ರಾಜ್ಯದ ಜನತೆಗೆ ಹವಾಮಾನ ಇಲಾಖೆಯು ಮಳೆಯ ಮುನ್ಸೂಚನೆ ನೀಡಿದೆ. ಈ ವಾರವಿಡೀ ದಕ್ಷಿಣ ಒಳನಾಡು, ಉತ್ತರ ಒಳನಾಡು ಹಾಗೂ ಕರಾವಳಿ ಭಾಗದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ. ಮಾರ್ಚ್ 17 ಹಾಗೂ 18ರಂದು ರಾಜಧಾನಿ ಬೆಂಗಳೂರು ಸೇರಿದಂತೆ 17 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.
ಯಾವ ಜಿಲ್ಲೆಗಳಲ್ಲಿ ಮಳೆ?
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೊಡಗು, ಹಾಸನ, ಮೈಸೂರು, ಚಿಕ್ಕಮಗಳೂರು, ದಾವಣಗೆರೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮಳೆಯ ಸಮಯದಲ್ಲಿ ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಂಭವವಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಜಿಲ್ಲೆಯ ಉಳಿದ ಭಾಗಗಳಲ್ಲಿ ಒಣ ಹವೆ ಮುಂದುವರಿಯಲಿದೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ಕುರಿ ಮೇಯಿಸಲು ಹೋಗಿದ್ದ 8ನೇ ತರಗತಿಯ ವಿದ್ಯಾರ್ಥಿ ಮಂಜುನಾಥ ಮುದೇನಗೌಡ (14) ಸಿಡಿಲು ಬಡಿದು ದುರಂತ ಅಂತ್ಯ ಕಂಡಿದ್ದಾನೆ.: ಕಾಫಿ ಮತ್ತು ಕರಿಮೆಣಸು ಬೆಳೆಗಾರರಿಗೆ ಈ ಮಳೆ ಅಮೃತಧಾರೆಯಾಗಿದ್ದು, ಮಲೆನಾಡು ಹಾಗೂ ಅರೆಮಲೆನಾಡು ಭಾಗದ ರೈತರಲ್ಲಿ ಸಂತಸ ಮೂಡಿಸಿದೆ.
ಬೆಂಗಳೂರು ಹವಾಮಾನ: ರಾಜಧಾನಿ ಬೆಂಗಳೂರಿನಲ್ಲಿ ಮಾರ್ಚ್ 17ರವರೆಗೆ ಆಕಾಶ ಶುಭ್ರವಾಗಿರಲಿದ್ದು, ಮಳೆಯ ಮುನ್ಸೂಚನೆ ಇಲ್ಲ. ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದೆ.
ತಾಪಮಾನ ಏರಿಕೆ: ಒಂದು ಕಡೆ ಮಳೆಯಾಗುತ್ತಿದ್ದರೆ, ಮತ್ತೊಂದೆಡೆ ಬಿಸಿಲಿನ ತಾಪವೂ ಏರುತ್ತಿದೆ. ಕಲಬುರಗಿಯಲ್ಲಿ ರಾಜ್ಯದ ಅತಿ ಗರಿಷ್ಠ ತಾಪಮಾನ 38.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಸುರಕ್ಷತೆಗಾಗಿ ಈ ಕ್ರಮಗಳನ್ನು ಪಾಲಿಸಿ
* ಮರದ ಕೆಳಗೆ ಆಶ್ರಯ ಬೇಡ: ಗುಡುಗು-ಸಿಡಿಲು ಆರಂಭವಾದಾಗ ಯಾವುದೇ ಕಾರಣಕ್ಕೂ ಎತ್ತರದ ಮರಗಳ ಕೆಳಗೆ ನಿಲ್ಲಬೇಡಿ. ಮರಗಳು ಸಿಡಿಲನ್ನು ಬೇಗನೇ ಆಕರ್ಷಿಸುವುದರಿಂದ ಇದು ಅತ್ಯಂತ ಅಪಾಯಕಾರಿ.
* ಸುರಕ್ಷಿತ ಕಟ್ಟಡ ಸೇರಿ: ನೀವು ಹೊಲ ಅಥವಾ ಬಯಲು ಪ್ರದೇಶದಲ್ಲಿದ್ದರೆ ತಕ್ಷಣವೇ ಸಮೀಪದ ಕಾಂಕ್ರೀಟ್ ಕಟ್ಟಡ ಅಥವಾ ಮನೆಗಳ ಒಳಗೆ ಆಶ್ರಯ ಪಡೆಯಿರಿ.
* ವಿದ್ಯುತ್ ಉಪಕರಣಗಳಿಂದ ದೂರವಿರಿ: ಮಿಂಚು ಬರುವಾಗ ಮೊಬೈಲ್ ಫೋನ್ ಬಳಕೆ, ಟಿವಿ, ಫ್ರಿಡ್ಜ್ಗಳಂತಹ ಎಲೆಕ್ಟ್ರಾನಿಕ್ ಸಾಧನಗಳ ಬಳಕೆಯನ್ನು ತಪ್ಪಿಸಿ. ಪ್ಲಗ್ಗಳನ್ನು ಸಾಕೆಟ್ನಿಂದ ತೆಗೆದಿಡುವುದು ಉತ್ತಮ.
* ವಾಹನದಲ್ಲಿದ್ದರೆ ಎಚ್ಚರ: ನೀವು ಕಾರಿನಲ್ಲಿದ್ದರೆ ಗಾಜುಗಳನ್ನು ಸಂಪೂರ್ಣವಾಗಿ ಮುಚ್ಚಿ ಒಳಗೇ ಇರಿ. ಆದರೆ ದ್ವಿಚಕ್ರ ವಾಹನ ಅಥವಾ ತೆರೆದ ವಾಹನಗಳ ಪ್ರಯಾಣವನ್ನು ತಕ್ಷಣ ನಿಲ್ಲಿಸಿ ಸುರಕ್ಷಿತ ಜಾಗ ಸೇರಿ.
* ಲೋಹದ ವಸ್ತುಗಳ ಬಳಕೆ ಬೇಡ: ಕಬ್ಬಿಣದ ಸರಳುಗಳಿರುವ ಛತ್ರಿ, ಕೃಷಿ ಉಪಕರಣಗಳು ಅಥವಾ ತಂತಿ ಬೇಲಿಗಳಿಂದ ದೂರವಿರಿ.

