀಡುವ ಆಹಾರದಲ್ಲಿ ಒಮ್ಮಿಂದೊಮ್ಮೆ ಬದಲಾವಣೆ ಮಾಡಬಾರದು.
* ಯಾವುದೇ ರೋಗ ತಗುಲಿದ ಅಡುಗಳನ್ನು ನಿರೋಗಿ ಆಡುಗಳಿಂದ ಪ್ರತ್ಯೇಕವಾಗಿಡಬೇಕು.
* ಪರೋಪಜೀವಿಗಳ ನಿರ್ಮೂಲನೆಗಾಗಿ ಕನಿಷ್ಠ ಪಕ್ಷ ವರ್ಷದಲ್ಲಿ ಮೂರು ಬಾರಿ ಔಷಧಿ ನೀಡಬೇಕು.
* ಪರೋಪಜೀವಿಗಳ ವಿರುದ್ಧದ ಈ ಔಷದೋಪಚಾರವನ್ನು ಬಹುತೇಕ ಬೇಸಿಗೆ ಅಂತ್ಯಗೊಂಡ ತಕ್ಷಣ ಬೀಳುವ ಮಳೆಯ ನಂತರ ಮುಂಗಾರು ಮತ್ತು ಹಿಂಗಾರು ಮಳೆಯ ಪ್ರಾರಂಭದಲ್ಲಿ ನೀಡಬೇಕು.
* ಸಾಂಕ್ರಾಮಿಕ ರೋಗ ತಗುಲಿದ ಆಡುಗಳ ಹಿಕ್ಕೆ, ರಕ್ತ, ಜೊಲ್ಲು, ಮೂತ್ರ ಇತ್ಯಾದಿಗಳು ಆರೋಗ್ಯವಂತ ಆಡುಗಳ ನೀರು ಮತ್ತು ಮೇವಿನ ಜೊತೆ ಬೆರೆಯದಂತೆ ಸುಡಬೇಕು ಅಥವಾ ರೋಗಾಣುನಾಶಕ ಔಷಧ/ರಾಸಾಯನಿಕಗಳನ್ನು ಉಪಯೋಗಿಸಿ ತಡೆಗಟ್ಟಬೇಕು.
* ಸಾಂಕ್ರಾಮಿಕ ರೋಗದಿಂದ ಸತ್ತ ಆಡುಗಳನ್ನು ನದಿಗಳು, ಹುಲ್ಲುಗಾವಲುಗಳಿಂದ ದೂರವಿರುವ ಸ್ಥಳದಲ್ಲಿ ಸುಡಬೇಕು ಅಥವಾ ಆಳವಾದ ಗುಂಡಿಯಲ್ಲಿ ಸುಣ್ಣದ ಜತೆ ಹೂಳಬೇಕು.
* ಅಂತಹ ಆಡುಗಳ ಚರ್ಮವನ್ನು ಯಾವ ಕಾರಣಕ್ಕೂ ಉಪಯೋಗಿಸಬಾರದು.
* ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ನಿಯಮಿತವಾಗಿ ಲಸಿಕೆ ಹಾಕಿಸಬೇಕು.
ಗರ್ಭಧರಿಸುವ ಆಡುಗಳ ಜೋಪಾಸನೆ :
ಗರ್ಭಧರಿಸಿದ ಸುಮಾರು 150 ದಿನಗಳಲ್ಲಿ ಆಡುಗಳು ಮರಿ ಹಾಕುತ್ತವೆ. ಮರಿ ಹಾಕುವ ಮುನ್ನ ಪದೇಪದೇ ಮಲಗುತ್ತದೆ ಮತ್ತು ಏಳುತ್ತವೆ. ಕೆಚ್ಚಲು ಬಿಗಿದಿರುತ್ತದೆ. ಮೊಲೆ ತೊಟ್ಟುಗಳಲ್ಲಿ ಹಾಲು ತುಂಬಿಕೊಂಡಿರುತ್ತದೆ. ಯೋನಿಯಿಂದ ಹಳದಿ ಬಣ್ಣದ ಬಿಳಿ ಲೋಳೆ ಸ್ರವಿಸುತ್ತದೆ. ಗರ್ಭದ ಚೀಲ ಒಡೆಯುತ್ತದೆ. ಆಗ ಮರಿ ಹೊರಗೆ ಬರುತ್ತದೆ. ಎರಡು ಗಂಟೆ ಒಳಗೆ ಮರಿ ಹಾಕದಿದ್ದಲ್ಲಿ ಪಶು ವೈದ್ಯರನ್ನು ಕರೆಸಬೇಕು. ಮರಿ ಹಾಕಿದ ಮೇಲೆ ಮಾಸು ಬೀಳುತ್ತದೆ. ಅದನ್ನು ದೂರ ಎಸೆಯಬೇಕು. ಕೆಲವು ವೇಳೆ 8-12 ತಾಸುಗಳಲ್ಲಿ ಮಾಸು ಬೀಳದಿದ್ದರೆ ಪಶುವೈದ್ಯರ ಸಹಾಯ ಪಡೆಯಬೇಕು. ಮರಿ ಹಾಕಿದ ನಂತರ ಹೆಣ್ಣು ಆಡುಗಳು ಮತ್ತೆ 3-5 ತಿಂಗಳುಗಳಲ್ಲಿ ಬೆದೆಗೆ ಬರುತ್ತವೆ.
ಹುಟ್ಟಿದ ಮರಿಗಳ ಜೋಪಾನ ಮಾಡುವ ವಿಧಾನ –
* ಆಡುಗಳು ಸಾಮಾನ್ಯವಾಗಿ ಒಂದು ಕೆಲಮೊಮ್ಮೆ 2 ರಿಂದ 3 ಮರಿಗಳನ್ನು ಹಾಕುತ್ತವೆ.
* ಒಂದಕ್ಕಿಂತ ಹೆಚ್ಚು ಮರಿಗಳಿದ್ದಲ್ಲಿ, ಒಂದು ಮರಿ ಹಾಕಿದ 15-20 ನಿಮಿಷಗಳಲ್ಲಿ ಉಳಿದ ಮರಿಗಳು ಹೊರ ಬರುತ್ತವೆ.
* ಮರಿ ಹಾಕಿದ ಮೇಲೆ ಮರಿಗಳನ್ನು ನೆಕ್ಕಿ ಸ್ವಚ್ಛಗೊಳಿಸುತ್ತದೆ. ಹಾಗೆ ಮಾಡದ ಪಕ್ಷದಲ್ಲಿ ಮರಿಗಳನ್ನು ಒಣ ಮತ್ತು ಸ್ವಚ್ಛ ಬಟ್ಟೆಯಿಂದ ಒರೆಸಬೇಕು.
* ಹೊಕ್ಕುಳು ಬಳ್ಳಿಯನ್ನು 2.5 ಸೆಂ.ಮೀ. ಅಂತರದಲ್ಲಿ ಕಟ್ಟಿ, ಕತ್ತರಿಸಿ, ಟಿಂಕ್ಚರ್ ಐಯೋಡಿನ್ ದ್ರಾವಣವನ್ನು ಹಚ್ಚಬೇಕು.
* ಮೂಗಿನ ಸುತ್ತಲಿರುವ ಲೋಳೆಯನ್ನು ಚೆನ್ನಾಗಿ ತೆಗೆದು ಉಸಿರಾಡಲು ಅನುಕೂಲ ಮಾಡಿಕೊಡಬೇಕು.
* ಹುಟ್ಟಿದ ಮರಿಗಳಿಗೆ ಗಿಣ್ಣು ಹಾಲನ್ನು ಹುಟ್ಟಿದ ಅರ್ಧಗಂಟೆಯೊಳಗೆ ಮತ್ತು ನಂತರ ಮೊದಲ 5 ದಿನಗಳವರೆಗೆ ಕುಡಿಸಬೇಕು.
* ಒಂದಕ್ಕಿಂತ ಹೆಚ್ಚು ಮರಿಗಳಿದ್ದಲ್ಲಿ ಹಾಲು ಕುಡಿಸುವುದರಲ್ಲಿ ಸಹಾಯ ಮಾಡಬೇಕು.
* ಕೆಚ್ಚಲಲ್ಲಿ ಹಾಲು ಕಡಿಮೆಯಿದ್ದಲ್ಲಿ ಹಸು ಹಾಲನ್ನು ಬಾಟಲಿನ ಸಹಾಯದಿಂದ ಒದಗಿಸಬೇಕು.
* ಹಾಲುಣಿಸುವ ಪ್ರಕ್ರಿಯೆಯು ಮೂರು ತಿಂಗಳವರೆಗೆ ಮುಂದುವರೆಸಬೇಕು.
* ಮರಿಗಳು ಹುಟ್ಟಿದಾಗ 19 ರಿಂದ 3.5 ಕಿ.ಗ್ರಾಂ. ದೇಹದ ತೂಕವನ್ನು ಹೊಂದಿರುತ್ತವೆ. ಬೆಳವಣಿಗೆಗೆ ತಕ್ಕಂತೆ ಹಸಿ ಮತ್ತು ಒಣ ಮೇವು ಕೊಡಬೇಕು.
* ಇದಾದ ನಂತರ ಮರಿಗಳನ್ನು ತಾಯಿಯಿಂದ ಮೂರು ತಿಂಗಳ ನಂತರ ಬೇರ್ಪಡಿಸಬೇಕು.